ದೆಹಲಿಯ 25 ವರ್ಷದ ಮೇಕಪ್ ಆರ್ಟಿಸ್ಟ್ ಮೊಮಿನಾ ಕೇವಲ ಒಂದು ವಾರದಲ್ಲಿ ₹4.5 ಲಕ್ಷ ಗಳಿಸುವ ಮೂಲಕ ನೆಟಿಜನ್‌ಗಳ ಅಚ್ಚರಿಗೆ ಕಾರಣವಾಗಿದ್ದಾರೆ. ಶಾಲೆಯಲ್ಲಿ ಎರಡು ಬಾರಿ ಫೇಲ್ ಆಗಿದ್ದ ಇವರು, ಕಠಿಣ ಪರಿಶ್ರಮ ಹಾಗೂ ಸತತ ಪ್ರಯತ್ನದಿಂದ ಈ ಯಶಸ್ಸು ಸಾಧಿಸಿದ್ದಾರೆ. ಅವರ ಜೀವನ ಸ್ಫೂರ್ತಿದಾಯಕವಾಗಿದೆ.
ಯಾವುದೇ ಸ್ಕಿಲ್ ಕಲಿಯುವುದು ಮುಖ್ಯವಲ್ಲ, ಅದನ್ನೇ ಆದಾಯದ ಉತ್ತಮ ಮೂಲವನ್ನಾಗಿ ಹೇಗೆ ಬೆಳೆಸುವುದು ಅನ್ನೋದು ಮುಖ್ಯ. ಬೆಂಗಳೂರಲ್ಲಿ ಸಾವಿರಾರು ಮೇಕಪ್ ಆರ್ಟಿಸ್ಟ್‌ಗಳಿದ್ದಾರೆ. ಅವರೆಲ್ಲರ ತಿಂಗಳ ಸ್ಯಾಲರಿ ₹20 ಸಾವಿರ ದಾಟುವುದಿಲ್ಲ. ಆದರೆ ಇದೇ ಮೇಕಪ್ ಕಲೆಯನ್ನು ವೃತ್ತಿಯನ್ನಾಗಿ ಮಾಡಿಕೊಂಡು ವಾರಕ್ಕೆ ಲಕ್ಷಾಂತರ ರೂಪಾಯಿ ಗಳಿಸುತ್ತಿರುವ ಮಹಿಳೆಯರೂ ಇದ್ದಾರೆ. ಅಂತಹ ಯಶಸ್ವಿ ಮಹಿಳೆಯೊಬ್ಬರ ರೋಚಕ, ಸ್ಪೂರ್ತಿದಾಯಕ ಸ್ಟೋರಿ ಇಲ್ಲಿದೆ. ನೀವು ಮೇಕಪ್ ಆರ್ಟಿಸ್ಟ್ ಆಗಿದ್ದರೆ ಅಥವಾ ಈ ಕ್ಷೇತ್ರಕ್ಕೆ ಬರಲು ಬಯಸುತ್ತಿದ್ದರೆ, ಈ ಲೇಖನ ಓದಿದ ಬಳಿಕ ನಿಮ್ಮ ಕನಸಿಗೆ ಹೊಸ ದಿಕ್ಕು ನೀಡಬಹುದು.
ದೆಹಲಿಯ ಈ ಮೇಕಪ್ ಆರ್ಟಿಸ್ಟ್ ವಾರಕ್ಕೆ ₹4.5 ಲಕ್ಷ ಗಳಿಸುತ್ತಾರೆ!
ಮೇಕಪ್ ವೃತ್ತಿ ಮಾಡಿ ತಿಂಗಳಿಗೆ ಇಪ್ಪತ್ತು ಸಾವಿರ ಬಂದರೆ ಸಾಕಪ್ಪ ಅನ್ನೋ ಸಾವಿರಾರು ಮೇಕಪ್ ಆರ್ಟಿಸ್ಟ್‌ಗಳ ನಡುವೆ ದೆಹಲಿಯ ಈ ಮೇಕಪ್ ಆರ್ಟಿಸ್ಟ್ ಒಂದೇ ವಾರದಲ್ಲಿ ಬರೋಬ್ಬರಿ ₹4.5 ಲಕ್ಷ ರೂ ಗಳಿಸುತ್ತಾರೆ!
ಹೌದು. ತಾವು ಗಳಿಸಿದ ಆದಾಯವನ್ನ ಆಕೆ ಇನ್ಸ್‌ಟಗ್ರಾಂ ನಲ್ಲಿ ಬಹಿರಂಗಪಡಿಸಿದ್ದು ಇದನ್ನು ಕಂಡು ನೆಟಿಜನ್ ಶಾಕ್ ಆಗಿದ್ದಾರೆ. ಇನ್ನೊಮ್ಮೆ ಕೇಳಿಸಿಕೊಳ್ಳಿ ಆಕೆ ಗಳಿಸಿದ್ದು ತಿಂಗಳ ಆದಾಯ ಅಲ್ಲ, ಕೇವಲ ಏಳು ದಿನದಲ್ಲಿ ₹4.5 ಲಕ್ಷ ರೂ ಗಳಿಕೆ!
