ಸಂಬಂಧಿಕರ ಮದುವೆ ಶಾಪಿಂಗ್ಗೆ 5 ತಿಂಗಳ ಮಗಳನ್ನು ಎತ್ತಿಕೊಂಡು ಹೋಗಬೇಕಾದಂತಹ ಅನಿವಾರ್ಯತೆ ಎದುರಾಗಿತ್ತು. ಮದುವೆ ಶಾಪಿಂಗ್ ಎಂದರೆ ಕೇಳಬೇಕೆ ನಾಲ್ಕಾರು ಸೀರೆ ಅಂಗಡಿಗಳನ್ನು ಸುತ್ತಾಡುವಾಗ ಗಂಟೆ ಸರಿದಿದ್ದೆ ತಿಳಿಯಲಿಲ್ಲ. ಶಾಪಿಂಗ್ ಮಾಡಿದ್ದಕ್ಕಿಂತ ಗಂಟೆಗೊಂದು ಬಾರಿ ರಚ್ಚೆ ಹಿಡಿದು ಅಳುವ ಮಗುವಿಗೆ ಹಾಲುಣಿಸಲು ಖಾಸಗಿಯಾದ ಜಾಗವೊಂದನ್ನು ಹುಡುಕುವುದರಲ್ಲೇ ಇಡೀ ದಿನ ಕಳೆದು ಹೋಗಿತ್ತು. ಎಲ್ಲ ಸೀರೆ ಮಳಿಗೆ, ಡ್ರೆಸ್ ಸೆಂಟರ್ಗಳಲ್ಲಿ ಹಾಲುಣಿಸಲು ನೆರವಿಗೆ ಬಂದಿದ್ದು ಡ್ರೆಸ್ಸಿಂಗ್ ರೂಮ್. ಎಲ್ಲರ ಬಳಿ ಈ ಬಗ್ಗೆ ವಿಚಾರಿಸಿ ಮಗುವಿಗೆ ಹಾಲುಣಿಸುವ ವೇಳೆಗೆ ಪಾಪಾ ಅದು ಅತ್ತು ಅತ್ತು ಸುಸ್ತಾಗಿರುತ್ತಿತ್ತು. ಇದು ನನ್ನೊಬ್ಬಳ ಕಥೆಯಲ್ಲ, ಪುಟ್ಟ ಮಗುವಿನೊಂದಿಗೆ ಮನೆಯಿಂದ ಹೊರಗೆ ಕಾಲಿಡುವ ಪ್ರತಿ ತಾಯಿಯೂ ಇಂಥ ಸಮಸ್ಯೆಯನ್ನು ಅನುಭವಿಸಿರುತ್ತಾಳೆ. 

ತಾಯಿ ಎದೆಹಾಲುಣಿಸು: ಭವಿಷ್ಯದ ಭಾರತ ನಿನ್ನ ಕೂಸು!

ಸಾರ್ವಜನಿಕ ಸ್ಥಳಗಳಲ್ಲಿ ಮಗುವಿಗೆ ಹಾಲುಣಿಸುವುದು ಮಹಿಳೆಗೆ ದೊಡ್ಡ ಸವಾಲೇ ಸರಿ. ಇದು ಸಾರ್ವಜನಿಕ ಸ್ಥಳಗಳಲ್ಲಿ ಶೌಚಾಲಯವಿಲ್ಲದಿದ್ದರೆ ಅನುಭವಿಸುವ ಹಿಂಸೆಗಿಂತ ಕಡಿಮೆಯೇನಲ್ಲ ಬಿಡಿ. ಅಂದಹಾಗೇ ಇದೆಲ್ಲ ಏಕೆ ನೆನಪಾಯಿತ್ತಪ್ಪ ಎಂದರೆ ಐಜ್ವಾಲ್ನಲ್ಲಿ ಆಟದ ನಡುವೆ ತನ್ನ ಏಳು ತಿಂಗಳ ಮಗುವಿಗೆ ಎದೆಹಾಲುಣಿಸುತ್ತಿರುವ ಮಿಜೋರಾಂನ ವಾಲಿಬಾಲ್ ಆಟಗಾರ್ತಿ ಲಾಲ್ವೆಂಟ್ಲುವಾಂಗಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿದೆ. ಆಕೆಯ ತಾಯಿ ಪ್ರೀತಿಗೆ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಕೆಲವೊಂದು ಸಂದರ್ಭಗಳಲ್ಲಿ ತಾಯಿ ತನ್ನ ಮಗುವಿಗೆ ಸಾರ್ವಜನಿಕವಾಗಿ ಎದೆಹಾಲುಣಿಸುವುದು ಅನಿವಾರ್ಯ ಎಂಬುದನ್ನು ಈ ಫೋಟೋ ಮತ್ತೊಮ್ಮೆ ಸಾಬೀತುಪಡಿಸಿದೆ. 
  
