ಎದೆಹಾಲು ನಿಲ್ಲಿಸುವುದು ಸುಲಭದ ವಿಷಯವಲ್ಲ. ಸಡನ್ ಆಗಿ ನಿಲ್ಲಿಸಿದರೆ ಮಗುವಿನ ಹಟ ಜೋರಾಗಬಹುದು. ಮಗು ಶಾಕ್‌ಗೆ ಒಳಗಾಗಬಹುದು. ಮಗು ಕೂಡಾ ಹುಟ್ಟಿದಾಗಿನಿಂದ ಕಲಿತ ಈ ಅಭ್ಯಾಸವನ್ನು ಅಷ್ಟು ಸುಲಭವಾಗಿ ಬಿಟ್ಟು ಕೊಡಲು ತಯಾರಿರುವುದಿಲ್ಲ. ಹಾಗಾಗಿ, ಎದೆಗೆ ಹುಳಿ ಪದಾರ್ಥಗಳನ್ನು ಹಾಕಿಕೊಳ್ಳುವುದು, ಬೇವಿನೆಣ್ಣೆ ಹಚ್ಚಿಕೊಳ್ಳುವುದು ಮುಂತಾದ ಅಜ್ಜಿಯರ ಕಾಲದ ಟೆಕ್ನಿಕ್ಸ್ ಪಾಲಿಸಲು ಮನಸ್ಸಾಗುತ್ತದೆ. ಅದರೆ ಇವು ಕೂಡಾ ರೂಡ್ ಎನಿಸುತ್ತದೆಯಲ್ಲವೇ ? ಮಗುವಿಗೆ ಎದೆಹಾಲು ಬಿಡಿಸಲು ಸರಿಯಾದ ಕ್ರಮವೆಂದರೆ ನಿಧಾನವಾಗಿ ಸ್ವಲ್ಪಸ್ವಲ್ಪವೇ ಕಡಿಮೆ ಮಾಡುತ್ತಾ ಬರುವುದು. ನೀವು ಕೂಡಾ ಮಗುವಿಗೆ ಎದೆಹಾಲು ಬಿಡಿಸಲು ಯೋಚಿಸುತ್ತಿದ್ದೀರಾ ಎಂದರೆ ಇಲ್ಲಿ ಕೆಲ ಸಲಹೆಗಳಿವೆ. ಖಂಡಿತಾ ನಿಮ್ಮ ಸಹಾಯಕ್ಕೆ ಬರುತ್ತವೆ ನೋಡಿ.

ವಯಸ್ಸು

ಕೆಲವರು ತಮ್ಮ ಉದ್ಯೋಗದ ಕಾರಣದಿಂದ, ನಿದ್ದೆ ಹಾಳಾಗುತ್ತದೆಂಬ ಕಾರಣದಿಂದ ಆರು ತಿಂಗಳಿಗೇ ಬಿಡಿಸುತ್ತಾರಾದರೆ, ಮತ್ತೆ ಕೆಲವರು 5 ವರ್ಷಗಳವರೆಗೂ ಕುಡಿದುಕೊಂಡಿರಲಿ ಬಿಡಿ ಎಂದು ಬಿಟ್ಟಿರುತ್ತಾರೆ. ಆದರೆ, ಮಗುವಿಗೆ ಕನಿಷ್ಠ 6 ತಿಂಗಳವರೆಗೆ ಎದೆ ಹಾಲುಣಿಸಲೇಬೇಕು. ಅದರ ನಂತರದಲ್ಲೂ ಒಂದೂವರೆ ಎರಡು ವರ್ಷದವರೆಗೆ ಹಾಲುಣಿಸುವುದು ಒಳ್ಳೆಯದೇ. ಇದರಿಂದ ಮಗುವಿನ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಜೀವನಪರ್ಯಂತ ಮಗು ಅದರ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ. 

ಹೊಟ್ಟೆಲಿರೋ ಕಂದಮ್ಮನ ಜೊತೆ ಮಾತಾಡೋದು ಹೇಗೆ?...

ಹೇಗೆ ಆರಂಭಿಸುವುದು?

