ಬಿಎಂಟಿಸಿ ಬಸ್ ಮೊದಲ ಚಾಲಕಿ ಪ್ರೇಮಾ ಬದುಕಿನ ಕಥೆ ಗೊತ್ತಾ?
ಉತ್ತರ ಕರ್ನಾಟಕದ ಹುಲಿ ಅಂತ ಕರೆಸಿಕೊಳ್ಳೋ ಪ್ರೇಮಾ ರಾಜ್ಯದ ಮೊದಲ ಬಸ್ ಚಾಲಕಿ. ಮೆಜೆಸ್ಟಿಕ್ ನಿಂದ ಕೋರಮಂಗಲಕ್ಕೆ ಹೋಗುವ 171 ಬಸ್‌ನಲ್ಲಿ ನೀವು ಈ ಹುಲಿಯನ್ನು ನೋಡಬಹುದು.
ಲೈಫಲ್ಲಿ ಕಷ್ಟ ಯಾರಿಗಿರಲ್ಲ ಹೇಳಿ. ಕೆಲವರಿಗೆ ಕಡಿಮೆ ಕಷ್ಟ, ಕೆಲವರಿಗೆ ಜಾಸ್ತಿ ಕಷ್ಟ ಅಂತಿರಬಹುದು. ಆದರೆ ಕಷ್ಟ ಬಂದರೇ ನಮಗೆ ನಮ್ಮ ಸಾಮರ್ಥ್ಯ ಏನು ಅನ್ನೋದರ ಅರಿವಾಗೋದು. ಇವತ್ತು ಎಲ್ಲರಿಂದ ಉತ್ತರ ಕರ್ನಾಟಕದ ಹುಲಿ ಅಂತ ಕರೆಸಿಕೊಳ್ತಿರೋರು ಪ್ರೇಮಾ. ಬಿಎಂಟಿಸಿ ಮೊದಲ ಲೇಡಿ ಚಾಲಕಿಯಾಗಿ ಗುರುತಿಸಿಕೊಂಡವರು. ಇವರನ್ನು ಈಗ ಹೆಚ್ಚಿನವರು 'ಉತ್ತರ ಕರ್ನಾಟಕದ ಹುಲಿ' ಅಂತ ಕರೀತಾರೆ. ಆದರೆ ಈ ಹುಲಿ ಅಂತ ಅನಿಸಿಕೊಳ್ಳೋದಕ್ಕೆ ಈ ಗಟ್ಟಿಗಿತ್ತಿ ಮಾಡಿದ್ದೇನು ಕಡಿಮೆ ಸಾಧನೆ ಅಲ್ಲ.
ಉತ್ತರ ಕರ್ನಾಟಕದ ಬೆಳಗಾವಿ ಸಮೀಪ ಪ್ರೇಮಾ ಅವರ ಹುಟ್ಟೂರು ಇದೆ. ಇಂದಿಗೂ ಅಲ್ಲಿ ಅಭಿವೃದ್ಧಿ ಅಷ್ಟಕ್ಕಷ್ಟೇ. ಪ್ರೇಮ ದನ ಮೇಯಿಸಿಕೊಂಡು ಉಳಿದ ಸಮಯದಲ್ಲಿ ಶಾಲೆಗೆ ಹೋಗಿ ಓದಿದವರು. ತಮ್ಮ ದನಗಳ ಜೊತೆಗೆ ಇತರರ ದನಗಳನ್ನೂ ಇವರು ಮೇಯಿಸಬೇಕಿತ್ತು. ಆದರೂ ಬಾಲ್ಯದಲ್ಲಿ ಕಷ್ಟ ಎಲ್ಲ ಕಷ್ಟ ಅಂತಲೇ ಅನಿಸಿರಲಿಲ್ಲವಂತೆ ಈಕೆಗೆ.
