ಕೊರೋನಾ ಕಾಲದಲ್ಲಿ ವರ್ಕ್ ಫ್ರಂ ಹೋಂ ವ್ಯವಸ್ಥೆ ಇನ್ನು ಮುಂದೆ ಕಾಯಂ ಆಗುವಂತಹ ಲಕ್ಷಣಗಳು ಗೋಚರಿಸುತ್ತಿವೆ. ಇದು ಒಂದು ರೀತಿಯಲ್ಲಿ ಒಳ್ಳೆಯ ಬೆಳವಣಿಗೆಯಾದರೂ ಕೆಲವೊಮ್ಮೆ ಸುರಕ್ಷತೆ ದೃಷ್ಟಿಯಿಂದ ನೋಡಿದರೆ ಡೇಟಾ ಕಳವುಗಳಂತಹ ಸೈಬರ್ ಪ್ರಕರಣಗಳು ಹೆಚ್ಚುವ ಸಾಧ್ಯತೆಗಳು ದಟ್ಟವಾಗಿವೆ. ವರ್ಕ್ ಫ್ರಂ ಹೋಂ ಸಂದರ್ಭದಲ್ಲಿ ಫಿಶಿಂಗ್ ದಾಳಿಗಳು ಸೇರಿದಂತೆ ಇನ್ನಿತರೆ ಸೈಬರ್ ಬೆದರಿಕೆಗಳ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು.  ಹಾಗಾಗಿ ನಾವೇನು ಮಾಡಬೇಕು..? ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು ಎಂಬ ಬಗ್ಗೆ ನೋಡೋಣ…

ಇಂದು ಕೋವಿಡ್-19 ಹಲವು ಬದಲಾವಣೆಗಳಿಗೆ ನಾಂದಿ ಹಾಡಿದೆ. ಕಾರ್ಪೊರೇಟ್ ಕ್ಷೇತ್ರದಲ್ಲಂತೂ ಈಗ ಹಲವು ಪ್ರಯೋಗಗಳು ಆರಂಭವಾಗಿದ್ದು, ಕೆಲವರು ಸಂಪೂರ್ಣ ವರ್ಕ್ ಫ್ರಂ ಹೋಂ ಪದ್ಧತಿಗೆ ಮೊರೆಹೋದರೆ, ಇನ್ನು ಕೆಲವರು ಅದರತ್ತ ಹೆಜ್ಜೆ ಹಾಕುತ್ತಿದ್ದಾರೆ. ಹೀಗಾಗಿ ಭವಿಷ್ಯದಲ್ಲಿ ವರ್ಕ್ ಫ್ರಂ ಹೋಂ ಪರಿಕಲ್ಪನೆಯೇ ಪಕ್ಕಾ ಆಗುವ ಸಾಧ್ಯತೆಯೇ ಹೆಚ್ಚು. ಆದರೆ, ಆನ್ ಲೈನ್ ಬಳಕೆಗಳು ಹೆಚ್ಚಿದಂತೆ ಅದರ ದುರ್ಬಳಕೆ ಪ್ರಕರಣಗಳೂ ಹೆಚ್ಚಾಗಿ ಆತಂಕ ಹುಟ್ಟಿಸುತ್ತಿವೆ.

ಸೈಬರ್ ಕ್ರೈಂ ಪ್ರಕರಣಗಳ ಹೆಚ್ಚಳಕ್ಕೂ ನೂತನ ಆನ್‌ಲೈನ್ ಅನಿವಾರ್ಯತೆ ಕಾರಣವಾಗುತ್ತಿದೆ. ಇಲ್ಲಿ ಸೈಬರ್ ಸುರಕ್ಷತೆ ಮತ್ತು ಡೇಟಾ ಸಂರಕ್ಷಣೆ ಬಗ್ಗೆ ಹೆಚ್ಚು ಗಮನ ನೀಡಬೇಕಿದೆ. ಈ ಬಗ್ಗೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನೂ ಕೈಗೊಳ್ಳಬೇಕಿದೆ. ಈಗಾಗಲೇ ಕೆಲವೇ ತಿಂಗಳಿನಲ್ಲಿ ವಿಶ್ವದಲ್ಲಿ ಡೇಟಾಗಳ ಉಲ್ಲಂಘನೆ, ಐಡೆಂಟಿಟಿ ಕಳ್ಳತನ, ಆನ್‌ಲೈನ್ ವಂಚನೆ ಸೇರಿದಂತೆ ಇನ್ನಿತರ ಮಾದರಿಯಲ್ಲಿ ಸೈಬರ್ ಅಪರಾಧಗಳು ನಡೆಯುತ್ತಿವೆ.



