ಹೆಣ್ಣು ಭ್ರೂಣಹತ್ಯೆ ಅಪರಾಧವೇ ಆದರೂ ಇದು ಭಾರತದಲ್ಲಿ ಅಪರೂಪವೇನಲ್ಲ. ಅದರಲ್ಲೂ ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ಇದು ಸರ್ವೇಸಾಮಾನ್ಯವಾಗಿ ನಡೆಯುತ್ತದೆ. ಇದಕ್ಕೆ ಕಾರಣ ಹೆಣ್ಣು ಹೆತ್ತವರಿಗೆ ಭಾರ ಎಂಬುದು. ಆಕೆಗಾಗಿ ಖರ್ಚು ಮಾಡಿ ಬೆಳೆಸಿ, ನಂತರ ಗಂಡನ ಮನೆಗೆ ಕಳುಹಿಸುವಾಗ ವರದಕ್ಷಿಣೆಯನ್ನೂ ಯಥೇಚ್ಛ ನೀಡಬೇಕಾಗುತ್ತದೆ ಎಂಬುದು. 

ಹೌದು, ಮುದ್ದಿನಿಂದ ಬೆಳೆಸಿದ ಮಗಳನ್ನು ಮನೆ ಬಿಟ್ಟು ಕಳುಹಿಸುವ ಜೊತೆಗೆ, ಅಷ್ಟು ವರ್ಷ ಕಷ್ಟ ಪಟ್ಟು ದುಡಿದದ್ದೆಲ್ಲವನ್ನೂ ಆಕೆಯ ಗಂಡನ ಮನೆಗೆ ಹೇರಿ ಕಳುಹಿಸುವುದು ಸುಲಭದ ಮಾತಲ್ಲ. 

ವರದಕ್ಷಿಣೆ ಅಪರಾಧ
ವರದಕ್ಷಿಣೆ ನಿಷೇಧ ಕಾಯ್ದೆ 1961ರಲ್ಲಿ ಅಸ್ಥಿತ್ವಕ್ಕೆ ಬಂದಾಗಿನಿಂದ ವರದಕ್ಷಿಣೆಯನ್ನು ಕೇಳುವುದೂ, ಕೊಡುವುದೂ ಅಪರಾಧವೇ. ಈ ಬಗ್ಗೆ ಯಾರಾದರೂ ದೂರು ನೀಡಿದರೆ ತಪ್ಪಿತಸ್ಥರನ್ನು ಒದ್ದು ಒಳಗೆ ಹಾಕಬಹುದು. ಭಾರತದಲ್ಲಿ ವಾಸಿಸುವ ಯಾವುದೇ ಧರ್ಮ, ಜಾತಿಯವರಿರಬಹುದು- ವರ ಹಾಗೂ ವಧುವಿನ ಬಂಧುಬಳಗ ಯಾರೇ ಇರಲಿ- ಆಸ್ತಿ, ಹಣ, ಕಾಸ್ಟ್ಲಿ ವಸ್ತುಗಳನ್ನು ವಿವಾಹ ಸಂಬಂಧವಾಗಿ ನೀಡುವುದು ಅಪರಾಧವೇ. ಹಾಗಂಥ ವರದಕ್ಷಿಣೆ ಎಂಬುದು ಭಾರತದಲ್ಲಿ ಸಂಪೂರ್ಣವಾಗಿ ನಿಂತಿದೆಯೇ? 

 ಭಾರತಕ್ಕೆ ಭೇಷ್ ಎಂದ ವಿಶ್ವ ಆರೋಗ್ಯ ಸಂಸ್ಥೆ!

