ಪೀರಿಯಡ್ಸ್‌ ಟೈಂನಲ್ಲಿ ಅನೇಕ ಬದಲಾವಣೆಗಳಾಗ್ತಿರುತ್ತವೆ. ಅನೇಕರು ಪದೇ ಪದೇ ಮೂತ್ರ ವಿಸರ್ಜನೆಗೆ ಅಂತ ಬಾತ್‌ ರೂಮ್‌ ಗೆ ಹೋಗ್ತಿರುತ್ತಾರೆ. ಇದಕ್ಕೆ ಕಾರಣ ಏನು ಗೊತ್ತಾ?

ಪೀರಿಯಡ್ಸ್ ಸಮಯದಲ್ಲಿ ಹೊಟ್ಟೆ ನೋವು, ಸೊಂಟ ನೋವು, ಬ್ಲೋಟಿಂಗ್ ಮತ್ತು ಸುಸ್ತು ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ ಕೆಲ ಮಹಿಳೆಯರಿಗೆ ಈ ಸಮಯದಲ್ಲಿ ಪದೇ ಪದೇ ಮೂತ್ರ ವಿಸರ್ಜನೆಗೆ ಹೋಗಬೇಕೆನಿಸುತ್ತೆ. ಕೆಲವರಿಗೆ ಅತಿಯಾದ ಮೂತ್ರ ವಿಸರ್ಜನೆ ಆಗುತ್ತೆ. ಇದಕ್ಕೆ ಕಾರಣ ಏನು ಗೊತ್ತಾ? ತಜ್ಞರ ಪ್ರಕಾರ, ಇದಕ್ಕೆ ಒಂದೇ ಕಾರಣವಿಲ್ಲ. ಪೀರಿಯಡ್ಸ್ ಸಮಯದಲ್ಲಿ ಆಗುವ ಹಾರ್ಮೋನ್ ಬದಲಾವಣೆಗಳು, ಬ್ಲಾಡರ್ನ ಸೂಕ್ಷ್ಮತೆ, ಹೆಚ್ಚು ನೀರು ಕುಡಿಯುವುದು, ಟೀ-ಕಾಫಿ ಸೇವನೆ ಮತ್ತು ಮೂತ್ರನಾಳದ ಸೋಂಕು ಸೇರಿದಂತೆ ಹಲವು ಕಾರಣಗಳಿರಬಹುದು.

ಹಾರ್ಮೋನ್ ಬದಲಾವಣೆ

ಮಹಿಳೆಯರ ದೇಹದಲ್ಲಿ ಪ್ರತಿ ತಿಂಗಳು ಮೆನ್ಸ್ಟ್ರುವಲ್ ಸೈಕಲ್ಗೆ ಅನುಗುಣವಾಗಿ ಈಸ್ಟ್ರೋಜನ್ ಮತ್ತು ಪ್ರೊಜೆಸ್ಟೆರಾನ್ ಹಾರ್ಮೋನ್ಗಳ ಮಟ್ಟ ಬದಲಾಗುತ್ತದೆ. ಈ ಬದಲಾವಣೆಗಳು ಕೆಲ ಮಹಿಳೆಯರಲ್ಲಿ ಮೂತ್ರ ವಿಸರ್ಜನೆಯ ಅಭ್ಯಾಸದ ಮೇಲೂ ಪರಿಣಾಮ ಬೀರುತ್ತದೆ. ಪದೇ ಪದೇ ಮೂತ್ರಕ್ಕೆ ಹೋಗಬೇಕೆನಿಸುವುದು ಅಥವಾ ಬ್ಲಾಡರ್ ತುಂಬಿದಂತೆ ಅನಿಸುವುದು ಕಾಣಿಸಿಕೊಳ್ಳಬಹುದು.

