ಪ್ರತಿ ದಿನ ಮನೆ ಒರೆಸುವ ಕೆಲ್ಸವನ್ನು ಭಾರತೀಯ ಮಹಿಳೆಯರು ತಪ್ಪದೆ ಮಾಡ್ತಾರೆ. ಅಡುಗೆಮನೆ, ಬಾತ್ರೂಮ್ ಮತ್ತು ಹೆಚ್ಚು ಓಡಾಟ ಇರುವ ಜಾಗಗಳು ಬೇಗ ಕೊಳೆಯಾಗುತ್ವೆ, ಹಾಗಾಗಿ ಅವುಗಳ ಕ್ಲೀನಿಂಗ್ ಗೆ ವಿಶೇಷ ಮಹತ್ವ ನೀಡಲಾಗುತ್ತೆ. ನೆಲ ಕ್ಲೀನ್‌ ಆಗ್ಬೇಕು ಎನ್ನುವ ಕಾರಣಕ್ಕೆ ಪ್ರತಿ ದಿನ ಫಿನೈಲ್ ಹಾಕಿ ನೆಲ ಒರೆಸ್ಬೇಕಾ? ವಾರದಲ್ಲಿಎಷ್ಟು ದಿನ ಫಿನೈಲ್‌ ಬಳಸಿದ್ರೆ ಸಾಕು?

ಧೂಳು, ಕೊಳಕು ಮನೆ ಸೌಂದರ್ಯವನ್ನು ಹಾಳು ಮಾಡುತ್ತೆ. ನೆಲ ಬಿಳಿಯಿದ್ರೆ ಸಣ್ಣ ಕಸ ಕೂಡ ಎದ್ದು ಕಾಣುತ್ತೆ. ಹಾಗಾಗಿ ಪ್ರತಿ ದಿನ ಮನೆಯನ್ನು ಗುಡಿಸಿ, ಒರೆಸುವ ಮಹಿಳೆಯರಿದ್ದಾರೆ. ಮನೆ ಒರೆಸುವಾಗ ಪ್ರತಿ ದಿನ ಫಿನೈಲ್‌ ಬಳಸಬೇಕಾ ಎನ್ನುವ ಪ್ರಶ್ನೆ ಅನೇಕ ಬಾರಿ ಕಾಡುತ್ತದೆ. ಫಿನೈಲ್‌ ನೆಲದ ಹೊಳಪನ್ನು ಹೆಚ್ಚಿಸುತ್ತದೆ. ಜೊತೆಗೆ ಕೆಟ್ಟ ವಾಸನೆಯನ್ನು ಕಡಿಮೆ ಮಾಡುತ್ತದೆ.

ವಾರದಲ್ಲಿ ಎಷ್ಟು ಬಾರಿ ಫಿನೈಲ್‌ ಬಳಸ್ಬೇಕು?

ಇದನ್ನು ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ. ಇದು ಮನೆಯ ಯಾವ ಭಾಗವನ್ನು ಸ್ವಚ್ಛಗೊಳಿಸುತ್ತಿದ್ದೀರಿ ಮತ್ತು ಅಲ್ಲಿ ಎಷ್ಟು ಕೊಳೆ ಸೇರುತ್ತದೆ ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ. ಅಡುಗೆಮನೆ ಮತ್ತು ಬಾತ್ರೂಮ್ನಲ್ಲಿ ತೇವಾಂಶ, ಕೊಳೆ ಮತ್ತು ವಾಸನೆ ಹೆಚ್ಚಿರುತ್ತದೆ. ಹೀಗಾಗಿ ಈ ಜಾಗಗಳಲ್ಲಿ ಪ್ರತಿದಿನ ಅಥವಾ ಎರಡು ದಿನಕ್ಕೊಮ್ಮೆ ಫಿನೈಲ್ ಬಳಸಿ ನೆಲ ಒರೆಸಬೇಕು.