'ನಾನು ಕಾಲೇಜಿಗೆ ಬಂದಾಗಲೂ ನನ್ನ ಕಾಲಿಗೆ ಚಪ್ಪಲಿ ಇರಲಿಲ್ಲ' ಎನ್ನೋ ಈಕೆಯ ಸ್ಟ್ರಾಂಗ್ ಕಾಲುಗಳು ಈಗ ಅಷ್ಟುದ್ದದ ಬಿಎಂಟಿಸಿ ಬಸ್‌ನ ಕ್ಲಚ್, ಬ್ರೇಕ್‌ಗಳನ್ನು ಲೀಲಾಜಾಲವಾಗಿ ತುಳಿಯುತ್ತವೆ. ಇವರು ಪಿಯುಸಿಗೆ ಬಂದಾಗ ಈಕೆಯ ಅಮ್ಮ ಊರಿನವರಿಗೆಲ್ಲ ಹೆಮ್ಮೆಯಿಂದ ಹೇಳಿಕೊಂಡು ಬಂದಿದ್ದರಂತೆ, 'ನನ್ನ ಮಗಳು ಕಾಲೇಜಿನ ಮೆಟ್ಟಿಲು ಹತ್ತಿ ಬಿಟ್ಟಳು' ಅಂತ. ಏಕೆಂದರೆ ಅವರ ಊರಿನಲ್ಲಿ ಪಿಯುಸಿ ಓದಿದ ಹೆಣ್ಣುಮಕ್ಕಳು ಯಾರೂ ಇರಲಿಲ್ಲ.
ಏಕಾಂಗಿಯಾಗಿ 3 ಬಾವಿಯಲ್ಲಿ ಜಲಧಾರೆ ಹರಿಸಿದ ಗೌರಿ: ಮುಳ್ಳಿನ ಹಾದಿ ಸವೆದ ಸಾಧಕಿಗೆ ಸ್ತ್ರೀ ಅವಾರ್ಡ್
ಪ್ರೇಮಾ ಸಣ್ಣವರಿದ್ದಾಗಲೇ ಸೈಕಲ್, ಬೈಕ್ ಓಡಿಸೋದು ಮಾಡ್ತಿದ್ದರು. ಕಾಲೇಜಿನಲ್ಲಿದ್ದಾಗ ಸ್ಪೋರ್ಟ್ಸ್‌ನಲ್ಲಿ ಇವರೇ ಫಸ್ಟ್ ಬರುತ್ತಿದ್ದರು. ಆಗೆಲ್ಲ ಬೇರೆಯವರು ಕಾರು ಚಾಲನೆ ಮಾಡುತ್ತಿದ್ದರೆ ಅದನ್ನು ನೋಡಿ ಇವರಿಗೂ ಕಾರು ಓಡಿಸುವ ಆಸೆಯಾಗುತಿತ್ತು. ಆದರೆ ಏನು ಮಾಡೋದು, ಇವರದು ಬಡ ಕುಟುಂಬ. ಕಾರು ಓಡಿಸುವ ಕನಸಷ್ಟೇ ಕಾಣಬಹುದಿತ್ತು. ಸರಿಯಾದ ಸೌಲಭ್ಯವಿಲ್ಲದ ಕಾರಣ ಕಾಲೇಜು ವಿದ್ಯಾಭ್ಯಾಸದಲ್ಲಿ ಉತ್ತಮ ಅಂಕ ಪಡೆಯೋದು ಇವರಿಗೆ ಸಾಧ್ಯವಾಗಲಿಲ್ಲ. ಆಗ ಆಸ್ಪತ್ರೆಯಲ್ಲಿ ನರ್ಸ್ ಕೆಲಸ ಮಾಡಲು ಶುರು ಮಾಡಿದರು. ಆಗಲೇ ಮದುವೆಯಾಯಿತು. ಮಗುವೂ ಆಯಿತು. ನಂತರ ಆಸ್ಪತ್ರೆ ಕೆಲಸ ಬಿಟ್ಟು ಪೊಲೀಸ್ ನೌಕರಿಗೆ ಟ್ರೈ (Try) ಮಾಡ್ತಾರೆ ಈ ಗಟ್ಟಿಗಿತ್ತಿ. ಆದರೆ ದುರದೃಷ್ಟವಶಾತ್ ಆ ಕೆಲಸ ಸಿಗೋದಿಲ್ಲ. ಈ ಮಧ್ಯೆ ಇವರ ಪತಿ ಮೃತಪಡುತ್ತಾರೆ. ಮುಂದೇನು ಎನ್ನುವ ಪ್ರಶ್ನೆ ಕಾಡತೊಡಗುತ್ತೆ. ಜೀವನೋಪಾಯಕ್ಕೆ ಏನಾದರೂ ಮಾಡಲೇಬೇಕಲ್ಲ, ಆಗ ತನ್ನಿಷ್ಟದ ಡ್ರೈವಿಂಗ್‌ನಲ್ಲಿ (Driving) ಜೀವನ ಕಂಡುಕೊಳ್ಳುವ ಯೋಚನೆ ಬರುತ್ತೆ.