ಹೌದು, ವರದಕ್ಷಿಣೆ ಕೊಡುವುದು, ತೆಗೆದುಕೊಳ್ಳುವುದು ಎರಡೂ ತಪ್ಪು. ಆದರೆ, ಅದಕ್ಕೆ ಉಡುಗೊರೆಯ ಹೆಸರಿಟ್ಟರೆ? ವರದಕ್ಷಿಣೆ ಎಂಬುದು ಉಡುಗೊರೆ ರೂಪ ಪಡೆದಾಗಿನಿಂದ ಅದು ಎಷ್ಟೊಂದು ಸಾಮಾನ್ಯವಾಗಿದೆ ಎಂದರೆ ಕೊಡುವವರಿಗಾಗಲೀ, ತೆಗೆದುಕೊಳ್ಳುವವರಿಗಾಗಲೀ ಎಲ್ಲಿಯೂ ಅದರಲ್ಲಿ ತಪ್ಪು ಕಾಣುವುದಿಲ್ಲ. ಪ್ರೀತಿಯ ಹೆಸರೊಂದು ಜೊತೆಗೆ ಜೋಡಿಸಿರುವುದರಿಂದ ಪ್ರೀತಿಯ ದ್ಯೋತಕವಾಗಿ ಅಳಿಯನಿಗೆ ಕಾರು, ಮನೆ, ಬಂಗಾರ ಇತ್ಯಾದಿ ಇತ್ಯಾದಿ ಕೊಡುತ್ತಿದ್ದೇವೆ ಎಂದೇ ಹೆಣ್ಣಿನ ಮನೆಯವರು ಭಾವಿಸುತ್ತಾರೆ. ಗಂಡಿನ ಕುಟುಂಬದವರೂ ಅಷ್ಟೇ, ಅವರ ಮಗಳ ಮೇಲಿನ ಪ್ರೀತಿಗೆ ಅವರು ನೀಡುವ ಉಡುಗೊರೆಗಳಷ್ಟೇ ಎಂದು ಭಾವಿಸಿ ನಿರಾಳರಾಗುತ್ತಾರೆ. 

ಉಡುಗೊರೆ ಎಂಬ ಕಾನೂನುಬದ್ಧ ವರದಕ್ಷಿಣೆ
ಇಂದು ಮದುವೆ ಎಂಬುದು ಒಂದು ದಿನದ ಕಾರ್ಯಕ್ರಮವಲ್ಲ. ಮೆಹಂದಿ, ಹಲ್ದಿ, ಸಂಗೀತ್, ರಿಸೆಪ್ಶನ್, ವಿವಾಹ, ಬೀಗರೂಟ ಎಂದು ವಾರಗಟ್ಟಲೆಯ ಸಂಭ್ರಮ. ಈ ಎಲ್ಲ ಸಂಭ್ರಮದ ಹೊಣೆ ಹೆಣ್ಣಿನ ಮನೆಯವರದ್ದೇ.  ಗಂಡಿನ ಮನೆಯವರು ಒಂದು ಊಟ ಹಾಕಿ ಕೈ ತೊಳೆದುಕೊಳ್ಳುತ್ತಾರಷ್ಟೇ. ಅಂದರೆ ಮದುವೆಯೇ ಹತ್ತಾರು ಲಕ್ಷಗಳ ಕಾರ್ಯಕ್ರಮವಾಯಿತು. ಇದರ ಜೊತೆಗೆ, ಹೆಣ್ಣನ್ನು ಗಂಡಿನ ಮನೆಗೆ ವಿವಿಧ ಉಡುಗೊರೆಗಳೊಂದಿಗೆ ಕಳುಹಿಸಲಾಗುತ್ತದೆ. ಈ ಉಡುಗೊರೆಗಳ ಪಟ್ಟಿಯಲ್ಲಿ ಹೂವು ಹಣ್ಣು, ಹೆಣ್ಣಿಗೆ ಅಡಿಯಿಂದ ಮುಡಿವರೆಗೆ ಬಂಗಾರ, ಗಂಡಿಗೆ ವಾಚು, ಬ್ರೇಸ್‌ಲೆಟ್, ಚೈನು, ಕಾರು, ಗಂಡಿನ ಮನೆಯವರಿಗೆ ಕಾಸ್ಲ್ಟಿ ಬಟ್ಟೆಬರೆ, ಅಡುಗೆ ಮನೆಯ ಪರಿಕರಗಳು, ಒಂದಿಷ್ಟು ಹಣಕಾಸು, ಕೆಲವೊಮ್ಮೆ ಆಸ್ತಿಪತ್ರಗಳೂ ಉಡುಗೊರೆಗಳಾಗಿ ಹೋಗುತ್ತವೆ. 

