PCOD ಸಮಸ್ಯೆ ಇದ್ರೆ ಮಕ್ಕಳಾಗಲ್ವಾ?
ಪಿಸಿಓಡಿ ಅಥವಾ ಪಿಸಿಓಎಸ್ ಅಂದರೆ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ನಗರ ಪ್ರದೇಶದ ಬಹುತೇಕ ಯುವತಿಯರನ್ನು ಕಾಡುತ್ತಿರುವ ಸಮಸ್ಯೆ. ಆದರೆ ಹೆಚ್ಚಿನವರಿಗೆ ಈ ಸಮಸ್ಯೆ ಬಗ್ಗೆ ಇರುವ ತಿಳುವಳಿಕೆಗಿಂತ ತಪ್ಪು ಕಲ್ಪನೆಯೇ ಹೆಚ್ಚಿದೆ. ಹಾಗಿದ್ದರೆ ಪಿಸಿಓಎಸ್ ಬಗೆಗಿನ ವಾಸ್ತವಾಂಶಗಳೇನು..
ಡಾ. ಆರತಿ ಭರತ್
ನಮ್ಮ ದೇಶದಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯವುಳ್ಳು ಐದು ಮಹಿಳೆಯರ ಪೈಕಿ ಒಬ್ಬರು ಪಿಸಿಒಎಸ್ ಅಥವಾ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್‌ನಿಂದ ಬಳಲುತ್ತಿದ್ದಾರೆ. ಹಾರ್ಮೋನುಗಳಲ್ಲಾಗುವ ಅಸಮತೋಲನ ಇದರ ಲಕ್ಷಣ. ಆಂಡ್ರೋಜನ್ಸ್ ಅಥವಾ ಪುರುಷ ಹಾರ್ಮೋನುಗಳು ಅತ್ಯಧಿಕ ಮಟ್ಟಗಳಲ್ಲಿ ಇದ್ದು, ಅಂಡಾಶಯಗಳಲ್ಲಿ ಸಣ್ಣ ಸಣ್ಣ ಗುಳ್ಳೆ(ಸಿಸ್ಟ್)ಗಳು ಏರ್ಪಡುತ್ತವೆ. ಇದರಿಂದ ಅಸಮರ್ಪಕ ಋತುಸ್ರಾವ, ಗರ್ಭಪಾತ ಅಥವಾ ಮಕ್ಕಳಾಗಲು ಸಮಸ್ಯೆಯಾಗುವುದು, ಮೊಡವೆಗಳು, ಅನಗತ್ಯ ಕೂದಲು ಬೆಳವಣಿಗೆ, ಸ್ಥೂಲಕಾಯ, ಅಂಡಾಶಯದಲ್ಲಿ ಗುಳ್ಳೆಗಳು..ಇತ್ಯಾದಿ ಸಮಸ್ಯೆಗಳಾಗುತ್ತದೆ.
ಈ ಸಮಸ್ಯೆಯ ಬಗ್ಗೆ ಹೆಚ್ಚು ತಪ್ಪು ಕಲ್ಪನೆಗಳಿವೆ. ಆ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ನಮ್ಮದು.
ಪಿಸಿಒಡಿ ಸಮಸ್ಯೆ ಮನೆಮದ್ದಿನಿಂದ ವಾಸಿಯಾಗುತ್ತಾ?