ಲೈಸೆನ್ಸ್‌ಗಾಗಿ ಗೋಕಾಕ್‌ನಲ್ಲಿರುವ ಆರ್‌ಟಿಒ ಆಫೀಸ್‌ಗೆ ಎಡತಾಕಿದರೆ ಅಲ್ಲಿದ್ದ ಆಫೀಸರ್ (Officer) ಲೇಡಿಸ್‌ಗೆಲ್ಲ ಹೆವಿ ವೆಹಿಕಲ್ ಲೈಸೆನ್ಸ್ ಕೊಡಲ್ಲ ಅಂತ ಹೇಳಿಕಳಿಸುತ್ತಾರೆ. ಮರುದಿನ ನನ್ನ ಸಣ್ಣಮಗುವನ್ನು ಎತ್ತಿಕೊಂಡು ಅವರ ಎದುರು ನಿಲ್ಲುತ್ತಾರೆ ಈ ಛಲಗಾರ್ತಿ. ಆ ಆಫೀಸರ್ ಮನಸ್ಸು ಕರಗಿತು. ಅಲ್ಲೇ ಇದ್ದ ಕೊಲ್ಹಾಪುರದ ಲಾರಿ ಡ್ರೈವರ್‌ಗೆ ‘ನನ್ನ ಪರವಾಗಿ ಈಯಮ್ಮಗೆ 8 ದಿನ ಟ್ರೈನಿಂಗ್ (Training) ಕೊಡು’ ಎನ್ನುತ್ತಾರೆ. ಆತ ಈಕೆಗೆ ಕ್ಲಚ್ ಹಿಡಿಯೋದು, ಬ್ರೇಕ್ ಹಾಕೋದು, ಮಿರರ್ ನೋಡ್ಕೊಂಡು ಗಾಡಿ ಓಡಿಸುವುದನ್ನು ಹೇಳಿಕೊಟ್ಟರು. ನಂತರ ಲಾರಿಯನ್ನು ಸಲೀಸಾಗಿ ಓಡಿಸಲು ಶುರು ಮಾಡ್ತಾರೆ. ಲೈಸೆನ್ಸ್ ಕೂಡ ಸಿಗುತ್ತೆ.
ಸರ್ಕಾರಿ ಶಾಲೆಗಳನ್ನು ಅಂದಗಾಣಿಸೋ ಅನು ಅಕ್ಕನಿಗೆ ಸ್ತ್ರೀ ಅವಾರ್ಡ್: ಕೆಚ್ಚೆದೆಯ ಕನ್ನಡತಿ ಮಾತು ಕೇಳಿ...
ಮುಂದೆ ಬಿಎಂಟಿಸಿ ಬಸ್ ಓಡಿಸಲು ಮುಂದಾಗೋ ಈಕೆ ಕಳೆದ ಹದಿನೈದು ವರ್ಷಗಳಿಂದ ತಮ್ಮ ಕೆಲಸಕ್ಕೆ ಶಹಭಾಸ್‌ಗಿರಿ ಗಿಟ್ಟಿಸಿಕೊಂಡಿದ್ದಾರೆ. ಕಲರ್ಸ್ ಕನ್ನಡದ ಗಿಚ್ಚಿ ಗಿಲಿಗಿಲಿ ವೇದಿಕೆಯೂ ಈ ಮಹಾನ್ ಸಾಧಕಿಯನ್ನು ಮಹಿಳಾ ದಿನದ ಹಿನ್ನೆಲೆಯಲ್ಲಿ ಅಭಿನಂದಿಸಿತು.