ಝಾನ್ಸಿ ರೈಲು ನಿಲ್ದಾಣದಲ್ಲಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಗೆ ಸೇನಾ ವೈದ್ಯರೊಬ್ಬರು ಸಕಾಲಕ್ಕೆ ಸಹಾಯ ಮಾಡಿದ್ದಾರೆ.ಸುಲಭ ಹೆರಿಗೆಗೆ ನೆರವಾದ ಯೋಧನ ಮಾನವೀಯತೆಗೆ ಮೆಚ್ಚುಗೆ ವ್ಯಕ್ತವಾಗಿದೆ.
ರೈಲು ನಿಲ್ದಾಣದಲ್ಲಿ ಹೆರಿಗೆ ನೋವಿನಿಂದ ಕಷ್ಟಪಡುತ್ತಿದ್ದ ಮಹಿಳೆಗೆ ಸೇನೆಯಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದ ಯೋಧರೊಬ್ಬರು ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ. ಉತ್ತರ ಪ್ರದೇಶದ ಝಾನ್ಸಿ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಝಾನ್ಸಿಯ ಮಿಲಿಟರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದ ರೋಹಿತ್ ಬಚ್ವಾಲಾ ಎಂಬ ಯೋಧ ಮಹಿಳೆಗೆ ಸುಲಭವಾಗಿ ಹೆರಿಗೆಯಾಗುವುದಕ್ಕೆ ಸಹಾಯ ಮಾಡಿದ್ದಾರೆ.
ಹೌದು ಪಾಕೆಟ್ ನೈಫ್(ಚಾಕು) ಹೇರ್ ಪಿನ್ ಹಾಗೂ ಧೋತಿಯ ಸಹಾಯದಿಂದ ಸೇನಾ ವೈದ್ಯರೊಬ್ಬರು ರೈಲು ನಿಲ್ದಾಣದಲ್ಲಿಯೇ ಮಹಿಳೆಯೊಬ್ಬರಿಗೆ ಸಹಜ ಹೆರಿಗೆ ಆಗುವುದಕ್ಕೆ ಸಹಾಯ ಮಾಡಿದರು. ಶನಿವಾರ ಝಾನ್ಸಿಯ ವಿರಂಗನ ಲಕ್ಷ್ಮಿಬಾಯಿ ಝಾನ್ಸಿ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಸೇನಾ ವೈದ್ಯ ರೋಹಿತ್ ಬಚ್ವಾಲಾ ಅವರು ಒಂದು ತಿಂಗಳ ರಜೆಯ ಮೇರೆಗೆ ಬೆಂಗಳೂರು ಮೂಲಕ ಹೈದರಾಬಾದ್‌ಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.
ಝಾನ್ಸಿಯ ರೈಲು ನಿಲ್ದಾಣದಲ್ಲಿ ತಮ್ಮ ಊರಿನ ಕಡೆಗೆ ಹೋಗುವ ರೈಲಿಗಾಗಿ ಕಾಯುತ್ತಿದ್ದಾಗ ಝಾನ್ಸಿಯ ರೈಲು ನಿಲ್ದಾಣದಲ್ಲಿ ಮಹಿಳೆಯೊಬ್ಬರು ರೈಲು ನಿಲ್ದಾಣದ ಕಾಲು ದಾರಿಯಲ್ಲಿ ತೀವ್ರ ಹೆರಿಗೆ ನೋವಿನಿಂದ ಬಳಲುತ್ತಿರುವುದನ್ನು ನೋಡಿದರು. ಕೂಡಲೇ ಸಮಯಪ್ರಜ್ಞೆ ಮೆರೆದ ಅವರು ತಮ್ಮ ಪಾಕೆಟ್ ಚಾಕು, ಹೇರ್ ಕ್ಲಿಪ್‌ಗಳನ್ನು ಬಳಸಿ ಧೋತಿಯನ್ನು ಅಡ್ಡಗಟ್ಟಿ ಆಕೆಯ ಹೆರಿಗೆಗೆ ಸಹಾಯ ಮಾಡಿದರು.
ಈ ವೇಳೆ ರೈಲ್ವೆಯ ಮಹಿಳಾ ಸಿಬ್ಬಂದಿ ಆ ಪ್ರದೇಶವನ್ನು ಸುತ್ತುವರೆದು ಗರ್ಭಿಣಿ ತಾಯಿಯ ಸುರಕ್ಷತೆಯನ್ನು ಕಾಯ್ದುಕೊಂಡರು ಹಾಗೂ ವೈದ್ಯರಿಗೆ ಕೈಗವಸು ನೀಡಿ ಸಹಕರಿಸಿದರು. ಹೆರಿಗೆಯ ನಂತರ ತಾಯಿ ಮಗು ಆರೋಗ್ಯವಾಗಿದ್ದಾರೆ. ಹೆರಿಗೆಯ ನಂತರ ಹೆಚ್ಚಿನ ಚಿಕಿತ್ಸೆಗಾಗಿ ತಾಯಿ ಮಗುವನ್ನು ಆಂಬುಲೆನ್ಸ್‌ನಲ್ಲಿ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯ್ತು.
