ವಾಷಿಂಗ್ ಮಷಿನ್‌ನಲ್ಲಿ ಬಟ್ಟೆ ತೊಳೆಯುವಾಗ ಕೆಲವು ತಪ್ಪುಗಳನ್ನು ಮಾಡಬೇಡಿ. ಆದರೆ ಇಲ್ಲಿ ಹೇಳಿರುವ ಟ್ರಿಕ್ಸ್ ಉಪಯೋಗಿಸುವುದರಿಂದ ಬಟ್ಟೆಗಳು ಸ್ವಚ್ಛವಾಗಿ ತೊಳೆಯಲ್ಪಡುತ್ತವೆ ಮತ್ತು ಮಷಿನ್‌ನ ಆಯಸ್ಸು ಹೆಚ್ಚಾಗುತ್ತದೆ.
ದಿನ ನಿತ್ಯ ಬಟ್ಟೆ ತೊಳೆಯದೆ, ಅದನ್ನು ಕೂಡಿಟ್ಟುಕೊಂಡು ರಾಶಿಗಟ್ಟಲೇ ಒಂದೇ ಸಾರಿ ತೊಳೆಯುವುದೆಂದರೆ ಅದು ಶ್ರಮದಾಯಕ ಕೆಲಸವೇ ಸರಿ. ಬಹುತೇಕರಿಗೆ ಬಟ್ಟೆ ತೊಳೆಯುವುದೆಂದರೆ ಅಲರ್ಜಿ. ಇದು ವಾಷಿಂಗ್ ಮಷಿನ್ ಇಲ್ಲದವರ ಪಾಡಾದರೆ, ಇನ್ನು ವಾಷಿಂಗ್ ಮಷಿನ್ ಇರುವವರದ್ದು ಬೇರೆಯದೇ ಸಮಸ್ಯೆ. "ನಮ್ಮ ಮಷಿನ್ ಹೆಚ್ಚು ಬಟ್ಟೆಗಳನ್ನು ತೊಳೆಯಲ್ಲ, ಸೌಂಡ್ ಮಾಡುತ್ತೆ, ಕೊಳೆ ಹೋಗಲ್ಲ, ಇಂತಹ ಬಟ್ಟೆ ಹಾಕೋ ಹಾಗಿಲ್ಲ" ಹೀಗೆ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಹಾಗೆ ನೋಡುವುದಾದರೆ ಹೆಚ್ಚಿನ ಮನೆಗಳಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಬಟ್ಟೆ ಒಗೆಯಬೇಕಾಗುತ್ತದೆ. ಅಂತಹ ಸಮಯದಲ್ಲಿ ಕೆಲವು ಟ್ರಿಕ್ಸ್ ಉಪಯೋಗಿಸಬೇಕಾಗುತ್ತೆ. ಒಂದು ವೇಳೆ ಈ ಕೆಳಕಂಡ ತಪ್ಪುಗಳನ್ನು ಮಾಡಿದ್ರೆ ಖಂಡಿತ ಕೊಳೆ ಹೋಗಲ್ಲ.
ಅಗತ್ಯಕ್ಕಿಂತ ಹೆಚ್ಚು ನೀರು ತುಂಬಿಸಬೇಡಿ
ನಿಮ್ಮ ವಾಷಿಂಗ್ ಮಷಿನ್ ತುಂಬಾ ದೊಡ್ಡದಲ್ಲದಿದ್ದರೆ, ಅದು ಕಡಿಮೆ ನೀರಿನ ಸಾಮರ್ಥ್ಯ ಹೊಂದಿರುತ್ತದೆ ಎಂಬುದನ್ನು ನೀವು ನೆನಪಿನಲ್ಲಿಟ್ಟುಕೊಳ್ಳಬೇಕು. ಹೆಚ್ಚು ನೀರು ಸೇರಿಸಲು ಪ್ರಯತ್ನಿಸಬೇಡಿ. ಈ ಸಮಯದಲ್ಲಿ ಎಲ್ಲಾ ಬಟ್ಟೆಗಳು ಒಳಗೆ ಹೊಂದಿಕೊಳ್ಳುವುದಿಲ್ಲ. ಅದರಲ್ಲಿ ಉಲ್ಲೇಖಿಸಲಾದ ನೀರಿನ ಮಟ್ಟಕ್ಕೆ ಅನುಗುಣವಾಗಿ ನೀರು ತುಂಬಿಸಿ.
