ನಿವೃತ್ತ ಶಿಕ್ಷಕಿ ವಿದ್ಯಾ ಕೌರ್, ತಮ್ಮ 59ನೇ ವಯಸ್ಸಿನಲ್ಲಿ ಡ್ರೈವಿಂಗ್ ಸ್ಕೂಲ್‌ನಿಂದ ತಿರಸ್ಕರಿಸಲ್ಪಟ್ಟರೂ ಛಲ ಬಿಡಲಿಲ್ಲ. ಸ್ವಂತ ಕಾರು ಖರೀದಿಸಿ, ನೆರೆಹೊರೆಯವರ ಸಹಾಯದಿಂದ ಚಾಲನೆ ಕಲಿತು, ಇಂದು ತಮ್ಮ 72ನೇ ವಯಸ್ಸಿನಲ್ಲಿ ಜಮ್ಮುವಿನ ರಸ್ತೆಗಳಲ್ಲಿ ಆತ್ಮವಿಶ್ವಾಸದಿಂದ ಕಾರು ಚಲಾಯಿಸುತ್ತಿದ್ದಾರೆ. ಅವರ ಈ ಪಯಣವು ಸಾಧನೆಗೆ ವಯಸ್ಸಿನ ಮಿತಿಯಿಲ್ಲ ಎಂಬುದಕ್ಕೆ ಸ್ಪೂರ್ತಿದಾಯಕ ಉದಾಹರಣೆಯಾಗಿದೆ.

ದಶಕಗಳ ಕಾಲ ವಿದ್ಯಾ ಕೌರ್ ತಮ್ಮ ಜೀವನವನ್ನು ಇತರರ ಭವಿಷ್ಯವನ್ನು ರೂಪಿಸುವುದಕ್ಕಾಗಿಯೇ ಮುಡಿಪಾಗಿಟ್ಟಿದ್ದರು. ವೃತ್ತಿಯಿಂದ ಶಿಕ್ಷಕಿಯಾಗಿ, ನಂತರ ಶಾಲಾ ಪ್ರಾಂಶುಪಾಲರಾಗಿ ಬಡ್ತಿ ಪಡೆದ ಅವರು, ಸುಮಾರು 40ಕ್ಕೂ ಹೆಚ್ಚು ವರ್ಷಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ನಿರಂತರ ಸೇವೆ ಸಲ್ಲಿಸಿದರು. ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ನೂರಾರು ವಿದ್ಯಾರ್ಥಿಗಳಿಗೆ ದಾರಿ ದೀಪವಾಗಿ, ಅವರ ಕನಸುಗಳಿಗೆ ರೆಕ್ಕೆ ಕಟ್ಟುವುದು ವಿದ್ಯಾ ಅವರಿಗೆ ಅಭ್ಯಾಸವಾಗಿತ್ತು. ಆದರೆ, ಇತರರ ಜೀವನವನ್ನು ರೂಪಿಸುವ ಪ್ರಕ್ರಿಯೆಯಲ್ಲಿ ನಿರತರಾಗಿದ್ದಾಗ, ಅವರ ಮನದಾಳದಲ್ಲಿಯೂ ಒಂದು ಪುಟ್ಟ ವೈಯಕ್ತಿಕ ಆಸೆ ಇತ್ತು. ಅದನ್ನು ಅವರು ವರ್ಷಗಳ ಕಾಲ ಸದ್ದಿಲ್ಲದೆ ತಮ್ಮೊಳಗೆ ಇಟ್ಟುಕೊಂಡಿದ್ದರು. ಅದುವೇ ಸ್ವತಃ ಕಾರು ಚಲಾಯಿಸುವುದು!

ಅಂತಿಮವಾಗಿ ತಮ್ಮ 59ನೇ ವಯಸ್ಸಿನಲ್ಲಿ, ವಿದ್ಯಾ ಅವರು ತಮ್ಮ ಈ ಆಸೆಯನ್ನು ಇನ್ನು ಮುಂದೆ ಮುಂದೂಡಬಾರದು ಎಂದು ಗಟ್ಟಿಯಾಗಿ ನಿರ್ಧರಿಸಿದರು. ಮುಂದೆ ನಡೆದ ಘಟನೆಗಳು ಮಾತ್ರ ಇತಿಹಾಸ. ಸಾಧನೆಗೆ ವಯಸ್ಸಿನ ಹಂಗಿಲ್ಲ ಮತ್ತು ಒಬ್ಬ ವ್ಯಕ್ತಿಯ ಸಾಮರ್ಥ್ಯವನ್ನು ಸಮಾಜದ ವಯಸ್ಸಿನ ಮಿತಿಗಳಿಂದ ನಿರ್ಧರಿಸಲಾಗುವುದಿಲ್ಲ ಎಂಬುದಕ್ಕೆ ಅತ್ಯಂತ ಜ್ವಲಂತ ಉದಾಹರಣೆಯಾಗಿ ವಿದ್ಯಾ ಹೊರಹೊಮ್ಮಿದರು.

