Asianet Suvarna News Asianet Suvarna News

19 ವರ್ಷದ ಹುಡುಗಿ ಊರಿನ ಬಾಯಾರಿಕೆ ನೀಗಿಸಿದಳು!

ಇದು ಹಲವು ಊರುಗಳನ್ನು ನೀರಡಿಕೆಯಿಂದ ಮುಕ್ತಗೊಳಿಸಿದ ದಿಟ್ಟ ಮಹಿಳೆಯರ ಕಥೆ. ಬಬಿತಾ ಎಂಬ ಹತ್ತೊಂಬತ್ತು ವರ್ಷದ ಹುಡುಗಿ ಇದರಲ್ಲಿ ಮುಂಚೂಣಿಯಲ್ಲಿರುವಾಕೆ.

 

How a girl solved her villages water problem her love to environment inspires all
Author
Bengaluru, First Published Feb 20, 2021, 3:47 PM IST

ಇದು ಹಲವು ಊರುಗಳನ್ನು ನೀರಡಿಕೆಯಿಂದ ಮುಕ್ತಗೊಳಿಸಿದ ದಿಟ್ಟ ಮಹಿಳೆಯರ ಕಥೆ. ಬಬಿತಾ ಎಂಬ ಹತ್ತೊಂಬತ್ತು ವರ್ಷದ ಹುಡುಗಿ ಇದರಲ್ಲಿ ಮುಂಚೂಣಿಯಲ್ಲಿರುವಾಕೆ. 
ಮಧ್ಯಪ್ರದೇಶದ ಅಗ್ರೋತಾ ಗ್ರಾಮದ ಕತೆ ಇದು. 2020ರಲ್ಲಿ ಇಲ್ಲಿ ಬೇರೆಲ್ಲಾ ವರ್ಷಗಳಿಗಿಂತ ಕಡಿಮೆ ಮಳೆಯಾಯಿತು. ಎರಡೇ ಮಳೆ ಬಂದುದು. ಆದರೂ ಇಲ್ಲಿನ ಜನಕ್ಕೆ ಕುಡಿಯಲು, ನಿತ್ಯವಿಧಿಗಳಿಗೆ ಹಾಗೂ ಒಂದು ಬೆಳೆ ಬೆಳೆಯಲು ಬೇಕಾಗುವಷ್ಟು ನೀರು ಲಭ್ಯವಿತ್ತು. ಊರಿನ ಬಾವಿಗಳು ತುಂಬಿದ್ದವು. ಕೊಳವೆ ಬಾವಿಗಳಲ್ಲಿ ನೀರಿತ್ತು. ಅದಕ್ಕೂ ಹಿಂದಿನ ವರ್ಷಗಳಲ್ಲಿ ಇದಕ್ಕಿಂತ ಹೆಚ್ಚಿಗೆ ಮಳೆಯಾಗಿದ್ದರೂ ಬೇಸಿಗೆಯಲ್ಲಿ ನೀರಿಗೆ ತತ್ವಾರ ಆಗುತ್ತಿತ್ತು. ಹಾಗಿದ್ದರೆ ಪರಿಸ್ಥಿತಿ ಬದಲಾದುದು ಹೇಗೆ? ಅದರ ಹಿಂದೆ ಊರಿನ ಬಬಿತಾ ರಜಪೂತ್ ಎಂಬ ದಿಟ್ಟ ಹುಡುಗಿಯ ಹಾಗೂ ಅವಳನ್ನು ಹಿಂಬಾಲಿಸಿದ ಇತರ ಮಹಿಳೆಯರ ಹೋರಾಟದ ಕತೆಯಿದೆ.

