ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಅಪಘಾತ ಶೇ.75ರಷ್ಟು ಇಳಿಮುಖ!
2024ರ ಜುಲೈನಲ್ಲಿ ಹೆದ್ದಾರಿಯಲ್ಲಿ ಸುಧಾರಿತ ಇಂಟೆಲಿಜೆನ್ಸ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (ಐಟಿಎಂಎಸ್) ಅಳವಡಿಸಿದ ನಂತರ ರಸ್ತೆ ಅಪಘಾತಗಳು ನಿಯಂತ್ರಣಕ್ಕೆ ಬಂದಿವೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷದ ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆಯಲ್ಲಿ ಇಳಿಮುಖ ಕಂಡುಬಂದಿದೆ.
ಎಂ.ಅಫ್ರೋಜ್ ಖಾನ್
ರಾಮನಗರ(ಡಿ.17): ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಐಟಿಎಂಎಸ್ (ಇಂಟೆಲಿಜೆನ್ಸ್ ಟ್ರಾಫಿಕ್ ಮ್ಯಾನೇಜ್ ಮೆಂಟ್ ಸಿಸ್ಟಮ್ ) ಅಳವಡಿಸಿದ ನಂತರ ರಸ್ತೆ ಅಪಘಾತಗಳ ಸಂಖ್ಯೆ ಶೇಕಡ 75ರಷ್ಟು ಇಳಿಮುಖವಾಗಿದೆ.
ಬೆಂಗಳೂರು- ಮೈಸೂರು ನಡುವಿನ ಪ್ರಯಾಣದ ಅವಧಿ ಕಡಿಮೆ ಮಾಡುವಲ್ಲಿ ಎಕ್ಸ್‌ಪ್ರೆಸ್ ವೇ ಪ್ರಮುಖ ಪಾತ್ರ ವಹಿಸಿದೆ. ಈ ಹೆದ್ದಾರಿ ಉದ್ಘಾಟನೆಗೂ ಮೊದಲು ಮತ್ತು ಬಳಿಕ ರಸ್ತೆ ಅಪಘಾತಗಳಿಂದ ಸುದ್ದಿಯಾಗಿದ್ದೇ ಅಧಿಕ. ಸಂಚಾರಿ ಪೊಲೀಸರು, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಎಕ್ಸ್‌ಪ್ರೆಸ್ ವೇನಲ್ಲಿ ಅಪಘಾತ ತಪ್ಪಿಸಲು ಅನೇಕ ಕ್ರಮಗಳನ್ನು ಕೈಗೊಂಡಿದ್ದರೂ ಪ್ರಯೋಜನ ಆಗಿರಲಿಲ್ಲ.
2024ರ ಜುಲೈನಲ್ಲಿ ಹೆದ್ದಾರಿಯಲ್ಲಿ ಸುಧಾರಿತ ಇಂಟೆಲಿಜೆನ್ಸ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (ಐಟಿಎಂಎಸ್) ಅಳವಡಿಸಿದ ನಂತರ ರಸ್ತೆ ಅಪಘಾತಗಳು ನಿಯಂತ್ರಣಕ್ಕೆ ಬಂದಿವೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷದ ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆಯಲ್ಲಿ ಇಳಿಮುಖ ಕಂಡುಬಂದಿದೆ.
Bengaluru : ಕರ್ನಾಟಕದಲ್ಲಿ ಗರಿಷ್ಠ ಆದಾಯ ತರುವ ಟೋಲ್ ಪ್ಲಾಜಾ ಇದು, ಒಂದೇ ವರ್ಷದಲ್ಲಿ 308 ಕೋಟಿ ಕಲೆಕ್ಷನ್!
ಕರ್ನಾಟಕ ಸಂಚಾರ ಮತ್ತು ರಸ್ತೆ ಸುರಕ್ಷತೆ ಇಲಾಖೆ ಅಂಕಿ - ಅಂಶಗಳ ಮಾಹಿತಿ ಪ್ರಕಾರ ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಪ್ರವೇಶ ನಿಯಂತ್ರಿತ ಹೆದ್ದಾರಿಯಲ್ಲಿ 2023ರಲ್ಲಿ 523 ರಸ್ತೆ ಅಪಘಾತಗಳು ಸಂಭವಿಸಿದರೆ,
2024ರಲ್ಲಿ 84 ಅಪಘಾತಗಳು ನಡೆದಿವೆ. ಅಲ್ಲದೇ ಕಳೆದ ಎರಡು ತಿಂಗಳಿನಲ್ಲಿ ಈ ಹೆದ್ದಾರಿಯಲ್ಲಿ ರಸ್ತೆ ಅಪಘಾತದಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
2024ರ ನವೆಂಬರ್ ರವರೆಗೆ ಬೆಂಗಳೂರು- ಮೈಸೂರು ಪ್ರವೇಶ ನಿಯಂತ್ರಿತ 117 ಕಿ. ಮೀ. ಹೆದ್ದಾರಿಯಲ್ಲಿ 84 ಅಪಘಾತಗಳು ಸಂಭವಿಸಿದೆ. ಅಲ್ಲದೇ ಗಾಯಗೊಳ್ಳುವ ಪ್ರಕರಣಗಳು ಸಹ ಇಳಿಮುಖವಾಗಿದೆ.