ನಾರ್ಟನ್ ವರದಿ ಹೇಳೋದೇನು?
ನಾರ್ಟನ್ ಲೈಫ್‌ಲಾಕ್ ಸೈಬರ್ ಸೇಫ್ಟಿ ಇನ್‌ಸೈಟ್ಸ್ ರಿಪೋರ್ಟ್ 2019ರ ಪ್ರಕಾರ, ಕಳೆದ ಒಂದು ವರ್ಷದಲ್ಲಿ ಐಡೆಂಟಿಟಿ ಕಳ್ಳತನ ಆಗಿದೆ ಎಂದು ಭಾರತದಲ್ಲಿನ ಶೇ.39 ಮಂದಿ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು 2020ರಲ್ಲಿ ಅಧ್ಯಯನ ನಡೆಸಿದಾಗ ಅನೇಕರಿಗೆ ಸೈಬರ್ ಭದ್ರತೆಯ ಅಪಾಯಗಳ ಬಗ್ಗೆ ಗೊತ್ತೇ ಇಲ್ಲ, ಜೊತೆಗೆ ಸೈಬರ್ ವಂಚಕರು ತಮ್ಮನ್ನು ಗುರಿಯಾಗಿಸುತ್ತಾರೆ ಎಂಬ ನಿರೀಕ್ಷೆಯೂ ಅವರಲ್ಲಿಲ್ಲ. ಈಗಂತೂ ಕೋವಿಡ್ ಸೋಂಕು ಇಳಿಮುಖವಾದರೂ ವರ್ಕ್ ಫ್ರಂ ಹೋಂ ಪದ್ಧತಿಯನ್ನೇ ಮುಂದುವರಿಸಲು ಹಲವು ಕಂಪನಿಗಳು ಒಲವು ತೋರಿಸುತ್ತಿವೆ ಎಂಬ ಅಂಶವನ್ನು ನೀಡಲಾಗಿದೆ.

ಇದನ್ನು ಓದಿ: ಗೂಗಲ್ ಮೀಟ್ ವೇಳೆ ಬ್ಯಾಕ್ ಗ್ರೌಂಡ್ ಶಬ್ದ ವನ್ನು ಮ್ಯೂಟ್ ಮಾಡೋದು ಹೇಗೆ?

ಈ ಹಿನ್ನೆಲೆಯಲ್ಲಿ ವರ್ಕ್ ಫ್ರಂ ಹೋಂ ಮಾಡುವವರು ಕೆಲವು ಮುಂಜಾಗ್ರತೆಗಳನ್ನು ತೆಗೆದುಕೊಳ್ಳಬೇಕಿದೆ. ಕಾರಣ, ಕಂಪನಿಯ ಜಾಲ ಮತ್ತು ಡೇಟಾಗೆ ಸೈಬರ್ ದಾಳಿಗಳಾದರೆ ಅವುಗಳಿಂದ ಕಾಪಾಡಿಕೊಳ್ಳಬೇಕಾಗುತ್ತದೆ. ಹೀಗೆ ಕಂಪನಿಯ ಹೊರಗೆ ಕೆಲಸ ಮಾಡುವವರು ಸೈಬರ್ ಭದ್ರತೆಗೆ ತೆಗೆದುಕೊಳ್ಳಬೇಕಾದ ಅಂಶಗಳ ಬಗ್ಗೆ ಪರಿಣತರು ಶಿಫಾರಸು ಮಾಡಿದ್ದಾರೆ. 

ನಿಮ್ಮ ಉದ್ಯೋಗದಾತರ ಜತೆ ನಿಕಟ ಸಂಪರ್ಕದಲ್ಲಿರಿ
ಕಂಪನಿಯ ಇಂಟ್ರಾನೆಟ್‌ನಲ್ಲಿ ನಿಮ್ಮ ಉದ್ಯೋಗದಾತರು ಕೊರೋನಾ ವೈರಸ್‌ಗೆ ಸಂಬಂಧಿಸಿದ ಮಾಹಿತಿಯನ್ನು ಕಲೆ ಹಾಕುತ್ತಿರಬಹುದು. ನಿಮಗೆ, ನಿಮ್ಮ ಸಹೋದ್ಯೋಗಿಗಳಿಗೆ ಮತ್ತು ವ್ಯವಹಾರ ಸುರಕ್ಷಿತವಾಗಿ ನಡೆಯಬೇಕಾದರೆ ಹೊಸ ನೀತಿಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾಗಿರುವುದು ಪ್ರಮುಖವಾಗಿದೆ.

