*ಆಧುನಿಕ ಹೆಣ್ಣು ಮಕ್ಕಳು ಸಿಂಗಲ್  ಆಗಿರಲು ಬಯಸುತ್ತಾರೆ* ಮದುವೆಯಾದರೂ ಈಗಿನ ಮಹಿಳೆಯರಿಗೆ ಮಕ್ಕಳು ಬೇಡ* ಪಾಶ್ಚಾತ್ಯ ಜೀವನ ಶೈಲಿಯ ಪ್ರಭಾವವವೇ?* ಆರೋಗ್ಯ ಸಚಿವ ಸುಧಾಕರ್ ಹೇಳಿದ ವಿಚಾರ

ಬೆಂಗಳೂರು(ಅ. 10) ಆಧುನಿಕ ಹೆಣ್ಣು ಮಕ್ಕಳು(Modern Indian women) ಒಂಟಿಯಾಗಿ ಇರಲು ಬಯಸುತ್ತಿದ್ದಾರೆ. ಮಕ್ಕಳನ್ನು ಪಡೆದುಕೊಳ್ಳುವುದರಿಂದ ಹಿಂದೆ ಸರಿಯುತ್ತಿದ್ದು ಬಾಡಿಗೆ ತಾಯಿಯಿಂದ (surrogacy) ಮಗು ಬಯಸುತ್ತಿದ್ದಾರೆ ಎಂದು ಕರ್ನಾಟಕದ ಆರೋಗ್ಯ(Health) ಸಚಿವ ಡಾ.ಕೆ.ಸುಧಾಕರ್(Dr K Sudhakar) ಹೇಳಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ನನಗೆ ಈ ವಿಚಾರ ಹೇಳಲು ಕಷ್ಟವಾಗುತ್ತಿದೆ. ಆಧುನಿಕ ಭಾರತದ ಬಹುತೇಕ ಮಹಿಳೆಯರು ಸಿಂಗಲ್ ಆಗಿ ಇರಲು ಬಯಸುತ್ತಿದ್ದಾರೆ. ಒಂದು ವೇಳೆ ಮದುವೆಯಾದರೂ ಮಕ್ಕಳಿಗೆ ಜನ್ಮ ನೀಡುವುದು ಬೇಡ ಎನ್ನುತ್ತಿದ್ದಾರೆ. ಈ ಬಗೆಯ ಆಲೋಚನೆ ಒಳ್ಳೆಯದಲ್ಲ ಎಂದರು.

ಪಾಶ್ಚಿಮಾತ್ಯ ಜೀವನ ಶೈಲಿಯ ಪ್ರಭಾವ ಎನ್ನಬಹುದಾ? ತಂದೆ ತಾಯಿ ಸಹ ತಮ್ಮ ಜತೆ ಇರಬಾರದು ಎಂದು ಬಯಸುವ ವಾತಾವರಣ ನಿರ್ಮಾಣವಾಗಿದೆ. ತಾತ ಅಜ್ಜಿಯರನ್ನು ಬಿಡಿ ತಂದೆ ತಾಯಿಯೇ ಜತೆಗೆ ಇರುವುದು ಬೇಡ ಎನ್ನುವ ಕಾಲಕ್ಕೆ ಬಂದಿದ್ದೇವೆ ಎಂದರು.

ಮಾನಸಿಕ ಆರೋಗ್ಯದ ಕುರಿತು ಮಾತನಾಡಿದ ವೈದ್ಯರು ಆಗಿರುವ ಸಚಿವರು, ಪ್ರತಿ ಏಳು ಜನ ಭಾರತೀಯರಲ್ಲಿ ಒಬ್ಬನಿಗೆ ಮಾನಸಿಕ ಸಮಸ್ಯೆ ಕಾಡಬಹುದು. ಒತ್ತಡ ನಿರ್ವಹಣೆಗೆ ಭಾರತ ತನ್ನದೇ ಆದ ಕೊಡುಗೆ ನೀಡಿದೆ. ಉಪಾಯಗಳನ್ನು ಹೇಳಿಕೊಟ್ಟಿದೆ. ಯೋಗ, ಪ್ರಾಣಾಯಾಮ, ಧ್ಯಾನ ಅದ್ಭುತ ಆಲೋಚನೆ ಮತ್ತು ಉಪಾಯ. ಸಾವಿರಾರು ವರ್ಷಗಳ ಹಿಂದೆಯೇ ಭಾರತ ಈ ಕೊಡುಗೆ ನೀಡಿದೆ.

