ರಸ್ತೆಯಲ್ಲಿ ರೀಲ್ಸ್ ಮಾಡ್ತಾ ಮೈ ಮರೆತ ತಾಯಿ: ಆಮೇಲಾಗಿದ್ದೇನು?
ಇಲ್ಲೊಂದು ಕಡೆ ಮಹಿಳೆಯೊಬ್ಬಳು ತನ್ನ ಪುಟ್ಟ ಮಗುವನ್ನು ಬಿಟ್ಟು ರಸ್ತೆಯಲ್ಲೇ ರೀಲ್ಸ್ ಮಾಡಲು ಶುರು ಮಾಡಿದ್ದಾಳೆ. ಇತ್ತ ಅಮ್ಮನ ಹಿಡಿತ ತಪ್ಪಿದ ಮಗು ರಸ್ತೆಯಲ್ಲಿ ಓಡುತ್ತಾ ವಾಹನಗಳು ಸಾಗುವ ರಸ್ತೆಯನ್ನು ತಲುಪಿದೆ. ಆಮೇಲೇನಾಯ್ತು ಎಂಬುದು ಈ ವೀಡಿಯೋದಲ್ಲಿದೆ.
ಸಾಮಾಜಿಕ ಜಾಲತಾಣದಲ್ಲಿ ಪ್ರತಿದಿನವೂ ಸಾವಿರಾರು ವೀಡಿಯೋಗಳು ವೈರಲ್ ಆಗುತ್ತಿರುತ್ತವೆ. ಕೆಲವು ಒಳ್ಳೆಯ ಕಾರಣಕ್ಕೆ ವೈರಲ್ ಆದರೆ ಮತ್ತೆ ಕೆಲವು ಬೇರೆಯದೇ ಕಾರಣಕ್ಕೆ ವೈರಲ್ ಆಗುತ್ತವೆ. ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗುವ ಹುಚ್ಚಿನಿಂದ ಕೆಲವರು ತಮ್ಮ ಜೀವಕ್ಕೆ ಅಪಾಯ ತಂದುಕೊಂಡರೆ ಮತ್ತೆ ಕೆಲವರು ತಮ್ಮ ಜೊತೆಗಿದ್ದವರ ಜೀವಕ್ಕೂ ಹಾನಿ ಮಾಡುತ್ತಾರೆ. ರೀಲ್ಸ್ ಮಾಡಲು ಹೋಗಿ ಸೊಶಿಯಲ್ ಮೀಡಿಯಾ ಸ್ಟಾರ್‌ಗಳು ಪ್ರಾಣ ಕಳೆದುಕೊಂಡಂತಹ ಹಲವು ಘಟನೆಗಳು ಈಗಾಗಲೇ ನಡೆದಿದ್ದು, ಅವರ ಕೊನೆಕ್ಷಣಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಆದರೂ ರೀಲ್ಸ್ ಹುಚ್ಚಿನಲ್ಲಿ ಮೈ ಮರೆಯುವ ಜನರಿಗೇನು ಕಡಿಮೆ ಇಲ್ಲ, ಅದೇ ರೀತಿ ಇಲ್ಲೊಂದು ಕಡೆ ಮಹಿಳೆಯೊಬ್ಬಳು ತನ್ನ ಪುಟ್ಟ ಮಗುವನ್ನು ಬಿಟ್ಟು ರಸ್ತೆಯಲ್ಲೇ ರೀಲ್ಸ್ ಮಾಡಲು ಶುರು ಮಾಡಿದ್ದಾಳೆ. ಇತ್ತ ಅಮ್ಮನ ಹಿಡಿತ ತಪ್ಪಿದ ಮಗು ರಸ್ತೆಯಲ್ಲಿ ಓಡುತ್ತಾ ವಾಹನಗಳು ಸಾಗುವ ರಸ್ತೆಯನ್ನು ತಲುಪಿದೆ. ಆದರೆ ತಾಯಿ ಮಾತ್ರ ಕೈಯಲ್ಲಿ ಟ್ರೈಪ್ಯಾಡ್ ಹಿಡಿದು ಡಾನ್ಸ್ ಮಾಡುತ್ತಾ ರೀಲ್ಸ್‌ನಲ್ಲಿ ಮಗ್ನಳಾಗಿದ್ದಾಳೆ.