ಕಂಪನಿಯ ಟೂಲ್‌ಬಾಕ್ಸ್ ಟೆಕ್ ಬಳಸಿ
ನೀವು ಮನೆಯಿಂದ ಕೆಲಸ ಮಾಡುತ್ತಿರುವ ವೇಳೆ ಕಂಪನಿಗಳು ಹೊಂದಿರುವ ಟೆಕ್ ಟೂಲ್‌ಗಳು ನಿಮ್ಮ ಸೈಬರ್ ಸುರಕ್ಷತೆಯನ್ನು ಕಾಯ್ದುಕೊಳ್ಳಲು ನೆರವಾಗುತ್ತವೆ. ಫೈರ್‌ವೆಲ್ ಮತ್ತು ಆ್ಯಂಟಿವೈರಸ್ ರಕ್ಷಣೆಯನ್ನು ನೀಡುತ್ತವೆ. ಇವುಗಳೊಂದಿಗೆ ವಿಪಿಎನ್ ಮತ್ತು 2-ಫ್ಯಾಕ್ಟರ್ ಅಥೆಂಟಿಕೇಶನ್ ನಂತಹ ಭದ್ರತಾ ವೈಶಿಷ್ಟ್ಯತೆಗಳನ್ನು ಹೊಂದಿರುತ್ತವೆ.

ಇದನ್ನು ಓದಿ: ಬಳಸದಿದ್ದರೆ ವಾಟ್ಸಪ್ ಕೆಲವು ದಿನಗಳ ನಂತರ ಡಿ-ಆ್ಯಕ್ಟಿವೇಟ್ ಆಗುತ್ತೆ ಗೊತ್ತಾ?

ಸಾಫ್ಟ್‌ವೇರ್ ಡೌನ್ಲೋಡ್ ಮಾಡೋವಾಗ ಇರಲಿ ಎಚ್ಚರ
ಕಂಪನಿಯಂದ ಮೇಲೆ ಅಲ್ಲಿ ಟೀಂ ವರ್ಕ್ ಇರುತ್ತದೆ. ಇವರೆಲ್ಲ ತಂಡಗಳಾಗಿ ಕಾರ್ಯನಿರ್ವಹಣೆ ಮಾಡಬೇಕಾದರೆ ಇನ್‌ಸ್ಟಂಟ್ ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ಗಳು ಮತ್ತು ವಿಡಿಯೋ ಮೀಟಿಂಗ್ ರೂಂನಂತಹ ಸಹಭಾಗಿತ್ವದ ಟೂಲ್‌ಗಳು ಬೇಕು. ಈ ಸಂದರ್ಭದಲ್ಲಿ ಟೂಲ್ ಸಮರ್ಪಕವಾಗಿ ಕಾರ್ಯನಿರ್ವಹಿಸದಿದ್ದರೆ ಪರ್ಯಾಯವಾಗಿ ಮತ್ತೊಂದನ್ನು ಡೌನ್ಲೋಡ್ ಮಾಡಲು ಮುಂದಾಗಬಹುದು. ಆದರೆ, ಇಲ್ಲಿಯೇ ಎಚ್ಚರ ವಹಿಸಬೇಕು. ಸುರಕ್ಷತಾ ನ್ಯೂನತೆಯಿಂದ ಕೂಡಿದ ಸಾಫ್ಟ್‌ವೇರ್ ಪ್ರೋಗ್ರಾಂ ಅನ್ನು ಡೌನ್ಲೋಡ್ ಮಾಡಿಕೊಂಡರೆ ಕಂಪನಿಗೆ ಸಂಬಂಧಪಡದವರೂ ಕಂಪನಿಯ ಡೇಟಾ ಇಲ್ಲವೇ ಡಿವೈಸ್‌ನಲ್ಲಿ ನೀವು ಹೊಂದಿರುವ ಯಾವುದೇ ವೈಯುಕ್ತಿಕ ಡೇಟಾವನ್ನು ಕದಿಯಬಹುದಾಗಿದೆ.