ಮೇಕಪ್ ಆರ್ಟಿಸ್ಟ್ ಮೊಮಿನಾ
ದೆಹಲಿಯ 25 ವರ್ಷದ ಮೇಕಪ್ ಆರ್ಟಿಸ್ಟ್ ಮೊಮಿನಾ; ಮೇಕಪ್ ಆರ್ಟಿಸ್ ಮಾಡುವ ಮೂಲಕ ಒಂದು ವಾರದಲ್ಲಿ ಗಳಿಸಿದ ವಿವರಗಳನ್ನು ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. ಆ ವಾರದಲ್ಲಿ ವಧುಗಳ ಮೇಕಪ್, ಪಾರ್ಟಿ ಮೇಕಪ್‌ಗಾಗಿ ಹಲವು ಬುಕ್ಕಿಂಗ್‌ಗಳನ್ನು ಪಡೆದಿದ್ದರು. ಈ ವಿಡಿಯೋ ಇದೀಗ ಒಂದು ಕೋಟಿಗೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದ್ದು, ಕೇವಲ ಏಳು ದಿನಗಳಲ್ಲಿ ಇಷ್ಟೊಂದು ಹಣ ಗಳಿಸಿರುವುದನ್ನು ಕಂಡು ಹಲವರು ಅಚ್ಚರಿಗೊಂಡಿದ್ದಾರೆ. ಕೆಲವರಂತೂ ಅವರ ಉನ್ನತ ಶಿಕ್ಷಣ ಪಡೆದು ಅದಕ್ಕಿಂತ ಕಡಿಮೆ ಆದಾಯ ಬರುವ ಬಗ್ಗೆ ತಮಗೆ ತಾವೇ ಪ್ರಶ್ನಿಸಿಕೊಂಡಿದ್ದಾರೆ.
ಮೊಮಿನಾ ವಿಡಿಯೋದಲ್ಲಿ ಕೇವಲ ₹4.5 ಲಕ್ಷ ಗಳಿಸಿದ್ದೇನೆ ಎಂದು ಹೇಳಿ ಸುಮ್ಮನಾಗಿಲ್ಲ. ಆ ಮೊತ್ತವನ್ನು ಗಳಿಸಲು ಅವರಿಗೆ ಬಂದಿದ್ದ ಬುಕ್ಕಿಂಗ್‌ಗಳ ಸಂಪೂರ್ಣ ವಿವರವನ್ನು ಕೂಡ ಹಂಚಿಕೊಂಡಿದ್ದಾರೆ.
ಮೊಮಿನಾ ಒಂದು ವಾರದ ಕೆಲಸದಲ್ಲಿ ಮೊದಲಿಗೆ ದೆಹಲಿ ಮತ್ತು ಕಸೌಲಿಯಲ್ಲಿ ವಧುವಿನ ಮೇಕಪ್ ಹಾಗೂ ಪಾರ್ಟಿ ಮೇಕಪ್ ಬುಕ್ಕಿಂಗ್‌ಗಳಿದ್ದವು. ಸಿಂಗಾಪುರ ಮೂಲದ ಗ್ರಾಹಕರಿಗೆ ಮೂರು ವಿಭಿನ್ನ ಲುಕ್‌ಗಳನ್ನು ನೀಡಿದ್ದರು. ಇದರ ಜೊತೆಗೆ ಮದುವೆಯ ಬುಕ್ಕಿಂಗ್, ₹2.2 ಲಕ್ಷ ಮೌಲ್ಯದ ಫ್ಯಾಮಿಲಿ ಬುಕ್ಕಿಂಗ್ ಇದರೊಂದಿಗೆ ವಾರಾಂತ್ಯದಲ್ಲಿ ಮತ್ತೊಂದು ವಧುವಿನ ಮೇಕಪ್ ಬುಕ್ಕಿಂಗ್ ಕೂಡ ಸಿಕ್ಕಿತ್ತು. ಇವೆಲ್ಲ ಸೇರಿ ಆ ವಾರದಲ್ಲಿ ಅವರ ಒಟ್ಟು ಗಳಿಕೆ ₹4.5 ಲಕ್ಷವಾಗಿತ್ತು.
