Asianet Suvarna News

ಮದುವೆ ವಿರೋಧಿಸಿ ಮನೆಯಿಂದ ಹೊರಬಿದ್ದ ಗುಲ್‌ರುಖ್‌ ಸಾಧಕಿಯಾದದ್ದು ಹೀಗೆ..

18ನೇ ವಯಸ್ಸಿಗೆ ಅವಳಿಗೆ ಮದುವೆ ಮಾಡಲು ಹೊರಟಾಗ ತೀವ್ರವಾಗಿ ವಿರೋಧಿಸುತ್ತಾಳೆ. ಮನೆಯವರು ಬಲವಂತ ಮಾಡಿದಾಗ ಮನೆಯಿಂದಲೇ ಹೊರಬೀಳುತ್ತಾಳೆ. ಅಲ್ಲಿಂದ ಬಂದದ್ದು ಭಾರತಕ್ಕೆ. ಇಲ್ಲಿ ಆಧ್ಯಾತ್ಮಿಕ ಪಥ ತೆರೆದು ಕೊಳ್ಳುತ್ತದೆ. ಹಜರತ್ ಬಾಬಾ ಜಾನ್‌ಹೆಸರಿನ ಫಕೀರಳಾಗುತ್ತಾಳೆ.
 

pashthun muslim saint hazrat babajan life journey
Author
Bangalore, First Published Nov 11, 2019, 9:58 AM IST
  • Facebook
  • Twitter
  • Whatsapp

ಪೂನಾದ ಒಂದು ಬಯಲು ಪ್ರದೇಶ. ನಡುವೆ ಒಂದು ಮರ. ಆ ಮರದಡಿ ಒಬ್ಬ ಮುದುಕಿ. ಮೇಲ್ನೋಟಕ್ಕೆ ಭಿಕ್ಷುಕಿಯಂತೆ ಕಂಡರೂ ಅಚ್ಚರಿಯಿಲ್ಲ. ಅಷ್ಟು ಸರಳ ಉಡುಗೆ, ಸ್ವಲ್ಪ ಮಟ್ಟಿಗೆ ಸೂಫಿ ಸಾಧಕರನ್ನು ಹೋಲುವಂಥಾದ್ದು. ಅಥವಾ ಆಕೆ ಫಕೀರಳಂತಿದ್ದಳು ಎನ್ನಬಹುದು. ಮಹಾ ಪ್ರಾಮಾಣಿಕತೆ, ಸುಳ್ಳು ಕಂಡರೆ ತೀವ್ರ ಖಂಡನೆ. ಹಝರತ್ ಬಾಬಾಜಾನ್ ಎಂದು ಆಕೆಯ ಹೆಸರು. ತನ್ನೊಳಗೆ ಆಧ್ಯಾತ್ಮಿಕ ಅನುಭವವನ್ನು ತುಂಬಿಕೊಂಡ ಆಕೆ ಎಂದೂ ಅದನ್ನು ಇನ್ನೊಬ್ಬರಿಗೆ ಬೋಧಿಸಿದವಳಲ್ಲ.

ಕೋಪದಿಂದ ಸಿಡುಕಿ, ಮತ್ತೊಂದು ಕ್ಷಣ ಅಮ್ಮಾ ಅಂದರೆ ಮುಗುಳ್ನಗುತ್ತಾಳೆ!

