ಕಾರು ಅಪಘಾತವಾದದರೂ ಆ್ಯಪಲ್ ವಾಚ್‌ನಿಂದ ಸುರಕ್ಷಿತವಾಗಿ ಗುರಿ ತಲುಪಿದ ಟೆಕ್ ಕಂಪನಿ ಸಂಸ್ಥಾಪಕ!
ಭಾರತದ ಟೆಕ್ ಕಂಪನಿ ಸಂಸ್ಥಾಪಕ ಪ್ರಯಾಣಿಸುತ್ತಿದ್ದ ಕಾರು ಅಮೆರಿಕದ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿದೆ. ಆದರೆ ಆ್ಯಪಲ್ ವಾಚ್‌ನಿಂದ ಯಾವುದೇ ಸಮಸ್ಯೆ ಎದುರಾಗಿಲ್ಲ. ಸುರಕ್ಷಿತವಾಗಿ ಗುರಿ ತಲುಪಿದ್ದಾರೆ. ಇದು ಹೇಗೆ ಸಾಧ್ಯ?
ಕ್ಯಾಲಿಫೋರ್ನಿಯಾ(ಡಿ.03) ಭಾರತೀಯ ಮೂಲದ ಟೆಕ್ ಕಂಪನಿ ಸಂಸ್ಥಾಪಕ ಕುಲ್ದೀಪ್ ಧನ್ಕರ್ ಸಂಚರಿಸುತ್ತಿದ್ದ ಕಾರು ಅಮೆರಿಕದ ಕ್ಯಾಲಿಫೋರ್ನಿಯಾ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿದೆ. ಆದರೆ ಆ್ಯಪಲ್ ವಾಚ್ ನೆರವಿನಿಂದ ಸಂಸ್ಥಾಪಕ ಹಾಗೂ ಕುಟುಂಬ ಸುರಕ್ಷಿತವಾಗಿ ಗುರಿ ತಲುಪಿದ ಘಟನೆ ನಡೆದಿದೆ. ಘಟನೆ ಕುರಿತು ಖುದ್ದು ಕುಲ್ದೀಪ್ ಧನ್ಕರ್ ಮಾಹಿತಿ ಹಂಚಿಕೊಂಡಿದ್ದಾರೆ. ಅಪಘಾತವಾದ ಕೇವಲ 30 ನಿಮಿಷದಲ್ಲಿ ನಾವು ಸ್ಥಳದಿಂದ ಸುರಕ್ಷಿತವಾಗಿ ತೆರಳಲು ಸಾಧ್ಯವಾಗಿದೆ. ಇದಕ್ಕೆ ಆ್ಯಪಲ್ ವಾಚ್ ಹಾಗೂ ಕ್ಯಾಲಿಫೋರ್ನಿಯಾ ಪೊಲೀಸರಿಗೆ ಧನ್ಯವಾದ ತಿಳಿಸಿದ್ದಾರೆ. ಇದು ಹೇಗೆ ಸಾಧ್ಯವಾಯ್ತು ಅನ್ನೋದನ್ನು ಧನ್ಕರ್ ವಿವರಿಸಿದ್ದಾರೆ.
Last9.io ಕಂಪನಿ ಸಂಸ್ಥಾಪಕರಾಗಿರುವ ಕುಲ್ದೀಪ್ ಧನ್ಕರ್ ಕ್ಯಾಲಿಫೋರ್ನಿಯಾದ 1-5 ಹೆದ್ದಾರಿಯಲ್ಲಿ ಪ್ರಯಾಣಿಸಿದ್ದಾರೆ. ಅತೀ ವೇಗವಾಗಿ ಸಾಗುತ್ತಿದ್ದ ವಾಹನಗಳ ನಡುವೆ ಧನ್ಕರ್ ಕಾರು ಸಾಗಿತ್ತು. ಇದರ ನಡುವೆ ಇತರ ವಾಹನಗಳಿಂದ ಅಪಘಾತ ಸಂಭವಿಸಿದೆ. ಕಾರಿನ ಬಾನೆಟ್ ಮುರಿದು ಬಿದ್ದಿದೆ. ಮುಂಭಾಗದ ಚಕ್ರಗಳು ಜಾಮ್ ಆಗಿದೆ. ಕಾರು ಮುಂದಕ್ಕೆ ಚಲಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹೆದ್ದಾರಿ ನುವೆ ವಾಹನ ನಿಂತಿದೆ. ಇದು ಮತ್ತಷ್ಟು ಅಪಘಾತ ಸೃಷ್ಟಿಸುವ ಸಾಧ್ಯತೆ ಇತ್ತು.
ಆ್ಯಪಲ್ ವಾಚ್ ಅಲರ್ಟ್‌ನಿಂದ ಉಳಿಯಿತು ತುಂಬು ಗರ್ಭಿಣಿ ಜೊತೆ ಮಗುವಿನ ಪ್ರಾಣ!