ಒಂದೇ ವಾರದಲ್ಲಿ ಇಷ್ಟು ಹಣ ಗಳಿಸುವುದು ಅಚ್ಚರಿ
ಸಾಫ್ಟ್‌ವೇರ್ ಇಂಜಿಯರ್ ಆಗಿದ್ದರೂ ತಿಂಗಳಿಗೆ ಎರಡು ಮೂರು ಲಕ್ಷ ಸ್ಯಾಲರಿ ಇರಬಹುದು. ಆದರೆ ತಿಂಗಳಿಗೆ ₹4.5 ಲಕ್ಷ ಗಳಿಸುವುದು ಬಹಳ ಕಷ್ಟದ ಕೆಲಸ ಹೀಗಿರುವಾಗ ಮೇಕಪ್ ಆರ್ಟಿಸ್ಟ್‌ವೊಬ್ಬರು ಕೇವಲ ಒಂದು ವಾರದಲ್ಲಿ ಇಷ್ಟೊಂದು ಹಣ ಗಳಿಸಿರುವುದು ಸಹಜವಾಗಿ ನೆಟಿಜನ್ ಮೂಗಿನ ಬೆರಳಿಟ್ಟುಕೊಳ್ಳುವಂತೆ ಮಾಡಿದೆ.
ಈ ವಿಡಿಯೋದ ನೋಡಿ ಬಳಿಕ ನೆಟಿಜನ್ ವಿಭಿನ್ನ ರೀತಿಯ ಕಾಮೆಂಟ್ಸ್ ಮಾಡಿದ್ದಾರೆ. ಒಬ್ಬರು, 'ನನ್ನ 15 ವರ್ಷಗಳ ಪದವಿ ಸರ್ಟಿಫಿಕೇಟ್‌ಗಳನ್ನೇ ಸುಟ್ಟುಬಿಡಬೇಕು ಅನ್ನಿಸುತ್ತಿದೆ! ಇನ್ನಷ್ಟು ಪದವಿ ಪಡೆಯಲು ನಾನು ಯಾಕೆ ಇಷ್ಟೊಂದು ಓದುತ್ತಿದ್ದೇನೆ? ಈ ದೇಶದಲ್ಲಿ ನಾನೇಕೆ ವೈದ್ಯನಾದೆ?' ಎಂದು ತಮ್ಮನ್ನೇ ಬೈದುಕೊಂಡು ಆ ಹುಡುಗಿಗೆ ಅಭಿನಂದನೆ ತಿಳಿಸಿದ್ದಾರೆ.
ಮತ್ತೊಬ್ಬ, 'ವಾವ್, ಇದು ತುಂಬಾ ದುಬಾರಿ, ಲಂಡನ್ ದರಗಳಂತಿದೆ' ಎಂದರೆ ಮಗದೊಬ್ಬರು, ಮೊಮಿನಾ ಗಳಿಸುತ್ತಿರುವ ಹಣವನ್ನು ಕಂಡು ಬೆರಗಾದ ಕೆಲವರು ಈ ಹಂತಕ್ಕೆ ಬೆಳೆದುಬಂದಿದ್ದು ಹೇಗೆ, ಇನ್ನಷ್ಟು ವಿವರ ಹಂಚಿಕೊಳ್ಳುಂತೆ ಮನವಿ ಮಾಡಿದ್ದಾರೆ.
ಎರಡು ಬಾರಿ ಶಾಲೆಯಲ್ಲಿ ಫೇಲ್ ಆಗಿದ್ದಾಕೆ
ಕಳೆದ ಐದು ವರ್ಷಗಳಲ್ಲಿ ಟಿಯರ್-1 ನಗರದಲ್ಲಿ ಮೇಕಪ್ ಆರ್ಟಿಸ್ಟ್‌ರನ್ನು ಬುಕ್ ಮಾಡಿರುವವರಿಗೆ ಮೊಮಿನಾ ಅವರ ₹4.5 ಲಕ್ಷದ ವಾರದ ಗಳಿಕೆ ಅಷ್ಟೊಂದು ಆಶ್ಚರ್ಯಕರವಾಗಿ ಕಾಣದೇ ಇರಬಹುದು. ವಧುವಿನ ಮೇಕಪ್ ಶುಲ್ಕ ಸುಲಭವಾಗಿ ₹50,000 ದಾಟಬಹುದು. ಸೆಲೆಬ್ರಿಟಿ ಮೇಕಪ್ ಆರ್ಟಿಸ್ಟ್‌ಗಳು ಒಂದೇ ಲುಕ್‌ಗೆ ಲಕ್ಷಾಂತರ ರೂಪಾಯಿ ಶುಲ್ಕ ಪಡೆಯುತ್ತಾರೆ. ಆದರೆ ಇದರ ಹಿಂದೆ ಇರುವ ಹಲವು ವರ್ಷಗಳ ಪರಿಶ್ರಮ ಬಗ್ಗೆ ಹೆಚ್ಚಿನವರಿಗೆ ತಿಳಿದಿರುವುದಿಲ್ಲ. ಸ್ವಂತ ಮದುವೆಯ ಆರತಕ್ಷತೆ ಮುಗಿದ ಮರುದಿನವೇ ಮೇಕಪ್ ಬುಕ್ಕಿಂಗ್‌ಗಾಗಿ ಕೆಲಸಕ್ಕೆ ತೆರಳುವಷ್ಟು ತಮ್ಮ ವೃತ್ತಿಗೆ ಅವರು ಬದ್ಧರಾಗಿದ್ದಾರೆ.
