ಅಮ್ಮ ಲಿಫ್ಟೊಳಗೆ ಬರುವ ಮೊದಲೇ ಬಾಗಿಲು ಕ್ಲೋಸ್: ಹಾಲುಗಲ್ಲದ ಕಂದ ಮಾಡಿದ್ದೇನು? : ವೀಡಿಯೋ
ತಾಯಿಯ ಕಣ್ತಪ್ಪಿಸಿ ಲಿಫ್ಟ್‌ನಲ್ಲಿ ಸಿಕ್ಕಿಹಾಕಿಕೊಂಡ ಮಗುವಿನ ಆತಂಕದ ಕ್ಷಣಗಳನ್ನು ಈ ವೀಡಿಯೋ ತೋರಿಸುತ್ತದೆ. ಮಗು ಲಿಫ್ಟ್‌ನಲ್ಲಿ ಒಂಟಿಯಾಗಿ ಗಾಬರಿಯಾಗಿರುವುದನ್ನು ಮತ್ತು ತಾಯಿಗಾಗಿ ಹುಡುಕಾಡುವುದನ್ನು ಕಾಣಬಹುದು. ಈ ಘಟನೆ ಪುಟ್ಟ ಮಕ್ಕಳ ಪೋಷಕರಿಗೆ ಎಚ್ಚರಿಕೆಯ ಗಂಟೆಯಾಗಿದೆ.
ಸಾಮಾನ್ಯವಾಗಿ ಪುಟ್ಟ ಮಕ್ಕಳು ನಡೆದಾಡಲು ಶುರು ಮಾಡಿದ ಮೇಲೆ ನಿಂತಲ್ಲಿ ನಿಲ್ಲುವುದಿಲ್ಲ, ಅಲ್ಲಿ ಇಲ್ಲಿ ಓಡಾಡುತ್ತಾ ಏನಾದರೊಂದು ಅಪಾಯವನ್ನು ಸಮೀಪಕ್ಕೆ ಸೆಳೆಯುತ್ತಿರುತ್ತಾರೆ. ಇದೇ ಕಾರಣಕ್ಕೆ ಪುಟ್ಟ ಮಕ್ಕಳಿರುವ ಪೋಷಕರು ಇಂತಹ ಮಕ್ಕಳ ಮೇಲೆ ಸದಾ ಒಂದು ಕಣ್ಣಿಡಲೇಬೇಕಾಗುತ್ತದೆ. ಒಂದು ಚೂರು ಕಣ್ತಪ್ಪಿದ್ದರೂ ಅನಾಹುತ ಕಟ್ಟಿಟ್ಟಬುತ್ತಿ. ಅದೇ ರೀತಿ ಇಲ್ಲೊಂದು ಕಡೆ ತಾಯಿಯ ಕಣ್ತಪ್ಪಿಸಿ ಮಗುವೊಂದು ಲಿಫ್ಟ್‌ನೊಳಗೆ ಬಂದಿದ್ದು, ಮಗು ಬಂದ ಕೂಡಲೇ ತಾಯಿ ಬರುವುದಕ್ಕೂ ಮೊದಲೇ ಲಿಫ್ಟ್‌ನ ಬಾಗಿಲು ಕ್ಲೋಸ್ ಆಗಿ ಬಿಟ್ಟಿದೆ. ಇದರಿಂದ ಮಗು ಲಿಫ್ಟ್‌ನಲ್ಲಿ ಒಂಟಿಯಾಗಿದ್ದು, ಆ ಮಗು ಆಮೇಲೇನು ಮಾಡಿದೆ ಎಂಬುದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ವೀಡಿಯೋದಲ್ಲಿ ಕಾಣಿಸುವಂತೆ ತಾಯಿ ಹಾಗೂ ತನ್ನ ಸೋದರಿ ಜೊತೆ ಬಂದ ಮಗು ಲಿಫ್ಟ್ ಬಾಗಿಲು ತರೆಯುತ್ತಿದ್ದಂತೆ ಸೀದಾ ಲಿಫ್ಟ್‌ನೊಳಗೆ ಓಡಿದೆ. ಈ ವೇಳೆ ತಾಯಿ ಹಾಗೂ ಸೋದರಿ ಒಳಗೆ ಬರುವ ಮೊದಲೇ ಲಿಫ್ಟ್ ಕ್ಲೋಸ್ ಆಗಿದ್ದು, ಇದರಿಂದ ಲಿಫ್ಟ್ ಒಳಗೆ ಪುಟ್ಟ ಮಗು ಒಂಟಿಯಾಗಿ ಬಿಟ್ಟಿದೆ. ಇದರಿಂದ ಗಾಬರಿಯಾದ ಮಗು ತನ್ನ ಕೈಗೆ ಎಟುಕದಿದ್ದರೂ ಎರಡು ಕಾಲನ್ನು ಎತ್ತಿ ಕಾಲಿನ ಮುಂಭಾಗದಲ್ಲಿ ನಿಲ್ಲುತ್ತಾ ಲಿಫ್ಟ್‌ನ ನಂಬರ್‌ಗಳನ್ನು ಒತ್ತಲು ಪ್ರಯತ್ನಿಸುತ್ತಿರುವುದು ವೀಡಿಯೋದಲ್ಲಿ ರೆಕಾರ್ಡ್ ಆಗಿದೆ. ಸ್ವಲ್ಪ ಹೊತ್ತು ಈ ಪ್ರಯತ್ನ ಮಾಡಿದ ಮಗು ನಂತರ ಮತ್ತೆ ಲಿಫ್ಟ್‌ನಲ್ಲೇ ಪರಸ್ಪರ ಎರಡು ಕೈಗಳನ್ನು ಉಜ್ಜುತ್ತಾ, ಅತ್ತಿತ್ತ ನೋಡುತ್ತಾ ಆತಂಕಕ್ಕೊಳಗಾಗಿರುವುದನ್ನು ಕಾಣಬಹುದು. ಅಲ್ಲದೇ ಮಗು ಕೈಗಳಲ್ಲಿ ಚಪ್ಪಾಳೆ ತಟ್ಟಿ ಸದ್ದು ಮಾಡಲು ನೋಡುತ್ತದೆ. ಜೊತೆಗೆ ಜೋರಾಗಿ ಕಿರುಚುತ್ತದೆ.