"ನಿಮಗೆ ವಯಸ್ಸಾಗಿದೆ" ಎಂದಿದ್ದ ಡ್ರೈವಿಂಗ್ ಸ್ಕೂಲ್!

ತಮ್ಮ 59ನೇ ವಯಸ್ಸಿನಲ್ಲಿ ಕಾರು ಡ್ರೈವರ್ ಕಲಿಯಲು ನಿಶ್ಚಯಿಸಿದ ವಿದ್ಯಾ ಕೌರ್, ಮೊದಲು ಹೋಗಿದ್ದು ತಮ್ಮ ಸ್ಥಳೀಯ ಡ್ರೈವಿಂಗ್ ಸ್ಕೂಲ್ ಬಳಿ. ಆದರೆ ಅಲ್ಲಿ ಅವರಿಗೆ ಪ್ರೋತ್ಸಾಹದ ಮಾತುಗಳ ಬದಲು ನಿರಾಶೆ ಎದುರಾಯಿತು. ನಿಮಗೆ ವಯಸ್ಸಾಗಿದೆ, ಈ ವಯಸ್ಸಿನಲ್ಲಿ ನಗರದ ಜನನಿಬಿಡ ರಸ್ತೆಗಳಲ್ಲಿ ವಾಹನ ಚಲಾಯಿಸುವುದು ನಿಮಗಷ್ಟೇ ಅಲ್ಲ, ಇತರರಿಗೂ ಅಪಾಯಕಾರಿ ಎಂದು ಹೇಳಿ ಡ್ರೈವಿಂಗ್ ಸ್ಕೂಲ್‌ನವರು ಅವರಿಗೆ ತರಬೇತಿ ನೀಡಲು ನಿರಾಕರಿಸಿದರು.

ಸಾಮಾನ್ಯವಾಗಿ, 59 ವರ್ಷ ತಲುಪಿದ ಯಾರೇ ಆದರೂ ಇಂತಹ ಮಾತುಗಳನ್ನು ಕೇಳಿದರೆ ತಕ್ಷಣವೇ ತಮ್ಮ ಪ್ರಯತ್ನವನ್ನು ಕೈಬಿಟ್ಟು ಸುಮ್ಮನಾಗುತ್ತಿದ್ದರು. ಆದರೆ ವಿದ್ಯಾ ಕೌರ್ ಅದಕ್ಕೆ ಹೊರತಾಗಿದ್ದರು. ಡ್ರೈವಿಂಗ್ ಸ್ಕೂಲ್‌ನ ನಿರಾಕರಣೆಯನ್ನು ಅವರು ತಮ್ಮ ಕನಸಿನ ಅಂತ್ಯವೆಂದು ಭಾವಿಸಲಿಲ್ಲ. ಬದಲಾಗಿ, ತಮ್ಮ ಗುರಿ ತಲುಪಲು ಪರ್ಯಾಯ ಮಾರ್ಗವನ್ನು ಕಂಡುಕೊಂಡರು.

