ಮುಟ್ಟಿನ ರಜೆ ಹಾಗೂ 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿನಿಯರಿಗೆ 60 ದಿನ ಹೆರಿಗೆ ರಜೆ, ಕೇರಳ ಸರ್ಕಾರ ಘೋಷಣೆ
ಕೇರಳ ಸರ್ಕಾರ ಐತಿಹಾಸಿಕ ನಿರ್ಧಾರ ಘೋಷಸಿದೆ. ಕೇರಳ ವಿಶ್ವವಿದ್ಯಾಲಯದ ಘೋಷಣೆ ಬೆನ್ನಲ್ಲೇ ಇದೀಗ ಕೇರಳ ಸರ್ಕಾರ, ಕಾಲೇಜು ವಿದ್ಯಾರ್ಥಿನಿಯರಿಗೆ ಮುಟ್ಟಿನ ರಜೆ ಹಾಗೂ ಹೆರಿಗೆ ರಜೆ ಘೋಷಿಸಿದೆ.
ತಿರುವನಂತಪುರಂ(ಜ.19): ಕೇರಳದ ವಿದ್ಯಾರ್ಥಿನಿಯರಿಗೆ ಮುಟ್ಟಿನ ರಜೆ ಹಾಗೂ ಕಾಲೇಜು ವಿದ್ಯಾರ್ಥಿನಿಯರಿಗೆ ಹೆರಿಗೆ ರಜೆಯನ್ನು ಕೇರಳ ಸರ್ಕಾರ ಘೋಷಿಸಿದೆ. ಇಂದು ಕೇರಳ ಉನ್ನತ ಶಿಕ್ಷಣ ಸಚಿವೆ ಆರ್ ಬಿಂದು ಈ ಮಹತ್ವದ ಘೋಷಣೆ ಮಾಡಿದ್ದಾರೆ. ಇತ್ತೀಚೆಗೆ ಕೊಚ್ಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯವು (CUSAT) ತನ್ನ ವಿದ್ಯಾರ್ಥಿನಿಯರಿಗೆ ಋತುಚಕ್ರದ ರಜೆ ಘೋಷಿಸಿತ್ತು. ಇದರ ಬೆನ್ನಲ್ಲೇ ಕೇರಳ ಸರ್ಕಾರ ಮಹತ್ವದ ಸಭೆ ನಡೆಸಿದ ಇದೀಗ ಹೊಸ ಘೋಷಣೆ ಮಾಡಿದೆ. ಮುಟ್ಟಿನ ರಜೆ ಹಾಗೂ 18 ವರ್ಷ ತುಂಬಿದ ಕಾಲೇಜು ವಿದ್ಯಾರ್ಥಿನಿಯರಿಗೆ 60 ದಿನದ ಹೆರಿಗೆ ರಜೆಯನ್ನು ಘೋಷಿಸಲಾಗಿದೆ.
ಉನ್ನತ ಶಿಕ್ಷಣ ಸಚಿವೆ ಆರ್ ಬಿಂದು ಈ ಕುರಿತು ಸುತ್ತೋಲೆ ಹೊರಡಿಸಿದ್ದಾರೆ. ಇನ್ನು ಮುಂದೆ ಕೇರಳದ ವಿದ್ಯಾರ್ಥಿನಿಯರಿಗೆ ಮುಟ್ಟಿನ ರಜೆ ನೀಡಲಾಗುತ್ತದೆ. ಇದರ ಜೊತೆಗೆ 18 ವರ್ಷ ತುಂಬಿದ ಕಾಲೇಜು ವಿದ್ಯಾರ್ಥಿನಿಯರಿಗೆ ಹೆರಿಗೆ ರಜೆಯಾಗಿ 60 ದಿನ ನೀಡಲಾಗುವುದು ಎಂದು ಬಿಂದು ಹೇಳಿದ್ದಾರೆ. ಹೆರಿಗೆ ರಜೆ ಪಡೆದ ವಿದ್ಯಾರ್ಥಿನಿಯ ಹಾಜರಾತಿ ಶೇಕಡಾ 73ರಷ್ಟಿದ್ದರೆ ಪರೀಕ್ಷೆ ಬರೆಯಲು ಅವಕಾಶವಿದೆ ಎಂದು ಆರ್ ಬಿಂದು ಹೇಳಿದ್ದಾರೆ.
