ಇನ್ನೇನು ಹೋಳಿ (Holi) ಹಬ್ಬ ಬಂದೇ ಬಿಡ್ತು. ಬಣ್ಣ ಬಣ್ಣದ ರಂಗಿನಲ್ಲಿ ಮಿಂದೇಳುವ ಸಮಯ. ಬಣ್ಣವನ್ನು ಎರಚಾಡಿ ಆಡೋದೇನೋ ಚಂದ. ಆದ್ರೆ ಚರ್ಮ (Skin), ಕೂದಲು (Hair) ಹಾಳಾದ್ರೆ ಅನ್ನೋ ಚಿಂತೆನಾ ? ಡೋಂಟ್‌ ವರಿ, ಈ ಕೆಲವು ಟಿಪ್ಸ್ ಅನುಸರಿಸಿ ಸಾಕು. 

ರಂಗುಗಳ (Color) ಲೋಕದಲ್ಲಿ, ಬಣ್ಣಗಳ ಚಿತ್ತಾರದಲ್ಲಿ ಮೈಮರೆಯುವ ಹೋಳಿ ಬಂದಿದೆ. ಹೋಳಿ (Holi) ಎಂದರೆ, ಬಣ್ಣಗಳ ಹಬ್ಬ. ಬಣ್ಣಗಳನ್ನು ಎರಚಿಕೊಳ್ಳುತ್ತ ಸಂಭ್ರಮಿಸುವ ಸಮಯ. ಆದರೆ, ಈ ಸಮಯದಲ್ಲಿ ಬಣ್ಣಗಳ ಕುರಿತು ಎಚ್ಚರಿಕೆ ತೆಗೆದುಕೊಳ್ಳಬೇಕಾದುದು ಅಗತ್ಯ. ಅವುಗಳಿಂದ ಚರ್ಮ (Skin)ಕ್ಕೆ ಹಾನಿಯಾಗದಂತೆ ನೋಡಿಕೊಳ್ಳುವುದು ಅತ್ಯಗತ್ಯ. ಚರ್ಮದ ಹಾನಿ ತಡೆಯಲು ಮಾಯಿಶ್ಚರೈಸ್ (Moisturize) ಲೇಪಿಸಿಕೊಳ್ಳುವುದು, ಎಣ್ಣೆ (Oil) ಮಸಾಜ್ ಮಾಡಿಕೊಳ್ಳುವುದು ಇತ್ಯಾದಿ ಕ್ರಮಗಳನ್ನು ಅನುಸರಿಸಬಹುದು. 

ಚರ್ಮವಷ್ಟೇ ಅಲ್ಲ, ಕೂದಲಿಗೂ (Hair) ಬಣ್ಣಗಳಿಂದ ಸ್ವಲ್ಪ ತೊಂದರೆಯಾಗುವುದು ನಿಮ್ಮ ಗಮನಕ್ಕೆ ಬಂದಿರಬಹುದು. ಬಣ್ಣಗಳಲ್ಲಿರುವ ಕೆಮಿಕಲ್ (Chemical) ಹಾಗೂ ರಂಗಿನಲ್ಲಿರುವ ಕೆಲವು ಅಂಶಗಳು ಕೂದಲಿಗೆ ಹಾನಿಯುಂಟು ಮಾಡುತ್ತವೆ. ಕೂದಲು ಒರಟಾಗಿ ತುಂಡಾಗುತ್ತವೆ. ಅಷ್ಟೇ ಅಲ್ಲ, ತುದಿ ಎರಡಾಗಿ ಸೀಳಬಹುದು. ಹೀಗಾಗಿ, ಕೂದಲಿನ ಕುರಿತು ಮೊದಲೇ ಕೆಲವು ಎಚ್ಚರಿಕೆ ವಹಿಸುವುದು ಸೂಕ್ತ.

Holi 2022: ಬಣ್ಣದೋಕುಳಿಯಲ್ಲಿ ಕಣ್ಣುಗಳನ್ನು ರಕ್ಷಿಸುವುದು ಹೇಗೆ ?