ಈ ಮಧ್ಯೆ ಲಿಫ್ಟ್ ಸಾಗುತ್ತಿದ್ದು, ಒಂದು ಕಡೆ ತೆರೆದುಕೊಳ್ಳುತ್ತದೆ. ಈ ವೇಳೆ ಮಗು ಹೊರಗೆ ನೋಡಿದ್ದು, ಅಲ್ಲಿ ತನ್ನ ಅಕ್ಕ, ಅಮ್ಮ ಇಬ್ಬರೂ ಕಾಣಿಸಿಲ್ಲ, ಆದರೂ ಇನ್ನೇನು ಹೊರಗೆ ಹೋಗಬೇಕು ಎನ್ನುವಷ್ಟರಲ್ಲಿ ಲಿಫ್ಟ್ ಕ್ಲೋಸ್ ಆಗುತ್ತದೆ. ಈ ವೇಳೆ ಮಗು ಮತ್ತೆ ಜೋರಾಗಿ ಕೂಗಿಕೊಂಡಿದೆ. ಇದಾಗಿ ಸ್ವಲ್ಪ ಹೊತ್ತಿನ ನಂತರ ಲಿಫ್ಟ್ ಮತ್ತೊಮ್ಮೆ ಒಪನ್ ಆಗಿದ್ದು, ಈ ವೇಳೆ ತಾಯಿ ಬಂದು ಮಗುವನ್ನು ಎತ್ತಿಕೊಂಡಿದ್ದಾರೆ. ಭಯ ಮೂಡಿಸುವ ಈ ವೀಡಿಯೋ ಸಾಕಷ್ಟು ವೈರಲ್ ಆಗಿದ್ದು, ಪುಟ್ಟ ಮಕ್ಕಳಿರುವ ಪೋಷಕರಿಗೆ ಎಚ್ಚರಿಕೆ ಗಂಟೆಯಾಗಿದೆ.
ಅನೇಕರು ಈ ವೀಡಿಯೋ ಬಗ್ಗೆ ಪ್ರತಿಕ್ರಿಯಿಸಿದ್ದು, ಈ ವಯಸ್ಸಿನ ಪುಟ್ಟ ಮಕ್ಕಳಿರುವ ಪೋಷಕರು ಯಾವಾಗಲೂ ತಮ್ಮ ಮಕ್ಕಳ ಕೈಯನ್ನು ಬಿಟ್ಟಿರಬಾರದು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇದೊಂದು ನಿರ್ಲಕ್ಷ್ಯತೆಯ ಪರಮಾವಧಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ವೀಡಿಯೋ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡಿ.
ಈ ಹಿಂದೆ ಲಿಫ್ಟ್‌ನಲ್ಲಿ ಸಿಲುಕಿಕೊಂಡ ಮಕ್ಕಳು ಸಾಹಸ ಮೆರೆದ ಅನೇಕ ಘಟನೆಗಳು ನಡೆದಿವೆ. ಕೆಲ ಸಮಯದ ಹಿಂದೆ ಶ್ವಾನದೊಂದಿಗೆ ಬಾಲಕ ಲಿಫ್ಟ್‌ನಲ್ಲಿ ಬರುತ್ತಿದ್ದ ವೇಳೆ ಶ್ವಾನದ ಕತ್ತಿನಲ್ಲಿದ್ದ ಬೆಲ್ಟ್ ಲಿಫ್ಟ್ ಬಾಗಿಲಿಗೆ ಸಿಲುಕಿಕೊಂಡಿತ್ತು. ಈ ವೇಳೆ ಬಾಲಕ ಲಿಫ್ಟ್‌ಗೆ ಸಿಲುಕಿದ್ದ ನಾಯಿಯ ಬೆಲ್ಟ್‌ನ್ನು ಗಟ್ಟಿಯಾಗಿ ಹಿಡಿದು ನೇತಾಡುವ ಮೂಲಕ ನಾಯಿ ಮರಿಯ ಜೀವ ಉಳಿಸಿದ್ದ.