ಪಾಕ್‌ಗೆ ಮಾನವ ಕಳ್ಳಸಾಗಣೆ: 22 ವರ್ಷದ ನಂತರ ತಾಯ್ನೆಲ ಭಾರತಕ್ಕೆ ಮರಳಿದ ಹಮೀದಾ ಬಾನು
22 ವರ್ಷಗಳ ಹಿಂದೆ ಪಾಕಿಸ್ತಾನಕ್ಕೆ ಕಳ್ಳಸಾಗಣೆ ಮಾಡಲಾಗಿದ್ದ ಹಮೀದಾ ಬಾನು ಅವರು ವಾಘಾ ಗಡಿಯ ಮೂಲಕ ಭಾರತಕ್ಕೆ ಮರಳಿದ್ದಾರೆ. ಅವರನ್ನು ದುಬೈನಲ್ಲಿ ಉದ್ಯೋಗದ ಆಮಿಷವೊಡ್ಡಿ ಪಾಕಿಸ್ತಾನಕ್ಕೆ ಕಳ್ಳಸಾಗಣೆ ಮಾಡಲಾಗಿತ್ತು.
ಅಮೃತಸರ: 22 ವರ್ಷದ ಹಿಂದೆ ಪಾಕಿಸ್ತಾನಕ್ಕೆ ಮಾನವ ಕಳ್ಳಸಾಗಣೆ ಮೂಲಕ ಅಪಹರಣಕ್ಕೊಳಗಾಗಿದ್ದ ಮಹಿಳೆ ಬರೋಬ್ಬರಿ 22 ವರ್ಷಗಳ ನಂತರ ತಾಯ್ನೆಲ ಭಾರತಕ್ಕೆ ಮರಳಿದ್ದಾರೆ. ಹಮೀದಾ ಬಾನು ಎಂಬುವವರೇ ಕಳ್ಳಸಾಗಣೆಯ ನಂತರವೂ ಹೀಗೆ ಭಾರತಕ್ಕೆ ಮರಳಿದ ಮಹಿಳೆ. 75 ವರ್ಷದ ಹಮೀದಾ ಬಾನು ಅವರು ಸೋಮವಾರ ವಾಘಾ ಗಡಿಯ ಮೂಲಕ ಭಾರತದ ಅಟರಿ ಜಂಕ್ಷನ್‌ಗೆ ಬಂದು ತಲುಪಿದ್ದಾರೆ. ಈ ಮಹತ್ವದ ಕ್ಷಣವೂ ಬಹಳ ಸುದೀರ್ಘ ಕಾಲದವರೆಗೆ ಈ ಕ್ಷಣಕ್ಕಾಗಿ ಕಾಯುತ್ತಿದ್ದ ಹಮೀದಾ ಹಾಗೂ ಅವರ ಕುಟುಂಬವನ್ನು ಭಾವುಕರಾಗಿಸಿತ್ತು.
ಅಟರಿ ಜಂಕ್ಷನ್‌ನಲ್ಲಿ ಅವರ ಸೋದರಿ, ಅಳಿಯ ಹಾಗೂ ಸಹೋದರ ಅವರನ್ನು ಬಹಳ ಭಾವುಕ ಹಾಗೂ ಆತ್ಮೀಯತೆಯಿಂದ ಬರ ಮಾಡಿಕೊಂಡರು. ಅವರು ಮುಂಬೈನಿಂದ ಅಮೃತಸರ ಎಕ್ಸ್‌ಪ್ರೆಸ್ ಮೂಲಕ ಅಟರಿ ಜಂಕ್ಷನ್‌ಗೆ ಆಗಮಿಸಿ ಹಮೀದಾ ಅವರನ್ನು ಬರ ಮಾಡಿಕೊಂಡರು. ಇತ್ತ ಅವರು ಕರಾಚಿಯಿಂದ ಭಾರತಕ್ಕೆ ಹೊರಡುತ್ತಿದ್ದಂತೆ ಅಲ್ಲಿ ಅವರನ್ನು ಮದುವೆಯಾಗಿದ್ದ ವ್ಯಕ್ತಿ ಹಾಗೂ ಅವರ ಸಂಬಂಧಿಕರು ನಮ್ಮನ್ನು ಮಿಸ್ ಮಾಡಿಕೊಳ್ಳುವಿರಾ ಎಂದು ಕೇಳಿದರಂತೆ, ಆದರೆ ಇದಕ್ಕೆ ಹಮೀದಾ ಖಂಡಿತ ಇಲ್ಲ, ನಾನು ನನ್ನ ತಾಯ್ನೆಲಕ್ಕೆ ಖುಷಿಯಿಂದ ಹೋಗುತ್ತಿದ್ದೇನೆ ಎಂದು ತಿಳಿಸಿದರಂತೆ. ಆದರೆ ಇದು ಮೋಸ ದ್ರೋಹ ಅಲ್ಲವೇ ಎಂದು ಅವರು ಹೇಳಿದಾಗ ತಾನು ಕೇವಲ ತಮಾಷೆ ಮಾಡಿದ್ದು ಎಂದು ಹಾಸ್ಯಮಯವಾಗಿ ಹೇಳಿದ್ದು ಎಂದು ಹೇಳಿ ಅವರನ್ನು ಸಮಾಧಾನ ಪಡಿಸಿದರಂತೆ.