ಮಳೆಗಾಲದಲ್ಲಿ ತೇವಾಂಶ ಹೆಚ್ಚಾಗುವುದರಿಂದ ಈ ಜಾಗಗಳ ಸ್ವಚ್ಛತೆಗೆ ಇನ್ನಷ್ಟು ಗಮನ ನೀಡಬೇಕಾಗಬಹುದು. ಆದರೆ ಫಿನೈಲ್ನ ಪ್ರಮಾಣವನ್ನು ಹೆಚ್ಚು ಮಾಡಬಾರದು. ಹೆಚ್ಚು ಫಿನೈಲ್ ಹಾಕಿದರೆ ನೆಲದ ಮೇಲೆ ಜಿಗುಟಾದ ಪದರ ಅಥವಾ ಅದರ ಅವಶೇಷ ಉಳಿಯಬಹುದು. ಅದೇ ರೀತಿ ತುಂಬಾ ನೀರಿಗೆ ಕಡಿಮೆ ಫಿನೈಲ್ ಹಾಕಿದರೆ ಸ್ವಚ್ಛತೆಯ ಪರಿಣಾಮ ಕಡಿಮೆಯಾಗಬಹುದು.

ಬೆಡ್ರೂಮ್ ಮತ್ತು ಹಾಲ್ಗೆ ಎಷ್ಟು ಬಾರಿ ?

ಬೆಡ್ರೂಮ್ ಮತ್ತು ಹಾಲ್ನಲ್ಲಿ ಅಡುಗೆಮನೆ ಅಥವಾ ಬಾತ್ರೂಮ್ಗೆ ಹೋಲಿಸಿದರೆ ಕೊಳೆ ಕಡಿಮೆ ಇರುತ್ತದೆ. ಹೀಗಾಗಿ ಈ ಜಾಗಗಳಲ್ಲಿ ವಾರಕ್ಕೆ 2ರಿಂದ 3 ಬಾರಿ ಫಿನೈಲ್ ಮಿಶ್ರಿತ ನೀರಿನಿಂದ ನೆಲ ಒರೆಸಬಹುದು. ಮನೆಯಲ್ಲಿ ಧೂಳು ಹೆಚ್ಚಾಗಿ ಬರುತ್ತಿದ್ದರೆ, ಸಾಕುಪ್ರಾಣಿಗಳಿದ್ದರೆ ಅಥವಾ ನೆಲ ಬೇಗ ಕೊಳೆಯಾಗುತ್ತಿದ್ದರೆ ಅಗತ್ಯಕ್ಕೆ ತಕ್ಕಂತೆ ಹೆಚ್ಚು ಬಾರಿ ಸ್ವಚ್ಛಗೊಳಿಸಬಹುದು. ನಿಯಮಿತವಾಗಿ ಹಗುರವಾಗಿ ಸ್ವಚ್ಛಗೊಳಿಸುವುದರಿಂದ ನೆಲದ ಮೇಲೆ ಧೂಳು ಮತ್ತು ಕೊಳೆಯ ದಪ್ಪ ಪದರ ಸೇರುವುದನ್ನು ತಪ್ಪಿಸಬಹುದು.

ಒಂದು ಲೀಟರ್ ನೀರಿಗೆ ಎಷ್ಟು ಫಿನೈಲ್ ಹಾಕಬೇಕು?