ಹೆಚ್ಚು ಭಾರವಾದ ಬಟ್ಟೆಗಳನ್ನು ಒಟ್ಟಿಗೆ ಹಾಕಬೇಡಿ
ನೀವು ತುಂಬಾ ಭಾರವಾದ ಬಟ್ಟೆಗಳನ್ನು ಒಟ್ಟಿಗೆ ಹಾಕಿದರೆ ಇದರಲ್ಲಿ ಹಲವಾರು ಸಣ್ಣ ಬಟ್ಟೆಗಳು ಸಿಗುತ್ತವೆ. ಇಂತಹ ಸಮಯದಲ್ಲಿ ನೀವು ಮಾಡಬೇಕಾದದ್ದು ಏನೆಂದರೆ, ನೀವು ಚಿಕ್ಕ ಹಾಗೂ ಭಾರವಾದ ಬಟ್ಟೆಗಳನ್ನು ಪ್ರತ್ಯೇಕಿಸಿಡಿ. ಚಿಕ್ಕ ಬಟ್ಟೆಯ ಜೊತೆಗೆ ಕೇವಲ ಒಂದು ಅಥವಾ ಎರಡು ಭಾರವಾದ ಬಟ್ಟೆಗಳನ್ನು ಹಾಕಿ. ನೀವು ಬಟ್ಟೆಗಳನ್ನು ಈ ರೀತಿ ವಿಂಗಡಿಸಿದರೆ, ಅವು ಬೇಗನೆ ತೊಳೆಯಲ್ಪಡುತ್ತವೆ. ಕೊಳೆ ಹೋಗುತ್ತವೆ. ಹಾಗೆಯೇ ನೀವು ಪದೇ ಪದೇ ವಾಷಿಂಗ್ ಮಷಿನ್‌ನಲ್ಲಿ ತೊಳೆಯುವ ಪ್ರಮೇಯ ಬರುವುದಿಲ್ಲ. ಆದರೆ ಬಿಳಿ ಬಟ್ಟೆಗಳನ್ನು ಸ್ವಚ್ಛಗೊಳಿಸುವಾಗ ಹೀಗೆ ಮಾಡಬೇಡಿ. ಏಕೆಂದರೆ ಇತರ ಬಟ್ಟೆಗಳ ಬಣ್ಣ ಅವುಗಳಿಗೆ ಅಂಟಿಕೊಳ್ಳಬಹುದು.
ಹೆಚ್ಚು ಡಿಟರ್ಜೆಂಟ್ ಸೇರಿಸಬೇಡಿ
ಹೆಚ್ಚಿನ ಜನರು ಹೆಚ್ಚು ಡಿಟರ್ಜೆಂಟ್ ಬಳಸುವುದರಿಂದ ಬಟ್ಟೆ ಚೆನ್ನಾಗಿ ತೊಳೆಯುತ್ತವೆ, ಕೊಳೆ ಹೋಗುತ್ತದೆ ಅಂದುಕೊಳ್ಳುತ್ತಾರೆ. ಆದರೆ ನಿಮ್ಮದು ಚಿಕ್ಕ ಮಷಿನ್ ಆಗಿದ್ದರೆ ಫೋಮ್ ಮೇಲಕ್ಕೆ ಏರುತ್ತದೆ. ಇದು ಹಲವು ಬಾರಿ ಸಂಭವಿಸಿದಲ್ಲಿ, ಯಂತ್ರದ ಮೇಲ್ಭಾಗದಲ್ಲಿ ಸೋಪಿನ ಪದರವು ರೂಪುಗೊಳ್ಳಲು ಪ್ರಾರಂಭಿಸುತ್ತದೆ. ಇದು ಬಟ್ಟೆ ಒಗೆಯುವಲ್ಲಿ ಅದರ ಕಾರ್ಯಕ್ಷಮತೆಯ ಮೇಲೂ ಪರಿಣಾಮ ಬೀರುತ್ತದೆ.