ಅವರು ಧೈರ್ಯ ಮಾಡಿ ತಮ್ಮದೇ ಆದ ಹೊಸ ಕಾರೊಂದನ್ನು ಖರೀದಿಸಿದರು! ನಂತರ ತಮ್ಮ ನೆರೆಹೊರೆಯವರಲ್ಲಿ ವಿನಂತಿಸಿಕೊಂಡು, ತಮಗೆ ಚಾಲನೆ ಕಲಿಸುವಂತೆ ಕೇಳಿಕೊಂಡರು. ಇದು ಮೇಲ್ನೋಟಕ್ಕೆ ಸರಳ ನಿರ್ಧಾರವೆಂದು ಎನಿಸಿದರೂ, ಅದರ ಹಿಂದೆ ಅಪಾರವಾದ ಆತ್ಮವಿಶ್ವಾಸ ಮತ್ತು ದೃಢಸಂಕಲ್ಪವಿತ್ತು. ಜೀವನದ ಬಹುಭಾಗವನ್ನು ಕುಟುಂಬದ ಜವಾಬ್ದಾರಿಗಳು, ವೃತ್ತಿಜೀವನ ಹಾಗೂ ಸಮಾಜದ ಸೇವೆಗೆ ನೀಡಿದ್ದ ವಿದ್ಯಾ, ಈಗ ಅಂತಿಮವಾಗಿ ತನಗಾಗಿ ಸಮಯ ಮೀಸಲಿಡಲು ನಿರ್ಧರಿಸಿದ್ದರು.

ಶೂನ್ಯದಿಂದ ಪ್ರಾರಂಭವಾದ ತರಬೇತಿ ಮತ್ತು ಅಭ್ಯಾಸ

ಸ್ಟೀರಿಂಗ್ ಹಿಡಿದ ಮೊದಲ ದಿನವೇ ಆತ್ಮವಿಶ್ವಾಸ ತಾನಾಗಿಯೇ ಬರುವುದಿಲ್ಲ ಎಂಬುದು ವಿದ್ಯಾ ಅವರಿಗೆ ತಿಳಿದಿತ್ತು. ಹೀಗಾಗಿ ಅವರು ನಿರಂತರ ಅಭ್ಯಾಸಕ್ಕೆ ಮೊರೆಹೋದರು. ತಮ್ಮ ನೆರೆಹೊರೆಯವರ ಸಹಾಯದಿಂದ, ಕಾರನ್ನು ಚಲಾಯಿಸುವುದು, ಕ್ಲಚ್ ನಿಯಂತ್ರಣ, ಸರಿಯಾದ ಸಮಯದಲ್ಲಿ ಗೇರ್ ಬದಲಾಯಿಸುವುದು, ಬ್ರೇಕ್ ಹಾಕುವುದು ಹಾಗೂ ಸ್ಟೇರಿಂಗ್ ಬ್ಯಾಲೆನ್ಸ್ ಮಾಡುವ ಬೇಸಿಕ್‌ ವಿಷಯಗಳನ್ನು ಶ್ರದ್ಧೆಯಿಂದ ಕಲಿಯಲು ಶುರು ಮಾಡಿದರು.

"ಪ್ರಯತ್ನಕ್ಕೆ ಸೋಲಿಲ್ಲ" ಎಂಬುದಕ್ಕೆ ನಿದರ್ಶನದಂತೆ, ವಿದ್ಯಾ ಅವರು ಕೇವಲ ಒಂದೇ ತಿಂಗಳಲ್ಲಿ ಡ್ರೈವಿಂಗ್‌ನ ಎಲ್ಲಾ ಮೂಲಭೂತ ಕೌಶಲ್ಯಗಳನ್ನು ಕರಗತ ಮಾಡಿಕೊಂಡರು!

ಸಾಮಾನ್ಯವಾಗಿ ವಯಸ್ಸಾದಂತೆ ಜನರು ತಮ್ಮ ಚಟುವಟಿಕೆಗಳನ್ನು ಕಡಿಮೆ ಮಾಡಿಕೊಂಡು, ವಿಶ್ರಾಂತಿ ಜೀವನದತ್ತ ಒಲವು ತೋರುತ್ತಾರೆ. ಆದರೆ ವಿದ್ಯಾ ಅವರ ಹಾದಿ ಭಿನ್ನವಾಗಿತ್ತು. ಜನರು ತಮ್ಮ ಬಗ್ಗೆ ಏನು ಅಂದುಕೊಳ್ಳುತ್ತಾರೆ ಎಂಬ ಯೋಚನೆಯನ್ನು ಬದಿಗೊತ್ತಿ, ಸಂಪೂರ್ಣವಾಗಿ ಕಲಿಯುವುದರ ಮೇಲಷ್ಟೇ ಗಮನ ನೆಟ್ಟರು.

ತಿರಸ್ಕರಿಸಲ್ಪಟ್ಟ ಟೀಚರ್‌ನಿಂದ ಜಮ್ಮುವಿನ ಧೀರ ಚಾಲಕಿಯವರೆಗೆ!