1 ತಪ್ಪು ಕಲ್ಪನೆ: ಪಿಸಿಒಎಸ್ ಇರುವ ಹೆಣ್ಣುಮಕ್ಕಳು ಮಕ್ಕಳನ್ನು ಹೆರಲಾರರು
ಪಿಸಿಒಎಸ್ ಸಮಸ್ಯೆ ಇರುವವರು ಗರ್ಭ ಧರಿಸಲು ಬಹಳ ಕಷ್ಟಪಡುತ್ತಾರೆ. ಗರ್ಭಿಣಿಯಾದರೂ ಗರ್ಭಧಾರಣೆಯ ಸಮಯ ತೊಂದರೆಗಳನ್ನು ಅನುಭವಿಸುತ್ತಾರೆ ಎಂಬುದು ನಿಜ. ಆದರೆ ಅವರು ಮಕ್ಕಳನ್ನು ಹೆರುವುದು ಸಾಧ್ಯವೇ ಇಲ್ಲ ಎಂದು ಇದರರ್ಥವಲ್ಲ. ಪರಿಸ್ಥಿತಿಯನ್ನು ನಿರ್ವಹಿಸುವ ಮೂಲಕ ಪಿಸಿಒಎಸ್ ಇರುವ ಮಹಿಳೆಯರು ಗರ್ಭಧರಿಸಿ ಆರೋಗ್ಯಕರವಾದ ಮಕ್ಕಳನ್ನು ಹೆರಬಹುದು. ಯಾವುದೇ ಚಿಕಿತ್ಸೆಯ ನೆರವಿಲ್ಲದೇ ಸಹಜವಾಗಿಯೇ ಗರ್ಭಧರಿಸಬಹುದು. ಇದಕ್ಕಾಗಿ ಆಹಾರಕ್ರಮ ಮತ್ತು ಜೀವನಶೈಲಿಯನ್ನು ಬದಲಾಯಿಸಿಕೊಳ್ಳಬೇಕು. ಆ ಮೂಲಕ ಅಂಡಾಣು ಉತ್ಪತ್ತಿಯ ಸಂಭಾವ್ಯತೆಯನ್ನು ಹೆಚ್ಚಿಸಿಕೊಳ್ಳಬೇಕು. ಉತ್ತಮ ಆಹಾರ ಕ್ರಮ, ನಿಯಮಿತ ವ್ಯಾಯಾಮದಿಂದ ದೇಹ ತೂಕದ ಶೇ.10ರಷ್ಟನ್ನಾದರೂ ಕಳೆದುಕೊಂಡಲ್ಲಿ ಸಂತಾನೋತ್ಪತ್ತಿಯ ಸಾಧ್ಯತೆ ಹೆಚ್ಚಾಗುತ್ತದೆ.
2 ತಪ್ಪು ಕಲ್ಪನೆ: ಪಿಸಿಒಎಸ್ ಇದ್ದರೆ ತೂಕ ಕಳೆದುಕೊಳ್ಳುವುದು ಅಸಾಧ್ಯ.
ಪಿಸಿಓಎಸ್ ಸಮಸ್ಯೆ ಇರುವವರು ತೂಕ ಇಳಿಸುವುದು ಕಷ್ಟ. ಆದರೆ ಅಸಾಧ್ಯವಲ್ಲ. ಪ್ರೊಟೀನ್, ನಾರಿನಂಶ ಇರುವ ಆಹಾರ ಹೆಚ್ಚು ಸೇವಿಸಬೇಕು. ಕಾರ್ಬೊಹೈಡ್ರೇಟ್ ಸೇವನೆ ಕಡಿಮೆ ಮಾಡಬೇಕು. ಧ್ಯಾನ, ಯೋಗದ ಮೂಲಕ ಒತ್ತಡ ಕಡಿಮೆ ಮಾಡಿ ರಾತ್ರಿ ಚೆನ್ನಾಗಿ ನಿದ್ರಿಸಿದರೆ ಕಾರ್ಟಿಸೋಲ್ ಮಟ್ಟ ಕಡಿಮೆಯಾಗಿ ತೂಕ ಇಳಿಯುತ್ತದೆ. ವೈಟ್ ಟ್ರೈನಿಂಗ್ ಸಹಕಾರಿ. ಇದರಿಂದ ಪಿಸಿಒಎಸ್‌ನ ದೊಡ್ಡ ಶತ್ರುವಾದ ಹೊಟ್ಟೆಯ ಕೊಬ್ಬು ಕಡಿಮೆಯಾಗುತ್ತದೆ.