ಹೋಳಿಯ ರಂಗಿನಲ್ಲಿ ಮೀಯುವ ಮುನ್ನವೇ ಕೂದಲಿನ ಕುರಿತು ಕಾಳಜಿ (Care) ವಹಿಸಿದರೆ ಹೆಚ್ಚಿನ ಹಾನಿಯಾಗದಂತೆ ನೋಡಿಕೊಳ್ಳಬಹುದು. ಚರ್ಮಕ್ಕೆ ಅಥವಾ ಕೂದಲಿಗೆ ಹಾನಿಯಾಗುವುದೆಂದು ವರ್ಷದಲ್ಲಿ ಒಮ್ಮೆ ಮಾತ್ರ ಬರುವ ಹೋಳಿಯ ರಂಗಿನಲ್ಲಿ ಖುಷಿಪಡದೇ ಇರಲು ಸಾಧ್ಯವಿಲ್ಲ. ಅದಕ್ಕಾಗಿ, ಸ್ವಲ್ಪ ಮುನ್ನೆಚ್ಚರಿಕೆ ವಹಿಸಿದರೆ ಯಾವುದೇ ತೊಂದರೆಯಾಗುವುದಿಲ್ಲ. ಕೂದಲು ಹಾಗೂ ಕೂದಲಿನ ಬುಡ ಸೂಕ್ಷ್ಮವಾಗಿರುತ್ತವೆ. ಬಣ್ಣಗಳಲ್ಲಿರುವ ಕೆಮಿಕಲ್ ಕೂದಲಿನ ಬುಡಕ್ಕೆ ಹೋಗಿ ನಂತರದ ದಿನಗಳಲ್ಲಿ ಉದುರುವ ಸಮಸ್ಯೆ ಕಂಡುಬರಬಹುದು. ಇಷ್ಟೇ ಅಲ್ಲ, ಇನ್ನೂ ಹಲವಾರು ಸಮಸ್ಯೆಗಳು ಬಾಧಿಸಬಹುದು. ಹಾಗಾಗದಿರಲು ಇಲ್ಲಿದೆ ಕೆಲವೊಂದು ಟಿಪ್ಸ್. 

• ತುದಿ ಒಡೆದ ಕೂದಲನ್ನು ಕತ್ತರಿಸಿ (Trim)
ಹೋಳಿಯಲ್ಲಿ ಆಡುವ ಮೊದಲು ಮಾಡಬೇಕಾಗಿರುವ ಕೆಲಸವೆಂದರೆ, ತುದಿ ಒಡೆದಿರುವ ಕೂದಲನ್ನು ಸ್ವಲ್ಪ ಕತ್ತರಿಸುವುದು. ಸಿಂಥೆಟಿಕ್ ಬಣ್ಣಗಳು ಕೂದಲನ್ನು ಒಣಗಿಸುತ್ತವೆ, ಕೂದಲಿನ ತೇವಾಂಶ ನಾಶವಾಗುವಂತೆ ಮಾಡುತ್ತವೆ. ಹಾಗೂ ಕೂದಲಿನ ತುದಿಯನ್ನು ಎರಡಾಗಿ ಸೀಳಿಬಿಡುತ್ತವೆ. ಈ ಸಮಸ್ಯೆ ಮೊದಲೇ ಇದ್ದರೆ ಇನ್ನಷ್ಟು ಹೆಚ್ಚಾಗುತ್ತದೆ. ಹೀಗಾಗಿ, ಅಂತಹ ಕೂದಲನ್ನು ಮೊದಲೇ ಕತ್ತರಿಸಿಬಿಡಿ.

Holi 2022: ಹೋಳಿ ಹಬ್ಬದ ದಿನ ಯಾವ ಬಣ್ಣದ ಬಟ್ಟೆ ಧರಿಸಿದ್ರೆ ಗೌರವ ಹೆಚ್ಚುತ್ತೆ?

