ಬಳಸದಿದ್ದರೆ ವಾಟ್ಸಪ್ ಕೆಲವು ದಿನಗಳ ನಂತರ ಡಿ-ಆ್ಯಕ್ಟಿವೇಟ್ ಆಗುತ್ತೆ ಗೊತ್ತಾ?
ವಾಟ್ಸಪ್ ಎಂದ ಮೇಲೆ ಗ್ರೂಪ್‌ಗಳಿರುವುದು ಸಹಜ. ಅವುಗಳಲ್ಲಿ ಒಬ್ಬರು ಕನಿಷ್ಠ 5-6 ಗ್ರೂಪ್ ಗಳಲ್ಲಾದರೂ ಇರುತ್ತಾರೆ. ಆದರೆ, ಇವರು ಕೆಲ ಸಮಯ ಅನಿವಾರ್ಯ ಕಾರಣಗಳಿಂದಲೋ, ಇಂಟರ್ನೆಟ್ ಸಮಸ್ಯೆಯಿಂದಲೋ ವಾಟ್ಸಪ್ ಬಳಸದೇ ಹಾಗೇ ಬಿಟ್ಟಿರುತ್ತಾರೆ. ಇದಕ್ಕಿದ್ದಂತೆ ಒಂದು ದಿನ ಏಕಾಏಕಿ ಎಲ್ಲ ಗ್ರೂಪ್‌ಗಳಿಂದಲೂ ಎಕ್ಸಿಟ್ ಆಗಿಬಿಡುತ್ತದೆ. ಇದು ಗೊಂದಲವನ್ನುಂಟು ಮಾಡುತ್ತದೆ. ಹಾಗಾದರೆ, ವಾಟ್ಸಪ್ ಅಕೌಂಟ್ ಹೊಂದಿ ಎಷ್ಟು ದಿನ ಬಳಸದೇ ಇದ್ದರೆ ಡಾಟಾ ಮಾಯವಾಗುತ್ತದೆ? ಎಷ್ಟು ದಿನ ಬಳಸದಿದ್ದರೆ ಅಕೌಂಟ್ ಡಿ-ಆ್ಯಕ್ಟಿವೇಟ್ ಆಗುತ್ತದೆ? ಇದಕ್ಕೆ ವಾಟ್ಸಪ್ ಏನು ಹೇಳುತ್ತದೆ..? ಎಂಬ ಬಗ್ಗೆ ನೋಡೋಣ.
ಸೋಷಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಬಳಕೆಯಲ್ಲಿರುವ ಸಾಲಿನಲ್ಲಿ ಮುಂಚೂಣಿಯಲ್ಲಿರುವ ಆ್ಯಪ್‌ಗಳಲ್ಲಿ ವಾಟ್ಸಪ್ ಸಹ ಒಂದು. ಇದು ಆರಂಭದಿಂದ ಇಲ್ಲಿಯವರೆಗೂ ತನ್ನ ಓಟವನ್ನು ಮುಂದುವರಿಸುತ್ತಲೇ ಇದೆ. ಜೊತೆಗೆ ಯೂಸರ್ ಫ್ರೆಂಡ್ಲಿ ಎಂಬ ಕಾರಣಕ್ಕೆ ಬಳಕೆದಾರರಿಗೆ ಹೆಚ್ಚು ಹತ್ತಿರವಾಗಿದೆ. ಇದರಿಂದ ಈಗಾಗಲೇ ವಿಶ್ವಾದ್ಯಂತ ಸುಮಾರು 400 ಮಿಲಿಯನ್ ಗೂ ಹೆಚ್ಚು ಬಳಕೆದಾರರನ್ನು ಈ ಆ್ಯಪ್ ಹೊಂದಿದೆ. ಆದರೆ, ಈ ವಾಟ್ಸಪ್ ಅಕೌಂಟ್ ಹೊಂದಿ ಹೆಚ್ಚು ಕಾಲ ಬಳಸದಿದ್ದರೆ ಏನಾಗುತ್ತದೆ ಎಂಬುದು ನಿಮಗೆ ಗೊತ್ತೇ?
