ಇಪ್ಪತ್ತೈದು ವರ್ಷ ದಾಟಿದ ಮೇಲೆ ಯುವತಿಯರನ್ನು ಬೆಂಬಿಡದೆ ಕಾಡುವ ಪ್ರಶ್ನೆ ‘ಮದುವೆ ಯಾವಾಗ? ವರ್ಷ ಆಯ್ತಲ್ಲ’ ಅನ್ನೋದು. ಅಬ್ಬಾ ಅಂತೂ ಮದುವೆ ಆಯ್ತು, ಇನ್ನು ಆರಾಮವಾಗಿ ಮದುವೆ, ರಿಸೆಪ್ಷನ್ ಅಂತಹ ಶುಭ ಕಾರ್ಯಗಳಲ್ಲಿ ಆರಾಮವಾಗಿ ಸುತ್ತಾಡಿಕೊಂಡು ಇರಬಹುದು ಎಂದು ಬಹುತೇಕ ಯುವತಿಯರು ಅಂದ್ಕೊಳ್ಳುತ್ತಾರೆ. ಆದ್ರೆ ಮದುವೆಯಾಗಿ 2-3 ತಿಂಗಳು ಕಳೆಯುತ್ತಿದ್ದಂತೆ ಮತ್ತೊಂದು ಪ್ರಶ್ನೆ ಎದುರಾಗುತ್ತೆ ‘ಏನಾದ್ರೂ ವಿಶೇಷ ಇದೆಯಾ?’ ಎನ್ನೋದು. ಪ್ರಾರಂಭದಲ್ಲಿ ಈ ‘ವಿಶೇಷ’ ಎಂಬ ಪದವೇ ಗೊಂದಲ ಹುಟ್ಟಿಸುತ್ತೆ.ಇವರು ಯಾವ ವಿಶೇಷದ ಬಗ್ಗೆ ಕೇಳುತ್ತಿದ್ದಾರೆ ಎಂದು ಅರ್ಥ ಮಾಡಿಕೊಳ್ಳಲು ಸ್ವಲ್ಪ ಸಮಯ ಹಿಡಿಯುತ್ತೆ. ಇನ್ನು ಮದುವೆಯಾಗಿ 2-3 ವರ್ಷಗಳು ಕಳೆದ್ರೂ ಮಗುವಾಗಿಲ್ಲ ಅಂದ್ರೆ ಕೇಳೋದೆ ಬೇಡ. ಹೋದಲ್ಲಿ, ಬಂದಲ್ಲಿ ಬಿಟ್ಟಿ ಸಲಹೆಗಳು, ಕೊಂಕು ನುಡಿಗಳು ಧಾರಾಳವಾಗಿ ಸಿಗುತ್ತವೆ.

ನೀವೆಷ್ಟೇ ವಾದ ಮಾಡಿದ್ರೂ ಅಷ್ಟೇ, ಪುರುಷರಿಗಿಂತ ಮಹಿಳೆಯರೇ ಹೆಚ್ಚು ಕೆಲ್ಸ ಮಾಡೋದು!

ಮದುವೆಯಾದ ತಕ್ಷಣ ಮಗುವಾಗಬೇಕೆಂಬ ಕಾನೂನು ಇದೆಯಾ?
ಮದುವೆಯಾದ ತಕ್ಷಣ ಮಗುವಾಗಬೇಕು ಎಂಬ ಕಾನೂನು ಇಲ್ಲದಿದ್ದರೂ ಕೆಲವರಿಗೆ ಹಾಗಾದ್ರೇನೆ ಹೆಣ್ಣು ಸುಶೀಲಳು, ಸಂಸ್ಕಾರವಂತಳು. ಗಂಡಿನಷ್ಟೇ ಕಷ್ಟಪಟ್ಟು ಓದಿ ಕಲಿತು, ಕೆಲಸ ಗಿಟ್ಟಿಸಿಕೊಂಡು ನೆಮ್ಮದಿಯ ನಿಟ್ಟುಸಿರು ಬಿಡುವ ವೇಳೆಗೆ ಮದುವೆಯ ಬಂಧನಕ್ಕೆ ಸಿಗುವ ಹೆಣ್ಣು, ವೃತ್ತಿಯಲ್ಲಿ ನಾನಾ ಸಾಧನೆ ಮಾಡುವ ತನ್ನ ಕನಸಿಗೆ ಹೇಗೆ ತಾನೇ ಎಳ್ಳುನೀರು ಬಿಡಲು ಸಾಧ್ಯ? ವೃತ್ತಿಯಲ್ಲಿ ತಳವೂರಲು ಆಕೆಗೂ ಒಂದಿಷ್ಟು ಸಮಯ ಬೇಕಲ್ಲವೆ? ಅದಕ್ಕಾಗಿಯೇ ಇಂದಿನ ಬಹುತೇಕ ಉದ್ಯೋಗಸ್ಥೆ ಮಹಿಳೆಯರು ತಾಯ್ತನವನ್ನು ಮುಂದೂಡುತ್ತಿದ್ದಾರೆ. ಹಾಗಂತ ಅವರಿಗೇನು ತಾಯಿಯಾಗುವ, ತನ್ನ ಒಡಲ ಕುಡಿಯನ್ನು ಮುದ್ದಿ ಆಡಿಸುವ ಮನಸ್ಸಿಲ್ಲವೆ? ಇದೆ, ಅವರಿಗೂ ತನ್ನ ಪ್ರತಿರೂಪವನ್ನು ಒಡಲೊಳಗೆ ಹೊತ್ತು, ಹೆತ್ತು ಮುದ್ದಿಸುವ ಆಸೆಯಿದೆ. ಹಾಗೆಯೇ ವೃತ್ತಿರಂಗದಲ್ಲಿ ವಿಶೇಷವಾದದ್ದನ್ನು ಸಾಧಿಸುವ, ಹೆಜ್ಜೆ ಗುರುತು ಮೂಡಿಸುವ ಬಯಕೆಯೂ ಇದೆ.