'ನನ್ನ ಪೋರ್ಟ್‌ಫೋಲಿಯೊ ನಿರ್ಮಿಸಿಕೊಳ್ಳಲು, ನನ್ನ ಸ್ಕಿಲ್ ಸಾಬೀತುಪಡಿಸಲು ಲೆಕ್ಕವಿಲ್ಲದಷ್ಟು ದಿನ ಉಚಿತ ಕಾರ್ಯಾಗಾರಗಳಲ್ಲಿ ಕೆಲಸ ಮಾಡಿದ್ದೇನೆ. ಇಂದು ನನಗೆ ಸಿಗುತ್ತಿರುವ ಪ್ರತಿಯೊಂದು ಬುಕ್ಕಿಂಗ್ ಕೂಡ ಕೈಬಿಡದೆ ಮುಂದುವರಿದದ್ದು, ನಿರಂತರವಾಗಿ ಕಲಿತದ್ದು, ನಾನು ಮೇಕಪ್ ಮಾಡುವ ಪ್ರತಿಯೊಬ್ಬರಿಗೂ ಶೇ.100ರಷ್ಟು ಸರ್ವಿಸ್ ನೀಡಿದ್ದರ ಪ್ರತಿಫಲ ಎಂದು ಮೊಮಿನ್ ಬರೆದುಕೊಂಡಿದ್ದಾರೆ.
ಮೊಮಿನಾ ಈ ಹಂತಕ್ಕೆ ಬೆಳೆದಿದ್ದು ಹೇಗೆ?
ಇಂಡಿಯಾ ಟುಡೆ ಡಿಜಿಟಲ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮೊಮಿನಾ ತಮ್ಮ ಮೇಕಪ್ ಆರ್ಟಿಸ್ಟ್ 2021ರಲ್ಲಿ ಆರಂಭವಾಯಿತು ಎಂದು ಹೇಳಿದ್ದಾರೆ. 12ನೇ ತರಗತಿ ಪೂರ್ಣಗೊಳಿಸಿದ ಬಳಿಕ ಅವರು ವೃತ್ತಿಪರ ಮೇಕಪ್ ಕೋರ್ಸ್‌ಗೆ ಸೇರಿದ್ದರು.
ಮೊಮಿನ್ ಹೇಳೋದು ಹೀಗೀ, 'ನನ್ನ ಪರೀಕ್ಷೆಗಳು ಮುಗಿದ ತಕ್ಷಣ ಮೇಕಪ್ ಕೋರ್ಸ್ ಮಾಡಲು ನಿರ್ಧರಿಸಿದೆ. ಶಾಲಾ ಶಿಕ್ಷಣ ನನಗೆ ತುಂಬಾ ಕಷ್ಟವಾಗಿತ್ತು. ಎರಡು ಬಾರಿ ಫೇಲ್ ಆದ ಬಳಿಕ ನಾನಿನ್ನು ಓದು ಮುಂದುವರಿಸುವುದು ವ್ಯರ್ಥ ಅನಿಸಲಾರಂಭಿಸಿತು. ಆದರೆ ವ್ಯಕ್ತಿಯಾಗಿ ಎಂದಿಗೂ ಹಾಗೆ ಭಾವಿಸಿರಲಿಲ್ಲ. ಚಿಕ್ಕಂದಿನಿಂದಲೂ ನನ್ನ ದೊಡ್ಡ ಕನಸು ನನ್ನ ತಂದೆ ನನ್ನ ಬಗ್ಗೆ ಹೆಮ್ಮೆಪಡುವಂತದ್ದು ಏನಾದರೂ ಸಾಧಿಸಬೇಕು. ಅದನ್ನ ನಾನು ನೋಡಬೇಕು ಅನ್ನೋದು. ಅದೇ ನನಗೆ ಪ್ರೇರಣೆ ನೀಡಿತು. ಅಂದರೆ ಇಂದು ನಾನು ಈ ಹಂತಕ್ಕೆ ತಲುಪಲು ಸುಮಾರು ಎರಡೂವರೆ ವರ್ಷಗಳ ನಿರಂತರ ಕಠಿಣ ಪರಿಶ್ರಮವಿದೆ' ಎಂದು ಹೇಳಿಕೊಂಡಿದ್ದಾರೆ.
ಮೇಕಪ್ ಕೋರ್ಸ್‌ಗೆ ಎಷ್ಟು ಖರ್ಚಾಯ್ತು?