ಫಿನೈಲ್ ಬಳಸುವಾಗ ಸರಿಯಾದ ಪ್ರಮಾಣ ಮುಖ್ಯ. ಸಾಮಾನ್ಯ ನೆಲದ ಸ್ವಚ್ಛತೆಗೆ ಒಂದು ಲೀಟರ್ ನೀರಿಗೆ ಸುಮಾರು 30ರಿಂದ 50 ಮಿಲಿಲೀಟರ್ ಫಿನೈಲ್ ಬಳಸಬಹುದು. ಬಾತ್ರೂಮ್ ಅಥವಾ ಹೆಚ್ಚು ಓಡಾಟ ಇರುವ, ಹೆಚ್ಚು ಕೊಳೆಯಾಗುವ ಜಾಗಗಳಿಗೆ ಒಂದು ಲೀಟರ್ ನೀರಿಗೆ 60ರಿಂದ 80 ಮಿಲಿಲೀಟರ್ವರೆಗೆ ಬಳಸಬಹುದು. ಆದರೆ ಎಲ್ಲಾ ಫಿನೈಲ್ ಉತ್ಪನ್ನಗಳ ಪ್ರಮಾಣ ಒಂದೇ ಆಗಿರುವುದಿಲ್ಲ. ಹಾಗಾಗಿ ನೀವು ಬಳಸುತ್ತಿರುವ ಉತ್ಪನ್ನದ ಪ್ಯಾಕೆಟ್ ಅಥವಾ ಲೇಬಲ್ನಲ್ಲಿ ನೀಡಿರುವ ಸೂಚನೆಗೆ ಮೊದಲ ಆದ್ಯತೆ ನೀಡಿ.

ಫಿನೈಲ್ ಹಾಕಿ ನೆಲ ಒರೆಸುವ ಸರಿಯಾದ ವಿಧಾನ

ಮೊದಲು ಒಂದು ಬಕೆಟ್ನಲ್ಲಿ ನೀರು ತೆಗೆದುಕೊಳ್ಳಿ. ಅದಕ್ಕೆ ಅಗತ್ಯವಿರುವಷ್ಟು ಫಿನೈಲ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಸ್ವಚ್ಛವಾದ ಮಾಪ್ ಅನ್ನು ಆ ನೀರಿನಲ್ಲಿ ಅದ್ದಿ, ಚೆನ್ನಾಗಿ ಹಿಂಡಿ. ಮಾಪ್ನಲ್ಲಿ ತುಂಬಾ ನೀರು ಉಳಿಯದಂತೆ ನೋಡಿಕೊಳ್ಳಿ. ಬಳಿಕ ನೆಲವನ್ನು ಸಮವಾಗಿ ಒರೆಸಿ. ಸ್ವಚ್ಛಗೊಳಿಸಿದ ನಂತರ ಕಿಟಕಿ ಅಥವಾ ಬಾಗಿಲು ತೆರೆದು ಗಾಳಿ ಚೆನ್ನಾಗಿ ಓಡಾಡುವಂತೆ ಮಾಡಿ. ಇದರಿಂದ ನೆಲ ಬೇಗ ಒಣಗುತ್ತದೆ. ನೆಲ ಒದ್ದೆಯಾಗಿರುವಾಗ ಮಕ್ಕಳು ಮತ್ತು ಸಾಕುಪ್ರಾಣಿಗಳು ಆ ಜಾಗಕ್ಕೆ ಹೋಗದಂತೆ ನೋಡಿಕೊಳ್ಳುವುದು ಕೂಡ ಮುಖ್ಯ.

ಫಿನೈಲ್‌ ನೇರವಾದ ಬಳಕೆ ಎಷ್ಟು ಸರಿ?

ಫಿನೈಲ್ ಕಾನ್ಸಂಟ್ರೇಟ್ ಅನ್ನು ನೇರವಾಗಿ ನೆಲದ ಮೇಲೆ ಹಾಕಿ ಒರೆಸುವ ಬದಲು, ನೀರಿನಲ್ಲಿ ಸರಿಯಾದ ಪ್ರಮಾಣದಲ್ಲಿ ಬೆರೆಸಿ ಬಳಸುವುದು ಉತ್ತಮ. ಹೆಚ್ಚು ಫಿನೈಲ್ ಬಳಸಿದರೆ ಸ್ವಚ್ಛತೆ ಇನ್ನಷ್ಟು ಉತ್ತಮವಾಗುತ್ತದೆ ಎಂದೇನಿಲ್ಲ. ಬದಲಿಗೆ ನೆಲದ ಮೇಲೆ ಅದರ ಅವಶೇಷ ಉಳಿಯಬಹುದು.