ಗರ್ಭಿಣಿಗೆ ಸುಖಾಸುಮ್ಮನೆ ಸಲಹೆ ಕೊಡೋ ಬದ್ಲು ಇಂಥ ಮಾತನಾಡಿ

ಮಗು ಮಾಡಿಕೊಳ್ಳೋದು ಅವಳ ಆಯ್ಕೆ
ಯಾವಾಗ ಮಗು ಮಾಡಿಕೊಳ್ಳಬೇಕು, ಬೇಡ ಎಂದು ನಿರ್ಧರಿಸುವ ಆಯ್ಕೆ ಪತಿ-ಪತ್ನಿಯದ್ದು. ಇದರಲ್ಲಿ ಇನ್ನೊಬ್ಬರು ಮೂಗು ತೂರಿಸುವ ಅಗತ್ಯವಿಲ್ಲ. ಅದು ಅತ್ತೆಯಿರಲಿ, ನಾದಿನಿಯಿರಲಿ ಅಥವಾ ಇನ್ಯಾರೇ ಆಗಿರಲಿ. ಹಡೆಯೋದು, ಮಗುವನ್ನು ಬೆಳೆಸೋದು ಬಾಯಿಯಲ್ಲಿ ಹೇಳಿದಷ್ಟು ಸುಲಭದ ಕೆಲಸವಲ್ಲ. ಅದ್ರಲ್ಲೂ ಉದ್ಯೋಗಸ್ಥೆ ಮಹಿಳೆಗೆ ಇದೊಂದು ಸವಾಲಿನ ಕೆಲಸ. ಇನ್ನೂ ಪ್ರೆಗ್ನೆಂಟ್ ಆಗಿಲ್ಲ, ಮಗುವಾಗಿಲ್ಲ ಎಂದು ಕೊಂಕು ನುಡಿಯುವವರು, ನೀವು ತಾಯಿ ಆಗೋದೇ ಇಲ್ಲ ಎಂಬಂತೆ ಕಂಡಕಂಡವರ ಬಳಿ ನಿಮ್ಮ ಬಗ್ಗೆ ಅಪಪ್ರಚಾರ ಮಾಡೋರ್ಯಾರೂ ನಿಮಗೆ ಮಗುವಾದ ಬಳಿಕ ಸಹಾಯ ಮಾಡಲು ಬರೋದಿಲ್ಲ. ಹೀಗಾಗಿ ವೃತ್ತಿ ಹಾಗೂ ಮಗುವಿನ ಜವಾಬ್ದಾರಿಯನ್ನು ಸಮರ್ಥವಾಗಿ ಮ್ಯಾನೇಜ್ ಮಾಡಬಲ್ಲೆ ಎಂಬ ಆತ್ಮವಿಶ್ವಾಸ ನಿಮ್ಮಲ್ಲಿ ಮೂಡಿದ ಬಳಿಕವೇ ತಾಯ್ತನಕ್ಕೆ ರೆಡಿಯಾಗಿ. ಅದೇರೀತಿ ನಿಮ್ಮ ಮಾನಸಿಕ ಹಾಗೂ ಶಾರೀರಿಕ ಆರೋಗ್ಯ ಇದಕ್ಕೆಲ್ಲ ಸಿದ್ಧವಿದೆಯಾ ಎಂದು ಯೋಚಿಸೋದು ಕೂಡ ಅಗತ್ಯ.

