ಏಕಾಂಗಿಯಾಗಿ 3 ಬಾವಿಯಲ್ಲಿ ಜಲಧಾರೆ ಹರಿಸಿದ ಗೌರಿ: ಮುಳ್ಳಿನ ಹಾದಿ ಸವೆದ ಸಾಧಕಿಗೆ ಸ್ತ್ರೀ ಅವಾರ್ಡ್
ಮನೆಯ ತೋಟಕ್ಕೆ ನೀರಿಗಾಗಿ ಎರಡು ಬಾವಿ ಏಕಾಂಗಿಯಾಗಿ ತೆರೆದು, ಸನ್ಮಾನದಿಂದ ಬಂದ ಹಣದಿಂದ ಅಂಗನವಾಡಿ ಮಕ್ಕಳಿಗೆ ಇನ್ನೊಂದು ಬಾವಿ ಖುದ್ದು ತೆರೆದುಕೊಟ್ಟ ಮಹಾತಾಯಿ ಗೌರಿ ಅವರ ಜೀವನಗಾಥೆ ಇಲ್ಲಿದೆ...
ಶಾಲೆಗೆ ಹೋಗಲು ಬಡತನ ಅಡ್ಡಿ. ಕೂಲಿಯೇ ಜೀವನಾಧಾರ. ಚಿಕ್ಕ ವಯಸ್ಸಿನಲ್ಲಿಯೇ ಗಂಡನನ್ನು ಕಳೆದುಕೊಂಡು ವಿಧವೆ ಎಂಬ ಪಟ್ಟ ಕಟ್ಟಿಕೊಂಡು ಜೀವನವೆಲ್ಲಾ ಬರಿಯ ನೋವೇ. ಕೂಲಿ ಮಾಡುತ್ತ ಜೀವನ ನಡೆಸುತ್ತಿದ್ದರೂ, ಒಂಟಿಯಾಗಿ ಮಕ್ಕಳನ್ನು ಸಾಕುವ ಛಲಗಾತಿಯಾದವರು ಇವರು. ಮನೆಯಲ್ಲಿದ್ದ ಚಿಕ್ಕ ತೋಟವೇ ಜೀವನಾಧಾರ. ಆದರೆ ತೋಟಕ್ಕೆ ಹಾಕಲು ನೀರು ಇರಲಿಲ್ಲ. ಎದೆಗುಂದದ ಛಲಗಾತಿಯಾದ ಈ ಮಹಿಳೆ, ಎರಡು ಬಾವಿ ತೆಗೆದು ಎಲ್ಲರಿಗೂ ಮಾದರಿಯಾಗಿದ್ದಾರೆ. ಬಾವಿಯನ್ನು ತೆರೆದ ವಿಷಯ ಬಯಲಾಗುತ್ತಿದ್ದಂತೆಯೇ ಈಕೆಯನ್ನು ಸನ್ಮಾನಿಸಿ ಒಂದಿಷ್ಟು ಧನ ಸಹಾಯ ಮಾಡಿದಾಗ, ಇದೇ ಹಣದಿಂದಲೇ ಅಂಗನವಾಡಿಯ ಮಕ್ಕಳ ಉಪಯೋಗಕ್ಕಾಗಿ ಮೂರನೆಯ ಬಾವಿ ತೆರೆದ ಸಾಧಕಿ ಈಕೆ! ಆಳದ ಬಾವಿಯನ್ನು ನಿರಂತರ ಇಳಿದು ಹತ್ತುತ್ತಾ ದಿನಕ್ಕೆ 50-6 0 ಸಾರಿ ಈ ಕಾರ್ಯ ಮಾಡಿದ್ದಾರೆ.
