ಎಗ್ ಫ್ರೀಜಿಂಗ್ ಈಗ ಸಾಮಾನ್ಯವಾಗ್ತಿದೆ. ಅನೇಕರು ಎಗ್ ಫ್ರೀಜ್ ಮಾಡೋಕೆ ಪ್ಲಾನ್ ಮಾಡ್ತಿದ್ದಾರೆ. ಅದ್ರಲ್ಲಿ ನೀವೂ ಒಬ್ಬರಾಗಿದ್ರೆ ಅದ್ರ ವೆಚ್ಚ, ಬಾಡಿಗೆ ಬಗ್ಗೆ ಮಾಹಿತಿ ತಿಳಿದಿಟ್ಕೊಳ್ಳಿ.

ವೃತ್ತಿ ಜೀವನಕ್ಕೆ ಹೆಚ್ಚು ಆದ್ಯತೆ ನೀಡ್ತಿರುವ ಜನರು ಮದುವೆ ಮುಂದೂಡ್ತಿದ್ದಾರೆ. ವರ್ಷ 35ರ ಗಡಿ ದಾಟಿದ್ರೂ ಮದುವೆ ಬಗ್ಗೆ ಯೋಚನೆ ಮಾಡದವರಿದ್ದಾರೆ. ಮದುವೆ, ವೃತ್ತಿ- ಯಶಸ್ಸಿಗೆ ಅಡ್ಡಿಯಾಗುತ್ತೆ ಅನ್ನೋದು ಅನೇಕರ ವಾದ. ಮತ್ತೆ ಕೆಲ ದಂಪತಿ ಮದುವೆ ಆದ್ಮೇಲೂ ಕುಟುಂಬ ವಿಸ್ತರಣೆಗೆ ಮನಸ್ಸು ಮಾಡೋದಿಲ್ಲ. ಆರ್ಥಿಕ ಸ್ಥಿತಿ ಕಾರಣ ಹೇಳಿ ಪ್ಲಾನಿಂಗ್ ಮುಂದೂಡ್ತಾರೆ. ಆದ್ರೆ ಮುಂದೆ ಮಕ್ಕಳ ಸಮಸ್ಯೆ ಕಾಡುತ್ತೆ. ವಯಸ್ಸು ಹೆಚ್ಚಾಗ್ತಿದ್ದಂತೆ ಗರ್ಭಧಾರಣೆ (pregnancy) ಕಷ್ಟವಾಗುತ್ತೆ. ಆರೋಗ್ಯವಂತ ಮಕ್ಕಳ ಜನನ ಕೂಡ ಕಷ್ಟ. ಹೀಗಿರುವಾಗ ಎಗ್ ಫ್ರೀಜಿಂಗ್ (Egg freezing) ಹೆಚ್ಚು ಪ್ರಸಿದ್ಧಿ ಪಡೆಯುತ್ತಿದೆ. ಮೊದಲೇ ಎಗ್ ಫ್ರೀಜ್ ಮಾಡಿಡುವ ಜನರು ತಮಗೆ ಮಕ್ಕಳು ಬೇಕೆನ್ನಿಸಿದಾಗ ಅದನ್ನು ಬಳಸಿಕೊಳ್ತಾರೆ.

ಎಗ್ ಫ್ರೀಜಿಂಗ್ ಪ್ರಕ್ರಿಯೆ : ಮೊಟ್ಟೆಯ ಫ್ರೀಜಿಂಗ್ ಅನ್ನು ಓಸೈಟ್ ಕ್ರಯೋಪ್ರೆಸರ್ವೇಶನ್ ಎಂದೂ ಕರೀತಾರೆ. ಮಹಿಳೆಯಿಂದ ಎಗ್ ತೆಗೆಯಲಾಗುತ್ತೆ. ಮೊದಲು ಮಹಿಲೆಯರು ತಜ್ಞ ವೈದ್ಯರನ್ನು ಸಂಪರ್ಕಿಸಬೇಕು. ಎಗ್ ಪ್ರೊಡಕ್ಟ್ ಹೆಚ್ಚಿಸಲು ಮಹಿಳೆಗೆ ಹಾರ್ಮೋನ್ ಚಿಕಿತ್ಸೆ ನೀಡಲಾಗುತ್ತೆ. ನಂತ್ರ ಎಗ್ ಪರೀಕ್ಷೆ ನಡೆಯುತ್ತೆ. ನಂತ್ರ ಎಗ್ ಫ್ರೀಜ್ ಮಾಡಲಾಗುತ್ತೆ. ಮಹಿಳೆ ಬಯಸಿದಾಗ ಗರ್ಭಧಾರಣೆಗೆ ಇದನ್ನು ಬಳಸಲಾಗುತ್ತೆ.

