ಬೃಂದಾವನ ಹಿರೋಯಿನ್ ನೋಡಿ… ಹೊಸ ಕ್ರಶ್ ಸಿಕ್ಕಿ ಬಿಟ್ಳು ಅಂದ ಜನ... ಯಾರೀಕೆ?
ಕಲರ್ಸ್ ಕನ್ನಡದಲ್ಲಿ ವಾರಗಳ ಹಿಂದಷ್ಟೇ ಆರಂಭವಾದ ಬೃಂದಾವನ ಸೀರಿಯಲ್ ನ ನಾಯಕಿ ಪುಷ್ಪಾ ಲುಕ್ ಗೆ ಪ್ರೇಕ್ಷಕರು ಫಿದಾ ಆಗಿದ್ದು, ಸೋಶಿಯಲ್ ಮೀಡಿಯಾ ಟ್ರೋಲಿಂಗ್ ಪೇಜ್ ಗಳಲ್ಲಿ ಇವರೇ ಕಾಣಿಸ್ತಿದ್ದಾರೆ.

ಕಲರ್ಸ್ ಕನ್ನಡದಲ್ಲಿ ಇತ್ತೀಚೆಗೆ ಆರಂಭವಾಗಿ ಭಾರಿ ಕುತೂಹಲ ಹುಟ್ಟಿಸಿದ ಧಾರಾವಾಹಿ ಅಂದ್ರೆ ಬೃಂದಾವನ (Brundavana) ಸೀರಿಯಲ್. ಸೀರಿಯಲ್ ಪ್ರೋಮೋ ನೋಡಿದಾಗಿನಿಂದ ಜನರ ಬಾಯಲ್ಲಿ ತುಂಬು ಕುಟುಂಬದ ಬಗ್ಗೆಯೇ ಮಾತು ಕೇಳಿ ಬರುತ್ತಿದೆ.
ಇದೀಗ ಒಂದೆರಡು ದಿನದಿಂದ ಅಂದರೆ ನಾಯಕಿಯನ್ನು ಯಾವಾಗ ತೋರಿಸಿದ್ರೂ ಜನರಂತೂ ಆಕೆಯ ಮುಗ್ಧತೆ ಮತ್ತು ಮುದ್ದು ಮುಖಕ್ಕೆ ಫಿದಾ ಆಗಿದ್ದಾರೆ. ಸೋಶಿಯಲ್ ಮೀಡಿಯಾ (Social media) ಟ್ರೋಲಿಂಗ್ ಪೇಜ್ ಗಳಲ್ಲಿ ಇವರೇ ಕಾಣಿಸ್ತಿದ್ದಾರೆ.
ಬೃಂದಾವನ ಸೀರಿಯಲ್ ನಲ್ಲಿ ನಾಯಕಿಯಾಗಿ ನಟಿಸುತ್ತಿರುವವರು ಅಮೂಲ್ಯ ಭಾರಧ್ವಜ್ (Amulya Bharadwaj). ಇವರು ಈ ಹಿಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ದಾಸ ಪುರಂದರ ಧಾರಾವಾಹಿಯಲ್ಲಿ ಶ್ರೀನಿವಾಸ ನಾಯಕನ ಪತ್ನಿ ಸರಸ್ವತಿ ಪಾತ್ರದಲ್ಲಿ ನಟಿಸಿ ಜನಮನ ಗೆದ್ದಿದ್ದರು.
ದಾಸಪುರಂದರ ಸೀರಿಯಲ್ ಗಾಗಿ ಸುಮಾರು ಒಂದು ವರ್ಷಗಳ ಕಾಲ ಅಮೂಲ್ಯ ತಯಾರಿ ಮಾಡಿಕೊಂಡು ಕಾದಿದ್ದರು. ಆ ಸೀರಿಯಲ್ ನಲ್ಲಿ ಅದ್ಭುತ ಅಭಿನಯ ನೀಡಿ. ಅದ್ಭುತ ನಟಿ ಎನಿಸಿಕೊಂಡಿದ್ದರು. ಇದೀಗ ಬೃಂದಾವನ ಸೀರಿಯಲ್ ನಲ್ಲಿ (serial)ನಾಯಕಿಯಾಗಿ ನಟಿಸುತ್ತಿದ್ದಾರೆ.