ಇಂತಹ ಬಟ್ಟೆಗಳನ್ನು ಹಾಕಬೇಡಿ
ಮೊಂಡುತನದ ಕಲೆಗಳಿರುವ ಬಟ್ಟೆಗಳನ್ನು ತೊಳೆಯಲು ವಾಷಿಂಗ್ ಮಷಿನ್ ಉತ್ತಮವಾಗಿದೆ. ಆದರೆ ಎಲ್ಲಾ ರೀತಿಯ ಬಟ್ಟೆಗಳನ್ನು ಮಷಿನ್‌ನಲ್ಲಿ ತೊಳೆಯುವುದು ಸರಿಯಲ್ಲ. ಕೆಲವು ಬಟ್ಟೆಗಳನ್ನು ಕೈಯಿಂದ ತೊಳೆಯುವುದು ಉತ್ತಮ, ಇಲ್ಲದಿದ್ದರೆ ಸಮಯ ಮತ್ತು ಹಣ ಎರಡೂ ವ್ಯರ್ಥವಾಗಬಹುದು. ಮಷಿನ್‌ನಲ್ಲಿ ಲೇಸ್ ಉಡುಪುಗಳು, ಫ್ಯಾನ್ಸಿ ಬ್ರಾ, ಉಣ್ಣೆಯ ಟೋಪಿ, ಮುತ್ತಿನ ಉಡುಪುಗಳು, ರೇನ್ ಕೋಟ್ ಇಂತಹವುಗಳನ್ನು ಹಾಕಬೇಡಿ.
ಏನು ಮಾಡಬಾರದು?
ವಾಷಿಂಗ್ ಮಷಿನ್‌ನಲ್ಲಿ ಬಟ್ಟೆ ಒಗೆಯುವಾಗ, ನೀವು ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.
* ನಿಮ್ಮ ಜೀನ್ಸ್ ಅಥವಾ ಶರ್ಟ್ ಜೇಬಿನಲ್ಲಿ ಏನನ್ನೂ ಬಿಡಬೇಡಿ. ಪ್ಲಾಸ್ಟಿಕ್, ಟಿಶ್ಯೂಗಳು, ಕೀಗಳು, ನಾಣ್ಯಗಳು ಇತ್ಯಾದಿಗಳು ತೊಳೆಯುವ ಯಂತ್ರವನ್ನು ಹಾನಿಗೊಳಿಸಬಹುದು.
* ಅಗತ್ಯಕ್ಕಿಂತ ಹೆಚ್ಚು ಬಟ್ಟೆ ತುಂಬಬೇಡಿ. ಮೇಲೆ ತಿಳಿಸಿದ ತಂತ್ರಗಳನ್ನು ಬಳಸಿಕೊಂಡು ನೀವು ಹೊರೆ ಕಡಿಮೆ ಮಾಡಬಹುದು, ಆದರೆ ಇನ್ನೂ, ಅದರ ಸಾಮರ್ಥ್ಯಕ್ಕಿಂತ ಹೆಚ್ಚಿನ ಬಟ್ಟೆಗಳನ್ನು ತುಂಬಬೇಡಿ.
* ಒದ್ದೆಯಾದ ಬಟ್ಟೆಗಳನ್ನು ವಾಷಿಂಗ್ ಮಷಿನ್‌ನಲ್ಲಿ ದೀರ್ಘಕಾಲ ಬಿಡಬೇಡಿ.
* ಗಂಭೀರ ಸಮಸ್ಯೆ ಇದ್ದರೆ ನೀವು ಮೆಕ್ಯಾನಿಕ್ ಅನ್ನು ಕರೆಯಬೇಕು.
* ನೀವು ಬಟ್ಟೆಗಳ ಮೇಲೆ ನೇರವಾಗಿ ಫ್ಯಾಬ್ರಿಕ್ ಕಂಡಿಷನರ್ ಅನ್ನು ಹಚ್ಚಿ, ಡಿಲ್ಯೂಟ್ ಮಾಡದಿದ್ದರೆ ಅದು ಬಟ್ಟೆಯ ನಾರುಗಳಿಗೆ ಹಾನಿಯಾಗುವ ಸಾಧ್ಯತೆ ಹೆಚ್ಚು.
