ಅನಗತ್ಯ ಗರ್ಭಧಾರಣೆ ಮಹಿಳೆಯರ ದೊಡ್ಡ ಸಮಸ್ಯೆ. ಇದ್ರ ಬಗ್ಗೆ ಹೇಳಿಕೊಳ್ಳಲು ಮಹಿಳೆಯರು ನಾಚಿಕೊಳ್ತಾರೆ. ಗರ್ಭಧಾರಣೆ ತಡೆಯಲು ವೈದ್ಯರ ಸಲಹೆ ಪಡೆಯದೆ ಮಾತ್ರೆ ಸೇವನೆ ಮಾಡುವವರಿದ್ದಾರೆ. ಗರ್ಭನಿರೋಧಕ ತಡೆಯುವ ಮಾತ್ರೆಗಳು ಆರೋಗ್ಯ ಹಾಳು ಮಾಡುತ್ತವೆ.
ಅನಗತ್ಯ ಗರ್ಭಧಾರಣೆ (Unwanted pregnancy )ತಡೆಯಲು ಜನನ ನಿಯಂತ್ರಣ ಮಾತ್ರೆಗಳನ್ನು ಬಳಸಲಾಗುತ್ತದೆ. ಇದು ಈಸ್ಟ್ರೊಜೆನ್ (Estrogen )ಮತ್ತು ಪ್ರೊಜೆಸ್ಟರಾನ್ ಹಾರ್ಮೋನು (hormone)ಗಳ ಸಂಯೋಜನೆಯಿಂದ ಮಾಡಲ್ಪಟ್ಟಿದೆ. ಇದು ಗರ್ಭಧಾರಣೆಯನ್ನು ತಡೆಯುತ್ತದೆ. ಇದು ಅಂಡೋತ್ಪತ್ತಿ ಪ್ರಕ್ರಿಯೆಯನ್ನು ನಿಲ್ಲಿಸುತ್ತದೆ. ಇದರಿಂದಾಗಿ ಮೊಟ್ಟೆಯು ಅಂಡಾಶಯದಿಂದ ಬಿಡುಗಡೆಯಾಗುವುದಿಲ್ಲ. ಈ ಜನನ ನಿಯಂತ್ರಣ ಮಾತ್ರೆಗಳು ಅನಗತ್ಯ ಗರ್ಭಧಾರಣೆಯನ್ನು ತಪ್ಪಿಸಲು ಪರಿಣಾಮಕಾರಿ ಮಾರ್ಗವಾಗಿದೆ. ಇದಲ್ಲದೇ ಋತುಚಕ್ರ (Menstrual cycle )ಹದಗೆಟ್ಟಿರುವ ಅಥವಾ ಪಿಸಿಓಡಿ (PCOD) ಸಮಸ್ಯೆಯಿಂದ ಮುಟ್ಟಿನ ಸಮಸ್ಯೆ ಇರುವ ಮಹಿಳೆಯರಿಗೆ ಆರೋಗ್ಯ ಸುಧಾರಿಸಲು ಹಲವು ಬಾರಿ ವೈದ್ಯರು ಗರ್ಭನಿರೋಧಕ ಮಾತ್ರೆಗಳನ್ನು ಶಿಫಾರಸು ಮಾಡುತ್ತಾರೆ. ಆದರೆ ವೈದ್ಯರ ಸಲಹೆ ಇಲ್ಲದೆ ಮಾತ್ರೆಗಳನ್ನು ಸೇವನೆ ಮಾಡಬಾರದು. ಗರ್ಭನಿರೋಧಕ ಮಾತ್ರೆಗಳಿಂದ ಅನಗತ್ಯ ಗರ್ಭಧಾರಣೆ ತಡೆಯಬಹುದು. ಜೊತೆಗೆ ಪಿಸಿಓಡಿಗೆ ಸಮಸ್ಯೆಗೆ ಇದನ್ನು ನೀಡಲಾಗುತ್ತದೆ ಎಂಬುದನ್ನು ನಾವು ಈಗಾಗ್ಲೇ ಹೇಳಿದ್ದೇವೆ. ಈ ಎಲ್ಲ ಪ್ರಯೋಜನ ಹೊಂದಿದ್ದರೂ ಗರ್ಭನಿರೋಧಕ ಮಾತ್ರೆಗಳಿಂದ ಅನೇಕ ಅಡ್ಡಪರಿಣಾಮಗಳಾಗುತ್ತವೆ. ಅದು ಯಾವುದು ಎಂಬುದನ್ನು ಇಂದು ಹೇಳ್ತೆವೆ.
