ದೌರ್ಜನ್ಯವೆಂದರೆ ಮಹಿಳೆಯರೇ ಹೆಚ್ಚಾಗಿ ನೋವು ಅನುಭವಿಸೋದೇಕೆ?
ಸಮಾಜ ಎಷ್ಟೇ ಮುಂದುವರೆದಿದೆ ಅಂದ್ರೂ ಮಹಿಳೆಯನ್ನು ನೋಡುವ ದೃಷ್ಟಿ ಮಾತ್ರ ಇಂದಿಗೂ ಬದಲಾಗಿಲ್ಲ. ಮಹಿಳೆ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಲೇ ಇದೆ. ಹಿಂದೆ ತಿರುಗಿ ನೋಡಿದ್ರೆ, ಭಯಾನಕ ಅತ್ಯಾಚಾರ ಪ್ರಕರಣಗಳು ನಮ್ಮ ಭಯ ಹೆಚ್ಚಿಸುತ್ತದೆ. ಇನ್ನೆಷ್ಟು ದಿನ ಹೀಗೆ ಎಂಬ ಪ್ರಶ್ನೆ ಹುಟ್ಟುಹಾಕುತ್ತೆ.
ನಾವೀಗ 2023ಕ್ಕೆ ಕಾಲಿಟ್ಟಿದ್ದೇವೆ. ಇಡೀ ಜಗತ್ತಿನಲ್ಲಿ ಅನೇಕ ಬದಲಾವಣೆಯಾಗಿದೆ. ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದಂತೆ ಅನೇಕ ಕಾನೂನುಗಳು ಜಾರಿಗೆ ಬಂದಿವೆ. ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದ್ರೆ ಇದೆಲ್ಲವೂ ದಾಖಲೆ ರೂಪದಲ್ಲಿದೆಯೇ ಹೊರತು ಯಾವುದೂ ಸರಿಯಾಗಿ ಜಾರಿಗೆ ಬಂದಂತೆ ಕಾಣ್ತಿಲ್ಲ.
ಮಹಿಳೆ (Woman) ಯ ಸುರಕ್ಷತೆ ಇಂದಿಗೂ ದೊಡ್ಡ ಪ್ರಶ್ನೆಯಾಗಿಯೇ ಉಳಿದಿದೆ. ಸರ್ಕಾರ (Government) ಒಂದ್ಕಡೆ ಸುರಕ್ಷತಾ ಕ್ರಮಗಳನ್ನು ಜಾರಿಗೆ ತರ್ತಿದೆ, ಇನ್ನೊಂದು ಕಡೆ ಮಹಿಳೆ ಮೇಲಾಗ್ತಿರುವ ದೌರ್ಜನ್ಯ ಹೆಚ್ಚಾಗ್ತಿದೆ. ಇದಕ್ಕೆ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಮಾಹಿತಿ ಸಾಕ್ಷಿ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಮಾಹಿತಿ ಪ್ರಕಾರ, ಜನವರಿ 1, 2021ರಿಂದ ಜುಲೈ 15 2021ರವರೆಗೆ ಬರೀ ರಾಷ್ಟ್ರ ರಾಜಧಾನಿ (capital) ದೆಹಲಿಯೊಂದರಲ್ಲೇ 6,747 ಅಪರಾಧ ಪ್ರಕರಣಗಳು ದಾಖಲಾಗಿವೆ. 2022 ರಲ್ಲಿ ಈ ಸಂಖ್ಯೆ 7,887 ಕ್ಕೆ ಏರಿದೆ. ಕಳೆದ ವರ್ಷ ಜುಲೈ 15ರವರೆಗೆ ನಗರದಲ್ಲಿ 1,100 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದರೆ, 2021ರಲ್ಲಿ 1,033 ಪ್ರಕರಣಗಳು ದಾಖಲಾಗಿದ್ದವು. ದೆಹಲಿಯ ಅಂಜಲಿ ಸಿಂಗ್ ಸಾವಿನಿ ಪ್ರಕರಣ ಮತ್ತೆ ಮಹಿಳೆ ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಹುಟ್ಟು ಹಾಕಿದೆ. ನಾವಿಂದು ದೇಶದಲ್ಲಿ ನಡೆದ ಕೆಲ ಪ್ರಕರಣವನ್ನು ನಿಮ್ಮ ಮುಂದಿಡ್ತೇವೆ.
ವರದಕ್ಷಿಣೆ ಬಗ್ಗೆ ಭಾರತದ ಕಾನೂನು ಹೇಳೋದೇನು? ಹೆಣ್ಣು ಮಕ್ಕಳಿಗೆ ಗೊತ್ತಿರಬೇಕಿವು!
ಶ್ರದ್ಧಾ ವಾಕರ್ ಕೊಲೆ ಪ್ರಕರಣ : ಮೇ 18, 2022 ರಂದು ದೆಹಲಿಯಲ್ಲಿ ಶ್ರದ್ಧಾ ವಾಕರ್ ಹತ್ಯೆ ನಡೆದಿದೆ. ಆಕೆ ಗೆಳೆಯ ಅಫ್ತಾಬ್ ಅಮೀನ್ ಕೊಲೆ ಮಾಡಿದ್ದಾನೆ. ಆರು ತಿಂಗಳ ನಂತರ ಮಗಳು ಕಾಣೆಯಾಗಿದ್ದಾಳೆಂದು ಆಕೆ ತಂದೆ ಪೊಲೀಸರಿಗೆ ದೂರು ನೀಡಿದಾಗ ಪ್ರಕರಣ ಬಯಲಿಗೆ ಬಂದಿದೆ. ಇದು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ಪ್ರಕರಣ.