ಮೊಮಿನ್ ಮೇಕಪ್ ಕೋರ್ಸ್‌ಗೆ ಸೇರಬೇಕು ಅನಸಿ ಅದಕ್ಕೆ ಸೇರಿದಾಗ ಸುಮಾರು ₹2 ಲಕ್ಷ ಖರ್ಚಾಯ್ತು. ದೆಹಲಿಯ ಹಜ್ರತ್ ನಿಜಾಮುದ್ದೀನ್ ಬಸ್ತಿ ಪ್ರದೇಶದ ಮಧ್ಯಮ ವರ್ಗದ ಕುಟುಂಬದಿಂದ ಬಂದಿದ್ದ ಅವರಿಗೆ ಇಷ್ಟು ಹಣ ಹೊಂದಿಸುವುದು ಕಷ್ಟವಾಗಿತ್ತು. ಆದರೆ ಆರಂಭದಲ್ಲಿ ಅವರು ಎಡಿಟೋರಿಯಲ್ ಫೋಟೋಶೂಟ್‌ಗಳಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಕೇವಲ ₹5-6 ಸಾವಿರಕ್ಕಾಗಿ ಇಡೀ ದಿನ ಸುಮಾರು 50 ಬಟ್ಟೆ ಬದಲಾವಣೆಗಳೊಂದಿಗೆ ಕೆಲಸ ಮಾಡುವುದು ದೀರ್ಘಕಾಲ ಮುಂದುವರಿಸಲು ಸಾಧ್ಯವಿಲ್ಲ ಎಂದು ಅವರಿಗೆ ಅನಿಸಿತು. ಹೀಗಾಗಿ ಅವರು ವಧುವಿನ ಮೇಕಪ್‌ನತ್ತ ಹೆಚ್ಚು ಗಮನ ಹರಿಸಲು ನಿರ್ಧರಿಸಿದರು. ಆದರೆ ಯಾವುದೇ ಉದ್ಯಮದ ಸಂಪರ್ಕಗಳಿಲ್ಲದೆ ಈ ಕ್ಷೇತ್ರದಲ್ಲಿ ಮುಂದೆ ಸಾಗುವುದು ಸುಲಭವಾಗಿರಲಿಲ್ಲ.
ಶ್ರೀಮಂತ ಕುಟುಂಬದಿಂದ ಬಂದವರಿಗೆ ಒಂದು ರೀತಿಯ ಅನುಕೂಲ ಇರುತ್ತದೆ ಎಂಬುದು ನನಗೆ ಅರ್ಥವಾಯಿತು. ಆದರೆ ಮಧ್ಯಮ ವರ್ಗದ ಕುಟುಂಬದಿಂದ ಬಂದ ನನಗೆ ಆ ಅವಕಾಶ ಇರಲಿಲ್ಲ. ವೃತ್ತಿಪರ ಫೋಟೋಶೂಟ್‌ಗಳನ್ನು ಮಾಡಿಸಲು, ಉತ್ತಮ ಬಟ್ಟೆಗಳನ್ನು ವ್ಯವಸ್ಥೆ ಮಾಡಲು ಮತ್ತು ಮಾಡೆಲ್‌ಗಳನ್ನು ನೇಮಿಸಿಕೊಳ್ಳಲು ನನ್ನದೇ ಹಣವನ್ನು ಸಾಕಷ್ಟು ಖರ್ಚು ಮಾಡಬೇಕಾಯಿತು ಎಂದು ಅವರು ಹೇಳಿದ್ದಾರೆ.
ಹೀಗಾಗಿ ಮೊಮಿನಾ ಕಡಿಮೆ ದರದಲ್ಲಿ ಪಾರ್ಟಿ ಮೇಕಪ್ ಮಾಡಿಕೊಡುವ ಮೂಲಕ ಆರಂಭಿಸಿದರು. ಇನ್‌ಸ್ಟಾಗ್ರಾಂನಲ್ಲಿ ಇನ್‌ಫ್ಲುಯೆನ್ಸರ್‌ಗಳು ಮತ್ತು ಸೆಲೆಬ್ರಿಟಿಗಳನ್ನು ಸಂಪರ್ಕಿಸುತ್ತಿದ್ದರು. ಕೆಲವರು ಅವರೊಂದಿಗೆ ಕೆಲಸ ಮಾಡಲು ಒಪ್ಪಿಕೊಂಡಾಗ, ಆ ಮೇಕಪ್ ಲುಕ್‌ಗಳು ಅವರ ಪೋರ್ಟ್‌ಫೋಲಿಯೊವನ್ನು ಗಟ್ಟಿಗೊಳಿಸಿದವು. ನಂತರ ಅವರಿಗೆ ಮೊದಲ ವಧುವಿನ ಮೇಕಪ್ ಬುಕ್ಕಿಂಗ್‌ಗಳು ಸಿಗಲಾರಂಭಿಸಿದವು.