ಬೃಂದಾವನ ಸೀರಿಯಲ್ ನ ಕಥೆ ಈಗಾಗಲೇ ಎಲ್ಲರಿಗೂ ತಿಳಿದಿದೆ. 36 ಜನರಿರುವ ಆಗರ್ಭ ಶ್ರೀಮಂತ ತುಂಬು ಕುಟುಂಬದ ಮಗನಿಗೆ ಮದುವೆ ಮಾಡಿಸಲು ಮನೆಗೆ ಹೊಂದಿಕೊಳ್ಳುವ ಹುಡುಗಿಗಾಗಿ ಹುಡುಕುತ್ತಿರುವಾಗ ಅಜ್ಜಿ ಸುಧಾ ಮೂರ್ತಿಗೆ ಗ್ರಾಮದಲ್ಲಿ ಸಿಕ್ಕವಳೇ ಪುಷ್ಪಾ.
ಸಾಧು ಸ್ವಭಾವದ, ಮುಗ್ಧ ಮತ್ತು ಮುದ್ದು ಮುಖದ ಹುಡುಗಿಯಾಗಿ ಪಾತ್ರಕ್ಕೆ ತಕ್ಕಂತೆ ಅಭಿನಯಿಸಿದ್ದಾರೆ ಅಮೂಲ್ಯ. ಅಣ್ಣನ ಪ್ರೀತಿಯ ತಂಗಿಯಾಗಿ, ಅತ್ತಿಗೆಯ ಕಿರುಕುಳವನ್ನು ಸಹಿಸುತ್ತಾ, ಎಲ್ಲರಿಗೂ ಒಳ್ಳೆಯದನ್ನೆ ಬಯಸುವ ಪುಷ್ಪಾ ದೊಡ್ಡಮನೆ ಸೇರಲು ಅತ್ತಿಗೆ ಬಿಡುತ್ತಾಳಾ ಅನ್ನೋದನ್ನು ಕಾದು ನೋಡಬೇಕು.
ಆದರೆ ಕಳೆದ ಕೆಲ ಎಪಿಸೋಡ್ ಗಳಲ್ಲಿ ಪುಷ್ಪಾಳನ್ನು ನೋಡಿರೋ ಜನರು ಮಾತ್ರ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಬೃಂದಾವನ ಸೀರಿಯಲ್ ನೋಡ್ತಿದ್ರೆ ತುಂಬಿದ ಕೊಡ ತುಳುಕಲ್ಲ ಅನ್ನೋದು ನೆನಪಾಗುತ್ತೆ ಎಂದು ಕಾಮೆಂಟ್ ಮಾಡಿದ್ದಾರೆ. ಜೊತೆಗೆ ನಾಯಕಿ ನೋಡೋಕೆ ಮುದ್ದು ಮುದ್ದಾಗಿ ಸಿಂಪಲ್ ಆಗಿದ್ದಾರೆ, ಚೆಂದ ಮಾತ್ರವಲ್ಲ ಅದ್ಭುತವಾಗಿ ನಟಿಸ್ತಾರೆ ಎಂದಿದ್ದಾರೆ.
ಅಷ್ಟೇ ಅಲ್ಲ ದೇವ್ರೇ ಸ್ವಲ್ಪ ಲೇಟ್ ಆದ್ರೂ ಪರ್ವಾಗಿಲ್ಲ, ಕೊಟ್ರೆ ಇಂಥ ಹುಡುಗೀನೆ ಕೊಡು ತಂದೆ ಎಂದು ಕೆಲವರು ಹೇಳಿದ್ರೆ, ಇನ್ನು ಕೆಲವರು ಕಲರ್ಸ್ ಕನ್ನಡದವರು ಹೊಸ ಕ್ರಶ್ ಗಳನ್ನು (new crush) ಕೊಡುವುದರಲ್ಲಿ ನಿಸ್ಸೀಮರು, ಇನ್ಮೇಲೆ ಇವರದ್ದೇ ಗುಂಗು ಎಂದಿದ್ದಾರೆ.