ಕುಲ್ದೀಪ್ ಧನ್ಕರ್ ಬಳಸುತ್ತಿದ್ದ ಆ್ಯಪಲ್ ವಾಚ್ ಕಾರು ಅಪಘಾತವಾಗುತ್ತಿದ್ದಂತೆ ಎಮರ್ಜೆನ್ಸಿ ಸರ್ವೀಸ್ ಆಟೋಮ್ಯಾಟಿಕ್ ಆಗಿ ಕಾರ್ಯನಿರ್ವಹಿಸಿದೆ. ಕಾರು ಅಪಘಾತ ಸ್ಥಳದ ಲೊಕೇಶನ್ ಸೇರಿದಂತೆ ಎಲ್ಲಾ ಮಾಹಿತಿಯನ್ನು ಸ್ಥಳೀಯ ಪ್ಯಾಟ್ರೋಲ್ ಪೊಲೀಸ್ ತಂಡಕ್ಕೆ ರವಾನಿಸಿದೆ. ಇದರಿಂದ ಕೇವಲ 15 ನಿಮಿಷದಲ್ಲಿ ಕ್ಯಾಲಿಫೋರ್ನಿಯಾ ಹೈವೇ ಪ್ಯಾಟ್ರೋಲ್ ತಂಡ ಸ್ಥಳ್ಕಕೆ ಆಗಮಿಸಿದೆ. ಹೆದ್ದಾರಿ ನಡುವೆ ಇದ್ದ ವಾಹನವನ್ನು ಬದಿಗೆ ಎಳೆದು ತಂದಿದ್ದಾರೆ. ಬಳಿಕ ಕುಲ್ದೀಪ್ ಧನ್ಕರ್ ಹಾಗೂ ಸದಸ್ಯರಿಗೆ ಬೇರೆ ಕಾರಿನ ವ್ಯವಸ್ಥೆ ಮಾಡಿದ್ದಾರೆ. ಇವೆಲ್ಲವೂ ಕೇವಲ 30 ನಿಮಿಷದಲ್ಲಿ ಆಗಿದೆ.
ಆ್ಯಪಲ್ ವಾಚ್‌ನಿಂದ ತಕ್ಕ ಸಮಯಕ್ಕೆ ಪೊಲೀಸರು ಆಗಮಿಸಿ ರಕ್ಷಣೆ ಮಾಡಿದ್ದಾರೆ. ಕಾರಿನ ಅಪಘಾತ ಸಣ್ಣದಾದರೂ ಕಾರು ಮಾತ್ರ ಸಂಪೂರ್ಣ ಹಾಳಾಗಿತ್ತು. ಇತ್ತ ಕುಲ್ದೀಪ್ ಧನ್ಕರ್ ಹಾಗೂ ಇತರ ಸದಸ್ಯರು ಸುರಕ್ಷಿತವಾಗಿದ್ದುರು. ಬೇರೆ ಕಾರಿನ ಮೂಲಕ ಕುಲ್ದೀಪ್ ನಿಗದಿತ ಸ್ಥಳ ತಲುಪಿದ್ದಾರೆ. ಘಟನೆ ಕುರಿತು ಟ್ವೀಟ್ ಮಾಡಿರು ಕುಲ್ದೀಪ್ ಧನ್ಕರ್, ಆ್ಯಪಲ್ ವಾಚ್ ಹಾಗೂ ಕ್ಯಾಲಿಫೋರ್ನಿಯಾ ಹೈವೇ ಪ್ಯಾಟೋಲ್ ತಂಡಕ್ಕೆ ಧನ್ಯವಾದ ಅರ್ಪಿಸಿದ್ದಾರೆ.
ಆ್ಯಪಲ್ ವಾಚ್‌ನಲ್ಲಿ ಕ್ರಾಶ್ ಡಿಟೆಕ್ಷನ್ ಫೀಚರ್‌ನಿಂದ ತ್ವರಿತವಾಗಿ ನೆರವು ಸಿಗಲಿದೆ. ಆ್ಯಪಲ್ ವಾಚ್‌ನಿಂದ ಪ್ರಾಣ ಉಳಿಸಿಕೊಂಡ ಹಲವು ಘಟನೆಗಳು ನಡೆದಿದೆ. ಅಪಘಾತದ ಸಮಯದಲ್ಲಿ ಆ್ಯಪಲ್ ವಾಚ್‌ನಲ್ಲಿರುವ ಕ್ರಾಶ್ ಡಿಟೆಕ್ಷನ್ ಫೀಚರ್ ಘಟನೆಯನ್ನು ಗ್ರಹಿಸಲಿದೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಲಿದೆ. ಈ ಮಾಹಿತಿಯಲ್ಲಿ ಸ್ಥಳ, ಲೋಕೇಶನ್, ತುರ್ತು ಅಗತ್ಯದ ಕುರಿತು ಹೇಳಲಿದೆ. ಇದರಿಂದ ಪೊಲೀಸರಿಗೆ ನಿಗದಿತ ಸ್ಥಳಕ್ಕೆ ಧಾವಿಸಲು ನೆರವಾಗಲಿದೆ. ಸಮಯದ ವಿಳಂಬವಾಗುವುದಿಲ್ಲ.
ಆ್ಯಪಲ್ ವಾಚ್‌ನಿಂದ ಅಮೆರಿಕದಲ್ಲಿನ ಭಾರತೀಯ ಸುರಕ್ಷಿತವಾಗಿ ಗುರಿ ತಲುಪಿದ್ದಾರೆ. ಆದರೆ ಭಾರತದಲ್ಲಿ ಜಿಪಿಎಸ್ ನ್ಯಾವಿಗೇಶನ್ ಬಳಸಿ ಪ್ರಾಣ ಕಳೆದುಕೊಳ್ಳುತ್ತಿರುವ ಘಟನೆಗಳು ಹೆಚ್ಚಾಗುತ್ತಿದೆ. ಕಳೆದ 10 ದಿನದಲ್ಲಿ ಉತ್ತರ ಪ್ರದೇಶದಲ್ಲಿ ಎರಡು ಕಾರು ಅಪಘಾತಗಳು ಸಂಭವಿಸಿದೆ. ಎರಡು ಅಪಘಾತಗಳು ಜಿಪಿಎಸ್ ನ್ಯಾವಿಗೇಶನ್‌ನಿಂದ ಆಗಿದೆ. ಒಂದು ಘಟನೆಯಲ್ಲಿ ಮೂವರು ಮೃತಪಟ್ಟಿದ್ದಾರೆ.