ಕೇರಳ ವಿವಿ ವಿದ್ಯಾರ್ಥಿನಿಯರಿಗೆ ಮುಟ್ಟಿನ ರಜೆ, ವಿಶ್ವವಿದ್ಯಾಲಯದಿಂದ ಐತಿಹಾಸಿಕ ನಿರ್ಧಾರ
CUSAT ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿನಿಯರಿಗೆ ಮುಟ್ಟಿನ ರಜೆ ಘೋಷಿಸಲಾಗಿತ್ತು. ಇದಕ್ಕೂ ಮೊದಲು ಮಹಾತ್ಮಾ ಗಾಂಧಿ ವಿಶ್ವವಿದ್ಯಾಲಯವು 18 ವರ್ಷಕ್ಕಿಂತ ಮೇಲ್ಪಟ್ಟಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿಯರಿಗೆ 60 ದಿನಗಳ ಹೆರಿಗೆ ರಜೆ ಘೋಷಿಸಿತ್ತು. ಈ ನಿರ್ಧಾರಗಳ ಬಳಿಕ ಹಲವು ಮಹಿಳಾ ಸಂಘಟನೆಗಳು, ವಿದ್ಯಾರ್ಥಿಗಳು ಸಂಘಟನೆಗಳು ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ವಿದ್ಯಾರ್ಥಿನಿಯರಿಗೆ ಋತುಚಕ್ರದ ರಜೆ ಹಾಗೂ ಹೆರಿಗೆ ರಜೆ ಘೋಷಿಸುವಂತೆ ಮನವಿ ಮಾಡಿತ್ತು.
ಮಹಾತ್ಮಾಗಾಂಧಿ ವಿಶ್ವವಿದ್ಯಾಲಯದಲ್ಲಿ ತೆಗೆದುಕೊಂಡ ನಿರ್ಧಾರದಲ್ಲಿ ಕೆಲ ಮಹತ್ವದ ವಿಚಾರಗಳ ಮೇಲೂ ಬೆಳಕು ಚೆಲ್ಲಲಾಗಿತ್ತು. 60 ದಿನಗಳ ಹೆರಿಗೆ ರಜೆಯನ್ನು ಹೆರಿಗೆ ಮುನ್ನ ಅಥವಾ ನಂತರ ತೆಗೆದುಕೊಳ್ಳಲು ಅವಕಾಶ ನೀಡಲಾಗಿದೆ. ಕೋರ್ಸಿನ ಅವಧಿಯಲ್ಲಿ ಕೇವಲ 1 ಬಾರಿ ಹೆರಿಗೆ ರಜೆಗೆ ಅವಕಾಶವಿದೆ. ಮೊದಲ ಅಥವಾ 2ನೇ ಹೆರಿಗೆಗೆ ಈ ರಜೆ ಪಡೆದುಕೊಳ್ಳಬಹುದಾಗಿದೆ. ಗರ್ಭಪಾತ, ಟ್ಯೂಬೆಕ್ಟಮಿಗಾಗಿ 14 ದಿನಗಳ ರಜೆ ತೆಗೆದುಕೊಳ್ಳಲು ಅವಕಾಶ ನೀಡಲಾಗಿದೆ. ಹೆರಿಗೆ ರಜೆ ತೆಗೆದುಕೊಂಡ ಅವಧಿಯಲ್ಲಿ ಪರೀಕ್ಷೆಗಳು ನಡೆದರೆ ಆ ಪರೀಕ್ಷೆಗಳನ್ನು ಮುಂದಿನ ಸೆಮಿಸ್ಟರ್ನಲ್ಲಿ ಬರೆಯುವ ಅವಕಾಶ ನೀಡಲಾಗಿದೆ. ನೋಂದಾಯಿತ ವೈದ್ಯರಿಂದ ಪಡೆದುಕೊಂಡ ವೈದ್ಯಕೀಯ ಪ್ರಮಾಣಪತ್ರವನ್ನು ರಜೆ ಪಡೆವ 3 ದಿನಗಳ ಮೊದಲು ರಜಾ ಅರ್ಜಿಯೊಂದಿಗೆ ಸಲ್ಲಿಸುವುದು ಕಡ್ಡಾಯವಾಗಿದೆ ಎಂದು ವಿವಿ ಹೇಳಿತ್ತು.
ಗರ್ಭಾವಸ್ಥೆಯಲ್ಲಿ ಅತಿಯಾಗಿ ವಾಂತಿಯಾಗುವುದು ಸಾಮಾನ್ಯವೇ, ತಜ್ಞರು ಏನಂತಾರೆ ?
ಇದೀಗ ಕೇರಳ ಸರ್ಕಾರ ಮಹತ್ವದ ನಿರ್ಧಾರ ಘೋಷಿಸಿದೆ. ಕೇರಳ ಸರ್ಕಾರದ ಹೆರಿಗೆ ರಜೆ ಕುರಿತ ಹೆಚ್ಚಿನ ವಿವರರನ್ನು ಶೀಘ್ರದಲ್ಲೇ ಪ್ರಕಟಿಸಲಿದೆ.