ಸುಮಾರು 1400 ಮಂದಿ ವಾಸಿಸುವ ಈ ಗ್ರಾಮ ಬೇಸಿಗೆಯಲ್ಲಿ ಯಾವಾಗಲೂ ಬರ ಪರಿಸ್ಥಿತಿ ಎದುರಿಸುತ್ತದೆ. ಹಾಗೆಂದು ಇಲ್ಲಿ ನೀರಿನ ಮೂಲ ಇಲ್ಲವೆಂದಲ್ಲ. ಒಂದು ತಾಲಾಬ್‌ (ಕೆರೆ) ಇದೆ. ಕೆರೆಯ ಏರಿಯಾ 70 ಎಕರೆ. ಆದರೆ ಬೇಸಿಗೆಯಲ್ಲಿ ನೀರು ಬತ್ತುತ್ತದೆ. ಅದಕ್ಕೆ ಕಾರಣ ಪಕ್ಕದಲ್ಲಿರುವ ಒಂದು ಬೆಟ್ಟ ಮತ್ತು ಅದರಾಚೆಗೆ ಇರುವ ಬಚೇರಿ ನದಿ. ಮಳೆಗಾಲದಲ್ಲಿ ಬೆಟ್ಟದ ಮೇಲಿನ ನೀರು ಕೆರೆಗೆ ಬಾರದೆ ನದಿಗೆ ಹರಿಯುತ್ತದೆ. ಬೇಸಿಗೆಯಲ್ಲಿ ಈ ಕೆರೆಯಲ್ಲಿರುವ ನೀರು ಇಂಗಿ, ಬೆಟ್ಟದಾಚೆಗಿನ ನದಿಗೆ ಸೇರಿ ಹರಿದುಹೋಗುತ್ತದೆ. ಊರಿಗೆ ನೀರಿಲ್ಲವಾಗುತ್ತದೆ. 

ಮನೆ ಮನೆ ಮುಸುರೆ ತಿಕ್ಕುತ್ತಿದ್ದವಳು ಈಗ ಮಿಸ್ ಇಂಡಿಯಾ ರನ್ನರ್ ಅಪ್ ...

ಎಷ್ಟೋ ವರ್ಷಗಳಿಂದ, ಮಳೆನೀರನ್ನು ಬೆಟ್ಟ ಕಡಿದು ಕೆರೆಗೆ ತರುವ ಬಗ್ಗೆ ಗ್ರಾಮಸ್ತರು ಯೋಚಿಸಿದ್ದುಂಟು. ಆದರೆ ಕಾರ್ಯಪ್ರವೃತ್ತರಾಗಲು ಅಡ್ಡ ಬಂದದ್ದು ಸರಕಾರಕ್ಕೆ ಸೇರಿದ ಅರಣ್ಯ ಇಲಾಖೆ. ಆ ಬೆಟ್ಟ ಅರಣ್ಯ ಇಲಾಖೆಗೆ ಸೇರಿದ್ದಾಗಿದ್ದು. ಅಲ್ಲಿ ಏನೇ ಮಾಡಬೇಕಿದ್ದರೂ ಅನುಮತಿ ಸಿಗುತ್ತಿರಲಿಲ್ಲ. ಇದರಿಂದಾಗಿ ಎಲ್ಲರೂ ಸುಮ್ಮನಿದ್ದರು. ಆದರೆ ಬಬಿತಾ  ರಜಪೂತ್ ಎಂಬ, ಆಗಷ್ಟೇ ಆರ್ಟ್ಸ್ ಡಿಗ್ರಿ ಮುಗಿಸಿದ ಹುಡುಗಿ ಸುಮ್ಮನಿರಲಿಲ್ಲ. ಆಕೆ ಅರಣ್ಯ ಇಲಾಖೆಯ ಬೆನ್ನು ಹತ್ತಿದಳು. ಟೇಬಲ್‌ನಿಂದ ಟೇಬಲ್‌ಗೆ, ಅಧಿಕಾರಿಗಳಿಂದ ಅಧಿಕಾರಿಗಳಿಗೆ ಅಲೆದಳು. ಗ್ರಾಮದ ಗೋಳಿನ ಕತೆಯನ್ನು ಅವರ ಕರುಳು ಕರಗುವಂತೆ ವಿವರಿಸಿದಳು. ಬೆಟ್ಟದಿಂದ ಮಳೆನೀರು ಕೆರೆಯೆಡೆಗೆ ಹರಿದುಬರಲು ಒಂದು ತೋಡು ಕಡೆಯುವುದು ಅವರ ಪ್ಲಾನು. ಕಡೆಗೂ ಅರಣ್ಯ ಇಲಾಖೆ ಒಪ್ಪಿಗೆ ನೀಡಿತು.
 