ಸಾಫ್ಟ್‌ವೇರ್ ಅಪ್ಡೇಟ್ ಮಾಡ್ತಾ ಇರಿ
ನಿಮ್ಮ ಡಿವೈಸ್‌ಗಳಲ್ಲಿನ ಸಾಫ್ಟ್‌ವೇರ್‌ಗಳನ್ನು ಆಗಾಗ ಅಪ್ಡೇಟ್ ಮಾಡುತ್ತಿರಬೇಕು. ಇದರಿಂದಾಗಿ ಸುರಕ್ಷತಾ ನ್ಯೂನತೆಗಳನ್ನು ಗುರುತಿಸಬಹುದಲ್ಲದೆ, ನಿಮ್ಮ ಡೇಟಾವನ್ನು ರಕ್ಷಿಸಲು ನೆರವಾಗುತ್ತದೆ.

ವಿಪಿಎನ್ ಆನ್ ಆಗಿರಲಿ 
ವಿಪಿಎನ್ (ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್) ಅನ್ನು ಕಾರ್ಯನಿರ್ವಹಿಸುವಾಗ ಆನ್ ನಲ್ಲಿಟ್ಟಿರಬೇಕು. ಇದರಿಂದ ಡೇಟಾವನ್ನು ಎನ್‌ಕ್ರಿಪ್ಟ್ ಮಾಡುವ ಮೂಲಕ ಉದ್ಯೋಗಿಗಳು ಮತ್ತು ವ್ಯವಹಾರಗಳ ನಡುವೆ ಸುರಕ್ಷಿತವಾದ ಸಂಪರ್ಕವನ್ನು ಕಲ್ಪಿಸಲಾಗುತ್ತದೆ. ಅಲ್ಲದೆ, ಸೈಬರ್ ಅಪರಾಧಿಗಳು, ಮಾಹಿತಿ ಕಳವಿನಂತಹ ಪ್ರಕರಣಗಳನ್ನು ವಿಪಿಎನ್ ತಡೆಯುತ್ತದೆ.

ಇದನ್ನು ಓದಿ: ಟ್ವಿಟ್ಟರ್ ಬಳಸೋಕೆ ನೀವು ದುಡ್ಡುಕಟ್ಟೋ ಕಾಲ ಬರ್ತಿದೆಯಾ?

ಕೊರೋನಾ ವೈರಸ್ ವಿಷಯದ ಫಿಶಿಂಗ್ ಇಮೇಲ್ ಬಗ್ಗೆ ಇರಲಿ ಜಾಗ್ರತೆ
ಸೈಬರ್ ಅಪರಾಧಿಗಳು ಕೊರೋನಾ ವೈರಸ್ ವಿಚಾರವನ್ನು ಬಳಸಿಕೊಂಡು ಉದ್ಯೋಗಿಗಳಿಗೆ ಅಪಾಯಕಾರಿ ಲಿಂಕ್‌ಗಳನ್ನು ಒಳಗೊಂಡ ನಕಲಿ ಇಮೇಲ್‌ಗಳನ್ನು ಕಳುಹಿಸುತ್ತಾರೆ. ಈ ಅನಾಮಧೇಯ ಲಿಂಕ್ ಅನ್ನು ಕ್ಲಿಕ್ ಮಾಡಿದರೆ ನಿಮ್ಮ ಡಿವೈಸ್‌ನಲ್ಲಿ ಮಾಲ್ವೇರ್ ಡೌನ್ಲೋಡ್ ಆಗುತ್ತದೆ. ತಕ್ಷಣ ನಿಮ್ಮ ಉದ್ಯೋಗದಾತನಿಗೆ ಫಿಶಿಂಗ್ ಅಟೆಂಪ್ಟ್ ರಿಪೋರ್ಟ್ ಹೋಗುತ್ತದೆ. ಈ ದೋಷಪೂರಿತ ಸಾಫ್ಟ್‌ವೇರ್ ಹೊಂದಿದ ಫಿಶಿಂಗ್ ಇಮೇಲ್ ಸೈಬರ್ ಅಪರಾಧಿಗಳು ನಿಮ್ಮ ಕಂಪ್ಯೂಟರ್ ಮೇಲೆ ಹಿಡಿತ ಸಾಧಿಸಲು ಅವಕಾಶ ಕಲ್ಪಿಸುತ್ತದೆ. ಈ ಮೂಲಕ ಸೈಬರ್ ಅಪರಾಧಿಗಳು ನಿಮ್ಮ ಕಂಪ್ಯೂಟರಿನಲ್ಲಿರುವ ಸೂಕ್ಷ್ಮವಾದ ವ್ಯವಹಾರ ಮಾಹಿತಿ ಮತ್ತು ಹಣಕಾಸು ಡೇಟಾಗಳನ್ನು ಕದಿಯಬಹುದಾಗಿದೆ.