ಯಾವುದೇ ಆಗಲಿ ಒಮ್ಮೆ ಅಭ್ಯಾಸವಾಗಿಬಿಟ್ಟರೆ ಸಾಕು ಕೊನೆಗೆ ಆ ವಸ್ತು ಇಲ್ಲದಿದ್ದರೆ ಏನೋ ಒಂದು ರೀತಿ ಚಡಪಡಿಕೆ. ಅಷ್ಟರಮಟ್ಟಿಗೆ ನಾವು ಅದಕ್ಕೆ ಅಡಿಕ್ಟ್ ಆಗಿಬಿಟ್ಟಿರುತ್ತೇವೆ. ಅದು ಉಚಿತವಾಗಿರಲಿ ಇಲ್ಲವೇ ದುಡ್ಡು ಕೊಟ್ಟು ಬಳಸುವುದಿರಲಿ. ಈಗ ಈ ಅಂಶದ ಲಾಭ ಪಡೆಯಲು ಹೆಸರಾಂತ ಟೆಕ್ ದೈತ್ಯ ಕಂಪನಿ ಟ್ವಿಟ್ಟರ್ ಮುಂದಾಗಿದೆಯೇ ಎಂಬ ಅನುಮಾನ ಮೂಡಿದೆ. ಕಾರಣ, ಈ ಸಂಸ್ಥೆ ಈಗ ಪೇಯ್ಡ್ ಸರ್ವಿಸ್‌ನತ್ತ ದೃಷ್ಟಿ ನೆಟ್ಟಿದೆ. ಇದಕ್ಕೋಸ್ಕರ ಈಗಾಗಲೇ ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಈ ಬಗ್ಗೆ ಟ್ವಿಟ್ಟರ್ ಸಿಇಒ ಏನು ಹೇಳಿದ್ದಾರೆ? ಸದ್ಯ ಯಾವ ಪರಿಸ್ಥಿತಿ ಇದೆ ಎಂಬಿತ್ಯಾದಿಗಳ ಬಗ್ಗೆ ನೋಡೋಣ...

ಈಗಾಗಲೇ ವಿಶ್ವದ ಕೋಟ್ಯಂತರ ಬಳಕೆದಾರರ ಮನಗೆದ್ದಿರುವ ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟ್ಟರ್ ದೊಡ್ಡ ಶಾಕ್ ಕೊಡಲು ಮುಂದಾಗಿದೆ. ಅದು ತನ್ನ ಬಳಕೆದಾರರಿಗೆ ಪೇಯ್ಡ್ ಸರ್ವಿಸ್ ಕೊಡುವ ಬಗ್ಗೆ ಚಿಂತನೆ ಮಾಡಿದ್ದು, ಈ ಸಂಬಂಧ ಪರೀಕ್ಷಾರ್ಥ ಸೇವೆ ಕೊಡುವ ನಿಟ್ಟಿನಲ್ಲಿ ಯೋಜನೆಗಳು ನಡೆಯುತ್ತಿವೆ ಎಂದು ಟ್ವಿಟ್ಟರ್‌ನ ಅಧಿಕೃತ ಮೂಲಗಳು ಹೇಳಿವೆ. ಹಾಗಂತ ಎಲ್ಲ ಬಳಕೆದಾರರೂ ದುಡ್ಡು ಕೊಟ್ಟು ಬಳಸಬೇಕೇ? ಎಂಬಿತ್ಯಾದಿ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ. 

ಟ್ವಿಟ್ಟರ್ ಸಿಇಒ ಜಾಕ್ ಡೋರ್ಸೆ ಅವರಿಗೆ ಇಂಥ ಹೊಸ ಚಿಂತನೆ ಮೂಡಿದ್ದು, ಅವರೂ ಸಹ ಇದು ಚಿಂತನಾ ಮಟ್ಟದಲ್ಲಿದೆ ಎಂದು ಹೇಳಿಕೊಂಡಿದ್ದಾರೆ. ಆದರೆ, ಕಂಪನಿಯ ಸಿಇಒ ಹೇಳುತ್ತಿದ್ದಾರೆಂದರೆ ಈ ಬಗ್ಗೆ ತುಸು ದೃಷ್ಟಿ ಹರಿಸುವುದು ಸೂಕ್ತ. ಈ ಮೂಲಕ ಟೆಕ್ ದೈತ್ಯ ಕಂಪನಿಯು ಸಾಮಾಜಿಕ ಜಾಲತಾಣಗಳ ವೇದಿಕೆಯಲ್ಲಿ ಹೊಸ ಪಥವನ್ನು ಹಾಕಲಿದೆಯೇ ಎಂಬುದು ಟೆಕ್ ವಿಶ್ಲೇಷಕರ ಪ್ರಶ್ನೆಯಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred



ಇದನ್ನು ಓದಿ: ಟಿಕ್‌ಟಾಕ್ ಗೆ ಪರ್ಯಾಯವಾಗಿ ರೀಲ್ಸ್ ಬಿಟ್ಟ ಇನ್‌ಸ್ಟಾಗ್ರಾಂ!

“ಸಂಸ್ಥೆ ಹೆಚ್ಚಿನ ಸಮಯ ಬಾಳಬೇಕೆಂದರೆ ಆದಾಯದ ಮೂಲದ ಅವಶ್ಯಕತೆ ಇರುತ್ತದೆ. ಈ ನಿಟ್ಟಿನಲ್ಲಿ ನಾವು ಹೆಚ್ಚು ಕೇಂದ್ರೀಕರಿಸಿದ್ದು, ಆದಾಯದ ಮೂಲಗಳತ್ತ ಗಮನಹರಿಸುವುದು ಅನಿವಾರ್ಯವಾಗಿದೆ. ಹೀಗಾಗಿ ವಿವಿಧ ಮಾರ್ಗಗಳತ್ತ ದೃಷ್ಟಿ ನೆಟ್ಟಿದ್ದೇವೆ. ಈ ಮೂಲಕ ನಮ್ಮ ಜಾಹೀರಾರು ವ್ಯವಹಾರಕ್ಕೂ ಪೂರಕವಾಗಿ ಬಳಸಿಕೊಳ್ಳಬೇಕಿದೆ. ಹೀಗಾಗಿ ಚಂದಾದಾರಿಕೆಯತ್ತ ಗಮನಹರಿಸುತ್ತಿದ್ದೇವೆ” ಎಂದು ಟ್ವಿಟ್ಟರ್ ಸಿಇಒ ಹೇಳಿಕೆ ನೀಡಿದ್ದಾರೆ.

ಈಗಾಗಲೇ ಅನೇಕ ಹೊಸ ಹೊಸ ಪ್ರಯೋಗಗಳಿಗೆ ಒಡ್ಡಿಕೊಳ್ಳುತ್ತಿರುವ ಟ್ವಿಟ್ಟರ್, ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಮುಂದಾಗುತ್ತಿವೆ. ತೀರಾ ಇತ್ತೀಚೆಗೆ ವಾಯ್ಸ್ ಟ್ವೀಟ್ ಅನ್ನು ಪರಿಚಯಿಸುವ ಮೂಲಕ ಬಳಕೆದಾರ ಸ್ನೇಹಿಯಾಗುವತ್ತ ಹೆಜ್ಜೆ ಹಾಕಿತ್ತು. ಈಗ ಎಲ್ಲ ಸೇವೆಗೂ ಬೆಲೆ ಎಂಬ ನಿಟ್ಟಿನಲ್ಲಿ ಚಿಂತನೆ ಮಾಡುತ್ತಿದೆ.