ಒಪ್ಪಿಗೆ ಸಿಕ್ಕಿದರೆ ಸಾಕೇ? ಕೆಲಸ ಆಗಬೇಡವೇ? ಗ್ರಾಮದ ಪುರುಷ ಸಿಂಹಗಳು ಈ ಮಹಿಳೆಯರಿಂದ ಏನಾಗುತ್ತದೆ ಎಂದು ಸುಮ್ಮನಿದ್ದರು. ಆದರೆ ಬಬಿತಾ, ತನ್ನ ಗೆಳತಿಯರ ಜೊತೆಗೂಡಿ ಕೆಲಸ ಶುರು ಮಾಡಿಯೇಬಿಟ್ಟಳು. ಆರಂಭದಲ್ಲಿ ಅವಳ ಜತೆಗೆ ಇದ್ದುದು 12 ಮಂದಿ ಹೆಣ್ಣುಮಕ್ಕಳು. ಇವರು ದಿನನಿತ್ಯದ ಮನೆಕೆಲಸಗಳನ್ನೂ ಮುಗಿಸಿಕೊಂಡು, ಗಂಡನಿಗೆ ಮಕ್ಕಳಿಗೆ ಬುತ್ತಿ ಕಟ್ಟಿಕೊಟ್ಟು, ನಂತರ ಕೆಲಸಕ್ಕೆ ಬರಬೇಕಿತ್ತು. ನಿಧಾನವಾಗಿ, ಇವರ ಕಾಯಕನಿಷ್ಠೆ ಹಾಗೂ ಕೆಚ್ಚನ್ನು ನೋಡಿದ ಇತರ ಮಹಿಳೆಯರೂ ಜೊತೆಗೆ ಬಂದು ಸೇರಿಕೊಂಡರು. ಕಾರ್ಯಾಚರಣೆ ಮುಗಿಯುವ ಹೊತ್ತಿಗೆ ಇವರ ಸಂಖ್ಯೆ ಇನ್ನೂರರ ಆಸುಪಾಸಿನಲ್ಲಿತ್ತು. 

ಮಹಿಳೆಯರು ಈ ಪರಿ ಸಂಘಟಿತರಾದಾಗ ಗಂಡಸರೂ ಸುಮ್ಮನಿರಲು ಸಾಧ್ಯವಾಗಲಿಲ್ಲ. ಅವರೂ ಬಂದರು. ಆದರೂ ಇಲ್ಲಿ ಇನ್ನೊಂದು ತೊಡಕು ಇತ್ತು.

ನೀವು ಸರಿಯಾಗಿ ಮುಖ ತೊಳೆಯುತ್ತಿಲ್ಲ ಎಂಬುದಕ್ಕೆ ಇವೇ ಸಾಕ್ಷಿ! ...