ನಿಮ್ಹಾನ್ಸ್‌ನಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನ ಕಾರ್ಯಕ್ರಮ; ಸಮಸ್ಯೆ ಗಂಭೀರತೆ ವಿವರಿಸಿದ ಮಾಂಡವಿಯಾ!

ಕೊರೋನಾ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರದೊಂದಿಗೆ ನಿಂತ ಕೇಂದ್ರ ಸರ್ಕಾರಕ್ಕೂ ಸುಧಾಕರ್ ಇದೇ ಸಂದರ್ಭದಲ್ಲಿ ಧನ್ಯವಾದ ತಿಳಿಸಿದರು. ಲಸಿಕೆ ನೀಡಿಕೆಯಲ್ಲಿ ಭಾರತ ವಿಕ್ರಮ ಸಾಧಿಸಿದ್ದು 94 ಕೋಟಿ ಗುರಿ ಸಾಧನೆ ಮಾಡಿದೆ ಎಂದು ತಿಳಿಸಿದರು. ಉಚತವಾಗಿ ಲಸಿಕೆ ನೀಡುತ್ತಿರುವ ದೇಶ ನಮ್ಮದು ಎಂದರು.

ಸರ್ಕಾರ ಮತ್ತು ಸಮಾಜ ಸಹಯೋಗದಲ್ಲಿ ಕಾರ್ಯನಿರ್ವಹಿಸಿದಾಗ ಮಾನಸಿಕ ಆರೋಗ್ಯದಲ್ಲಿ ಹೆಚ್ಚಿನ ಸಂಶೋಧನೆಗಳು ನಡೆಸಬಹುದು, ಅದರ ಮೇಲೆ ಸರ್ಕಾರದ ಭವಿಷ್ಯದ ನೀತಿಯು ಅವಲಂಬಿಸಿರುತ್ತದೆ, ಇದಕ್ಕೆ 1936ರಲ್ಲಿ ಸ್ಥಾಪಿಸಲಾದ ನಿಮ್ಹಾನ್ಸ್ ನಂತಹ ಹಳೆಯ ಮತ್ತು ಪ್ರಸಿದ್ಧ ಸಂಸ್ಥೆಗಳು ಪ್ರಾಮುಖ್ಯ ಪಡೆಯುತ್ತವೆ ಎಂದು ಕೇಂದ್ರ ಸಚಿವ ಡಾ. ಮಾಂಡವಿಯಾ ಹೇಳಿದರು.

ಮಾನಸಿಕ ಆರೋಗ್ಯ ರಕ್ಷಣಾ ವೈದ್ಯರ ಕೊರತೆಯನ್ನು ಉಲ್ಲೇಖಿಸಿದ ಕೇಂದ್ರ ಆರೋಗ್ಯ ಸಚಿವರು, ಕೇವಲ ಅಂಕಗಳ ಕಡೆಗೆ ಮಾತ್ರ ಕೇಂದ್ರೀಕೃತವಾದ ಶಿಕ್ಷಣವು ದೇಶಕ್ಕೆ ನೆರವಾವುದಿಲ್ಲ ಎಂದು ಒತ್ತಿ ಹೇಳಿದರು. ವಿದ್ಯಾರ್ಥಿಗಳು ನಿರ್ದಿಷ್ಟ ಪ್ರಕರಣಗಳನ್ನು ತೆಗೆದುಕೊಂಡು ಆರೈಕೆ ಅಗತ್ಯಇರುವವರಿಗೆ ಚಿಕಿತ್ಸೆ ನೀಡಿ, ರೋಗ ಗುಣಪಡಿಸುವ ಕಲಿಕೆಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.