ಗರ್ಭನಿರೋಧಕ ಮಾತ್ರೆಯಿಂದ ಅಡ್ಡಪರಿಣಾಮ :
ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳುವ ಮಹಿಳೆಯರು ಗಮನಿಸಬೇಕಾದ ಅತ್ಯಂತ ಮುಖ್ಯವಾದ ವಿಷಯವೆಂದರೆ ಅವರು ಮಾತ್ರೆಯನ್ನು ಪ್ರತಿದಿನ ಒಂದೇ ಸಮಯದಲ್ಲಿ ತೆಗೆದುಕೊಳ್ಳಬೇಕು. 35 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಿಗೆ ಸಂಯೋಜಿತ ಮೌಖಿಕ ಗರ್ಭನಿರೋಧಕಗಳನ್ನು ನೀಡಬಾರದು. ವಿಶೇಷವಾಗಿ ಧೂಮಪಾನ ಮಾಡುವವರು ಇದನ್ನು ತೆಗೆದುಕೊಂಡರೆ ರಕ್ತ ಹೆಪ್ಪುಗಟ್ಟುವಿಕೆಯ ಅಪಾಯ ಹೆಚ್ಚಾಗುತ್ತದೆ. ಅಧಿಕ ರಕ್ತದೊತ್ತಡ, ಹೃದ್ರೋಗ, ಯಕೃತ್ತು ಅಥವಾ ಮೈಗ್ರೇನ್ ಸಮಸ್ಯೆ ಇರುವ ಮಹಿಳೆಯರಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ ಅಪಾಯವು ಹೆಚ್ಚಾಗುತ್ತದೆ. ಅಧಿಕ ಕೊಲೆಸ್ಟ್ರಾಲ್, ಪಾರ್ಶ್ವವಾಯು ಅಥವಾ ಸ್ತನ ಕ್ಯಾನ್ಸರ್ ಇತಿಹಾಸವನ್ನು ಹೊಂದಿರುವವರು ಸಹ ತೊಂದರೆ ಎದುರಿಸುತ್ತಾರೆ.
ತಲೆನೋವು : ಗರ್ಭನಿರೋಧಕ ಮಾತ್ರೆಗಳ ಅಡ್ಡಪರಿಣಾಮಗಳಲ್ಲಿ ತಲೆನೋವು ಸೇರಿವೆ. ಅನೇಕ ಮಹಿಳೆಯರಿಗೆ ಗರ್ಭನಿರೋಧಕ ಮಾತ್ರೆ ಸೇವನೆ ಮಾಡಿದ್ರೆ ತಲೆನೋವು ಕಾಡುತ್ತದೆ. ಮಾತ್ರೆಗಳಲ್ಲಿರುವ ಹಾರ್ಮೋನುಗಳು ತಲೆನೋವಿಗೆ ಕಾರಣವಾಗಬಹುದು. ಕೆಲ ಮಹಿಳೆಯರಿಗೆ ತಲೆ ಸುತ್ತುವ ಸಮಸ್ಯೆ ಕಾಡುತ್ತದೆ.
ರಕ್ತಸ್ರಾವ : ಮಾತ್ರೆ ತೆಗೆದುಕೊಳ್ಳಲು ಶುರು ಮಾಡಿದ ಮಹಿಳೆಯರಿಗೆ ಆರಂಭದಲ್ಲಿ ಬ್ಲೀಡಿಂಗ್ ಕಾಣಿಸಿಕೊಳ್ಳುತ್ತದೆ. ಎರಡು ಮುಟ್ಟಿನ ಮಧ್ಯೆ ಸ್ವಲ್ಪ ರಕ್ತಸ್ರಾವವಾಗಬಹುದು. ಆದ್ರೆ ಇದು ಮೂರು ತಿಂಗಳ ನಂತ್ರ ಸರಿಯಾಗುತ್ತದೆ.
ವಾಕರಿಕೆ : ಕೆಲ ಮಹಿಳೆಯರು ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳುವಾಗ ವಾಕರಿಕೆ ಸಮಸ್ಯೆ ಎದುರಿಸುತ್ತಾರೆ. ಈ ರೋಗಲಕ್ಷಣವು ಸ್ವಲ್ಪ ಸಮಯದ ನಂತರ ಕ್ರಮೇಣ ಕಡಿಮೆಯಾಗುತ್ತದೆ. ಆದರೆ ಖಾಲಿ ಹೊಟ್ಟೆಯಲ್ಲಿ ಇದನ್ನು ತೆಗೆದುಕೊಳ್ಳುವ ತಪ್ಪು ಮಾಡ್ಬೇಡಿ.ಬೆಳಗಿನ ಉಪಾಹಾರ ಅಥವಾ ರಾತ್ರಿ ಊಟದ ನಂತರ ನಿಗದಿತ ಸಮಯದಲ್ಲಿ ಪ್ರತಿದಿನ ತೆಗೆದುಕೊಳ್ಳಿ. ಊಟದ ನಂತರ ನೀವು ಪ್ರತಿದಿನ ತೆಗೆದುಕೊಳ್ಳಬಹುದು. ಮಾತ್ರೆ ತೆಗೆದುಕೊಳ್ಳಲು ಪ್ರಾರಂಭಿಸಿದ ಮೂರು ತಿಂಗಳ ನಂತ್ರ ವಾಕರಿಕೆ ಸಮಸ್ಯೆ ಕಡಿಮೆಯಾಗುತ್ತದೆ. ಮೂರು ತಿಂಗಳಿಗಿಂತ ಹೆಚ್ಚು ಕಾಲ ಈ ಸಮಸ್ಯೆಯಿದ್ದರೆ ವೈದ್ಯರನ್ನು ಭೇಟಿಯಾಗಿ.