ಕೆರೆಯ ವಿಸ್ತಾರ ಎಪ್ಪತ್ತು ಎಕರೆ ಇದ್ದರೂ, ಎಲ್ಲ ಭಾಗದಲ್ಲೂ ನೀರು ಇರಲಿಲ್ಲವಾದ್ದರಿಂದ ಕೆರೆಯ ಪಕ್ಕದ ಕೆಲವು ಜಮೀನುದಾರರು ಕೆರೆಯ ಜಮೀನನ್ನು ಅಕ್ರಮ ವಶ ಮಾಡಿಕೊಂಡು ಅಲ್ಲಿ ಬೆಳೆಗಳನ್ನು ಬೆಳೆಯುತ್ತಿದ್ದರು. ಕೆರೆಯಲ್ಲಿ ನಿಂತ ಅಲ್ಪ ನೀರನ್ನೂ ತಮಗಾಗಿ ಬಳಸಿಕೊಳ್ಳುತ್ತಿದ್ದರು. ತೋಡು ಕಡಿದರೆ ಅಲ್ಲೆಲ್ಲಾ ನೀರು ನಿಲ್ಲಲಿದ್ದುದರಿಂದ, ಅವರು ಬಬಿತಾಳ ಈ ಪ್ರಯತ್ನಕ್ಕೆ ಅಡ್ಡಗಾಲು ಹಾಕತೊಡಗಿದರು. ಅವರನ್ನೆಲ್ಲ ಮನವೊಲಿಕೆಯ ಮೂಲಕ, ಸಾಧ್ಯವಾಗದಿದ್ದಲ್ಲಿ ಕಾನೂನು ಕ್ರಮದ ಬೆದರಿಕೆಯ ಮೂಲಕ ಒಲಿಸಲು ಮಹಿಳೆಯರು ಯಶಸ್ವಿಯಾದರು. ಆದರೂ ಇಂದಿಗೂ ಇದು ಪೂರ್ತಿ ಬಗೆಹರಿದಿಲ್ಲ. ಬಬಿತಾ ಬಗ್ಗೆ ಈಗಲೂ ಹಲ್ಲು ಕಡಿಯುವವರು ಇಲ್ಲಿನ ಗಂಡಸರಲ್ಲಿ ಹಲವರಿದ್ದಾರೆ. ಅವರಿಗೆ ಅವರದೇ ಸ್ವಾರ್ಥ.

ಆದರೆ ಬಬಿತಾ ಮತ್ತು ಅವಳಿಂದ ಪ್ರೇರಿತರಾದ ಮಹಿಳೆಯರು ತಮ್ಮ ಕೆಲಸ ಪೂರೈಸಿಯೇಬಿಟ್ಟರು. ಗುಡ್ಡವನ್ನು ಅಗೆದಗೆದು ಹಾಕಿದರು. ಸುಮಾರು 150 ಮೀಟರ್‌ ದೂರಕ್ಕೆ, 12 ಮೀಟರ್‌ ಅಗಲಕ್ಕೆ ತೋಡು ರಚಿಸಿದರು. ಬೆಟ್ಟದ ಮಳೆನೀರು ಕೆರೆಗೆ ಹರಿದುಬರತೊಡಗಿತು. ನೀರು ಹೆಚ್ಚಿದುರಿಂದ ಗ್ರಾಮಸ್ಥರು ಎರಡು ಬೆಳೆ ಬೆಳೆಯತೊಡಗಿದರು. ಮಹಿಳೆಯರಿಗೆ ನೀರಗಾಗಿ ಒದ್ದಾಡುವ ಶ್ರಮ ತಪ್ಪಿತು. ಮಕ್ಕಳು ನೀರು ಹೊರುವ ಕೆಲಸ ತಪ್ಪಿದುದರಿಂದ ಶಾಲೆಗೆ ಹೋಗತೊಡಗಿದರು.

ಇದು ಮಹಿಳೆಯರೇ ಕಟ್ಟಿ ನಿಲ್ಲಿಸಿದ ಕೆರೆಯ ಹಾಗೂ ಅದರಿಂದ ಊರು ಹೊಸ ಬದುಕು ಕಂಡುಕೊಂಡ ಯಶಸ್ಸಿನ ಕತೆ. ಇಂಥ ಬಬಿತಾಗಳ ಸಂತತಿ ಸಾವಿರವಾಗಲಿ ಅಲ್ಲವೇ?  

ಭಾರತದ ಮೊದಲ ಯಂಗೆಸ್ಟ್ ಲೇಡಿ ಪೈಲಟ್: ಕಾಶ್ಮೀರಿ ಯುವತಿ ಸಾಧನೆಗೆ ಶ್ಲಾಘನೆ ...

 

Follow Us:
Download App:
  • android
  • ios