ಮಹಿಳೆ ಎಗ್ ಫ್ರೀಜ್ ಯಾವಾಗ ಮಾಡ್ಬೇಕು? : ತಜ್ಞರ ಪ್ರಕಾರ, ಎಗ್ ಫ್ರೀಜ್ ಮಾಡಲು ಉತ್ತಮ ವಯಸ್ಸು 25 ರಿಂದ 35 ವರ್ಷ. ಏಕೆಂದರೆ ಎಗ್ ಗುಣಮಟ್ಟ ಮತ್ತು ಪ್ರಮಾಣ ಸಾಮಾನ್ಯವಾಗಿ ಸಣ್ಣ ವಯಸ್ಸಿನಿಂದ 30 ವರ್ಷದ ಒಳಗೆ ಹೆಚ್ಚಾಗಿರುತ್ತದೆ. ಇದು ಗರ್ಭಧಾರಣೆಯ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಮಹಿಳೆಯರಿಗೆ ವಯಸ್ಸಾದಂತೆ, ವಿಶೇಷವಾಗಿ 35 ವರ್ಷಗಳ ನಂತ್ರ ಎಗ್ ಗುಣಮಟ್ಟ ಮತ್ತು ಪ್ರಮಾಣ ಕ್ಷೀಣಿಸಲು ಶುರುವಾಗುತ್ತದೆ. ಈ ಸಮಯದಲ್ಲಿ, ಗರ್ಭಧಾರಣೆಗೆ ತೊಂದರೆ ಎದುರಿಸಬೇಕಾಗಬಹುದು.

ಎಗ್ ಫ್ರೀಜಿಂಗ್ ಒಳ್ಳೆ ಐಡಿಯಾವಾ? : ತಜ್ಞರ ಪ್ರಕಾರ ಎಗ್ ಫ್ರೀಜಿಂಗ್ ಒಳ್ಳೆಯದು. ಚಿಕ್ಕ ವಯಸ್ಸಿನಲ್ಲಿ ಮಗು ಬೇಡ ಎನ್ನುವವರಿಗೆ ಇದು ಉತ್ತಮ ವಿಧಾನವಾಗಿದೆ. ಹಾರ್ಮೋನ್ ಚಿಕಿತ್ಸೆಯಿಂದ ಮಹಿಳೆಗೆ ಸಣ್ಣಪುಟ್ಟ ಸಮಸ್ಯೆ ಕಾಡೋದಿದೆ. ಮನಸ್ಥಿತಿ ಬದಲಾವಣೆಯಂತಹ ಕೆಲ ಸೌಮ್ಯ ಸಮಸ್ಯೆ ಕಾಣಿಸಿಕೊಂಡ್ರೂ ಅಡ್ಡ ಪರಿಣಾಮ ಬಹಳ ಕಡಿಮೆ. ಹಾಗಾಗಿಯೇ ಎಗ್ ಫ್ರೀಜಿಂಗ್ ಗೆ ಬೇಡಿಕೆ ಹೆಚ್ಚಾಗ್ತಿದೆ.

ಎಗ್ ಫ್ರೀಜಿಂಗ್ ಗೆ ಎಷ್ಟು ಖರ್ಚಾಗಬಹುದು? : ಎಗ್ ಫ್ರೀಜಿಂಗ್ ಖರ್ಚು ಅನೇಕ ವಿಷ್ಯಗಳ ಆಧಾರದ ಮೇಲೆ ನಿರ್ಧಾರವಾಗುತ್ತೆ. ಯಾವ ಕೇಂದ್ರ ಎನ್ನುವುದು ಮುಖ್ಯ. ಯಾವ ನಗರದಲ್ಲಿ ನೀವು ಎಗ್ ಫ್ರೀಜ್ ಮಾಡ್ತಿದ್ದೀರಿ, ಎಗ್ ಫ್ರೀಜ್ ಮಾಡುವಾಗ ನೀಡಲಾಗುವ ಚಿಕಿತ್ಸೆಯ ಪ್ರಕಾರವನ್ನು ಅವಲಂಬಿಸಿ ವೆಚ್ಛ ನಿರ್ಧಾರವಾಗುತ್ತದೆ. ಸಾಮಾನ್ಯವಾಗಿ ಎಗ್ ಫ್ರೀಜ್ ಗೆ ನಿಮಗೆ 1.5 ಲಕ್ಷದಿಂದ 2.5 ಲಕ್ಷದವರೆಗೂ ಖರ್ಚು ಬರುತ್ತದೆ.

ವಾರ್ಷಿಕ ಬಾಡಿಗೆ ಎಷ್ಟು? : ನೀವು ಒಮ್ಮೆ ಎಗ್ ಫ್ರೀಜ್ ಮಾಡಿ, ಹಣ ಪಾವತಿಸಿದ್ರೆ ಮುಗಿಯಲಿಲ್ಲ. ಮೊಟ್ಟೆಗಳನ್ನು ರಕ್ಷಿಸುವ ಹೊಣೆ ಚಿಕಿತ್ಸಾ ಕೇಂದ್ರದ ಮೇಲಿರುತ್ತದೆ. ಹಾಗಾಗಿ ಕೇಂದ್ರಗಳು ಇದಕ್ಕೆ ಬಾಡಿಗೆ ವಸೂಲಿ ಮಾಡುತ್ವೆ. ಸಂಸ್ಕಾರಣಾ ವೆಚ್ಚ, ನಿರ್ವಹಣಾ ವೆಚ್ಚ ಅಂತ ಪ್ರತಿ ವರ್ಷ ಸುಮಾರು 6 ರಿಂದ 20 ಸಾವಿರ ರೂಪಾಯಿ ನೀವು ಪಾವತಿಸಬೇಕು. ಎಗ್ ಫ್ರೀಜಿಂಗ್ ಶುಲ್ಕದಂತೆ ನೀವು ಎಲ್ಲಿ ಫ್ರೀಜ್ ಮಾಡಿದ್ದೀರಿ ಎಂಬುದರ ಮೇಲೆ ಬಾಡಿಗೆ ನಿರ್ಧಾರವಾಗುತ್ತದೆ.