ಮುಟ್ಟಿನಲ್ಲಿ ಏರುಪೇರು : ಮಾತ್ರೆಗಳನ್ನು ನಿಯಮಿತವಾಗಿ ತೆಗೆದುಕೊಂಡರೂ, ಮಹಿಳೆಯರಿಗೆ ನಿಯಮಿತವಾಗಿ ಮುಟ್ಟಾಗುವುದಿಲ್ಲ. ಇದಕ್ಕೆ ಕಾರಣ ಒತ್ತಡ. ಕೆಲವು ದೀರ್ಘಕಾಲದ ಕಾಯಿಲೆಗಳು ಮತ್ತು ಹಾರ್ಮೋನ್ ಸಮಸ್ಯೆಗಳಿಂದಲೂ ಮುಟ್ಟಿನಲ್ಲಿ ಏರುಪೇರಾಗುತ್ತದೆ. ಮಾತ್ರೆ ತೆಗೆದುಕೊಂಡ ನಂತ್ರವೂ ಮುಟ್ಟಾಗದೆ ಹೋದ್ರೆ ಗರ್ಭಧಾರಣೆ ಪರೀಕ್ಷೆ ಮಾಡಿಸಿಕೊಳ್ಳಿ.
Vaginal Health: ಮಹಿಳೆಯರ ಸೂಕ್ಷ್ಮ ಭಾಗದಿಂದ ವಾಸನೆ, ಇದನ್ನ ತಡೆಯೋದು ಹೇಗೆ?
ಕಡಿಮೆಯಾಗುವ ಲೈಂಗಿಕ ಆಸಕ್ತಿ (Sexual Desires) : ಗರ್ಭನಿರೋಧಕ ಮಾತ್ರೆ ತೆಗೆದುಕೊಳ್ಳು ಮಹಿಳೆಯರ ದೇಹದಲ್ಲಿ ಹಾರ್ಮೋನುಗಳ ಬದಲಾವಣೆಗಳು ಕಂಡುಬರುತ್ತವೆ. ಇದು ಲೈಂಗಿಕ ಆಸಕ್ತಿ ಮೇಲೆ ಪರಿಣಾಮ ಬೀರುತ್ತದೆ. ಕೆಲ ಮಹಿಳೆಯರಿಗೆ ಲೈಂಗಿಕ ಆಸಕ್ತಿ ಕಡಿಮೆಯಾಗುತ್ತದೆ. ಈ ರೋಗಲಕ್ಷಣಗಳು ದೀರ್ಘಕಾಲದವರೆಗೆ ಮುಂದುವರಿದರೆ ಮತ್ತು ಲೈಂಗಿಕ ಬಯಕೆಯ ಕೊರತೆಯು ನಿಮ್ಮನ್ನು ಕಾಡುತ್ತಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.
Woman Health: ಕಬ್ಬಿಣಾಂಶ ಕೊರತೆಯಾಗಿರೋದನ್ನ ಗುರುತಿಸೋದು ಹೇಗೆ?
ಮೇಲಿನವೆಲ್ಲವೂ ಸಾಮಾನ್ಯ ಲಕ್ಷಣವಾಗಿದೆ. ಕೆಲವರಿಗೆ ತೀವ್ರ ತಲೆನೋವು,ವಾಂತಿ,ಕೈ-ಕಾಲಿನ ದೌರ್ಬಲ್ಯ,ಎದೆ ನೋವು,ಕೆಮ್ಮಿದಾಗ ರಕ್ತ,ಉಸಿರಾಟದ ತೊಂದರೆ, ತೀವ್ರ ಹೊಟ್ಟೆ ನೋವು, ಕಣ್ಣುಗಳು ಹಳದಿಯಾಗುವುದು,ಹಸಿವಾಗದೆ ಇರುವುದು ಕಂಡು ಬಂದಲ್ಲಿ ತಕ್ಷಣ ವೈದ್ಯರನ್ನು ಭೇಟಿಯಾಗುವುದು ಒಳ್ಳೆಯದು.
