ಮಿಸ್ ಇಂಡಿಯಾ ಕನಸು ತೊರೆದು ಯುಪಿಎಸ್‌ಸಿ ಪರೀಕ್ಷೆ ಬರೆದ ಮಾಡೆಲ್
ಯುಪಿಎಸ್ಸಿ ಪರೀಕ್ಷೆ ಬರೆಯುವವರ ಮನಸ್ಸು ಗಟ್ಟಿಯಾಗಿರ್ಬೇಕು. ಯಾವುದೇ ಸೋಲಿಗೆ ಹೆದರಬಾರದು ಹಾಗೆ ಯಾವುದೇ ಆಸೆಗೆ ಬಲಿಯಾಗ್ಬಾರದು. ಶಾಲೆ ಸಮಯದಲ್ಲಿ ವಿದ್ಯಾಭ್ಯಾಸದಲ್ಲಿ ಹಿಂದಿದ್ದವರು ಕೂಡ ಕಠಿಣ ಶ್ರಮದ ಜೊತೆ ಆತ್ಮವಿಶ್ವಾಸವಿದ್ರೆ ಗೆಲ್ಲುತ್ತಾರೆ.
ಯುಪಿಎಸ್ಸಿ ಪರೀಕ್ಷೆ ಪಾಸ್ ಮಾಡೋದು ಸುಲಭದ ಕೆಲಸವಲ್ಲ. ಇದನ್ನು ಅತ್ಯಂತ ಸವಾಲಿನ ಪರೀಕ್ಷೆ ಎಂದೇ ಪರಿಗಣಿಸಲಾಗಿದೆ. ಸಿವಿಲ್ ಸರ್ವೀಸ್ ಪರೀಕ್ಷೆಗೆ ತಯಾರಾಗುವ ಜನರು ಬುದ್ಧಿವಂತ, ತೀಕ್ಷ್ಣ ಮನಸ್ಸಿನವರಾಗಿರುತ್ತಾರೆ. ಸಾಮಾಜಿಕ ವಿಷಯಗಳ ಬಗ್ಗೆ ಹೆಚ್ಚು ತಿಳುವಳಿಕೆ ಹೊಂದಿರುವುದು ಬಹಳ ಅಗತ್ಯ. ಎಲ್ಲರೂ ಯುಎಪಿಎಸ್ಸಿ ಪರೀಕ್ಷೆ ಬರೆಯಲು ಮನಸ್ಸು ಮಾಡೋದಿಲ್ಲ. ಅದ್ರಲ್ಲಿ ಹೆಚ್ಚಿನ ಜ್ಞಾನ ಹೊಂದಿರುವ, ಆಸಕ್ತಿ ಇರುವ ಜನರು ಮಾತ್ರ ಯುಪಿಎಸ್ಸಿ ಪರೀಕ್ಷೆಗೆ ಮುಂದಾಗ್ತಾರೆ. ಒಂದೇ ಬಾರಿ ಯುಪಿಎಸ್ಸಿ ಪರೀಕ್ಷೆ ಪಾಸ್ ಆಗೋದು ಕಷ್ಟಸಾಧ್ಯ. ಪದೇ ಪದೇ ಪರೀಕ್ಷೆಗೆ ತಯಾರಿ ನಡೆಸಬೇಕು, ಹಗಲಿರುಳು ಓದಬೇಕು. ಹಾಗಾಗಿ ಇದನ್ನು ಎಲ್ಲರೂ ಆಯ್ದುಕೊಳ್ಳುವ ಮನಸ್ಸು ಮಾಡೋದಿಲ್ಲ.