ಮೊಮಿನ ಹೇಳುವಂತೆ, 'ನನಗೆ ಸಿಕ್ಕ ಯಾವುದೇ ಕೆಲಸವನ್ನು ಮಾಡುತ್ತಿದ್ದೆ. ಸ್ಟುಡಿಯೋಗಳು, ಟಿವಿ ಜಾಹೀರಾತುಗಳು ಮತ್ತು ಎಡಿಟೋರಿಯಲ್ ಫೋಟೋಶೂಟ್‌ಗಳಿಗೆ ಮೇಕಪ್ ಮಾಡುತ್ತಿದ್ದೆ' ಎಂದಿದ್ದಾರೆ. ಆದರೆ ಮೊಮಿನಾ ಅವರು ತಮ್ಮದೇ ಆದ ಒಂದು ನಿಯಮವನ್ನು ಮಾಡಿಕೊಂಡಿದ್ದರು. ಪ್ರತಿ ಬುಕ್ಕಿಂಗ್‌ನಿಂದ ಹಣ ಬಂದ ಕೂಡಲೇ ಅದನ್ನು ಉತ್ತಮ ಗುಣಮಟ್ಟದ ಮೇಕಪ್ ಉತ್ಪನ್ನಗಳನ್ನು ಖರೀದಿಸಲು ಮತ್ತೆ ಹೂಡಿಕೆ ಮಾಡುತ್ತಿದ್ದರು. ಇಂದು ತಮ್ಮ ವೃತ್ತಿಪರ ಸೆಟಪ್ ಅನ್ನು ಉತ್ತಮಪಡಿಸಿಕೊಳ್ಳಲು ಅವರು ಪ್ರತಿ ವರ್ಷ ₹1.5 ಲಕ್ಷಕ್ಕೂ ಹೆಚ್ಚು ಖರ್ಚು ಮಾಡುತ್ತಾರೆ. ಮೇಕಪ್ ಉತ್ಪನ್ನಗಳು, ಲೈಟಿಂಗ್, ಉತ್ತಮ ಗುಣಮಟ್ಟದ ವ್ಯಾನಿಟಿ, ಪ್ರೀಮಿಯಂ ಲೆನ್ಸ್‌ಗಳು ಮತ್ತು ಐಲ್ಯಾಶ್‌ಗಳು ಸೇರಿದಂತೆ ಹಲವು ವಸ್ತುಗಳನ್ನು ಇದರಲ್ಲಿ ಸೇರಿವೆ. 'ಒಂದೊಂದು ಬುಕ್ಕಿಂಗ್‌ನಿಂದ ಬಂದ ಹಣವನ್ನು ಬಳಸಿಕೊಂಡು ಹಂತ ಹಂತವಾಗಿ ನನ್ನ ಲಕ್ಸುರಿ ಮೇಕಪ್ ಕಿಟ್ ನಿರ್ಮಿಸಿಕೊಂಡೆ' ಎಂದು ಅವರು ಹೇಳಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ಕಾಣದ ಮೇಕಪ್ ಆರ್ಟಿಸ್ಟ್‌ಗಳ ಕಷ್ಟ
ಇನ್‌ಸ್ಟಾಗ್ರಾಂನಲ್ಲಿ ಕಾಣಿಸುವ ಸುಂದರ ವಧುವಿನ ಮೇಕಪ್ ಲುಕ್‌ಗಳ ಹಿಂದೆ ಮೇಕಪ್ ಆರ್ಟಿಸ್ಟ್‌ಗಳ ದೈಹಿಕ ಪರಿಶ್ರಮವೂ ಇದೆ. ಜನರು ಸುಂದರವಾಗಿ ಸಿದ್ಧಗೊಂಡ ವಧುಗಳನ್ನು ನೋಡುತ್ತಾರೆ. ನಾನು ಸುಮಾರು 15ರಿಂದ 20 ಕೆಜಿ ತೂಕದ ವ್ಯಾನಿಟಿಯನ್ನು ಎಲ್ಲೆಡೆ ಹೊತ್ತುಕೊಂಡು ಹೋಗುವುದು, ಕುಳಿತುಕೊಳ್ಳದೆ 15 ಗಂಟೆಗಳ ಕಾಲ ಕೆಲಸ ಮಾಡುವುದು ಅಥವಾ ರಾತ್ರಿ 2 ಗಂಟೆಗೆ ನೂರಾರು ಬ್ರಷ್‌ಗಳನ್ನು ತೊಳೆಯುವುದು ಯಾರಿಗೂ ಕಾಣಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.