ಈ ಮಾತೆಯ ಹೆಸರು ಗೌರಿ ನಾಯ್ಕ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಗೌರಿ ಗಂಗೆಯನ್ನೇ ಹರಿಸಿದ್ದಾರೆ. ಮನೆಯಲ್ಲಿ ಬಾವಿ ತೆರೆದು ಸಾಧನೆ ಮಾಡಿದ್ದೂ ಅಲ್ಲದೇ, ಅಂಗನವಾಡಿ ಆವರಣದಲ್ಲಿ ಏಕಾಂಗಿಯಾಗಿ ಬಾವಿ ತೋಡಿದ್ದಾರೆ. ಸುಮಾರು 50 ಅಡಿ ಬಾವಿ ತೋಡಿ, ಗಂಗೆಯನ್ನು ಹೊರತರುವಲ್ಲಿ ಸಫಲರಾಗಿದ್ದಾರೆ. ಶಿರಸಿ ಗಣೇಶ ನಗರದ ಅಂಗನವಾಡಿ ನಂಬರ್ 6ರಲ್ಲಿ ಮಕ್ಕಳಿಗೆ ಕುಡಿಯುವ ನೀರಿನ ಕೊರತೆ ಕಂಡು ಶಾಶ್ವತ ಪರಿಹಾರ ಕಲ್ಪಿಸಲು 58 ವರ್ಷದ ಗೌರಿ ನಾಯ್ಕ ಅವರು ಬಾವಿ ತೋಡಲು ಶ್ರೀಕಾರ ಹಾಕಿದ್ದರು. ಅಂಗನವಾಡಿಯಲ್ಲಿ 15 ಮಕ್ಕಳಿದ್ದು, ಪುರಸಭೆಯಿಂದ ಎರಡು ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿಲ್ಲ. 30 ಅಡಿ ಆಳ ಬಾವಿ ತೆಗೆದ ಗೌರಿಯ ಸಾಹಸವನ್ನು ಮಾಧ್ಯಮಗಳು ಪ್ರಚಾರ ಮಾಡಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಡ್ಡಗಾಲು ಹಾಕಿ, ಬಾವಿ ಮುಚ್ಚಿಸಿತ್ತು. ಅದನ್ನು ಖಂಡಿಸಿ ಸ್ಥಳೀಯರು ಪ್ರತಿಭಟಿಸಿ, ಸಹಾಯಕ ಆಯುಕ್ತರ ಕಚೇರಿಗೆ ಹಾಗೂ ತಹಸೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಿದ್ದರು.
ಸರ್ಕಾರಿ ಶಾಲೆಗಳನ್ನು ಅಂದಗಾಣಿಸೋ ಅನು ಅಕ್ಕನಿಗೆ ಸ್ತ್ರೀ ಅವಾರ್ಡ್: ಕೆಚ್ಚೆದೆಯ ಕನ್ನಡತಿ ಮಾತು ಕೇಳಿ...
ಸಂಸದ ಅನಂತಕುಮಾರ ಹೆಗಡೆ ಬಾವಿ ತೆಗೆಯುತ್ತಿದ್ದ ಸ್ಥಳಕ್ಕೆ ತೆರಳಿ ಜಿಲ್ಲಾಧಿಕಾರಿ ಜತೆ ಮಾತನಾಡಿ, ತಕ್ಷಣವೇ ಗೌರಿಗೆ ಬಾವಿ ತೋಡಲು ಅವಕಾಶ ನೀಡಬೇಕು. ಅಡೆತಡೆ ಮಾಡಬಾರದು ಎಂದು ಸೂಚನೆ ನೀಡಿದ್ದರು. ನಂತರ, ಹಾರೆ, ಗುದ್ದಲಿ, ಬುಟ್ಟಿ ಮತ್ತು ಹಗ್ಗ ಸಹಾಯದಿಂದ ದಂತಹ ಮೂಲಭೂತ ಸಾಧನಗಳ ಸಹಾಯದಿಂದ ಹತ್ತಾರು ಬುಟ್ಟಿ ಮಣ್ಣನ್ನು ಒಬ್ಬರೇ ಶ್ರಮದಿಂದ ಹೊರಹಾಕುತ್ತಾರೆ. ಈ ಬಾವಿ ಅಂಗನವಾಡಿಗೆ ಮಾತ್ರವಲ್ಲ, ಈ ಪ್ರದೇಶದ ನಿವಾಸಿಗಳಿಗೂ ಸಹಾಯ ಮಾಡುತ್ತಿದೆ. ಈ ಅಂಗನವಾಡಿ ಕೇಂದ್ರದಲ್ಲಿ ಸುಮಾರು 15 ಮಕ್ಕಳಿಗೆ ಪ್ರಮುಖ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ. ಅಗತ್ಯ ಆರೈಕೆ ಮತ್ತು ಆರಂಭಿಕ ಶಿಕ್ಷಣವನ್ನು ಒದಗಿಸುತ್ತದೆ. ಆದರೆ, ನಿರಂತರ ನೀರಿನ ಕೊರತೆ ದೊಡ್ಡ ಸವಾಲಾಗಿ ಪರಿಣಮಿಸಿದ್ದು, ಹುತಗಾರ ಗ್ರಾಮ ಪಂಚಾಯಿತಿ ಎರಡು ದಿನಕ್ಕೊಮ್ಮೆ ಮಾತ್ರ ನೀರು ಪೂರೈಸುತ್ತಿದೆ. ಇದರ ಹೊರತಾಗಿಯೂ, ಮಕ್ಕಳು ಇನ್ನೂ ಕುಡಿಯುವ ನೀರಿಗಾಗಿ ಹೊರಗಿನ ಬಾವಿಯಿಂದ ತಂದ ನೀರನ್ನು ಅವಲಂಬಿಸಿದ್ದಾರೆ.