ಇಂದು, 72ನೇ ಇಳಿ ವಯಸ್ಸಿನಲ್ಲಿ ವಿದ್ಯಾ ಕೌರ್ ಜಮ್ಮುವಿನ ಬೀದಿಗಳಲ್ಲಿ ಸಂಪೂರ್ಣ ಸ್ವತಂತ್ರವಾಗಿ, ಆತ್ಮವಿಶ್ವಾಸದಿಂದ ಕಾರು ಚಲಾಯಿಸುತ್ತಾರೆ. "ಜನನಿಬಿಡ ರಸ್ತೆಗಳನ್ನು ನಿಭಾಯಿಸಲು ನಿಮಗೆ ಸಾಧ್ಯವಿಲ್ಲ" ಎಂದು ಯಾರು ಹೇಳಿದ್ದರೋ, ಅದೇ ರಸ್ತೆಗಳಲ್ಲಿ ಅವರು ಅತ್ಯಂತ ಆರಾಮದಾಯಕವಾಗಿ ವಾಹನ ಚಲಾಯಿಸುವ ಮಟ್ಟಕ್ಕೆ ಬೆಳೆದಿದ್ದಾರೆ.

ಈಗ ಅವರು ಜಮ್ಮುವಿನ ಜನದಟ್ಟಣೆಯ ಮಾರುಕಟ್ಟೆಗಳು, ಟ್ರಾಫಿಕ್ ಸಿಗ್ನಲ್‌ಗಳು, ಕಷ್ಟಕರವಾದ ತಿರುವುಗಳು ಹಾಗೂ ಪಾರ್ಕಿಂಗ್ ಸ್ಥಳಗಳಲ್ಲಿ ಸುಲಭವಾಗಿ ಕಾರು ಚಲಾಯಿಸುತ್ತಾರೆ. ಒಮ್ಮೆ "ಕಲಿಯಲು ತೀರಾ ವಯಸ್ಸಾಗಿದೆ" ಎಂದು ಸಮಾಜದಿಂದ ತಿರಸ್ಕರಿಸಲ್ಪಟ್ಟ ಮಹಿಳೆ, ಇಂದು ಕಾರಿನ ಚಕ್ರದ ಹಿಂದೆ ಕುಳಿತು ಸ್ವಾತಂತ್ರ್ಯದ ಗಾಳಿಯನ್ನು ಉಸಿರಾಡುತ್ತಿದ್ದಾರೆ. ವಿದ್ಯಾ ಅವರಿಗೆ ಕಾರು ಚಲಾಯಿಸುವುದು ಕೇವಲ ಒಂದು ಕೌಶಲ್ಯವಾಗಿರಲಿಲ್ಲ. ಅವರ ಆತ್ಮಾಭಿಮಾನ ಮತ್ತು ಸ್ವಾತಂತ್ರ್ಯದ ಸಂಕೇತವಾಗಿತ್ತು.

ಬಿಟ್ಟುಕೊಡದ ಕನಸಿನ ವಿಜಯ

ವೈಯಕ್ತಿಕ ಕನಸುಗಳು ಮತ್ತು ಆಸೆಗಳಿಗೆ ಯಾವುದೇ ಎಕ್ಸಪರಿ ಡೇಟ್ ಇರುವುದಿಲ್ಲ ಎಂಬುದನ್ನು ವಿದ್ಯಾ ಅವರ ಈ ಪ್ರಯಾಣ ನಮಗೆ ಸ್ಪಷ್ಟವಾಗಿ ನೆನಪಿಸುತ್ತದೆ. ನಮ್ಮ ಸಮಾಜವು ಪ್ರತಿಯೊಂದು ಹಂತಕ್ಕೂ ವಯಸ್ಸಿನ ಮಿತಿಯನ್ನು ಹೇರುತ್ತದೆ/ ಚಿಕ್ಕ ವಯಸ್ಸಿನಲ್ಲಿ ಓದು, ಕಲಿಕೆ, ಯೌವನದಲ್ಲಿ ವೃತ್ತಿ ಹಾಗೂ ಇಳಿ ವಯಸ್ಸಿನಲ್ಲಿ ವಿಶ್ರಾಂತಿ! ಆದರೆ ಜೀವನವು ಯಾವಾಗಲೂ ಈ ಚೌಕಟ್ಟಿಗೆ ಬದ್ಧವಾಗಿರುವುದಿಲ್ಲ.