ಕೆಲವು ಬುಕ್ಕಿಂಗ್‌ಗಳಿಗೆ ಬೆಳಗಿನ 4 ಗಂಟೆಗೆ ತಲುಪಬೇಕಾಗಿರುತ್ತದೆ. ಹೀಗಾಗಿ ಕೆಲವೊಮ್ಮೆ ಹಿಂದಿನ ರಾತ್ರಿ ನಿದ್ದೆ ಮಾಡದೇ ಕೆಲಸಕ್ಕೆ ಹೋಗಬೇಕಾಗುತ್ತದೆ. ದುಬಾರಿ ಹೋಟೆಲ್‌ಗಳು ಮತ್ತು ರೆಸಾರ್ಟ್‌ಗಳಲ್ಲಿ ಮೇಕಪ್ ಆರ್ಟಿಸ್ಟ್‌ಗಳಿಗೆ ಸಿಗುವ ವರ್ತನೆಯ ಮತ್ತೊಂದು ಮುಖವನ್ನೂ ಅವರು ವಿವರಿಸಿದ್ದಾರೆ.
'ವಧುಗಳನ್ನು ಮದುವೆ ಕಾರ್ಯಕ್ರಮಗಳಿಗೆ ಮೇಕಪ್ ಮಾಡಲು ನಾನು ದೊಡ್ಡ ದೊಡ್ಡ ಹೈ-ಫೈ ರೆಸಾರ್ಟ್‌ಗಳಿಗೆ ಹೋಗಿದ್ದೇನೆ. ಆದರೆ ಗ್ರಾಹಕರು ನನಗೆ ಒಂದು ಲೋಟ ನೀರು ಬೇಕೇ ಎಂದು ಕೂಡ ಕೇಳುವುದಿಲ್ಲ. ಕೆಲವೊಮ್ಮೆ ಇಡೀ ದಿನ ಖಾಲಿ ಹೊಟ್ಟೆಯಲ್ಲಿ ಕೆಲಸ ಮಾಡಬೇಕಾಗುತ್ತದೆ. ಮೇಕಪ್ ಆರ್ಟಿಸ್ಟ್‌ಗಳ ಬದುಕಿನ ಈ ಭಾಗದ ಬಗ್ಗೆ ರೀಲ್ಸ್‌ನಲ್ಲಿ ಯಾರೂ ಮಾತನಾಡುವುದಿಲ್ಲ' ಎಂದು ಅವರು ಹೇಳಿದ್ದಾರೆ.
ವರ್ಷವಿಡೀ ಒಂದೇ ರೀತಿಯ ಬುಕ್ಕಿಂಗ್ ಇರಲ್ಲ!
ವರ್ಷದ ಎಲ್ಲ ಸಮಯದಲ್ಲೂ ಬುಕ್ಕಿಂಗ್‌ಗಳು ಒಂದೇ ರೀತಿಯಲ್ಲಿ ಇರುವುದಿಲ್ಲ. ನನ್ನ ರೀಲ್ಸ್‌ನಲ್ಲಿ ಕಾಣಿಸುವ ರೀತಿಯಲ್ಲಿ ಪ್ರತಿಯೊಂದು ವೀಕೆಂಡ್ ಇದೇ ಆದಾಯ ಇರುವುದಿಲ್ಲ. ಮದುವೆ ಸೀಸನ್‌ಗೆ ಹೆಚ್ಚು ಬುಕಿಂಗ್ ಆಗುತ್ತವೆ. ನಮ್ಮ ಆದಾಯ ಮದುವೆಯ ಸೀಸನ್‌ಗಳಲ್ಲೇ ಹೆಚ್ಚಿರುತ್ತದೆ ಎಂದಿದ್ದಾರೆ. ಮೊಮಿನಾ ಪ್ರಕಾರ, ಮೇಕಪ್ ಆರ್ಟಿಸ್ಟ್‌ಗಳಿಗೆ ಸಾಮಾನ್ಯವಾಗಿ ಸುಮಾರು ಆರು ತಿಂಗಳ ಮದುವೆ ಸೀಸನ್ ಇರುತ್ತದೆ. ಉಳಿದ ಅವಧಿಯಲ್ಲಿ ಬುಕ್ಕಿಂಗ್‌ಗಳು ಗಣನೀಯವಾಗಿ ಕಡಿಮೆಯಾಗಬಹುದು.