ಯುಪಿಎಸ್ಸಿ (UPSC) ಪರೀಕ್ಷೆ ಬರೆಯುವ ಅದ್ರಲ್ಲಿ ಪಾಸ್ ಆಗುವ ಗುರಿ ಹೊಂದಿರುವ ಜನರು ಜೀವನದಲ್ಲಿ ಬರುವ ಅನೇಕ ಸುಖ- ಸಂತೋಷಗಳನ್ನು ತೊರೆಯುತ್ತಾರೆ. ಅನೇಕ ವಿಷ್ಯಗಳಲ್ಲಿ ರಾಜಿಯಾಗ್ತಾರೆ. ಮನರಂಜನೆ, ಸಂಸಾರ, ಪ್ರಸಿದ್ಧಿ, ಹಣ ಎಲ್ಲವನ್ನೂ ಬದಿಗಿಟ್ಟು ತಯಾರಿ ನಡೆಸ್ತಾರೆ. ಇದಕ್ಕೆ ತಸ್ಕೀನ್ ಖಾನ್ (Taskeen Khan) ಉತ್ತಮ ನಿದರ್ಶನ ಎನ್ನಬಹುದು.
ಬೃಂದಾವನ ಹಿರೋಯಿನ್ ನೋಡಿ… ಹೊಸ ಕ್ರಶ್ ಸಿಕ್ಕಿ ಬಿಟ್ಳು ಅಂದ ಜನ... ಯಾರೀಕೆ?
ಮನರಂಜನಾ ಜಗತ್ತಿನಲ್ಲಿ ತಮ್ಮ ಛಾಪು ಮೂಡಿಸಲು ಹೊರಟಿದ್ದ ತಸ್ಕೀನ್ ಖಾನ್, ಯುಪಿಎಸ್ಸಿ ಪರೀಕ್ಷೆಗಾಗಿ ಇದನ್ನು ತೊರೆದ್ರು. ಮನರಂಜನಾ ಜಗತ್ತಿನಲ್ಲಿರುವ ಜನರು ಆ ಪ್ರಪಂಚದಿಂದ ಹೊರಗೆ ಬರೋದು ಬಹಳ ಅಪರೂಪ. ಅದು ಸೆಲೆಬ್ರಿಟಿ ಫೀಲ್ ನೀಡುವ ಜೊತೆಗೆ ಹಣ ಹಾಗೂ ಪ್ರಸಿದ್ಧಿ ಎರಡನ್ನೂ ನೀಡುತ್ತದೆ. ಮನೆ ಮನೆಗಳಲ್ಲಿ ಜನರಿಗೆ ಅವರ ಪರಿಚಯವಿರುತ್ತದೆ. ಈ ಜಗತ್ತನ್ನು ಬಿಟ್ಟು ಯುಪಿಎಸ್ಸಿ ಪರೀಕ್ಷೆ ಬರೆಯುವ ಮಹತ್ವದ ನಿರ್ಧಾರ ತೆಗೆದುಕೊಳ್ಳುವವರು ಅಪರೂಪದಲ್ಲಿ ಅಪರೂಪ. ತಸ್ಕೀನ್ ಖಾನ್ ಇಂಥ ದಿಟ್ಟ ಹೆಜ್ಜೆಯಿಟ್ಟು ಯಶಸ್ವಿಯಾಗಿದ್ದಾರೆ. ತಮ್ಮ ಮಾಡಲಿಂಗ್ ಕನಸನ್ನು ಬದಿಗೊತ್ತಿ, ಯುಪಿಎಸ್ಸಿ ಕನಸಿಗೆ ನೀರೆರೆದು ಅದು ದೊಡ್ಡ ಮರವಾಗಿ ಬೆಳೆಯುವಂತೆ ಮಾಡಿದ್ದಾರೆ.
ತಸ್ಕೀನ್ ಖಾನ್ ಯಾರು? : ತಸ್ಕೀನ್ ಖಾನ್, ಡೆಹ್ರಾಡೂನ್ (Dehradun) ಸುಂದರಿ ಎಂಬ ಪಟ್ಟಗಳಿಸಿದ್ದರು. ಅದಾದ್ಮೇಲೆ ಅವರು ಉತ್ತರಖಾಂಡದ ಸುಂದರಿ ಎಂಬ ಕಿರೀಟತೊಟ್ಟರು. ಇದ್ರ ನಂತ್ರ ತಸ್ಕೀನ್ ಖಾನ್ ಗೆ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಅವಕಾಶ ಸಿಗಲಿತ್ತು. ಆದ್ರೆ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸುವ ಕಾರಣ ಅವರು ತಮ್ಮ ಮಿಸ್ ಇಂಡಿಯಾ ಕನಸನ್ನು ತೊರೆದ್ರು. ಮಾಡೆಲ್ ಆಗಿದ್ದ ತಸ್ಕೀನ್ ಖಾನ್, ಎಲ್ಲವನ್ನು ಬಿಟ್ಟು ಪರೀಕ್ಷೆಗೆ ತಯಾರಿ ಶುರು ಮಾಡಿದ್ರು.