ಒಂದಿಷ್ಟು ಶಿಷ್ಯರನ್ನು ಪಕ್ಕ ಕೂರಿಸಿ ಉಪದೇಶ ಮಾಡಿದವಳಲ್ಲ. ಇವಳ ಒಬ್ಬನೇ ಒಬ್ಬ ಉತ್ತರಾಧಿಕಾರಿ ಮೆಹೆರ್ ಬಾಬಾ ಎನ್ನುತ್ತಾರೆ. ಆಕೆ ಮೆಹರ್‌ಬಾಬಾಗೆ ತನ್ನಷ್ಟೂ ಆಧ್ಯಾತ್ಮಿಕ ಶಕ್ತಿಯನ್ನು ಧಾರೆ ಎರೆದಳು. ಆ ಸಂದರ್ಭ ಹೀಗಿದೆ. ಆಗ ಆತ ಶಾಲೆಗೆ ಹೋಗುವ ಹುಡುಗ. ಮರದಡಿ ಮಲಗಿಕೊಂಡ ಹೋಗುವವರನ್ನು ಬರುವವರನ್ನು ಗಮನಿಸುತ್ತಿದ್ದ ಈ ಮುದುಕಿಯನ್ನು ಉಳಿದವರ ಹಾಗೆ ಈತನೂ ನೋಡಿದ್ದ. ಅದರಲ್ಲಿ ಅಂಥಾ ವಿಶೇಷತೆ ಏನಿರಲಿಲ್ಲ. ಆದರೆ ಆಕೆಗೆ ಈ ಹುಡುಗನಲ್ಲಿ ವಿಶೇಷ ಕಾಣಿಸಿತು.

ತನ್ನೊಳಗಿನ ಆಧ್ಯಾತ್ಮಿಕ ಶಕ್ತಿಯನ್ನು ಧಾರೆ ಎರೆಯಲು ಈತ ಸಮರ್ಥ ಎನಿಸಿರಬೇಕು. ಶಾಲೆಗೆ ಹೋಗುವ ಬಾಲಕನನ್ನು ಸಮೀಪಕ್ಕೆ ಕರೆದಳು, ಹುಡುಗ ಬಂದ. ಅವರಿಬ್ಬರ ನಡುವೆ ಮೌನ ಸಂವಾದ ನಡೆಯಿತು. ಕ್ರಮೇಣ ಆತ ಈ ಮುದುಕಿ ಜೊತೆಗೆ ಹೆಚ್ಚೆಚ್ಚು ಸಮಯ ಕಳೆಯತೊಡಗಿದ. ತನ್ನ ಕಾಲ ಮುಗಿಯಿತು ಎಂದು ಆಕೆಗನಿಸಿತು. ಅವಳು ಆ ಹುಡುಗನನ್ನು ಹತ್ತಿರಕ್ಕೆ ಕರೆದು ಅವನ ಹಣೆಯನ್ನು ದೀರ್ಘವಾಗಿ ಚುಂಬಿಸಿದಳು. ಹುಡುಗ ಕೋಮಾಕ್ಕೆ ಹೋದ. ಸುಮಾರು ಒಂಭತ್ತು ತಿಂಗಳ ಕಾಲ ಕೋಮಾದಲ್ಲಿದ್ದ. ಬಳಿಕ ಎಚ್ಚೆತ್ತವನು ಸಂಪೂರ್ಣ ಆಧ್ಯಾತ್ಮಿಕ ವ್ಯಕ್ತಿಯಾಗಿ ಬದಲಾದ ಎನ್ನುತ್ತವೆ ಕೆಲವು ಗ್ರಂಥಗಳು.

ಮೌನಿ ಹುಡುಗನ ಗೆಳೆತನದ ದಿನಗಳು!

