ಬೆಂಗಳೂರಿನಲ್ಲಿ ಇಬ್ಬರಿಗೆ ಅಡುಗೆ ಮಾಡಲು ತಿಂಗಳಿಗೆ ₹7,000–₹8,000 ಪಾವತಿಸುತ್ತಿರುವುದಾಗಿ ಮೇಘಾ ಎಂಬ ಮಹಿಳೆ ಹೇಳಿದ್ದಾರೆ. ಊಟದ ರುಚಿ ಕೆಲವೊಮ್ಮೆ ಸರಾಸರಿಯಾಗಿದ್ದರೂ ಅಡುಗೆ ಮಾಡುವುದು, ಮೆನು ಯೋಚಿಸುವುದು ಸೇರಿದಂತೆ ದಿನನಿತ್ಯದ ಜವಾಬ್ದಾರಿಯಿಂದ ಮುಕ್ತಿ ಸಿಗುತ್ತದೆ ಎಂಬ ಕಾರಣಕ್ಕೆ ಈ ಹಣ ನೀಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.

₹8 ಸಾವಿರ ಕೊಟ್ಟು ಅಡುಗೆ ಮಾಡಿಸುವುದೇಕೆ?

ಬೆಂಗಳೂರು ಎಂದರೆ ಉದ್ಯೋಗ, ವೇಗದ ಜೀವನ ಮತ್ತು ದುಬಾರಿ ಬದುಕು. ಇಲ್ಲಿ ಮನೆ ಬಾಡಿಗೆ, ದಿನಸಿ, ಪ್ರಯಾಣ ಸೇರಿದಂತೆ ಪ್ರತಿಯೊಂದು ಖರ್ಚೂ ಹೆಚ್ಚಾಗುತ್ತಿರುವ ಬಗ್ಗೆ ಆಗಾಗ ಚರ್ಚೆಯಾಗುತ್ತಿರುತ್ತದೆ. ಇದೀಗ ಮನೆ ಅಡುಗೆಗೂ ಸಂಬಂಧಿಸಿದ ವಿಚಾರವೊಂದು ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿದೆ.

ಬೆಂಗಳೂರಿನಲ್ಲಿ ವಾಸಿಸುವ ಮೇಘಾ ಎಂಬ ಮಹಿಳೆ, ಇಬ್ಬರಿಗೆ ಅಡುಗೆ ಮಾಡಲು ತಿಂಗಳಿಗೆ ಸುಮಾರು ₹7,000–₹8,000 ಪಾವತಿಸುತ್ತಿರುವುದಾಗಿ ಹೇಳಿದ್ದಾರೆ. ಸಾಮಾನ್ಯವಾಗಿ ಅಡುಗೆ ಮಾಡುವವರು ದಿನಕ್ಕೆ ಎರಡು ಬಾರಿ ಮನೆಗೆ ಬಂದು ಊಟ ತಯಾರಿಸುತ್ತಾರೆ. ಭಾನುವಾರ ರಜೆ ಇರುತ್ತದೆ ಎಂದು ಅವರು ವಿವರಿಸಿದ್ದಾರೆ.

ರುಚಿ ಸರಾಸರಿ, ಆದರೂ ಕಿಕ್‌ಔಟ್ ಮಾಡೋಕೆ ಆಗಲ್ಲ!

ಮೇಘಾ ಅವರ ಪ್ರಕಾರ, ಅಡುಗೆ ಮಾಡುವವರು ಬೇಗನೆ ತರಕಾರಿ ಹೆಚ್ಚಿ, ಎರಡು ಪದಾರ್ಥಗಳನ್ನು ಸಿದ್ಧಪಡಿಸಿ ನಂತರ ಮತ್ತೊಂದು ಮನೆಗೆ ತೆರಳುತ್ತಾರೆ. ದಾಲ್, ಆಲೂಗಡ್ಡೆ, ಸೋಯಾ, ಚಿಕನ್ ಸೇರಿದಂತೆ ಹಲವು ಪದಾರ್ಥಗಳು ಪ್ರೆಶರ್ ಕುಕ್ಕರ್‌ನಲ್ಲೇ ಸಿದ್ಧವಾಗುತ್ತವೆ.