3. ತಪ್ಪು ಕಲ್ಪನೆ: ಗರ್ಭ ನಿರೋಧಕ ಸೇವನೆಯಿಂದ ಋತುಚಕ್ರ ನಿಯಂತ್ರಣವೇ ಹತೋಟಿಯ ಏಕೈಕ ವಿಧಾನ
ಅಸಮರ್ಪಕ ಋತುಚಕ್ರ ಹೊಂದಿರುವ ಪಿಸಿಒಎಸ್ ಇರುವ ಮಹಿಳೆಯರಿಗೆ ಅನೇಕ ವೇಳೆ ಸಂತಾನ ನಿಯಂತ್ರಣ ಮಾತ್ರೆಗಳನ್ನು ನೀಡಲಾಗುತ್ತದೆ. ಇವು ಪೀರಿಯೆಡ್ಸ್‌ಅನ್ನು ನಿಯಮಿತಗೊಳಿಸಿ ಮೊಡವೆ ಮತ್ತು ಕೂದಲಿನ ಬೆಳವಣಿಗೆಯನ್ನು ಕಡಿಮೆ ಮಾಡುತ್ತವೆ. ಆದರೂ ಇವು ಶಾಶ್ವತ ಪರಿಹಾರಗಳಲ್ಲ. ಕೆಲವು ಮಹಿಳೆಯರಿಗೆ ಇದರ ಜೊತೆಗೇ ಇನ್ನೊಂದು ಚಿಕಿತ್ಸೆಯೂ ಬೇಕಾಗುತ್ತದೆ. ಕೊನೆಗೂ ಇಂಥವರ ಸಹಾಯಕ್ಕೆ ಬರುವುದು ಆಹಾರಕ್ರಮ ಮತ್ತು ಜೀವನಶೈಲಿ ಬದಲಾವಣೆಯೇ.
ಪೀರಿಯಡ್ಸ್ ಮಿಸ್ ಆಗೋದೇ ಈ 5 ಕಾರಣಗಳಿಗೆ!
4 ತಪ್ಪು ಕಲ್ಪನೆ:
ಇದು ತೆಳ್ಳಗಿರುವ ಮಹಿಳೆಯರಿಗೆ ಬರುವುದಿಲ್ಲ ಅನೇಕ ವೇಳೆ ಹೆಚ್ಚು ತೂಕ ಇರುವ ಮಹಿಳೆಯರಿಗೆ ಪಿಸಿಓಎಸ್ ಸಮಸ್ಯೆ ಬರುತ್ತದೆ. ಆದರೂ ಇದರಿಂದ ಬಳಲುವವರಲ್ಲಿ ಶೇ.20ರಷ್ಟು ಮಂದಿ ತೆಳ್ಳಗಿರುತ್ತಾರೆ. ಅತ್ಯಂತ ನೋವಿನ ಅಸಮರ್ಪಕ ಋತುಚಕ್ರ ಅನುಭವಿಸುತ್ತಾರೆ. ಅನಗತ್ಯ ಕೂದಲ ಬೆಳವಣಿಗೆ, ಮೊಡವೆ, ಮಧುಮೇಹದಂಥಾ ಸಮಸ್ಯೆ ಇರುತ್ತದೆ.
5 ತಪ್ಪು ಕಲ್ಪನೆ :
ಪಿಸಿಒಎಸ್‌ಅನ್ನು ಗುಣಪಡಿಸಬಹುದು ಪರಿಸ್ಥಿತಿಯನ್ನು ಚಿಕಿತ್ಸೆಯಿಂದ ನಿರ್ವಹಿಸಬಹುದೇ ಹೊರತು ಗುಣಪಡಿಸಲಾಗದು. ಅಸಮರ್ಪಕ ಋತುಚಕ್ರ, ಮೊಡವೆ ಮತ್ತು ಕೂದಲು ಬೆಳವಣಿಗೆಯ ಲಕ್ಷಣಗಳಿಗೆ ಚಿಕಿತ್ಸೆ ನೀಡಲು ಔಷಧಗಳಿವೆ. ಗರ್ಭ ಧರಿಸಲು ಕಷ್ಟವಾದರೆ ಫಲವತ್ತತೆಗೆ ಚಿಕಿತ್ಸೆಗಳಿವೆ. ಆಹಾರ ನಿಯಂತ್ರಣ ಮತ್ತು ನಿಯಮಿತ ವ್ಯಾಯಾಮ ಮಾಡಬೇಕು. ಪಿಸಿಓಎಸ್ ಇತ್ತೀಚೆಗೆ ಸಾಮಾನ್ಯವಾಗುತ್ತಿದೆ. ಹಾಗಾಗಿ ಪೀರಿಯೆಡ್ಸ್ ಬದಲಾವಣೆ ಗಮನಿಸುವುದು, ಈ ಸಮಸ್ಯೆ ಪತ್ತೆ ಹಚ್ಚಿ ಆರಂಭದಲ್ಲೇ ಚಿಕಿತ್ಸೆ ನೀಡುವುದು ಮುಖ್ಯ.