ಹಝರತ್ ಬಾಬಾಜಾನ್ ಅವರ ಸಾಮೀಪ್ಯವೂ ಆಧ್ಯಾತ್ಮಿಕ ಅನುಭೂತಿ ನೀಡುತ್ತಿತ್ತು. ಆ ಅನುಭವಕ್ಕಾಗಿ ಹಲವರು ಈಕೆಯ ಬಳಿ ಬರುತ್ತಿದ್ದರು. ಒಂದಿಷ್ಟು ಹೊತ್ತು ಕೂತು ಎದ್ದು ಹೋಗುತ್ತಿದ್ದರು. ಅವರಲ್ಲಿ ಮುಸ್ಲಿಮರು, ಹಿಂದೂಗಳೂ, ರೊರೊಸ್ಟ್ರಿಯನ್‌ಗಳು ಇದ್ದರು. ಈಕೆ ತನ್ನ ಆಧ್ಯಾತ್ಯ ಶಕ್ತಿಯನ್ನು ಧಾರೆ ಎರೆದದ್ದು ರೊರೊಸ್ಟ್ರಿಯನ್ ಕುಟುಂಬದ ಹುಡುಗನಿಗೆ ಆತ ಮುಂದೆ ಮೆಹೆರ್ ಬಾಬಾ ಎಂದು ಪ್ರಸಿದ್ಧನಾದ. ಕೆಲವೇ ಕೆಲವು ಮಾತುಗಳನ್ನಷ್ಟೇ ಆಡುತ್ತಿದ್ದದ್ದು. ಹೆಚ್ಚಿನ ಸಮಯ ಮೌನ. ಅವಳಿಂದ ಏನೋ ಸಮಾಧಾನ ಸಿಗುತ್ತಿದ್ದದ್ದಕ್ಕೋ ಏನೋ ಜನ ಅವಳನ್ನು ಸುತ್ತುವರಿದರೆ ಕೆಲವೊಮ್ಮೆ ಮುಖದಲ್ಲಿ ಸಿಟ್ಟು, ಅಸಮಾಧಾನ ಪ್ರದರ್ಶಿಸುತ್ತಿದ್ದಳು. ಕೆಲವೊಮ್ಮೆ ಮುಗುಳ್ನಗು, ಮಗದೊಮ್ಮೆ ತಮಾಷೆ ಮಾಡಿ ಬಿದ್ದೂ ಬಿದ್ದೂ ನಗುತ್ತಿದ್ದದ್ದೂ ಇತ್ತು. ಒಟ್ಟಾರೆ ಅವಳದು ಮಗುವಿನ ಮನಸ್ಥಿತಿ.

              * * *
ಹಝರತ್ ಬಾಬಾ ಜಾನ್ ಅಫ್ಘಾನಿಸ್ತಾನದ ಬಲೂಚಿಸ್ತಾನದವಳು. ಅಲ್ಲಿನ ರಾಜನ ಮಂತ್ರಿಗಳಲ್ಲೊಬ್ಬರು ಇವಳ ತಂದೆ. ಈಕೆಯ ಪೂರ್ವಾಶ್ರಮದ ಹೆಸರು ಗುಲ್‌ರುಖ್. ಅಂದರೆ ಗುಲಾಬಿ ಹೂವಿನಂಥವಳು ಅಂತರ್ಥ. ಆ ಗುಲಾಬಿ ಎಂದೂ ಮುದುಡಿದ್ದಿಲ್ಲ ಎನ್ನುತ್ತಾರೆ ಈಕೆಯ ಶಿಷ್ಯರು. ಸಾಂಪ್ರದಾಯಿಕ ಕುಟುಂಬದಲ್ಲೇ ಬೆಳೆಯುವ ಗುಲ್‌ರುಖ್ ಅವಳ ವಯಸ್ಸಿನ ಮಕ್ಕಳಿಂದ ಭಿನ್ನ ಮನಸ್ಥಿತಿಯವಳಾಗುತ್ತಾಳೆ.