ಬುಕ್ಕಿಂಗ್‌ಗಳು ಬಹಳ ಕಡಿಮೆ ಇರುವ ತಿಂಗಳುಗಳನ್ನು ಹೇಗೆ ಎದುರಿಸುವುದು ಎಂಬ ಆತಂಕದ ಬಗ್ಗೆ ಯಾರೂ ಪೋಸ್ಟ್ ಮಾಡುವುದಿಲ್ಲ. ಅದರಲ್ಲೂ ಈಗ ಈ ಕ್ಷೇತ್ರದಲ್ಲಿ ಸಾಕಷ್ಟು ಸ್ಪರ್ಧೆ ಇದೆ ಎಂದು ಹೇಳಿದ್ದಾರೆ. ವೃತ್ತಿಜೀವನಕ್ಕಾಗಿ ವೈಯಕ್ತಿಕ ಜೀವನದಲ್ಲಿಯೂ ಕೆಲವು ತ್ಯಾಗಗಳನ್ನು ಮಾಡಬೇಕಾಗಿದೆ. 2024ರಲ್ಲಿ ಮದುವೆಯಾದಾಗ, ತಮ್ಮದೇ ಆರತಕ್ಷತೆಯ ಮರುದಿನ ಅವರಿಗೆ ವಧುವಿನ ಮೇಕಪ್ ಬುಕ್ಕಿಂಗ್ ಇತ್ತು ಎಂದು ಅವರು ನೆನಪಿಸಿಕೊಂಡಿದ್ದಾರೆ.
'ನಾನು ಆ ಬುಕ್ಕಿಂಗ್‌ನ್ನು ರದ್ದು ಮಾಡುತ್ತೇನೆ ಎಂದು ನನ್ನ ಪತಿಗೆ ಹೇಳಿದ್ದೆ. ಆದರೆ ಅವರು ಯಾವಾಗಲೂ ನನ್ನ ಸಪೋರ್ಟ್ ಮಾಡುತ್ತಾರೆ. 'ಇದು ನಿನ್ನ ಜಾಬ್. ಇದನ್ನ ನೀನು ನಿರಾಕರಿಸಬಾರದು' ಎಂದು ಯಾವಾಗಲೂ ಅವರು ನನಗೆ ಹೇಳುತ್ತಿರುತ್ತಾರೆ. ಪತಿಯ ಬೆಂಬಲದಿಂದಲೇ ನಾನು ಈ ಹಂತಕ್ಕೆ ಬೆಳೆಯಲು ಸಾಧ್ಯವಾಗಿದೆ ಎಂಬುದು ಮೊಮಿನಾ ಮಾತು.
ಮೊಮಿನಾಗೆ ಮೇಕಪ್ ಆರ್ಟಿಸ್ಟ್ ವೃತ್ತಿಯ ಆಕರ್ಷಣೆ ಕೇವಲ ಹಣಕ್ಕೆ ಸೀಮಿತವಾಗಿಲ್ಲ. ತಮ್ಮ ವಿಶೇಷ ದಿನದಂದು ಮಹಿಳೆಯರು ಸುಂದರವಾಗಿ ಮತ್ತು ಆತ್ಮವಿಶ್ವಾಸದಿಂದ ಕಾಣಲು ಸಹಾಯ ಮಾಡುವುದನ್ನು ತಾವು ಇಷ್ಟಪಡುತ್ತೇನೆ ಎಂದು ಅವರು ಹೇಳಿದ್ದಾರೆ. ಈ ವೃತ್ತಿ ಆರ್ಥಿಕ ಸ್ವಾತಂತ್ರ್ಯವನ್ನು ನೀಡುತ್ತದೆ ಎಂಬುದು ಅವರ ಅಭಿಪ್ರಾಯ.
'ನಾನು ಯಾವಾಗಲೂ ಈ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವಂತೆ ಸಲಹೆ ನೀಡುತ್ತೇನೆ. ಏಕೆಂದರೆ ಇದು ನಿಜವಾದ ಆರ್ಥಿಕ ಸ್ವಾತಂತ್ರ್ಯವನ್ನು ನೀಡುತ್ತದೆ. ಸ್ವಂತ ಕೆಲಸದ ಮಾಲೀಕರಾಗಿರುವುದು ನಿಮಗೆ ಬೇಕಾದ ರೀತಿಯ ಜೀವನವನ್ನು ಕಟ್ಟಿಕೊಳ್ಳಲು ಸಂಪೂರ್ಣ ಸ್ವಾತಂತ್ರ್ಯ ನೀಡುತ್ತದೆ ಎನ್ನುತ್ತಾರೆ.
ಹೀಗಾಗಿ ಒಂದೇ ವಾರದಲ್ಲಿ ₹4.5 ಲಕ್ಷ ಗಳಿಸಿದ ವಿಷಯ ಮೊಮಿನಾ ಅವರ ಇನ್‌ಸ್ಟಾಗ್ರಾಂ ವಿಡಿಯೋದಲ್ಲಿ ಗಮನ ಸೆಳೆದಿದ್ದರೂ, ಅದರ ಹಿಂದೆ ಹಲವು ವರ್ಷಗಳ ಪರಿಶ್ರಮ, ಸವಾಲುಗಳು, ತ್ಯಾಗಗಳು ಮತ್ತು ನಿರಂತರ ಕಲಿಕೆಯ ಕಥೆಯಿದೆ.