ಕೆಲವು ಸಂದರ್ಭಗಳಲ್ಲಿ ವಾಟ್ಸಪ್ ಅಕೌಂಟ್ ಹೊಂದಿದ್ದರೂ ಬಳಕೆ ಮಾಡುತ್ತಿರುವುದಿಲ್ಲ. ಹೀಗೆ ಬಳಕೆ ಮಾಡದೆ 4 ತಿಂಗಳು ಗತಿಸಿದರೆ, ಅಂದರೆ ಬರೋಬ್ಬರಿ 120 ದಿನವಾದರೆ ಸೆಕ್ಯುರಿಟಿ ಹಾಗೂ ಡಾಟಾ ಸಂರಕ್ಷಣೆಗೋಸ್ಕರ ಸ್ವಯಂಚಾಲಿತವಾಗಿ ವಾಟ್ಸಪ್ ಅಕೌಂಟ್ ಡಿ-ಆ್ಯಕ್ಟಿವೇಟ್ ಆಗಿಬಿಡುತ್ತದೆ. ಹೌದು. ಹಾಗಾಗಿ ಬಳಸದೇ ಬಿಟ್ಟಿರೆಂದಾದರೆ ಆ ಅಕೌಂಟ್ ನಿಮಗೆ ಸಿಗುವುದಿಲ್ಲ.
ಇದನ್ನು ಓದಿ: ಟ್ವಿಟ್ಟರ್ ಬಳಸೋಕೆ ನೀವು ದುಡ್ಡುಕಟ್ಟೋ ಕಾಲ ಬರ್ತಿದೆಯಾ?
ಹಾಗಂತ ಮೊಬೈಲ್ ನಂಬರ್ ನಮ್ಮ ಬಳಿಯೇ ಇರುವುದರಿಂದ ಮತ್ತೆ ಅಕೌಂಟ್ ಕ್ರಿಯೇಟ್ ಮಾಡಲು ಬರುವುದಿಲ್ಲವೇ ಎಂಬ ಪ್ರಶ್ನೆ ಮೂಡಬಹುದು. ಖಂಡಿತಾ ಇನ್ನೊಂದು ಅಕೌಂಟ್ ಮಾಡಿಕೊಳ್ಳಬಹುದು. ಆದರೆ, ಈ ಮೊದಲು ನಿಮ್ಮನ್ನು ವಾಟ್ಸಪ್ ಗಳಲ್ಲಿ ಯಾವುದಾದರೂ ಗುಂಪುಗಳಿಗೆ ಸೇರಿಸಿದ್ದರೆ ಅಥವಾ ನೀವೇ ಗುಂಪನ್ನು ರಚನೆ ಮಾಡಿಕೊಂಡಿದ್ದರೆ ಅವುಗಳು ಮಾತ್ರ ನಿಮಗೆ ಲಭಿಸುವುದಿಲ್ಲ. ಅವುಗಳ ಡಾಟಾವೂ ಹಾಗೆ. ಆದರೆ, ಪುನಃ ನಿಮ್ಮನ್ನು ಸೇರಿಸುವ ಅವಕಾಶ ಇರುತ್ತದೆ.
ಕಾಶ್ಮೀರದಲ್ಲಾಗಿತ್ತು ಡಿ-ಆ್ಯಕ್ಟಿವೇಟ್ ಸಮಸ್ಯೆ
ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆದ ಕೇಂದ್ರ ಸರ್ಕಾರದ ನಿರ್ಧಾರದಿಂದ ಅಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವ ಸಂಬಂಧ 2019ರ ಆಗಸ್ಟ್ 5ರಂದು ಇಂಟರ್ನೆಟ್ ಸಹಿತ ಹಲವು ಸೇವೆಗಳನ್ನು ನಿರ್ಬಂಧಿಸಿ ಆದೇಶ ಹೊರಡಿಸಲಾಗಿತ್ತು. ಈ ಮೂಲಕ ಸೋಷಿಯಲ್ ಮೀಡಿಯಾ ಮೂಲಕ ಹರಡಬಹುದಾದ ಸುಳ್ಳು ಸುದ್ದಿಗಳ ಸಹಿತ ಯಾವುದೇ ಮಾಹಿತಿಗಳೂ ವಿನಿಮಯ ಆಗಬಾರದು ಎಂಬ ಉದ್ದೇಶದಿಂದ ಕ್ರಮವಹಿಸಲಾಗಿತ್ತು. ಹೀಗಾಗಿ ವಾಟ್ಸಪ್ ಸೇರಿದಂತೆ ಯಾವುದೂ ಕಾರ್ಯನಿರ್ವಹಣೆ ಮಾಡುತ್ತಿರಲಿಲ್ಲ.
ಇದನ್ನು ಓದಿ: ನಿಮ್ಮ ಫೇಸ್ಬುಕ್ ಲಾಗಿನ್ ವಿವರ ಕದಿಯುವ ಈ ಆ್ಯಪ್ ಡಿಲೀಟ್ ಮಾಡಿ..!