ಹೀಗೆ ಎದೆಹಾಲು ಬಿಡಿಸುವಾಗ ಸಡನ್ ಆಗಿ ನಿಲ್ಲಿಸಿಬಿಟ್ಟರೆ ಎದೆಯಲ್ಲಿ ಇನ್ಫೆಕ್ಷನ್ ಆಗುವುದು. ಪ್ಲಗ್ಡ್ ಡಕ್ಟ್ಸ್, ಕಿರಿಕಿರಿ, ಎದೆನೋವು ಮುಂತಾದ ಸಮಸ್ಯೆಗಳು ಕಾಣಿಸಬಹುದು. ಮಗುವೂ ತನ್ನ ದಿನಚರಿ ತಪ್ಪಿದಂತಾಗಿ ರೊಚ್ಚಿಗೇಳಬಹುದು. ಹಾಗಾಗಿ, ನರ್ಸಿಂಗ್ ಸೆಶನ್‌ಗಳನ್ನು ಕಡಿಮೆ ಮಾಡುತ್ತಾ ಬನ್ನಿ. ಉದಾಹರಣೆಗೆ ಈಗ ದಿನದಲ್ಲಿ ಆರೇಳು ಬಾರಿ, ರಾತ್ರಿಯ ಹೊತ್ತು ನಾಲ್ಕು ಬಾರಿ ಹಾಲು ಕುಡಿಸುತ್ತಿದ್ದೀರೆಂದಾದಲ್ಲಿ, ದಿನದ ಅವಧಿಯಲ್ಲಿ ಹಾಲು ಕೊಡುವುದನ್ನು ಎರಡರಿಂದ ಮೂರು ಸೆಶನ್‌ಗಳಿಗೆ ಇಳಿಸಿ. ಹೀಗೆ, ಕಡಿಮೆ ಮಾಡಿದ ಅವಧಿಯನ್ನು ಫಿಲ್ ಮಾಡಲು ಬಾಟಲ್ ಹಾಲು ಕೊಡುವುದು, ಲೋಟದಲ್ಲಿ ಹಾಲು ಕುಡಿಸುವ ಅಭ್ಯಾಸ ಮಾಡಿಸುವುದು, ಇತರೆ ಸಣ್ಣ ಪುಟ್ಟ ಆಹಾರ ತಿನ್ನಿಸುವುದು ಮಾಡಬಹುದು. ಅದಕ್ಕೆ ನಿಮ್ಮ ಮಗು ಅಡ್ಜಸ್ಟ್ ಆಯಿತು ಎಂದಾದ ನಂತರ ಮತ್ತೆರಡು ಸೆಶನ್ ಕಡಿಮೆ ಮಾಡಿ. ಇದು ಕೆಲವು ವಾರಗಳ ಸಮಯ ತೆಗೆದುಕೊಳ್ಳುತ್ತದೆ. 

ಪ್ರತೀ ಸಲ ಬಾಂಬ್ ಸ್ಪೋಟಿಸಿದಾಗಲೂ ಈ ಮಗು ನಗುತ್ತಿತ್ತು!...

ಕೆಲವೊಮ್ಮೆ ಮಗು ಕಂಫರ್ಟ್‌ಗಾಗಿ ಹಾಲನ್ನು ಕುಡಿಯುತ್ತಿರುತ್ತದೆ. ಹಾಗಾಗಿ, ಹಾಲಿನ ಸೆಶನ್‌ಗಳು ಕಡಿಮೆಯಾದಂತೆಲ್ಲ ತಾಯಿಯು ಸ್ವಲ್ಪ ಹೆಚ್ಚು ಸಮಯವನ್ನು ಮಗುವಿಗೆ ಕೊಟ್ಟು, ಆಟ ಆಡಿಸಿ ಅದನ್ನು ಕಂಫರ್ಟ್ ಆಗಿರಿಸುವುದರಿಂದ, ತಾನು ಆತಂಕವಿಲ್ಲದೆ, ನೆಮ್ಮದಿಯಿಂದಿರಲು ಹಾಲೇ ಬೇಕಾಗಿಲ್ಲ ಎಂಬುದು ಮಗುವಿಗೆ ತಿಳಿಯುತ್ತದೆ. ಆದರೆ, ರಾತ್ರಿ ಮಲಗುವಾಗಿನ ಫೀಡಿಂಗ್ ಮಾತ್ರ ಕೊನೆಯದಾಗಿ ಉಳಿಸಿಕೊಳ್ಳಿ. 