ಮಾಮ್‌ಶೇಮಿಂಗ್‌ಗೆ ಗರಂ ಆದ ತಾಯಂದಿರು

ಕೊಂಕು ಮಾತಿಗೆ ತಲೆಕೆಡಿಸಿಕೊಳ್ಳಬೇಡಿ
ಇನ್ನು ಯಾಕೆ ಪ್ರೆಗ್ನೆಂಟ್ ಆಗಿಲ್ಲ? ಏನ್ ಪ್ಲ್ಯಾನಿಂಗಾ? ಏನಾದ್ರೂ ಪ್ರಾಬ್ಲಂ ಇದೆಯಾ? ಡಾಕ್ಟರ್ ಹತ್ರ ಹೋಗಬೇಕಿತ್ತು? ಹೀಗೆ ಸಾಲು ಸಾಲು ಪ್ರಶ್ನೆಗಳು, ಬಿಟ್ಟೆ ಸಲಹೆಗಳು ನೀವು ಹೋದಲ್ಲಿ, ಬಂದಲ್ಲಿ ತೂರಿಕೊಂಡು ಬರುತ್ತವೆ. ಎಷ್ಟೋ ಸಂದರ್ಭಗಳಲ್ಲಿ ಇಂಥ ಪ್ರಶ್ನೆ ಕೇಳುವವರ ಕೆನ್ನೆಗೆ ನಾಲ್ಕು ಬಾರಿಸಬೇಕು ಎಂಬಷ್ಟು ಸಿಟ್ಟು ಬರುತ್ತೆ. ಹಾಗಂತ ಇಂಥ ಪ್ರಶ್ನೆ ಕೇಳೋರು ದೂರದವರೇನಲ್ಲ, ನಿಮ್ಮ ಹತ್ತಿರದ ಬಂಧುಗಳೇ. ಇನ್ನೂ ಒಂದು ವಿಶೇಷ ಅಂದ್ರೆ ಇವರಿಗೇನು ನಿಮ್ಮ ಬಗ್ಗೆ ಸಿಕ್ಕಾಪಟ್ಟೆ ಕಾಳಜಿ ಇರೋದಿಲ್ಲ. ಇಂಥ ಪ್ರಶ್ನೆಗಳನ್ನು ಬೇಕಂತಲೇ ನಿಮಗೆ ಹರ್ಟ್ ಆಗಲಿ ಅಂತಾನೆ ಕೇಳ್ತಾರೆ. ಉದಾಹರಣೆಗೆ ನಿಮ್ಮ ವೆಡ್ಡಿಂಗ್ ಆನಿವರ್ಸರಿ ದಿನ ವಿಶ್ ಮಾಡಲು ಕಾಲ್ ಮಾಡುವ ನಿಮ್ಮ ಪತಿಯ ಅಕ್ಕ ಮದುವೆಯಾಗಿ ಎಷ್ಟು ವರ್ಷ ಆಯ್ತು ಎಂದು ಪ್ರಶ್ನಿಸಬಹುದು. ಅರೇ, ನಮ್ಮ ಮದುವೆಯಾಗಿ 2 ವರ್ಷ ಆಗಿದಷ್ಟೇ, ಇವರಿಗೆ ಇಷ್ಟು ಬೇಗ ಮರೆತು ಹೋಯಿತಾ ಎಂಬ ಸಂಶಯ ನಿಮ್ಮನ್ನು ಕಾಡಬಹುದು. ಆದ್ರೆ ಸ್ವಲ್ಪ ಹೊತ್ತಲ್ಲಿ ನಿಮಗೆ ಅವರ ಪ್ರಶ್ನೆ ಹಿಂದಿನ ಮರ್ಮ ತಿಳಿಯುತ್ತೆ. ಇಂಥ ಕೊಂಕು ಮಾತುಗಳು ಮನಸ್ಸಿಗೆ ನೋವುಂಟು ಮಾಡುತ್ತವೆ ನಿಜ. ಆದ್ರೆ ಅದಕ್ಕೆಲ್ಲ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ. ನಿಮ್ಮ ಸಂಸಾರದಲ್ಲಿ ಮೂಗು ತೂರಿಸುವ ಹಕ್ಕು ಅವರಿಗೆ ಖಂಡಿತಾ ಇಲ್ಲ. ನೀವು ಆಫೀಸ್‍ಗೆ ಹೋಗೋದು, ಸ್ವಾವಲಂಬಿ ಬದುಕು ನಡೆಸೋದು, ಪತಿ ಜೊತೆಗೆ ಜಾಲಿಯಾಗಿ ಸುತ್ತಾಡೋದು ಕೆಲವರ ಹೊಟ್ಟೆ ಉರಿಸುತ್ತೆ. ನಿಮಗೂ ನಿಮ್ಮ ಪತಿಗೂ ಒಂದಿಷ್ಟು ಕಮೀಟ್‍ಮೆಂಟ್‍ಗಳು ಇರಬಹುದು. ಆ ಕಾರಣಕ್ಕಾಗಿ ಕೆಲವೊಮ್ಮೆ ಪ್ರೆಗ್ನೆನ್ಸಿಯನ್ನು ಮುಂದೂಡಲೇಬೇಕಾಗುತ್ತೆ. ಇದನ್ನೆಲ್ಲ ಎಲ್ಲರಿಗೂ ವಿವರಿಸಲು ಆಗೋದಿಲ್ಲ. ಹೀಗಾಗಿ ಮುಂದಿನ ಸಲ ಯಾರಾದ್ರೂ ಯಾಕಿನ್ನು ಪ್ರಗ್ನೆಂಟ್ ಆಗಿಲ್ಲ ಎಂದು ಪ್ರಶ್ನಿಸಿದರೆ, ‘ಇಟ್ಸ್ ನನ್ ಆಫ್ ಯುವರ್ ಬ್ಯುಸಿನೆಸ್’ ಎನ್ನಲು ಮರೆಯಬೇಡಿ.