ವಿದೇಶದಲ್ಲಿ ಕೆಲಸ ಮಾಡುವುದಕ್ಕೆ ಹೋಗುವುದು ಬೇಡ ಎಂದು ಅವರ ಪ್ರಸ್ತುತ ಕರ್ನಾಟಕದಲ್ಲಿ ಕೆಲಸ ಮಾಡುತ್ತಿರುವ ಪುತ್ರ ಹೇಳಿದ್ದರಂತೆ, ಆದರೆ ಅವರು ಮಕ್ಕಳಿಗೆ ಉಜ್ವಲ ಭವಿಷ್ಯ ರೂಪಿಸುವ ದೃಷ್ಟಿಯಿಂದ ಅವರು ವಿದೇಶಕ್ಕೆ ಹೋಗಲು ಬಯಸಿದ್ದರಂತೆ. 4 ಮಕ್ಕಳ ತಾಯಿಯಾಗಿರುವ ಹಮೀದಾ ಅವರು 2002ರಲ್ಲಿ ಅಡುಗೆಯವಳಾಗಿ ಕೆಲಸ ಮಾಡುವ ಉದ್ದೇಶದಿಂದ ಅರಬ್ ರಾಷ್ಟ್ರ ಖತಾರ್‌ಗೆ ಹೋಗಿದ್ದರು. ವಿದೇಶದಲ್ಲಿ ಉದ್ಯೋಗ ನೀಡುವ ಏಜೆಂಟ್ ಸಂಸ್ಥೆಯೊಂದು ಅವರಿಗೆ ನಂತರ ದುಬೈನಲ್ಲಿ ಉದ್ಯೋಗ ನೀಡುವ ಭರವಸೆ ನೀಡಿ ಬಳಿಕ ದುಬೈ ಬದಲು ಪಾಕಿಸ್ತಾನಕ್ಕೆ ಕಳ್ಳಸಾಗಣೆ ಮಾಡಿದ್ದಾರೆ. ಅಲ್ಲಿ ಆಕೆ ಬೀದಿಯಲ್ಲಿ ವಾಸ ಮಾಡಬೇಕಿತ್ತು. ಅಥವಾ ಕೆಲವೊಮ್ಮೆ ಮಸೀದಿಗಳಲ್ಲಿ ಕೆಲ ಕಾಲ ವಾಸ ಮಾಡಬೇಕಿತ್ತು. ನಂತರ ಆಕೆ ಸಣ್ಣ ಶಾಪೊಂದನ್ನು ನಡೆಸಲು ಶುರು ಮಾಡಿದ್ದರು.
ಇದಾದ ನಂತರ ಆಕೆ ಪಾಕಿಸ್ತಾನಿ ವ್ಯಕ್ತಿಯಾದ 'ದಾರ್ ಮುಹಮ್ಮದ್' ಎಂಬಾತನನ್ನು ಮದುವೆಯಾಗಿದ್ದು, ಆತ ಕೆಲ ವರ್ಷಗಳ ಹಿಂದೆ ಸಾವನ್ನಪ್ಪಿದ್ದಾನೆ. ಇದಾದ ನಂತರ ಪಾಕಿಸ್ತಾನದ ಯುಟ್ಯೂಬರ್ ಅವರ ಸಂಪರ್ಕಕ್ಕೆ ಬಂದಿದ್ದಾರೆ. ಇದಾದ ನಂತರ 2022ರಲ್ಲಿ ಹಮೀದಾ ಅವರು ಪಾಕಿಸ್ತಾನಕ್ಕೆ ಹೇಗೆ ಬಂದರು ಎಂಬುದರ ಬಗ್ಗೆ ಸಂದರ್ಶನ ನಡೆಸಿ ಯೂಟ್ಯೂಬ್‌ನಲ್ಲಿ ಪ್ರಸಾರ ಮಾಡಿದ್ದರು. ಇದರಲ್ಲಿ ಮತ್ತೊಬ್ಬ ಭಾರತೀಯ ಮೂಲದ ಬೆಂಗಳೂರಿನ ಮಹಿಳೆ ಶಹನಾಝ್ ಜೊತೆ ಕರಾಚಿಗೆ ಕಳ್ಳಸಾಗಣೆಯಾದ ಬಗ್ಗೆ ಮಾಹಿತಿ ನೀಡಿದ್ದರು.
ಈ ವೀಡೀಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಇಸ್ಲಮಾಬಾದ್‌ನಲ್ಲಿರುವ ಭಾರತದ ಹೈ ಕಮೀಷನರೇಟ್ ಆಕೆಯ ಗುರುತಿನ ಬಗ್ಗೆ ಪರಿಶೀಲನೆ ನಡೆಸಿ ನಂತರ ಆಕೆಗೆ ಕರಾಚಿಯಿಂದ ಲಾಹೋರ್‌ಗೆ ಬರಲು ವಿಮಾನದ ಟಿಕೆಟನ್ನು ಬುಕ್ ಮಾಡಿತ್ತು. ಇದಾದ ನಂತರ ವಾಘ ಗಡಿಗೆ ಅವರನ್ನು ಕಳುಹಿಸಲಾಗಿದ್ದು, ಕೊನೆಗೂ ಅವರು ಭಾರತಕ್ಕೆ ಬಂದು ವಾಘಾ ಗಡಿ ತಲುಪಿದ್ದು ಈಗ ಕುಟುಂಬದ ಜೊತೆ ಒಂದಾಗಿದ್ದಾರೆ. ಕುಟುಂಬದವರ ಹಲವು ವರ್ಷಗಳ ಕಾಯುವಿಕೆ ಕಡೆಗೂ ಅಂತ್ಯಗೊಂಡಿದೆ.