Menopause Time: ಮೆನೋಪಾಸ್ ಕಿರಿಕಿರಿ ಆಗ್ತಿದ್ರೆ, ಈ ರೀತಿ ಮಾಡಿ
ಮೆನೋಪಾಸ್ ಅವಧಿಯಲ್ಲಿ ಮಹಿಳೆಯರ ದೇಹದಲ್ಲಿ ಅಪಾರ ಬದಲಾವಣೆಗಳು ಆಗುತ್ತವೆ. ಹಾರ್ಮೋನ್ ವ್ಯತ್ಯಾಸದಿಂದ ಸಂಭವಿಸುವ ಈ ಬದಲಾವಣೆಗಳಿಂದ ಮಹಿಳೆ ಬಸವಳಿಯುತ್ತಾಳೆ. ಆದರೆ, ಕೆಲವು ಆಹಾರ ಸೇವನೆಯಿಂದ ಮೆನೋಪಾಸ್ ಹಂತವನ್ನು ಸುಲಭವಾಗಿ ಎದುರಿಸಬಹುದು.
40-45ರ ವಯೋಮಾನದಲ್ಲಿ ಆರೋಗ್ಯದಲ್ಲಿ ಸಂಭವಿಸುವ ಏರುಪೇರಿಗೆ ವೈದ್ಯರ ಬಳಿಗೆ ಹೋದರೆ ಒಂದಲ್ಲ ಒಂದು ಬಾರಿ ಅವರು ಮೆನೋಪಾಸ್ ಹೆಸರನ್ನು ಹೇಳುತ್ತಾರೆ. ಆ ಸಮಯದಲ್ಲಿ ಆಗುವ ಹಾರ್ಮೋನ್ ಏರಿಳಿತದಿಂದ ಮಹಿಳೆಯರ ಆರೋಗ್ಯದಲ್ಲೂ ಸಾಕಷ್ಟು ಏರುಪೇರುಗಳು ಉಂಟಾಗುತ್ತವೆ. ಪ್ರತಿ ಮಹಿಳೆಯರು ಜೀವನದಲ್ಲಿ ಅನಿವಾರ್ಯವಾಗಿ ಎದುರಿಸಲೇಬೇಕಾದ ಹಂತ ಮೆನೋಪಾಸ್. ಆದರೆ, ಅದನ್ನು ಸುಲಭವಾಗಿ, ಸರಳವಾಗಿ ಎದುರಿಸುವಂತಾಗಬೇಕು. ಮಧ್ಯವಯಸ್ಸಿನಲ್ಲಿ ಆರೋಗ್ಯ ಹದಗೆಡಿಸಿಕೊಳ್ಳುತ್ತ ನರಳುವುದರಲ್ಲಿ ಅರ್ಥವಿಲ್ಲ. ಹೀಗಾಗಿ, ಈ ಸಮಯವನ್ನು ಎದುರಿಸಲು ಹಲವಾರು ಮಾರ್ಗೋಪಾಯಗಳನ್ನು ಕಂಡುಕೊಳ್ಳಬಹುದು. ಆಹಾರದಿಂದ ಹಿಡಿದು ಜೀವನಶೈಲಿಯಲ್ಲಿ ಬದಲಾವಣೆ ತಂದುಕೊಳ್ಳುವುದು ಉತ್ತಮ ಪರಿಹಾರ. ಧ್ಯಾನ, ಪ್ರಾಣಾಯಾಮಗಳ ಮೂಲಕ ಮನಸ್ಸನ್ನು ಹತೋಟಿಗೆ ತಂದುಕೊಳ್ಳಲು ಪ್ರಯತ್ನಿಸಬಹುದು. ಎಲ್ಲಕ್ಕಿಂತ ಮುಖ್ಯವಾಗಿ, ಆಹಾರದಲ್ಲಿ ಪ್ರಮುಖ ಬದಲಾವಣೆ ಮಾಡಿಕೊಳ್ಳಬೇಕು ಹಾಗೂ ಕೆಲವು ಆಹಾರವನ್ನು ದೈನಂದಿನ ಆಹಾರಪಟ್ಟಿಗೆ ಸೇರ್ಪಡೆ ಮಾಡಿಕೊಳ್ಳಬೇಕು.