ಆಕೆಯ ಕಂಫರ್ಟ್‌ಗಾಗಿ!
ಈ ಬಗ್ಗೆ ವಧು ಅಥವಾ ವರನ ಮನೆಯವರಿಗೆ ಕೇಳಿದರೆ, ಇವೆಲ್ಲ ಹುಡುಗಿಗೆ ಹೋದ ಮನೆಯಲ್ಲಿ ಬೇಕಾಗಬಹುದಾದ ವಸ್ತುಗಳು, ಎಲ್ಲ ಆಕೆಯ ಸಂತೋಷ ಹಾಗೂ ನೆಮ್ಮದಿಗಾಗಿ ಎಂಬ ಉತ್ತರ ಬರುತ್ತದೆ. ಯಾರೂ ಕೂಡಾ ಅಪ್ಪಿತಪ್ಪಿಯೂ ಇದನ್ನು ವರದಕ್ಷಿಣೆ ಎನ್ನುವುದಿಲ್ಲ. ಗಿಫ್ಟ್ ಎಂದ ಮೇಲೆ ಅದನ್ನು ಸಂಭ್ರಮಿಸಲಾಗುತ್ತದೆಯೇ ಹೊರತು ಯಾರೂ ಪ್ರಶ್ನಿಸುವಂತೆಯೂ ಇಲ್ಲ. ಹಾಗಾಗಿ, ಹಗಲಿನ ದಟ್ಟ ಬೆಳಕಿನಲ್ಲಿ ಕ್ಯಾಮೆರಾ, ವಿಡಿಯೋ ಎದುರಿಗೇ ಈ ಕೊಡು- ಕೊಳ್ಳು ವ್ಯವಹಾರ ನಡೆಯುತ್ತದೆ. ಇದಕ್ಕಿರುವ ಮತ್ತೊಂದು ಲಾಭ ಎಂದರೆ ಹತ್ತಿರದ ಕುಟುಂಬಸ್ಥರು 'ಉಡುಗೊರೆ'ಯಾಗಿ ನೀಡುವ ವಸ್ತುಗಳಿಗೆ ಟ್ಯಾಕ್ಸ್ ಕೂಡಾ ಇಲ್ಲ. 

 ಎರಡನೇ ಬಾರಿ ಅಜ್ಜಿಯಾದ ರವೀನಾ ಮೊಮ್ಮಗನೊಂದಿಗೆ ಹ್ಯಾಪಿ ಟೈಮ್‌

ವಧು ಏನು ಕಡಿಮೆ?
21ನೇ ಶತಮಾನದಲ್ಲಿ ಹೆಣ್ಣು ಗಂಡಿಗಿಂತ ಯಾವುದರಲ್ಲೂ ಕಡಿಮೆಯಾಗಿ ಉಳಿದಿಲ್ಲ. ಹಿಂದೆಲ್ಲ ಗಂಡನ ದುಡಿಮೆಯಲ್ಲೇ ಆಕೆ ಬದುಕಬೇಕಿತ್ತು. ಅದನ್ನೇ ಗಂಡಿನ ಕಡೆಯವರು ವರದಕ್ಷಿಣೆಗೆ ಸಮರ್ಥಿಸಿಕೊಳ್ಳುತ್ತಿದ್ದರು. ಆದರೆ ಈಗ ಹಾಗಿಲ್ಲ. ಪತ್ನಿ ಪತಿಯ ಸಮಕ್ಕೇ ದುಡಿಯುತ್ತಾಳೆ. ಕೆಲವೊಮ್ಮೆ ಆತನಿಗಿಂತ ಹೆಚ್ಚು ದುಡಿಯುತ್ತಾಳೆ. ಮನೆಯನ್ನೂ ನಿಭಾಯಿಸುತ್ತಾಳೆ. 'ಉಡುಗೊರೆ'ಗಳನ್ನು ತೆಗೆದುಕೊಂಡಿದ್ದು ಸಾಲದೆ ಅವಳ ಸಂಬಳವನ್ನೂ ತನ್ನ ತವರಿಗೆ ಕೊಡಲು ಬಿಡದಷ್ಟು ದುರಾಸೆಯ ಗಂಡಿನ ಮನೆಯವರೇ ಹೆಚ್ಚು. ಇಷ್ಟೆಲ್ಲ ಕಲಿತ, ದುಡಿವ ಹೆಣ್ಣನ್ನು 'ಕಂಫರ್ಟ್ ಮಾಡುವ ಸಲುವಾಗಿ ಉಡುಗೊರೆ'ಗಳನ್ನು ನೀಡಬೇಕಾದ ಅಗತ್ಯವೇನಿದೆ? ಉಡುಗೊರೆ, ವರದಕ್ಷಿಣೆ ಎಲ್ಲವನ್ನೂ ಕಾನೂನು ಬಾಹಿರಗೊಳಿಸಬೇಕು. ಆಗಷ್ಟೇ ದೇಶದ ಬಡವರು ಹೆಣ್ಣುಮಗುವೆಂದು ನೋಯುವುದು ಬಿಡುತ್ತಾರೆ, ಹೆಣ್ಣು ಕುಟುಂಬದ ಕಣ್ಣು ಎಂಬುದನ್ನು ಖುಷಿಯಿಂದ ಒಪ್ಪಿಕೊಳ್ಳುತ್ತಾರೆ.

"