ಹೀಗೆ ಇಂಟರ್ನೆಟ್ ಮೇಲಿನ ನಿರ್ಬಂಧದ ಅವಧಿ ಯಾವಾಗ ನಾಲ್ಕು ತಿಂಗಳು ಗತಿಸಿದವೋ, ಆಗ ಒಂದೊಂದೇ ಗ್ರೂಪ್ ಗಳಲ್ಲಿ ಲೆಫ್ಟ್ ಪರ್ವ ಆರಂಭವಾಯಿತು. ಗ್ರೂಪ್ ಗಳಿಂದ ಏಕಾಏಕಿ ಒಬ್ಬೊಬ್ಬರೇ ಲೆಫ್ಟ್ ಆಗಿ ಕೊನೆಗೆ ಯಾರೂ ಉಳಿಯದಾಗಿದ್ದಾರೆ. ಈ ಬಗ್ಗೆ ಆಕ್ರೋಶಗೊಂಡ ಬಳಕೆದಾರರ ಸಹಿತ ಕೆಲವು ನೆಟ್ಟಿಗರು ಲೆಫ್ಟ್ ಆಗಿರುವ ಸ್ಕ್ರೀನ್ ಶಾಟ್ ತೆಗೆದುಕೊಂಡು ಟ್ವಿಟ್ಟರ್ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದ್ದರು. ಇದಕ್ಕೆ ವಾಟ್ಸಪ್ ಸಹ ಸ್ಪಷ್ಟನೆ ಕೊಟ್ಟಿತ್ತು.
ವಾಟ್ಸಪ್ ಹೇಳೋದೇನು?
ವಾಟ್ಸಪ್ ತನ್ನ ನೀತಿ-ನಿಯಮದಲ್ಲೇ ಸ್ಪಷ್ಟವಾಗಿ ಉಲ್ಲೇಖಿಸಿದೆ. ಇಲ್ಲಿ ಅಕೌಂಟ್ ಹೊಂದಿದವರು ಬಳಸದೆ ಹಾಗೆಯೇ ಇಟ್ಟುಕೊಂಡರೆ ಅಕೌಂಟ್ ಡಿ-ಆ್ಯಕ್ಟಿವೇಟ್ ಆಗುವುದು ಮಾತ್ರವಲ್ಲ, ಅದರಲ್ಲಿ ಇರುವ ಡಾಟಾ ಸಹ ಸಿಗದು. ಹೌದು, ಕೇವಲ 45 ದಿನಗಳ ಕಾಲ ವಾಟ್ಸಪ್ ಬಳಸದೇ ಇದ್ದರೆ ಖಾತೆದಾರರು ತಮ್ಮ ಡಾಟಾವನ್ನು ಕಳೆದುಕೊಳ್ಳುತ್ತಾರೆ. ಆದರೆ, ನೀವು ಇಷ್ಟು ಸಮಯ ಕಾಲ ಬಳಸದೆ, ಬಳಿಕ ಬೇರೆ ಖಾತೆಯಿಂದ ಅಕೌಂಟ್ ಆ್ಯಕ್ಟೀವ್ ಮಾಡಿಕೊಂಡರೆ ಈ ಮೊದಲು ಹೊಂದಿರುವ ಡಾಟಾ ಸಿಗುವುದಿಲ್ಲ.
ಇದನ್ನು ಓದಿ: ಟಿಕ್‌ಟಾಕ್ ಗೆ ಪರ್ಯಾಯವಾಗಿ ರೀಲ್ಸ್ ಬಿಟ್ಟ ಇನ್‌ಸ್ಟಾಗ್ರಾಂ!
ಹೀಗಾಗಿ ಸೆಕ್ಯುರಿಟಿ ಮೇಂಟೇನೆನ್ಸ್ ಹಾಗೂ ಡಾಟಾ ಸಂರಕ್ಷಣೆಗೋಸ್ಕರ ಇರುವ 120 ದಿನಗಳ ಅವಧಿಯಲ್ಲಿ ಬಳಕೆ ಮಾಡುತ್ತಿದ್ದರೆ ಯಾವುದೇ ಸಮಸ್ಯೆ ಇರುವುದಿಲ್ಲ. ಇನ್ನು ಅದಕ್ಕೂ ಮೀರಿ ಬಳಸದೇ ಇದ್ದರೆ ಅಕೌಂಟ್ ಅನ್ನು ಡಿಆ್ಯಕ್ಟಿವೇಟ್ ಮಾಡಿ ಎಲ್ಲ ಗ್ರೂಪ್ ಗಳಿಂದ ಸಹ ಆಟೋಮ್ಯಾಟಿಕ್ ಆಗಿ ರಿಮೂವ್ (ಲೆಫ್ಟ್) ಆಗುವಂತೆ ಮಾಡಿಬಿಡುತ್ತದೆ.