ವಿದ್ಯಾ ಕೌರ್ ಬಯಸಿದ್ದರೆ ನನ್ನ ವಯಸ್ಸು ಮೀರಿಹೋಗಿದೆ, ಅವಕಾಶ ಕೈತಪ್ಪಿದೆ ಎಂದು ನೆಪ ಹೇಳಿ ಸುಮ್ಮನಾಗಬಹುದಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ತಮ್ಮ ಆಸೆ ಜೀವಂತವಾಗಿದ್ದಾಗ, ಅದನ್ನು ಪೂರೈಸಿಕೊಳ್ಳಲು ಪ್ರಯತ್ನಿಸುವುದು ತಪ್ಪಲ್ಲ ಎಂಬುದು ಅವರ ದೃಢ ನಂಬಿಕೆಯಾಗಿತ್ತು. ಈ ಕಥೆಯು ಕೇವಲ 'ವಯಸ್ಸು ಅಪ್ರಸ್ತುತ' ಎಂದು ನಿರೂಪಿಸುವುದಕ್ಕಷ್ಟೇ ಸೀಮಿತವಾಗಿಲ್ಲ, ಬದಲಿಗೆ ಇತರರ ನಕಾರಾತ್ಮಕ ಅಭಿಪ್ರಾಯಗಳು ನಿಮ್ಮ ಸಾಮರ್ಥ್ಯವನ್ನು ನಿರ್ಧರಿಸಲು ಬಿಡಬಾರದು ಎಂಬುದನ್ನು ಸಾರುತ್ತದೆ.

ಕಲಿಕೆಗೆ ಕೊನೆಯಿಲ್ಲ, ಸಹಾಯ ಕೋರುವುದು ದೌರ್ಬಲ್ಯವಲ್ಲ, ಸೋಲೊಪ್ಪದಿರುವ ಮನೋಭಾವ

ಔಪಚಾರಿಕ ಶಿಕ್ಷಣ ಅಥವಾ ಉದ್ಯೋಗ ಮುಗಿದ ತಕ್ಷಣ ಕಲಿಕೆ ನಿಲ್ಲುವುದಿಲ್ಲ. ತಮ್ಮಿಡೀ ಜೀವನವನ್ನು ಇತರರಿಗೆ ಕಲಿಸುವುದರಲ್ಲೇ ಕಳೆದ ವಿದ್ಯಾ, ಕೊನೆಗೆ ತಾವೇ ಒಬ್ಬ ಶ್ರದ್ಧೆಯ ವಿದ್ಯಾರ್ಥಿಯಾದರು. ಡ್ರೈವಿಂಗ್ ಸ್ಕೂಲ್ ನಿರಾಕರಿಸಿದಾಗ ಅವರು ಕಂಗಾಲಾಗಲಿಲ್ಲ, ನೆರೆಹೊರೆಯವರ ಸಹಾಯ ಪಡೆದರು. ಅರ್ಹ ಮಾರ್ಗದರ್ಶನವನ್ನು ಸ್ವೀಕರಿಸಿ, ನಿರಂತರ ಅಭ್ಯಾಸದ ಮೂಲಕ ಸಾಧಿಸಿ ತೋರಿಸಿದರು. ಅಡೆತಡೆಗಳು ಎದುರಾದಾಗ ದಾರಿ ಬದಲಾಯಿಸಬೇಕೇ ವಿನಃ ಗುರಿಯನ್ನಲ್ಲ.

72ನೇ ವಯಸ್ಸಿನಲ್ಲೂ ವಿದ್ಯಾ ಕೌರ್ ತಮ್ಮದೇ ಹಾದಿಯಲ್ಲಿ ಸಾಗುತ್ತಿದ್ದಾರೆ. 59ನೇ ವಯಸ್ಸಿನಲ್ಲಿ "ಸಾಧ್ಯವಿಲ್ಲ" ಎಂಬ ಮಾತು ಕೇಳಿದ್ದ ಅವರು, ಇಂದು ಜಮ್ಮುವಿನ ರಸ್ತೆಗಳಲ್ಲಿ ಚಲಿಸುತ್ತಾ ಪ್ರತಿಯೊಬ್ಬರಿಗೂ ಸ್ಪೂರ್ತಿಯ ಸೆಲೆಯಾಗಿದ್ದಾರೆ.