ಬೆಂಗಳೂರು (ಆ. 13): ಪಾಲಿಸ್ಟಿಕ್ ಓವೇರಿಯನ್ ಡಿಸೀಸ್ (ಪಿ.ಸಿ.ಓ.ಡಿ.) ಇಂದಿನ ಯುವತಿಯರನ್ನು ಕಾಡುತ್ತಿರುವ ದೀರ್ಘಕಾಲಿಕ ಸಮಸ್ಯೆ. ಅದಕ್ಕೆ ಮನೆಯಲ್ಲೇ ಪರಿಹಾರ ಕಂಡುಕೊಳ್ಳಬಹುದು ಅನ್ನೋದು ಈಗ ಸಾಬೀತಾಗಿದೆ.

ಪಿಸಿಓಡಿ ಬಗ್ಗೆ ಗೊತ್ತಾ?

ಸಾಮಾನ್ಯವಾಗಿ ಅಂಡಕೋಶದಿಂದ ಅಂಡಾಣು ಬಿಡುಗಡೆಯಾಗುವುದು ಪೀರಿಯೆಡ್ಸ್ ಬಳಿಕದ 13-14 ನೇ ದಿನಗಳಲ್ಲಿ. ಆದರೆ ಪಿ.ಸಿ.ಓ.ಡಿ. ತೊಂದರೆ ಇರುವವರಲ್ಲಿ ಬಿಡುಗಡೆ ತಡವಾಗಿ ಆಗುತ್ತದೆ. ಅಥವಾ ಅಂಡಾಶಯ ಬಿಡುಗಡೆಯಾಗದೆ ಮುಟ್ಟು ಉಂಟಾಗುತ್ತದೆ. ಕಡಿಮೆ ಸ್ರಾವ, ಮುಖದಲ್ಲಿ ಕೂದಲು ಬೆಳೆಯುವಿಕೆ, ತಲೆಕೂದಲು ಉದುರುವುದು, ತೂಕ ಹೆಚ್ಚಳ, ಗರ್ಭಧಾರಣೆಗೆ ತೊಡಕು, ಇವೇ ಮೊದಲಾದವು ಪಿ.ಸಿ.ಓ.ಡಿ.ಯ ಸಾಮಾನ್ಯ ಲಕ್ಷಣಗಳು. 

ಏನೆಲ್ಲ ಔಷಧ?

ದಾಲ್ಚಿನ್ನಿ ಪ್ರಯೋಗ:

1 ಕಪ್ ಬೆಚ್ಚಗಿನ ನೀರಿಗೆ 1 ಟೀ ಸ್ಪೂನ್ ಚಕ್ಕೆ ಅಥವಾ ದಾಲ್ಚಿನ್ನಿ ಪುಡಿ ಬೆರೆಸಿ ನಿತ್ಯ ಸೇವಿಸಬೇಕು. ಇದರಿಂದ ಮುಟ್ಟು ಕ್ರಮ ಪ್ರಕಾರವಾಗಿ ಉಂಟಾಗಿ ಅಂಡಕೋಶದ ನೀರ್ಗುಳ್ಳೆ ಕರಗುತ್ತದೆ. ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ನಡೆದ
ಸಂಶೋಧನೆಯಿಂದ ಇದು ಕಂಡು ಬಂದ ಪ್ರಯೋಗವಾಗಿದೆ. ಅಂತೆಯೇ ಆಯುರ್ವೇದೀಯವಾಗಿ, ಜಾನಪದೀಯವಾಗಿಯೂ ಬಳಕೆಯಲ್ಲಿದೆ.

ಅಗಸೆ ಬೀಜ:

ಪುರುಷ ಹಾರ್ಮೋನ್‌ಗಳ ಸ್ರಾವವನ್ನು ಕಡಿಮೆ ಮಾಡಿ, ಪಿಸಿಓಡಿಯಲ್ಲಿ ಉಂಟಾಗುವ ಹಾರ್ಮೋನ್ ವ್ಯತ್ಯಯ ಸರಿಪಡಿಸಬಹುದು. ಆಗಸೆ ಬೀಜವನ್ನು (1-2 ಚಮಚ) ಅರೆದು ನೀರಿನಲ್ಲಿ ಬೆರೆಸಿ (1 ಕಪ್) ನಿತ್ಯ 1-2 ಬಾರಿ ನೀರಲ್ಲಿ ಬೆರೆಸಿ (1 ಕಪ್) ನಿತ್ಯ 1-2 ಬಾರಿ ಸೇವಿಸಿದರೆ ಪರಿಣಾಮಕಾರಿ. ಇದರಿಂದ ತೂಕವೂ ಕಡಿಮೆಯಾಗುತ್ತದೆ.

ಮೆಂತ್ಯೆ ಪ್ರಯೋಗ:

3 ಚಮಚ ಮೆಂತ್ಯೆಯನ್ನು ಆರು ಗಂಟೆ ಮೊದಲು ನೀರಲ್ಲಿ ನೆನೆಸಿಡಬೇಕು. 1 ಚಮಚದಂತೆ ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಆಹಾರಕ್ಕೆ ಮೊದಲು ಅರೆದು ಚಿಟಿಕೆ ಬೆಲ್ಲ ಅಥವಾ ಉಪ್ಪು ಬೆರೆಸಿ ನಿತ್ಯ ಸೇವಿಸಬೇಕು. ಮೆಂತ್ಯೆ ಸೊಪ್ಪು, ಮೊಳಕೆ ಬರಿಸಿದ ಮೆಂತ್ಯೆ ಕಾಳಿನ ಕೋಸುಂಬರಿ ಆಹಾರದಲ್ಲಿ ನಿತ್ಯ ಬಳಸಿದರೆ ಪರಿಣಾಮಕಾರಿ.