2002ರಲ್ಲಿ ಪ್ರಕಟವಾದ ಒಂದು ಅಧ್ಯಯನದಲ್ಲಿ, ಪರೀಕ್ಷೆಗೆ ಒಳಗಾಗಿದ್ದ 133 ಮಹಿಳೆಯರಲ್ಲಿ 55 ಮಹಿಳೆಯರು ತಮ್ಮ ಮೂತ್ರ ಸಂಬಂಧಿತ ಲಕ್ಷಣಗಳು ಪೀರಿಯಡ್ಸ್ ಸೈಕಲ್ಗೆ ಅನುಗುಣವಾಗಿ ಬದಲಾಗುತ್ತವೆ ಎಂದು ತಿಳಿಸಿದ್ದಾರೆ. ಆದರೆ ಈ ಅಧ್ಯಯನಕ್ಕೆ ಈಗಾಗಲೇ ಮೂತ್ರ ಸಂಬಂಧಿತ ಸಮಸ್ಯೆಗಳಿಗಾಗಿ ರೆಫರ್ ಆಗಿದ್ದ ಮಹಿಳೆಯರನ್ನು ಸೇರಿಸಲಾಗಿತ್ತು. ಹಾಗಾಗಿ ಈ ಫಲಿತಾಂಶ ಎಲ್ಲ ಮಹಿಳೆಯರಿಗೂ ಅನ್ವಯಿಸುತ್ತೆ ಎನ್ನಲು ಸಾಧ್ಯವಿಲ್ಲ.

ಪ್ರೋಸ್ಟಾಗ್ಲಾಂಡಿನ್ಗಳ ಪ್ರಭಾವ

ಪೀರಿಯಡ್ಸ್ ಸಮಯದಲ್ಲಿ ಗರ್ಭಾಶಯದ ಸ್ನಾಯುಗಳು ಸಂಕುಚಿತಗೊಳ್ಳಲು ಮತ್ತು ಮುಟ್ಟಿನ ನೋವು ಉಂಟಾಗಲು ಪ್ರೋಸ್ಟಾಗ್ಲಾಂಡಿನ್ ಎಂಬ ರಾಸಾಯನಿಕಗಳು ಪ್ರಮುಖ ಪಾತ್ರ ವಹಿಸುತ್ತವೆ. ಈ ಸಮಯದಲ್ಲಿ ಹೊಟ್ಟೆ ಸೆಳೆತ, ಮಲ ವಿಸರ್ಜನೆಯಲ್ಲಿನ ಬದಲಾವಣೆ ಮತ್ತು ಪೆಲ್ವಿಕ್ ಪ್ರದೇಶದಲ್ಲಿ ಅಸ್ವಸ್ಥತೆ ಕಾಣಿಸಿಕೊಳ್ಳಬಹುದು. ಆದರೆ ಪ್ರೋಸ್ಟಾಗ್ಲಾಂಡಿನ್ಗಳೇ ನೇರವಾಗಿ ಪದೇ ಪದೇ ಮೂತ್ರ ವಿಸರ್ಜನೆಗೆ ಕಾರಣವಾಗುತ್ತವೆ ಎನ್ನಲು ಸಾಕಷ್ಟು ವೈಜ್ಞಾನಿಕ ಪುರಾವೆಗಳಿಲ್ಲ. ಮೂತ್ರ ವಿಸರ್ಜನೆ ಮಾಡುವಾಗ ಉರಿ ಅಥವಾ ತೀವ್ರ ನೋವು ಕಂಡುಬಂದರೆ ಅದನ್ನು ಸಾಮಾನ್ಯ ಮುಟ್ಟಿನ ಲಕ್ಷಣ ಎಂದು ನಿರ್ಲಕ್ಷಿಸಬಾರದು.