ಪಾಶ್ಚಾತ್ಯ ರಾಷ್ಟ್ರಗಳಲ್ಲಿ ತಾಯಿ ತನ್ನ ಮಗುವಿಗೆ ಸಾರ್ವಜನಿಕವಾಗಿ ಸ್ತನಪಾನ ಮಾಡುವುದು ನೈಸರ್ಗಿಕ ಹಾಗೂ ಸಹಜ ಪ್ರಕ್ರಿಯೆ ಆಗಿದ್ದರೂ ಭಾರತದಲ್ಲಿ ಇನ್ನೂ ಅಂಥ ವಾತಾವರಣ ಸೃಷ್ಟಿಯಾಗಿಲ್ಲ. ಈ ಹಿಂದೆ ಗೃಹಲಕ್ಷ್ಮೀ ಮ್ಯಾಗಜಿನ್ನ ಮುಖಪುಟದಲ್ಲಿ ಮಲಯಾಳಿ ಬರಹಗಾರ್ತಿ ಗಿಲು ಜೋಸೆಫ್ ಮಗುವಿಗೆ ಎದೆಹಾಲುಣಿಸುತ್ತಿರುವ ಫೋಟೋ ಪ್ರಕಟವಾಗಿತ್ತು, ಅದು ಕೂಡ ವೈರಲ್ ಆಗುವ ಜತೆಗೆ ಸಾಕಷ್ಟು ಪರ-ವಿರೋಧ ಚರ್ಚೆಗೆ ಗ್ರಾಸವಾಗಿತ್ತು. ಸಾರ್ವಜನಿಕವಾಗಿ ತಾಯಿ ಮಗುವಿಗೆ ಸ್ತನಪಾನ ಮಾಡುವುದನ್ನು ಲೈಂಗಿಕತೆಯ ದೃಷ್ಟಿಕೋನದಿಂದ ಹೊರಗಿಡಬೇಕು ಎಂಬ ಉದ್ದೇಶದಿಂದ ನಮ್ಮ ದೇಶದಲ್ಲಿ ಕೈಗೊಂಡ ಎಲ್ಲ ಪ್ರಗತಿಪರ ಪ್ರಯತ್ನಗಳು ಬಹುತೇಕ ಸಂದರ್ಭಗಳಲ್ಲಿ ಟೀಕೆಗೆ ಗುರಿಯಾಗಿವೆ. 

ಎದೆ ಹಾಲುಣಿಸುವುದರಲ್ಲಿ ತಂದೆಯ ಪಾತ್ರವೂ ಇದೆ - ತಿಳಿದಿರಲಿ..!

ಇನ್ನು ಭಾರತೀಯ ಮಹಿಳೆಯರು ಕೂಡ ಸಾರ್ವಜನಿಕವಾಗಿ ಸ್ತನಪಾನ ಮಾಡಲು ಹಿಂಜರಿಯುತ್ತಾರೆ.  ಬಸ್, ಟ್ರೈನ್ ಸೇರಿದಂತೆ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವಾಗ ಅಥವಾ ದೇವಾಲಯ, ಹೋಟೆಲ್, ಶಾಪಿಂಗ್ ಮಾಲ್ಗಳಿಗೆ ಭೇಟಿ ನೀಡಬೇಕಾದ ಸಂದರ್ಭಗಳಲ್ಲಿ ಹಸಿವಿನಿಂದ ರಚ್ಚೆ ಹಿಡಿದು ಅಳುವ ಪುಟ್ಟ ಕಂದಮ್ಮಗಳನ್ನು ಸುಮ್ಮನಿರಿಸಲು ತಾಯಂದಿರು ಎದೆಹಾಲುಣಿಸುವುದು ಅನಿವಾರ್ಯ. ಆದರೆ, ಹಾಲುಣಿಸುವಾಗ ಯಾರಾದರೂ ನೋಡಿದರೆ ಎಂಬ ಭಯ, ಮುಜುಗರ. ಇದೇ ಕಾರಣಕ್ಕೆ ಶೌಚಾಲಯವಾದರೂ ಸರಿಯೇ ಯಾರೂ ನೋಡದಂತಹ ಸ್ಥಳವೊಂದು ಸಿಕ್ಕರೆ ಸಾಕು ಎಂಬ ಭಾವನೆ ತಾಯಂದಿರಲ್ಲಿರುತ್ತದೆ. ಅಷ್ಟೇ ಅಲ್ಲ, ಎಷ್ಟೋ ಅಮ್ಮಂದಿರು ಇದೇ ಕಾರಣಕ್ಕೆ ಮಗು ದೊಡ್ಡದಾಗುವ ತನಕ ಮನೆಯಿಂದ ಹೊರಗೆ ಕಾಲಿಡುವುದೇ ಇಲ್ಲ. 