ಅವಳಿಗೆ ಅಲೌಕಿಕತೆಯಲ್ಲಿ, ಧ್ಯಾನದಲ್ಲಿ ಆಸಕ್ತಿ. ಗುಂಪು ಇಷ್ಟವಾಗುತ್ತಿರಲಿಲ್ಲ. ಒಂಟಿಯಾಗಿ ಯಾವುದೋ ಚಿಂತನೆಯಲ್ಲಿ ಮುಳುಗಿರುತ್ತಿದ್ದಳು. 18ನೇ ವಯಸ್ಸಿಗೆ ಅವಳಿಗೆ ಮದುವೆ ಮಾಡಲು ಹೊರಟಾಗ ತೀವ್ರವಾಗಿ ವಿರೋಧಿಸುತ್ತಾಳೆ. ಮನೆಯವರು ಬಲವಂತ ಮಾಡಿದಾಗ ಮನೆಯಿಂದಲೇ ಹೊರಬೀಳುತ್ತಾಳೆ. ಹಾಗೆ ಹೊರಟವಳು ಬಂದದ್ದು ಭಾರತಕ್ಕೆ. ಇಲ್ಲಿ ಒಬ್ಬ ಗುರುಗಳು ಸಿಗುತ್ತಾರೆ. ಅವರ ಆಶ್ರಮದಲ್ಲಿ ಕೆಲ ಕಾಲ ಸಾಧ್ವಿಯಾಗಿರುತ್ತಾಳೆ. ಯಾಕೋ ಸರಿ ಬಾರದೇ ಅಲ್ಲಿಂದ ಹೊರಬಿದ್ದಾಗ ಒಬ್ಬ ಮುಸ್ಲಿಮ್ ಸಂತ ಆಕೆಯ ಗೊಂದಲಗಳನ್ನೆಲ್ಲ ಪರಿಹರಿಸಿ ಜ್ಞಾನದ ದಾರಿ ತೋರಿದ. ಅವರ ಹೆಸರು ಮಜ್‌ಝೂಬ್. ಅಲ್ಲಿಂದ ಆಕೆ ಆಧ್ಯಾತ್ಮಿಕ ಬದುಕು ತುಂಬಿಕೊಳ್ಳುತ್ತಾ ಹೋಗುತ್ತದೆ. ಸತತ ಅಲೆದಾಟದಲ್ಲಿ ಅನೇಕ ಗುರುಗಳ, ವಿಚಾರಗಳ ಕುರಿತ ಅರಿವು ಹೆಚ್ಚುತ್ತಲೇ ಹೋಗುತ್ತದೆ. ಒಂದು ಕಾಲಘಟ್ಟದ ಬಳಿಕ ಆ ಅಲೆದಾಟವೂ ಕೊನೆಯಾಗಿ ಆಕೆ ಪೂನಾದ ಹೊರವಲಯದ ಮರದ ಅಡಿಯಲ್ಲೇ ನೆಲೆಸುತ್ತಾಳೆ. ಚಳಿ, ಮಳೆ, ಬಿಸಿಲು ಎಲ್ಲ ಹವೆಯನ್ನೂ ಆಕೆಯ ದೇಹ ತಾಳಿಕೊಳ್ಳುತ್ತದೆ. ಮರದಡಿ ಕೂತು ಎದುರಿನ ಬಯಲನ್ನೆ ದಿಟ್ಟಿಸುವ ಮುದುಕಿ ಚಿತ್ರದಂತೆ ಜನರ ಮನಸ್ಸಲ್ಲಿ ಉಳಿಯುತ್ತಾಳೆ.

ಸುದ್ದಿವಾಹಿನಿಯಲ್ಲಿ ಕಳೆದ ಕೆಲವು ದಿನಗಳು;ಬದುಕು ಕಲಿಸಿದ ಆ ರೋಚಕ ಘಟನೆ!