ರಾತ್ರಿಯ ಸೆಶನ್‌ಗಳು

ರಾತ್ರಿ ಹೊತ್ತು ತಂದೆ ಮಗುವನ್ನು ಜೊತೆಗೆ ಮಲಗಿಸಿ, ನೀವು ಒಂದು ವಾರದ ಕಾಲ ಬೇರೆ ಮಲಗಿ. ಮಗು ಅತ್ತಾಗ ತಂದೆಯೇ ಸಮಾಧಾನ ಮಾಡಿ ಬಾಟಲ್ ಹಾಲು ನೀಡಲಿ ಇಲ್ಲವೇ, ತಟ್ಟಿ ಮಲಗಿಸಲಿ. ನಿಧಾನವಾಗಿ ಮಗು ಇದಕ್ಕೆ ಅಡ್ಜಸ್ಟ್ ಆಗುತ್ತದೆ. 

ಸಪ್ಲೈ ಹಾಗೂ ಡಿಮ್ಯಾಂಡ್

ಎದೆಹಾಲು ಉತ್ಪಾದನೆ ಮಗು ಎಷ್ಟು ಕುಡಿಯುತ್ತದೆ ಎಂಬುದನ್ನು ಆಧರಿಸುತ್ತದೆ. ಹೆಚ್ಚು ಹೆಚ್ಚು ಹಾಲು ಕುಡಿದಂತೆಲ್ಲ ಹೆಚ್ಚು ಹಾಲು ಉತ್ಪಾದನೆಯಾಗುತ್ತದೆ. ಹಾಗಾಗಿ, ಹಾಲು ಕುಡಿಸುತ್ತಿರುವವರೆಗೆ ಅದರ ಉತ್ಪಾದನೆ ನಿಲ್ಲದು. ಸೆಶನ್‌ಗಳು ಕಡಿಮೆಯಾದಂತೆಲ್ಲ ಹಾಲು ಕೂಡಾ ಕಡಿಮೆಯಾಗುತ್ತದೆ. ಇದರಿಂದ ತಾಯಂದಿರೂ ಹೆಚ್ಚು ನೋವು, ಕಿರಿಕಿರಿ ಅನುಭವಿಸುವುದು ತಪ್ಪುತ್ತದೆ. 

ಹೀಗಾದರೆ ಮಾತ್ರ ವೈದ್ಯರನ್ನು ಭೇಟಿ ಮಾಡಿ

ಎದೆಹಾಲು ನಿಲ್ಲಿಸಿದ ಬಳಿಕ ತಾಯಿಗೆ ಜ್ವರ ಬಂದರೆ, ಎದೆಯಿಂದ ಹಸಿರಾದ ವಾಸನೆಯುಕ್ತ ಡಿಸ್ಚಾರ್ಜ್ ಆಗುತ್ತಿದ್ದರೆ, ಎದೆ ಊದಿದರೆ, ತಾಯಿಯು ಖಿನ್ನತೆ, ಆತಂಕ ಅನುಭವಿಸತೊಡಗಿದರೆ, ಮಗುವಿನಿಂದ ದೂರಾದಂಥ ಭಾವ ತಾಯಿಯನ್ನು ಕಾಡುತ್ತಿದ್ದರೆ, ಮಗುವಿನ ನಿದ್ರೆಯ ವಿನ್ಯಾಸ ಬದಲಾಗಿ ಅದು ಎರಡು ವಾರಗಳ ಕಾಲ ಮುಂದುವರಿದರೆ- ಇಂಥ ಸಂದರ್ಭಗಳಲ್ಲಿ ವೈದ್ಯರ ಸಹಾಯ ಪಡೆಯಿರಿ.