ಬ್ಲೋಟಿಂಗ್ ಮತ್ತು ಬ್ಲಾಡರ್ ಮೇಲಿನ ಒತ್ತಡ

ಪೀರಿಯಡ್ಸ್ ಸಮಯದಲ್ಲಿ ಕೆಲ ಮಹಿಳೆಯರಿಗೆ ಹೊಟ್ಟೆ ಉಬ್ಬರ, ಗ್ಯಾಸ್, ಮಲಬದ್ಧತೆ ಮತ್ತು ಹೊಟ್ಟೆಯಲ್ಲಿ ಭಾರವಾದ ಅನುಭವ ಉಂಟಾಗುತ್ತದೆ. ಇದರಿಂದ ಕೆಳಹೊಟ್ಟೆ ಮತ್ತು ಪೆಲ್ವಿಕ್ ಪ್ರದೇಶದಲ್ಲಿ ಅಸ್ವಸ್ಥತೆ ಕಾಣಿಸಿಕೊಳ್ಳಬಹುದು. ಈಗಾಗಲೇ ಬ್ಲಾಡರ್ ಹೆಚ್ಚು ಸೂಕ್ಷ್ಮವಾಗಿರುವವರಿಗೆ ಪದೇ ಪದೇ ಮೂತ್ರ ವಿಸರ್ಜನೆಗೆ ಹೋಗಬೇಕೆನಿಸಬಹುದು. ಇಂಟರ್ಸ್ಟಿಷಿಯಲ್ ಸಿಸ್ಟೈಟಿಸ್ ಅಥವಾ ಬ್ಲಾಡರ್ ಪೇನ್ ಸಿಂಡ್ರೋಮ್ನಂತಹ ಸಮಸ್ಯೆಗಳಿರುವವರಲ್ಲಿ ಮೂತ್ರ ವಿಸರ್ಜನೆಯ ಆವರ್ತನೆ ಹೆಚ್ಚಾಗಬಹುದು.

ಹೆಚ್ಚು ನೀರು, ಟೀ-ಕಾಫಿ ಸೇವನೆ

ಪೀರಿಯಡ್ಸ್ ಸಮಯದಲ್ಲಿ ಕೆಲವರು ಹೆಚ್ಚು ನೀರು, ಹರ್ಬಲ್ ಡ್ರಿಂಕ್ಸ್ ಅಥವಾ ಇತರ ಪಾನೀಯಗಳನ್ನು ಸೇವಿಸುತ್ತಾರೆ. ಕಡಿಮೆ ಸಮಯದಲ್ಲಿ ಹೆಚ್ಚಿನ ಪ್ರಮಾಣದ ದ್ರವ ಸೇವಿಸಿದರೆ ಮೂತ್ರದ ಪ್ರಮಾಣ ಹೆಚ್ಚಾಗಬಹುದು. ಇನ್ನು ಟೀ, ಕಾಫಿ, ಕೋಲಾ ಮತ್ತು ಕೆಲವು ಎನರ್ಜಿ ಡ್ರಿಂಕ್ಸ್ಗಳಲ್ಲಿ ಕೆಫೀನ್ ಇರುತ್ತದೆ. ಇದು ಕೆಲವರಲ್ಲಿ ಮೂತ್ರ ವಿಸರ್ಜನೆಯ ಪ್ರಮಾಣವನ್ನು ಹೆಚ್ಚಿಸುವುದರ ಜೊತೆಗೆ ಪದೇ ಪದೇ ಮೂತ್ರಕ್ಕೆ ಹೋಗಬೇಕೆಂಬ ಒತ್ತಡವನ್ನೂ ಹೆಚ್ಚಿಸಬಹುದು. ಹೀಗಾಗಿ ಪೀರಿಯಡ್ಸ್ ಸಮಯದಲ್ಲಿ ಟೀ-ಕಾಫಿ ಸೇವನೆ ಹೆಚ್ಚಾಗಿದ್ದರೆ ಅದೂ ಒಂದು ಕಾರಣವಾಗಿರಬಹುದು.

ಯಾವಾಗ ಎಚ್ಚರಿಕೆ ವಹಿಸಬೇಕು?

ಪೀರಿಯಡ್ಸ್ ಸಮಯದಲ್ಲಿ ಮಾತ್ರ ಸ್ವಲ್ಪ ಮಟ್ಟಿಗೆ ಮೂತ್ರ ವಿಸರ್ಜನೆಯ ಅಭ್ಯಾಸ ಬದಲಾಗುವುದು ಕೆಲವರಿಗೆ ಕಾಮನ್. ಆದರೆ ಈ ಸಮಸ್ಯೆ ನಿರಂತರವಾಗಿದ್ದರೆ, ಪೀರಿಯಡ್ಸ್ ಮುಗಿದ ನಂತರವೂ ಮುಂದುವರಿದರೆ ಅಥವಾ ಮೂತ್ರ ವಿಸರ್ಜನೆಯ ವೇಳೆ ಉರಿ, ನೋವು, ಜ್ವರದಂತಹ ಲಕ್ಷಣಗಳು ಕಂಡುಬಂದರೆ ವೈದ್ಯರ ಸಲಹೆ ಪಡೆಯಬೇಕು.