ಇದೀಗ ಜೀ ಕನ್ನಡ ವಾಹಿನಿ ನೀಡುತ್ತಿರುವ ಸ್ತ್ರೀ ಅವಾರ್ಡ್ಗೆ ಗೌರಿ ಭಾಜನರಾಗಿದ್ದಾರೆ. ವೇದಿಕೆಯ ಮೇಲೆ ಭಾವುಕರಾದ ಗೌರಿ ಅವರು, ತಮ್ಮ ಬಗ್ಗೆ ಹೇಳಿದ್ದಾರೆ. ಅಡಿಕೆ ಬೆಳೆಗೆ ನೀರುಣಿಸಲು ನನ್ನ ಮನೆಯ ಸಮೀಪ 65 ಅಡಿ ಆಳದ ಬಾವಿ ತೋಡಿದ್ದೇನೆ. ನನ್ನ ಸಣ್ಣ ಕೃಷಿ ಭೂಮಿಗೆ ನಾವು ನೀರಿನ ತೀವ್ರ ಕೊರತೆಯನ್ನು ಎದುರಿಸುತ್ತಿದ್ದೇವೆ. ಹೀಗಾಗಿ ಮೂರು ತಿಂಗಳಲ್ಲಿ ಬಾವಿ ತೋಡಲು ನಿರ್ಧರಿಸಿ ಯಶಸ್ವಿಯಾದೆ. ನನ್ನ ಜಮೀನಿನಲ್ಲಿ 40 ಅಡಿ ಆಳದ ಮತ್ತೊಂದು ಬಾವಿ ತೋಡಿದ್ದೇನೆ. ಗ್ರಾಮ ಪಂಚಾಯಿತಿಯಿಂದ ಎರಡು ದಿನಕ್ಕೊಮ್ಮೆ ಮಾತ್ರ ನೀರು ಪೂರೈಕೆಯಾಗುವುದರಿಂದ ಬೇಸಿಗೆ ಕಾಲದಲ್ಲಿ ಅಂಗನವಾಡಿಗಳಿಗೆ ನೀರಿನ ಕೊರತೆ ಎದುರಾಗಿದೆ ಎಂದು ತಿಳಿಯಿತು. ನನಗೆ ಈ ಕೆಲಸದಿಂದ ತೃಪ್ತಿ ಸಿಗುತ್ತದೆ. ಆದ್ದರಿಂದ ನಾನು ಯಾರ ಸಹಾಯವನ್ನೂ ಕೇಳಲಿಲ್ಲ ಎಂದು ಗೌರಿ ಹೇಳಿದ್ದಾರೆ.
ಮಿಸ್ ವರ್ಲ್ಡ್ ವೇದಿಕೆಯಲ್ಲಿ ನೀತಾ ಅಂಬಾನಿಗೆ ವಿಶೇಷ ಮಾನವೀಯ ಪ್ರಶಸ್ತಿ: ಪ್ರಿಯಾಂಕಾ ಚೋಪ್ರಾ ಹೇಳಿದ್ದೇನು?