ಆಗಸ್ಟ್ನಲ್ಲಿ ಸ್ತನಪಾನ ಸಪ್ತಾಹದ ಅಂಗವಾಗಿ ಮಾಮ್ಸ್ಪ್ರೆಸೋ ಡಾಟ್ ಕಾಮ್ ಕೈಗೊಂಡ ವೆಬ್ ಲಿಂಕ್ ಸಮೀಕ್ಷೆಯಲ್ಲಿ ಭಾರತದಲ್ಲಿ ಶೇ.6 ರಷ್ಟು ತಾಯಂದಿರು ಮಾತ್ರ ತಮ್ಮ ಮಗುವಿಗೆ ಸಾರ್ವಜನಿಕ ಸ್ಥಳಗಳಲ್ಲಿ ಆರಾಮವಾಗಿ ಎದೆಹಾಲುಣಿಸಲು ಸೂಕ್ತವಾದ ಸ್ಥಳವೊಂದು (ಹಾಲುಣಿಸಲೆಂದೇ ಮೀಸಲಿಟ್ಟ ಕೋಣೆ) ದೊರಕಿರುವುದಾಗಿ ಹೇಳಿದ್ದಾರೆ. ಶೇ.90ರಷ್ಟು ಮಹಿಳೆಯರು ಹಾಲುಣಿಸಲು ತಮ್ಮ ಸ್ವಂತ ಕಾರನ್ನು ಆಶ್ರಯಿಸಿದರೆ, ಶೇ.78 ಮಂದಿ ಸಾರ್ವಜನಿಕ ಸಾರಿಗೆಯಲ್ಲಿ ಎದೆಹಾಲುಣಿಸಿದ್ದಾರೆ. ಕೆಲವರು ಕಾರ್ ಪಾರ್ಕಿಂಗ್, ಟ್ರಯಲ್ ರೂಮ್, ಶೌಚಾಲಯಗಳಲ್ಲಿ ಎದೆಹಾಲುಣಿಸಿರುವುದಾಗಿ ತಿಳಿಸಿದ್ದಾರೆ. ಅಷ್ಟೇ ಅಲ್ಲ, ಶೇ.81ರಷ್ಟು ಮಹಿಳೆಯರು ಸೂಕ್ತವಾದ ವ್ಯವಸ್ಥೆಯಿಲ್ಲದ ಕಾರಣ ಸಾರ್ವಜನಿಕ ಸ್ಥಳಗಳಲ್ಲಿ ಆರಾಮವಾಗಿ ಮಗುವಿಗೆ ಎದೆಹಾಲುಣಿಸಲು ಸಾಧ್ಯವಾಗುತ್ತಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶೇ.53ರಷ್ಟು ಮಹಿಳೆಯರ ಪ್ರಕಾರ ಸ್ತನಪಾನಕ್ಕೆ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆಯ ಕೊರತೆ ಕಂಡುಬಂದರೆ, ಶೇ.47 ಮಂದಿ ಪ್ರಕಾರ ಖಾಸಗಿತನದ ಕೊರತೆಯಿದೆ. 

ಮಗು ದೊಡ್ಡದಾಗುವ ತನಕ ತಾಯಿ ಮನೆಯ ನಾಲ್ಕು ಗೋಡೆಗಳ ಮಧ್ಯೆ ಕೂತಿರಲು ಸಾಧ್ಯವಿಲ್ಲ ಅಲ್ಲವೆ?ಮಗುವಿನೊಂದಿಗೆ ಮನೆಯಿಂದ ಹೊರಗಡಿಯಿಡುವ ತಾಯಿಗೆ ಯಾವುದೇ ಮುಜುಗರವಿಲ್ಲದೆ ನೆಮ್ಮದಿಯಿಂದ ತನ್ನ ಕಂದಮ್ಮನಿಗೆ ಹಾಲುಣಿಸಲು ಖಾಸಗಿ ಕ್ಷಣಗಳನ್ನು ಒದಗಿಸಬೇಕಾದ  ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.