• ಡೀಪ್ ಕಂಡೀಷನರ್ ಹಾಕಿಕೊಳ್ಳಿ (Deep Conditioner)
ಕೂದಲಿಗೆ ಕಂಡೀಷನರ್ ಹಾಕಿಕೊಳ್ಳುವುದರಿಂದ ಸುರಕ್ಷಿತವಾಗಿರುತ್ತವೆ. ಬಣ್ಣಗಳಲ್ಲಿ ಮೀಯುವ ಒಂದೆರಡು ದಿನ ಮೊದಲೇ ಕೂದಲಿಗೆ ಡೀಪ್ ಕಂಡೀಷನರ್ ಹಾಕಿಕೊಳ್ಳಿ. ಕನಿಷ್ಠ 10 ನಿಮಿಷಗಳ ಕಾಲ ಕಂಡೀಷನರ್‌ನ್ನು ಲೇಪನ ಮಾಡಿಕೊಳ್ಳಿ. ಅದು ಕೂದಲಿನ ಬೇರುಗಳಿಗೆ ಇಳಿಯದಂತೆ ಎಚ್ಚರಿಕೆ ವಹಿಸಿ. ಹತ್ತು ನಿಮಿಷಗಳ ಬಳಿಕ ಕೂದಲನ್ನು ತೊಳೆದುಕೊಳ್ಳಿ. ಇದರಿಂದ ಕೂದಲು ಸದೃಢವಾಗುತ್ತದೆ. 

• ಹೋಳಿ ಆಡುವ ಮೊದಲೇ ತಲೆ ಸ್ನಾನ (Bathing) ಮಾಡಿ
ಹೋಳಿಯ ದಿನದಂದು ಬೆಳಗ್ಗೆ ತಲೆ ಸ್ನಾನ ಮಾಡಿಬಿಡಿ. ಏಕೆಂದರೆ, ತಲೆಯಲ್ಲಿರುವ ಧೂಳು, ಹೊಟ್ಟು ಬಣ್ಣ ಎಲ್ಲಾ ಸೇರುವುದರಿಂದ ಕೂದಲು ದೃಢತೆಯನ್ನು ಕಳೆದುಕೊಳ್ಳುತ್ತದೆ. ಇದರಿಂದ ಕೂದಲು ಹೆಚ್ಚು ಉದುರಲು ಆರಂಭವಾಗುತ್ತದೆ. ಹೀಗಾಗಿ ಹಿಂದಿನ ದಿನ ರಾತ್ರಿ ಕೂದಲಿಗೆ ಚೆನ್ನಾಗಿ ಎಣ್ಣೆ ತಿಕ್ಕಿಕೊಂಡು ತಲೆಸ್ನಾನ ಮಾಡಿಬಿಡಿ. 

• ಎಣ್ಣೆಯ ಮಸಾಜ್ (Oil Massage) ಮಾಡಿಕೊಳ್ಳಿ
ತಲೆ ಸ್ನಾನ ಮಾಡಿಕೊಂಡ ಬಳಿಕ ಕೂದಲನ್ನು ಸ್ವಲ್ಪ ಒಣಗಿಸಿಕೊಂಡು ಮತ್ತೆ ಎಣ್ಣೆಯನ್ನು ಹಾಕಿ ಮಸಾಜ್ ಮಾಡಿಕೊಳ್ಳಿ. ಕೂದಲಿನ ಬುಡದಲ್ಲಿ ಎಣ್ಣೆಯಿದ್ದರೆ ರಂಗಿನ ಅಂಶ ಕೂದಲಿನ ಬುಡಕ್ಕೆ ಇಳಿಯುವುದಿಲ್ಲ. ಎಣ್ಣೆಯಂಶ ಕೂದಲಿನಲ್ಲಿದ್ದರೆ ಬಣ್ಣ ಹೆಚ್ಚಾಗಿ ಅಂಟಿಕೊಳ್ಳುವುದಿಲ್ಲ. ತೆಂಗಿನೆಣ್ಣೆ ಬಳಸುವುದು ಅತಿ ಉಪಯುಕ್ತ. ಆಲಿವ್ ಎಣ್ಣೆಯನ್ನೂ ಬಳಸಬಹುದು. ಹೀಗೆ ಮಾಡಿಕೊಳ್ಳುವುದರಿಂದ ಕೂದಲು ತುಂಡಾಗುವುದಿಲ್ಲ. ಎಣ್ಣೆ ಹಚ್ಚಿಕೊಳ್ಳುವುದರಿಂದ ಕೂದಲಿನ ಮೇಲೆ ಒಂದು ಪರದೆ ನಿರ್ಮಾಣವಾದಂತೆ ಆಗುತ್ತದೆ. ಇದರಿಂದ ಕೂದಲಿಗೆ ಹೆಚ್ಚಿನ ಸುರಕ್ಷತೆ ಸಿಗುತ್ತದೆ.