ಮೆನೋಪಾಸ್ (Menopause) ಲಕ್ಷಣಗಳನ್ನು ಎದುರಿಸಲು ಕೆಲವು ಆಹಾರಗಳು ಸಹಕಾರಿಯಾಗಬಲ್ಲವು. ತಜ್ಞರ ಪ್ರಕಾರ, ಈ ಆಹಾರಗಳು ಮೆನೋಪಾಸ್ ತೀವ್ರತೆಯನ್ನು ಕಡಿಮೆಗೊಳಿಸಿ ಮಹಿಳೆಯರಿಗೆ ರಿಲ್ಯಾಕ್ಸ್ ನೀಡುತ್ತವೆ.
• ಪ್ರೊಟೀನ್ ಭರಿತ (Protein) ಆಹಾರ
ವಯಸ್ಸಾದಂತೆ ಮಾಂಸಖಂಡಗಳು ದುರ್ಬಲಗೊಳ್ಳುವುದನ್ನು ತಡೆಯಲು ಪ್ರೊಟೀನ್ ಭರಿತ ಆಹಾರಗಳು ಸಹಾಯ ಮಾಡುತ್ತವೆ. ಹೀಗಾಗಿ, ಮೆನೋಪಾಸ್ ಹಂತದಲ್ಲಿರುವ ಅರ್ಥಾತ್ 40-50ರ ವಯೋಮಾನದ ಮಹಿಳೆಯರು ಹೆಚ್ಚು ಪ್ರೊಟೀನ್ ಸೇವನೆ ಮಾಡಬೇಕು. ಒಂದು ಕೆಜಿ ತೂಕಕ್ಕೆ 1.2 ಗ್ರಾಮ್ ಪ್ರೊಟೀನ್ ಸೇವನೆ ಮಾಡಬೇಕೆನ್ನುವುದು ವೈಜ್ಞಾನಿಕ ಪ್ರಮಾಣ. ಆದರೆ, ಪ್ರತಿ ಸಮಯದ ಆಹಾರದಲ್ಲಿ ಕನಿಷ್ಠ 20-25 ಗ್ರಾಮ್ ಉತ್ತಮ ಪ್ರೊಟೀನ್ ಅನ್ನು ಸೇವನೆ ಮಾಡುವಂತೆ ತಜ್ಞರು ಸಲಹೆ ನೀಡುತ್ತಾರೆ. ಮಾಂಸ (Meat), ಮೀನು (Fish), ಮೊಟ್ಟೆ (Egg), ಬೀಜಗಳು ಹಾಗೂ ಡೈರಿ (Dairy) ಉತ್ಪನ್ನಗಳಲ್ಲಿ ಪ್ರೊಟೀನ್ ಅಂಶ ಹೆಚ್ಚಿರುತ್ತದೆ.
ಇದನ್ನೂ ಓದಿ: Good Health : ಪದೇ ಪದೇ ಆರೋಗ್ಯ ಕೆಡ್ತಿದೆ ಅಂದ್ರೆ ಮಾಡಿ ಈ ಆಸನ
• ಒಮೆಗಾ-3 ಫ್ಯಾಟಿ ಆಸಿಡ್ (Omega-3 Fatty Acid)ಗಳ ಸೇವನೆ ಹೆಚ್ಚಿಸಿ
ಅಧ್ಯಯನಗಳ ಪ್ರಕಾರ, ಒಮೆಗಾ-3 ಫ್ಯಾಟಿ ಆಸಿಡ್ ಸೇವನೆಯಿಂದ ಮೆನೋಪಾಸ್ ಸಮಯದಲ್ಲಿ ಉಂಟಾಗುವ ಉಷ್ಣ ಅಲೆಗಳ (Hot Flashes) ಹಾಗೂ ರಾತ್ರಿ ಸಮಯದಲ್ಲಿ ಬೆವರುವ ತೀವ್ರತೆ ಕಡಿಮೆಯಾಗುತ್ತದೆ. ಸಾಲ್ಮನ್ ಸೇರಿದಂತೆ ಕೆಲವು ಜಾತಿಯ ಮೀನು, ಅಗಸೆ ಬೀಜ (Flax Seed), ಕಾಮಕಸ್ತೂರಿ (Sweet Basil Seeds) (ಕರ್ಪೂರ ತುಳಸಿ, ಸಬ್ಜಾ ಎಂದೂ ಹೇಳಲಾಗುತ್ತದೆ) ಬೀಜದಲ್ಲಿ ಒಮೆಗಾ-3 ಫ್ಯಾಟಿ ಆಸಿಡ್ ಅಂಶ ಇರುತ್ತದೆ.