ಈ ವೇಳೆ ಮಗು ವಾಹನಗಳು ವೇಗವಾಗಿ ಸಾಗುತ್ತಿರುವ ರಸ್ತೆಗೆ ಹೋಗುತ್ತಿರುವ ಮಗುವನ್ನು ಮತ್ತೊಂದು ಅದಕ್ಕಿಂತ ಸ್ವಲ್ಪ ದೊಡ್ಡ ಮಗು ಗಮನಿಸಿದ್ದು, ಕೂಡಲೇ ಮಗುವಿನ ತಾಯಿಯ ಬಳಿ ಬಂದು ಮಗು ರಸ್ತೆಯತ್ತ ತಲುಪಿರುವ ವಿಚಾರವನ್ನು ಕರೆದು ಹೇಳಿದೆ. ಕೂಡಲೇ ಎಚ್ಚೆತ್ತುಕೊಂಡ ಮಹಿಳೆ ರೀಲ್ಸ್ ಮಾಡುವುದನ್ನು ನಿಲ್ಲಿಸಿ ಮಗುವಿನತ್ತ ಓಡಿ ಹೋಗಿ ಮಗುವನ್ನು ರಕ್ಷಣೆ ಮಾಡಿದ್ದಾಳೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಮಗುವಿನ ತಾಯಿಯ ರೀಲ್ಸ್ ಹುಚ್ಚಾಟಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಇನ್ಸ್ಟಾಗ್ರಾಮ್‌ನ ಈ ವೀಡಿಯೋವನ್ನು ಟ್ವಿಟ್ಟರ್ ಪೋಸ್ಟ್ ಮಾಡಿರುವ @jitu_rajoriya ಎಂಬುವವರು ತಾಯಿಯ ವರ್ತನೆಗೆ ಬೇಸರ ವ್ಯಕ್ತಪಡಿಸಿದ್ದು, ಮಹಿಳೆಯ ಮತ್ತೊಂದು ಮಗುವಿನ ಸಮಯಪ್ರಜ್ಞೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'ತಾಯಿ ಫೋನಲ್ಲಿ ರೀಲ್ಸ್ ಮಾಡುತ್ತಾ ಇದ್ದರೆ, ಮಗಳು ರಸ್ತೆ ತಲುಪಿದ್ದಾಳೆ. ಆದರೆ ಆಕೆಯ ಮತ್ತೊಬ್ಬ ಮಗ ಬಂದು ತಾಯಿಯನ್ನು ಎಚ್ಚರಿಸಿದ್ದಾನೆ. ಮಕ್ಕಳು ನಿಜವಾಗಿಯೂ ಪ್ರಕೃತಿಯ ಕೊಡುಗೆ' ಎಂದು ಬರೆದು ಅವರು ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ.
ಈ ವೀಡಿಯೋ ನೋಡಿದ ನೆಟ್ಟಿಗರು ಮಾತ್ರ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನೇಕರು ಪುಟ್ಟ ಮಗುವಿನ ಸೋದರನ ಸಮಯಪ್ರಜ್ಞೆಗೆ ಧನ್ಯವಾದ ಹೇಳಿದ್ದು, ತಾಯಿಯ ಮೈಮರೆಯುವಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೊಂದು ಪಕ್ಕಾ ಬೇಜವಾಬ್ದಾರಿಯುತವಾದ ವರ್ತನೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಬಹುದೊಡ್ಡ ಅಪಘಾತದಿಂದ ಮಗು ಪಾರಾಗಿದೆ. ಈ ಮಗುವಿನ ತಾಯಿಗಿಂತ ಆ ಮಗುವಿನ ಅಣ್ಣ ಸ್ಮಾರ್ಟ್ ಆಗಿದ್ದಾನೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.