ಆದರೆ ಸಮಸ್ಯೆ ಇಲ್ಲಿದೆ. ಊಟದ ರುಚಿ ಯಾವಾಗಲೂ ನಿರೀಕ್ಷೆಯಂತೆ ಇರೋದಿಲ್ಲ. ಮನೆಯವರಿಗೆ ಬೇಕಾದ ರುಚಿ ಸಿಗಬೇಕಾದರೆ ಪದೇಪದೇ ಸೂಚನೆ ನೀಡಬೇಕಾಗುತ್ತದೆ. ಇಲ್ಲದಿದ್ದರೆ ಎಣ್ಣೆ ಮತ್ತು ಮಸಾಲೆ ಹೆಚ್ಚಾಗುವ ಸಾಧ್ಯತೆಯೂ ಇದೆ ಎಂದು ಮೇಘಾ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಹಾಗಾದರೆ ₹8 ಸಾವಿರ ಯಾಕೆ ಕೊಡುತ್ತಾರೆ?

ಇಲ್ಲೇ ಮೇಘಾ ಅವರ ಮಾತು ಕುತೂಹಲ ಮೂಡಿಸಿದೆ. ತಾವು ₹8 ಸಾವಿರವನ್ನು ಅತ್ಯುತ್ತಮ ರುಚಿಯ ಊಟಕ್ಕಾಗಿ ಮಾತ್ರ ಪಾವತಿಸುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಅವರ ಪ್ರಕಾರ, ಈ ಹಣವನ್ನು ಪ್ರತಿದಿನ ಎರಡು ಬಾರಿ ಏನು ಅಡುಗೆ ಮಾಡಬೇಕು, ತರಕಾರಿ ಏನು ತರಬೇಕು, ಅಡುಗೆ ಯಾವಾಗ ಮಾಡಬೇಕು ಎಂಬ ಯೋಚನೆಯಿಂದ ಮುಕ್ತಿ ಪಡೆಯಲು ಪಾವತಿಸುತ್ತಿದ್ದಾರೆ.

ಅಂದರೆ ಇಲ್ಲಿ ಖರೀದಿಸುತ್ತಿರುವುದು ಕೇವಲ ಊಟವಲ್ಲ; ಸಮಯ ಮತ್ತು ಮಾನಸಿಕ ನೆಮ್ಮದಿ ಎಂಬುದು ಅವರ ಅಭಿಪ್ರಾಯ.

ಬೆಂಗಳೂರಿನ ‘ಕೂಕ್ ಎಕಾನಮಿ’ ಬಗ್ಗೆ ಚರ್ಚೆ

ಮೇಘಾ ಅವರ ಪೋಸ್ಟ್‌ಗೆ ಸಾಮಾಜಿಕ ಜಾಲತಾಣದಲ್ಲಿ ಹಲವು ರೀತಿಯ ಪ್ರತಿಕ್ರಿಯೆಗಳು ಬಂದಿವೆ. ಕೆಲವರು ಮನೆ ಅಡುಗೆ ರುಚಿ ಸರಾಸರಿಯಾಗಿದ್ದರೂ, ಪ್ರತಿದಿನ ಅಡುಗೆ ಮಾಡುವ ಜವಾಬ್ದಾರಿಯಿಂದ ಮುಕ್ತಿ ಸಿಗುವುದು ದೊಡ್ಡ ಅನುಕೂಲ ಎಂದಿದ್ದಾರೆ. ಇನ್ನೂ ಕೆಲವರು ಹೊರಗಿನಿಂದ ಊಟ ಆರ್ಡರ್ ಮಾಡುವುದಕ್ಕಿಂತ ಮನೆಯ ಊಟವೇ ಉತ್ತಮ ಆಯ್ಕೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಒಟ್ಟಿನಲ್ಲಿ, ಬೆಂಗಳೂರಿನಂತಹ ವೇಗದ ನಗರದಲ್ಲಿ ಜನರು ಹಣ ಕೊಟ್ಟು ಕೇವಲ ಊಟವನ್ನಲ್ಲ, ತಮ್ಮ ಸಮಯವನ್ನೂ ಉಳಿಸಿಕೊಳ್ಳುತ್ತಿದ್ದಾರೆ ಎಂಬ ಚರ್ಚೆಯನ್ನು ಈ ಘಟನೆ ಹುಟ್ಟುಹಾಕಿದೆ.

Scroll to load tweet…