            * * *
ಹಜರತ್ ಬಾಬಾಜಾನ್ ಅವರ ಜೀವನ, ಅಲ್ಲಿನ ಕೆಲವು ಘಟನೆಗಳಷ್ಟೇ ನಮಗೆ ಸಿಗುವುದು. ಯಾವ ಉಪದೇಶವನ್ನೂ ಮಾಡದ ಕಾರಣ ಆಕೆಯ ಮಾತುಗಳು ನಮಗೆಲ್ಲೂ ಸಿಗುವುದಿಲ್ಲ. ಅವಳನ್ನು ಒಮ್ಮೆ ಅಪ್ಘನ್‌ನ ಸೈನಿಕರು ಜೀವಂತವಾಗಿ ಹೂಳಿದರೆಂದೂ, ಬಹಳ ವರ್ಷಗಳ ಬಳಿಕ ಅವಳನ್ನು ಮತ್ತೆ ಕಂಡು ಕ್ಷಮೆ ಯಾಚಿಸಿದರೆಂದೂ ಜನ ಹೇಳುತ್ತಾರೆ. ಹಜರತ್ ಬಾಬಾಜಾನ್ ತನ್ನನ್ನು ಗಂಡಸು ಎಂದೇ ಹೇಳಿಕೊಳ್ಳುತ್ತಿದ್ದರಂತೆ. ಇದಕ್ಕೆ ಕಾರಣ ‘ಗಂಡಸರು ದೇವರಿಗೆ ಹತ್ತಿರದವರು’ ಎಂಬ ನಂಬಿಕೆ ಇರಬಹುದು ಎಂದು ವ್ಯಾಖ್ಯಾನಿಸಲಾಗುತ್ತದೆ. ಆದರೆ ತನ್ನ ಬಳಿ ಬರುವವರನ್ನೆಲ್ಲ, ‘ಮಕ್ಕಳೇ..’ ಎಂದೇ ಆಕೆ ಕರೆಯುತ್ತಿದ್ದದ್ದು. ಮಾನವೀಯತೆಯನ್ನು ಅನುಷ್ಠಾನದಲ್ಲಿ ತೋರಿಸುತ್ತಿದ್ದಳು. ಆಕೆಯ ಸಾಮೀಪ್ಯವೇ ಜನರಲ್ಲಿ ‘ಎಚ್ಚರ’ ಮೂಡಿಸುತ್ತಿತ್ತು ಎಂಬುದು ವಿಶೇಷ. 

ಈಗಲೂ ನೆನಪಿದೆ ಬಾಲ್ಯದ ಬಾಸುಂಡೆ!

            * * *
ಹಜರತ್ ಬಾಬಾಜಾನ್ ಅವರ ಜೀವನ, ಅಲ್ಲಿನ ಕೆಲವು ಘಟನೆಗಳಷ್ಟೇ ನಮಗೆ ಸಿಗುವುದು. ಯಾವ ಉಪದೇಶವನ್ನೂ ಮಾಡದ ಕಾರಣ ಆಕೆಯ ಮಾತುಗಳು ನಮಗೆಲ್ಲೂ ಸಿಗುವುದಿಲ್ಲ. ಅವಳನ್ನು ಒಮ್ಮೆ ಅಪ್ಘನ್‌ನ ಸೈನಿಕರು ಜೀವಂತವಾಗಿ ಹೂಳಿದರೆಂದೂ, ಬಹಳ ವರ್ಷಗಳ ಬಳಿಕ ಅವಳನ್ನು ಮತ್ತೆ ಕಂಡು ಕ್ಷಮೆ ಯಾಚಿಸಿದರೆಂದೂ ಜನ ಹೇಳುತ್ತಾರೆ. ಹಜರತ್ ಬಾಬಾಜಾನ್ ತನ್ನನ್ನು ಗಂಡಸು ಎಂದೇ ಹೇಳಿಕೊಳ್ಳುತ್ತಿದ್ದರಂತೆ. ಇದಕ್ಕೆ ಕಾರಣ ‘ಗಂಡಸರು ದೇವರಿಗೆ ಹತ್ತಿರದವರು’ ಎಂಬ ನಂಬಿಕೆ ಇರಬಹುದು ಎಂದು ವ್ಯಾಖ್ಯಾನಿಸಲಾಗುತ್ತದೆ. ಆದರೆ ತನ್ನ ಬಳಿ ಬರುವವರನ್ನೆಲ್ಲ, ‘ಮಕ್ಕಳೇ..’ ಎಂದೇ ಆಕೆ ಕರೆಯುತ್ತಿದ್ದದ್ದು. ಮಾನವೀಯತೆಯನ್ನು ಅನುಷ್ಠಾನದಲ್ಲಿ ತೋರಿಸುತ್ತಿದ್ದಳು. ಆಕೆಯ ಸಾಮೀಪ್ಯವೇ ಜನರಲ್ಲಿ ‘ಎಚ್ಚರ’ ಮೂಡಿಸುತ್ತಿತ್ತು ಎಂಬುದು ವಿಶೇಷ.

Follow Us:
Download App:
  • android
  • ios