• ಕ್ಯಾಲ್ಸಿಯಂ, ವಿಟಮಿನ್ ಡಿ, ಮ್ಯಾಗ್ನೆಸಿಯಂ, ವಿಟಮಿನ್ ಕೆ ಆಹಾರ
ಮೆನೋಪಾಸ್ ಸಮಯದಲ್ಲಿ ಹಾರ್ಮೋನ್ (Hormone) ಬದಲಾವಣೆ ಆಗುತ್ತದೆ. ಇದರಿಂದಾಗಿ ಮೂಳೆಗಳು ದುರ್ಬಲವಾಗುತ್ತವೆ. ಒಸ್ಟಿಯೋಪೊರೊಸಿಸ್ ಅಪಾಯ ಹೆಚ್ಚಾಗುತ್ತದೆ. ಹೀಗಾಗಿ, ಯೋಗರ್ಟ್, ಬೆಣ್ಣೆ (Cheese), ಹಾಲು (Milk), ಹಸಿರು ಸೊಪ್ಪು, ಬೀಜ (Nuts) ಹಾಗೂ ಒಣಹಣ್ಣುಗಳನ್ನು ಸೇವಿಸಬೇಕು.
ಇದನ್ನೂ ಓದಿ: ಮಾಂಸ ಪ್ರಿಯರು ನೀವಾಗಿದ್ದರೆ.... ಮಿಸ್ ಮಾಡದೇ ಇದನ್ನ ಓದಿ
• ಸಸ್ಯಜನ್ಯ ಈಸ್ಟ್ರೋಜೆನ್ (Plant Estrogens) ಯುಕ್ತ ಆಹಾರ
ಫೈಟೋಈಸ್ಟ್ರೋಜೆನ್ (Phytoestrogens) ಅಂಶ ಅನೇಕ ಸಸ್ಯಗಳಲ್ಲಿ ಇರುತ್ತದೆ. ಇದು ಈಸ್ಟ್ರೋಜೆನ್ ಹಾರ್ಮೋನಿನ ಪ್ರಭಾವವನ್ನೇ ಬೀರುತ್ತದೆ. ಹೀಗಾಗಿ, ಹಾರ್ಮೋನುಗಳಲ್ಲಿ ಸಮತೋಲನ ಕಾಯ್ದುಕೊಳ್ಳಲು ಇದರ ಸೇವನೆ ಅಗತ್ಯ. ಸೋಯಾಬೀನ್, ಸೋಯಾ (Soya) ಉತ್ಪನ್ನ, ಅಗಸೆ ಬೀಜ, ಕಾಬೂಲ್ ಕಡಲೆ (Chickpea), ಶೇಂಗಾಬೀಜ(Peanut)ಗಳಲ್ಲಿ ಸಸ್ಯಜನ್ಯ ಈಸ್ಟ್ರೋಜೆನ್ ಅಂಶ ಇರುತ್ತದೆ. ಇವುಗಳ ನಿಯಮಿತ ಸೇವನೆಯಿಂದ ದೇಹಕ್ಕೆ ಈಸ್ಟ್ರೋಜೆನ್ ಅಂಶ ಲಭ್ಯವಾಗುತ್ತದೆ. ಈ ಆಹಾರಗಳಿಂದ ಮಹಿಳೆಯರಿಗೆ ಹಿತವೆನಿಸುತ್ತದೆ. ಕಿರಿಕಿರಿ ದೂರವಾಗುತ್ತದೆ. ಇವುಗಳ ಜತೆಗೆ, ನಾರಿನಂಶದಿಂದ (Fibre) ಕೂಡಿದ ಆಹಾರಗಳಾಗಿರುವ ಧಾನ್ಯ, ಹಣ್ಣು, ತರಕಾರಿಗಳ ಸೇವನೆಯಿಂದ ಆರೋಗ್ಯಕ್ಕೆ ಉತ್ತಮ ಸಪೋರ್ಟ್ ದೊರೆಯುತ್ತದೆ.