ಸತತ ಪ್ರಯತ್ನದ ನಂತ್ರ ಸಿಗ್ತು ಯಶಸ್ಸು : ತಸ್ಕೀನ್ ಖಾನ್ ಮೂರು ಬಾರಿ ಯುಪಿಎಸ್‌ಸಿ ಸಿವಿಲ್ ಸರ್ವೀಸಸ್ ಪರೀಕ್ಷೆಗೆ ಹಾಜರಾಗಿದ್ದರು. ಮೂರೂ ಬಾರಿ ವೈಫಲ್ಯ ಎದುರಿಸಬೇಕಾಯ್ತು. ಇದರಿಂದ ಅವರು ಧೈರ್ಯ ಕಳೆದುಕೊಳ್ಳಲಿಲ್ಲ. ಕಠಿಣ ಅಧ್ಯಯನವನ್ನು ಮುಂದುವರೆಸಿದರು. 2020 ರಲ್ಲಿ ಅವರ ಶ್ರಮಕ್ಕೆ ಫಲ ಸಿಕ್ತು. ನಾಲ್ಕನೇ ಪ್ರಯತ್ನದಲ್ಲಿ ಯುಪಿಎಸ್ಸಿ ಪರೀಕ್ಷೆಯನ್ನು 736 ರ ಅಂಕದೊಂದಿಗೆ ಪಡೆದು ಅಧಿಕಾರಿಯಾದ್ರು.
ಗಂಡಸ್ರಿಗಿಂತ ಹೆಂಗಸರಿಗೇ ಮಧ್ಯಾಹ್ನ ನಿದ್ರೆ ಎಳೆಯೋದು ಯಾಕೆ?
ಶಾಲೆ ಅವಧಿಯಲ್ಲೇ ಮಾಡೆಲಿಂಗ್ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದ ತಸ್ಕೀನ್ ಖಾನ್ ಗೆ ಆರ್ಥಿಕ ತೊಂದರೆ ಎದುರಾಗಿತ್ತು. ಮಾಡೆಲಿಂಗ್ ಕ್ಷೇತ್ರದಲ್ಲಿ ಮುಂದುವರೆಯಲು ಸಾಧ್ಯವಾಗಲಿಲ್ಲ. ತಮ್ಮೆಲ್ಲ ಶ್ರಮವನ್ನು ಯುಪಿಎಸ್ಸಿ ಪರೀಕ್ಷೆ ತಯಾರಿಗೆ ಮೀಸಲಿಟ್ಟರು. ಈಗ ಎಲ್ಲರಿಗೂ ತಸ್ಕೀನ್ ಖಾನ್ ಸ್ಫೂರ್ತಿಯಾಗಿ ನಿಲ್ಲುತ್ತಾರೆ.
ತಸ್ಕೀನ್ ಖಾನ್ ಶಾಲೆ ಸಮಯದಲ್ಲಿ ವಿದ್ಯಾಭ್ಯಾಸದಲ್ಲಿ ಹೆಚ್ಚು ಮುಂದಿರಲಿಲ್ಲ. ಆದ್ರೆ ಕ್ರೀಡೆಯಲ್ಲಿ (Sports) ಉತ್ತಮ ಸಾಧನೆಯನ್ನು ಮಾಡಿದ್ದರು. ತಸ್ಕೀನ್ ಖಾನ್ ಅವರು ಸಾಮಾಜಿಕ ಮಾಧ್ಯಮದಲ್ಲಿ (Social Media) ಹೆಚ್ಚಿನ ಅನುಯಾಯಿಗಳನ್ನು ಹೊಂದಿದ್ದಾರೆ. ಮಿಮಿಕ್ರಿ ಕೌಶಲ್ಯಕ್ಕೆ ಹೆಸರುವಾಸಿಯಾಗಿದ್ದಾರೆ.