 ಜ್ಯೇಷ್ಠಮಧು (ಅತಿಮಧುರ) ಕಷಾಯ:

ಜ್ಯೇಷ್ಠ ಮಧು ಬೆರೆಸಿ ತುಂಡುಗಳನ್ನು 1 ಚಮಚದಲ್ಲಿಟ್ಟು ತೆಗೆದುಕೊಂಡು 1 ಕಪ್ ಬಿಸಿ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಬೇಕು. 10 ನಿಮಿಷಗಳ ಬಳಿಕ ಆರಿಸಿ ಸೋಸಿ ಸೇವಿಸಿದರೆ ಅಂಡಕೋಶದ ನೀರ್ಗುಳ್ಳೆ ಶಮನವಾಗುತ್ತದೆ. ದಿನಕ್ಕೆ 2-3 ಬಾರಿ ನಿತ್ಯ ೧-೩ ತಿಂಗಳು ಸೇವನೆ ಅವಶ್ಯ.ಜ್ಯೇಷ್ಠಮಧು ಬೇರು ಗ್ರಂಧಿಗೆ ಅಂಗಡಿ ಅಥವಾ ಆರ್ಗ್ಯಾನಿಕ್ ಶಾಪ್‌ಗಳಲ್ಲಿ ದೊರೆಯುತ್ತದೆ.

ತುಳಸೀ ಪ್ರಯೋಗ:

ನಿತ್ಯ 8-10 ತುಳಸೀ ಎಲೆಗಳನ್ನು ಸೇವಿಸಿದರೆ ಪರಿಣಾಮಕಾರಿ. ಅಥವಾ ತುಳಸೀ ಚಹಾ ಸೇವನೆಯೂ ಹಿತಕರ.

ತುಳಸೀ ಚಹಾ: 1 ಕಪ್ ನೀರಿಗೆ 10-12 ತುಳಸೀ ಎಲೆಗಳನ್ನು ಹಾಕಿ ಚೆನ್ನಾಗಿ ಕುದಿಸಿ ಸೋಸಿ ಸ್ವಲ್ಪ ಬೆಲ್ಲ ಬೆರೆಸಿ ಸೇವಿಸಬೇಕು. ನಿತ್ಯ ೧ ಬಾರಿ ಸೇವನೆ ಹಿತಕರ.

ತಾಜಾ ಕೊಬ್ಬರಿ ಎಣ್ಣೆ ಪ್ರಯೋಗ: 1-2 ಚಮಚ ಶುದ್ಧ ಕೊಬ್ಬರಿ ಎಣ್ಣೆಯನ್ನು ಬಿಸಿ ನೀರಿನಲ್ಲಿ ನಿತ್ಯ ಬೆಳಿಗ್ಗೆ ಸೇವಿಸಬೇಕು.

ಘೃತಕುಮಾರೀ ಅಥವಾ ಎಲೋವೇರಾ ಜ್ಯೂಸ್:

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಎಲೋವೇರಾ ಜ್ಯೂಸ್ ಸೇವಿಸಿದರೆ ಹಿತಕರ. ೧ ಕಪ್ ನೀರಲ್ಲಿ 1-2 ಚಮಚ ಎಲೋವೇರಾ ಎಲೆಯ ತಿರುಳನ್ನು ಬೆರೆಸಿ ಕಲಕಿ ಸೇವಿಸಬೇಕು. ಇದಕ್ಕೆ ನೆಲ್ಲಿಕಾಯಿ ರಸ ಸೇರಿಸಿದರೆ (2 ಚಮಚ) ಶೀಘ್ರ ಪರಿಣಾಮಕಾರಿ.

ಸೋಂಪು ಕಷಾಯ: 1 ಕಪ್ ನೀರಿಗೆ 2 ಚಮಚ ಸೋಂಪು ರಾತ್ರಿ ನೆನೆಸಿಡಬೇಕು.(2 ನಿಮಿಷ ಕುದಿಸಬಹುದು) ಅಥವಾ ಉಗುರು ಬೆಚ್ಚಗಿನ ನೀರಲ್ಲಿ ನೆನೆಸಿಡಬಹುದು. ಬೆಳಿಗ್ಗೆ ಸೋಸಿ, ಸೋಂಪಿನ ಶೀತಲ ಜಲ ಸೇವಿಸಬೇಕು.

ಜೀರಿಗೆಕಷಾಯ: 1 ಕಪ್ ಬಿಸಿ ನೀರಿಗೆ ಒಂದೂವರೆ ಚಮಚ ಜೀರಿಗೆ ಪುಡಿ ಬೆರೆಸಿ ಕಲಕಿ ಸೇವಿಸಬೇಕು.

ಕಪ್ಪು ಎಳ್ಳಿನ ಲಾಡು: ಕಪ್ಪು ಎಳ್ಳಿಗೆ ಬೆಲ್ಲ ಸೇರಿಸಿ ಲಾಡು ತಯಾರಿಸಿ ೨-೩ ಲಾಡು ನಿತ್ಯ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಅಪಥ್ಯ ಆಹಾರವೆಂದರೆ ಅಧಿಕ ತೈಲಯುಕ್ತ ಸಿಹಿ ಮತ್ತು ಎಣ್ಣೆಯಲ್ಲಿ ಕರಿದ ತಿಂಡಿ ತಿನಿಸುಗಳು, ಜಂಕ್‌ಫುಡ್ ಮೊದಲಾದವು.

-ಅನುರಾಧಾ ಕಾಮತ್