2019 ಹೈದರಾಬಾದ್ ಅತ್ಯಾಚಾರ ಪ್ರಕರಣ : ಹೈದರಾಬಾದ್‌ನಲ್ಲಿ 26 ವರ್ಷದ ಪಶುವೈದ್ಯೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು. ಬಳಿಕ ಕೊಲೆ ಮಾಡಿ ರಸ್ತೆ ಬದಿ ಎಸೆದಿದ್ದರು. ಇಬ್ಬರು ಲಾರಿ ಚಾಲಕರು ಅಪರಾಧ ಎಸಗಿದ್ದರು. ಸ್ಕೂಟಿಯನ್ನು ಪಂಚರ್ ಮಾಡಿ ನಂತ್ರ ಸಹಾಯದ ನೆಪದಲ್ಲಿ ಆಕೆ ಮೇಲೆ ಅತ್ಯಾಚಾರವೆಸಗಿ, ಅಮಾನುಷವಾಗಿ ಕೊಂದಿದ್ದರು. ಅತ್ಯಾಚಾರಿಯನ್ನು ಎನ್‌ಕೌಂಟರ್‌ನಲ್ಲಿ ಕೊಲ್ಲಲಾಯಿತು.
ಉನ್ನಾವೋ ಅತ್ಯಾಚಾರ ಪ್ರಕರಣ : ಉತ್ತರ ಪ್ರದೇಶದ ಉನ್ನಾವೊದಲ್ಲಿ ಆಘಾತಕಾರಿ ಪ್ರಕರಣ ಬೆಳಗಿಕೆ ಬಂದಿದ್ದು ಜೂನ್ 4, 2017 ರಂದು. 17 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಲಾಗಿತ್ತು. ಬಿಜೆಪಿಯ ಮಾಜಿ ಸದಸ್ಯ ಕುಲದೀಪ್ ಸಿಂಗ್ ಸೆಂಗಾರ್ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ. ಆರೋಪಿಗೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.
ಹತ್ರಾಸ್ ಸಾಮೂಹಿಕ ಅತ್ಯಾಚಾರ ಪ್ರಕರಣ : ಇಡೀ ದೇಶದ ನಿದ್ರೆ ಗೆಡಿಸಿದ್ದ ಇನ್ನೊಂದು ಪ್ರಕರಣ ಇದು. 19ರ ಹರೆಯದ ದಲಿತ ಯುವತಿಯೊಬ್ಬಳನ್ನು ನಾಲ್ವರು ಪುರುಷರು ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದರು. ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿತ್ತು.
ಕಥುವಾ ಅತ್ಯಾಚಾರ ಪ್ರಕರಣ : ಕೇವಲ 8 ವರ್ಷ ವಯಸ್ಸಿನ ಪುಟ್ಟ ಬಾಲಕಿಯನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರವೆಸಗಿ ಕೊಲೆ ಮಾಡಿದ ಘಟನೆ ಇದು. ಭಾರತದ ಜಮ್ಮು ಮತ್ತು ಕಾಶ್ಮೀರದ ಕಥುವಾ ಬಳಿಯ ರಸಾನಾ ಬಸ್ತಿಯಲ್ಲಿ ಈ ಘಟನೆ ನಡೆದಿತ್ತು.
ಹದಿ ವಯಸ್ಸಿನ ಗರ್ಭಧಾರಣೆ ಹೆಚ್ಚಳ, ಗರ್ಭಪಾತದ ಬಗ್ಗೆ Indian Law ಹೇಳೋದೇನು ?
ನಿರ್ಭಯಾ ಅತ್ಯಾಚಾರ ಪ್ರಕರಣ : ನಿರ್ಭಯಾ ಪ್ರಕರಣದ ಬಗ್ಗೆ ಮತ್ತೆ ಹೇಳ್ಬೇಕಾಗಿಲ್ಲ. ಇದೊಂದು ಭಯಾನಕ ಘಟನೆ. ಡಿಸೆಂಬರ್ 16, 2012 ಕರಾಳ ರಾತ್ರಿ ನಡೆದ ಅಘಾತಕಾರಿ ಘಟನೆ ಅದು.
ಕರ್ನಾಟಕದ ಅತ್ಯಾಚಾರ ಪ್ರಕರಣ : ಕರ್ನಾಟಕದಲ್ಲೂ ಅನೇಕ ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬಂದಿವೆ. 2018ರಿಂದ 2021ರವರೆಗೆ ಕರ್ನಾಟಕದಲ್ಲಿ 1,759 ಪ್ರಕರಣಗಳು ನಡೆದಿವೆ. ಕರ್ನಾಟಕದಲ್ಲಿ ಪ್ರತಿ ತಿಂಗಳು ಸುಮಾರು 30 ರಷ್ಟು ಅತ್ಯಾಚಾರ ಪ್ರಕರಣ ದಾಖಲಾಗುತ್ತದೆ.