ಮಹಿಳಾ ಟಿಟಿಇಯೊಬ್ಬರು ಗರ್ಭಿಣಿ ಮಹಿಳೆಯನ್ನು ವೈದ್ಯಕೀಯ ಚಿಕಿತ್ಸೆಗಾಗಿ ವೀಲ್‌ಚೇರ್‌ನಲ್ಲಿ ಕರೆದೊಯ್ಯುತ್ತಿದ್ದರು, ಫುಟ್ಓವರ್ ಸೇತುವೆ ಮೇಲೆ ಲಿಫ್ಟ್‌ನಿಂದ ಹೊರಬರುತ್ತಿದ್ದ ವೇಳೆ ಗರ್ಭಿಣಿ ಮಹಿಳೆ ನೋವಿನಿಂದ ಜೋರಾಗಿ ಕೂಗುತ್ತಿದ್ದರು. ಹೀಗಾಗಿ ನಾನು ಅವರ ಕಡೆ ಧಾವಿಸಿ ಹೋಗಿ ನನ್ನ ಬಳಿ ಇದ್ದ ಕೆಲ ವಸ್ತುಗಳ ಸಹಾಯದಿಂದ ಅವರಿಗೆ ಸಹಜ ಹೆರಿಗೆ ಆಗಲು ಸಹಾಯ ಮಾಡಿದೆ ಎಂದು ವೈದ್ಯ ರೋಹಿತ್ ಬಚ್ವಾಲಾ ಹೇಳಿಕೊಂಡಿದ್ದಾರೆ.
ರೈಲು ನಿಲ್ದಾಣದಲ್ಲೇ ಹೆರಿಗೆಯಾದ ಮಹಿಳೆ ಪನ್ವೇಲ್ ನಿಂದ ಬಾರಾಬಂಕಿಗೆ ತನ್ನ ಪತಿ ಮತ್ತು ಮಗುವಿನೊಂದಿಗೆ ಪನ್ನೇಲ್-ಗೋರಖ್ ಪುರ ಎಕ್ಸ್‌ಪ್ರೆಸ್ 15066 ರಲ್ಲಿ ಪ್ರಯಾಣಿಸುತ್ತಿದ್ದರು. ಆದರೆ ನಡುವೆ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಅವರ ಪತಿ ವೈದ್ಯಕೀಯ ಸಹಾಯಕ್ಕಾಗಿ ರೈಲ್ವೆ SOSಗೆ ಕರೆ ಮಾಡಿದ್ದರು ಹೀಗಾಗಿ ಕುಟುಂಬವನ್ನು ಝಾನ್ಸಿ ರೈಲು ನಿಲ್ದಾಣದಲ್ಲಿ ಇಳಿಸಲಾಯಿತು.
ರೈಲ್ ಮದದ್ ಆ್ಯಪ್ ಮೂಲಕ ವೈದ್ಯಕೀಯ ನೆರವು ಕೋರಿದ ಗರ್ಭಿಣಿ ಮಹಿಳಾ ಪ್ರಯಾಣಿಕರ ಬಗ್ಗೆ ರೈಲ್ವೆಗೆ ಮಾಹಿತಿ ನೀಡಲಾಯ್ತು. ತಕ್ಷಣವೇ, ಝಾನ್ಸಿ ನಿಯಂತ್ರಣ ಕೊಠಡಿಯನ್ನು ಸಕ್ರಿಯಗೊಳಿಸಲಾಯಿತು ಮತ್ತು ವೈದ್ಯಕೀಯ ಸಹಾಯಕ್ಕಾಗಿ ತಂಡವನ್ನು ತ್ವರಿತವಾಗಿ ಸಿದ್ದಪಡಿಸಲಾಯಿತು. ರೈಲು ವೀರಾಂಗಣ ಲಕ್ಷ್ಮೀಬಾಯಿ ಝಾನ್ಸಿ ನಿಲ್ದಾಣವನ್ನು ತಲುಪಿದ ತಕ್ಷಣ, ಮಹಿಳೆಗೆ ರೈಲ್ವೆ ವೈದ್ಯಕೀಯ ತಂಡ ಮತ್ತು ರೈಲ್ವೆ ಟಿಕೆಟ್ ತಪಾಸಣಾ ಸಿಬ್ಬಂದಿ ಚಿಕಿತ್ಸೆ ನೀಡಿದರು ಎಂದು ಉತ್ತರ ಮಧ್ಯ ರೈಲ್ವೆಯ ಝಾನ್ಸಿ ವಿಭಾಗವು ಹೇಳಿಕೆಯಲ್ಲಿ ತಿಳಿಸಿದೆ.
ಯಶಸ್ವಿ ಹೆರಿಗೆಯ ನಂತರ, ಮಹಿಳಾ ಟಿಟಿಇ ಸಿಬ್ಬಂದಿ ಮೇಜರ್ ರೋಹಿತ್ ಅವರಿಗೆ ತಮ್ಮ ಕೃತಜ್ಞತೆ ಸಲ್ಲಿಸಿದ್ದಾರೆ., ಅವರು ಅಗತ್ಯ ಸಮಯದಲ್ಲಿ ದೇವತೆಯಂತೆ ಬಂದರು ಎಂದು ರೈಲ್ವೆ ಹೇಳಿದೆ.
ಹೈದರಾಬಾದ್ ಮೂಲದ ಮೇಜರ್ ರೋಹಿತ್ ಅವರು ಭಾರತೀಯ ವಾಯುಪಡೆಯ ಮಾಜಿ ಸಿಬ್ಬಂದಿಯ ಪುತ್ರನಾಗಿದ್ದಾರೆ.