2023ರ ಮಾರ್ಚ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ವೇ ಉದ್ಘಾಟನೆ ಮಾಡಿದ್ದರು. ಆದರೆ, ಈ ರಸ್ತೆ ಅಪಘಾತಗಳ ಕಾರಣದಿಂದಲೇ ಹೆಚ್ಚು ಸುದ್ದಿ ಮಾಡಿತ್ತು.
2023ರಲ್ಲಿ ಈ ಹೆದ್ದಾರಿಯಲ್ಲಿ ನಡೆದ 523 ಅಪಘಾತಗಳಲ್ಲಿ 158 ಜನರು ಸಾವನ್ನಪ್ಪಿದ್ದರು. ಆದ್ದರಿಂದ ಈ ರಸ್ತೆಯ ಸುರಕ್ಷತೆಯ ಬಗ್ಗೆ ಚರ್ಚೆಗಳು ಆರಂಭವಾಗಿದ್ದವು. ಪೊಲೀಸರು ಮಂಡ್ಯ, ರಾಮನಗರ ಜಿಲ್ಲಾ ಪೊಲೀಸರ ಜೊತೆ ಸೇರಿ ರಸ್ತೆ ಅಪಘಾತ ಕಡಿಮೆ ಮಾಡಲು ಹಲವು ಕ್ರಮಗಳನ್ನು ಕೈಗೊಂಡಿದ್ದರು.
ರಸ್ತೆ ಉದ್ಘಾಟನೆಯಾದಾಗ ವಾಹನ ಸವಾರರು ಗಂಟೆಗೆ 130- 140 ಕಿ. ಮೀ. ವೇಗದಲ್ಲಿ ಚಾಲನೆ ಮಾಡುತ್ತಿದ್ದರು. ಇದಕ್ಕಾಗಿ ಪೊಲೀಸರು ಐಟಿಎಂಎಸ್ ಸ್ಥಾಪನೆ ಮಾಡಿದ್ದು, ಈಗ ವಾಹನ ಸವಾರರ ವೇಗದ ಮೇಲೆ ಕ್ಯಾಮರಾ ಕಣ್ಣಿಟ್ಟಿದೆ. ವಾಹನ 100 ಕಿ. ಮೀ. ವೇಗಕ್ಕಿಂತ ಹೆಚ್ಚಿಗೆ ಸಾಗಿದರೆ ದಂಡದ ಚಲನ್ ಮೊಬೈಲ್‌ಗೆ ಬರುವಂತೆ ವ್ಯವಸ್ಥೆ ಮಾಡಿದ್ದಾರೆ.
ಅತಿಯಾದ ವೇಗ ಥ್ರಿಲ್ ಕೊಡುತ್ತದೆ, ಆದರೆ ಇದು ಕೊಲ್ಲುತ್ತದೆ. ಇದನ್ನು ಎಲ್ಲಾ ವಾಹನ ಸವಾರರು ಗಮನದಲ್ಲಿಟ್ಟುಕೊಂಡು ಸಂಚಾರ ನಿಯಮಗಳನ್ನು ಪಾಲಿಸಬೇಕು. ಐಟಿಎಂಎಸ್ ಸ್ಥಾಪನೆ ಕ್ರಮ ಉತ್ತಮ ಪರಿಹಾರವಾಗಿದೆ ಎನ್ನುತ್ತಾರೆ ಪೊಲೀಸ್ ಅಧಿಕಾರಿಗಳು.
ಹೆದ್ದಾರಿಯಲ್ಲಿ ಅಪಘಾತಗಳನ್ನು ಕಡಿಮೆ ಮಾಡಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು 2023ರ ಆಗಸ್ಟ್ 1ರಿಂದಲೇ ಬೈಕ್ ಹಾಗೂ ತ್ರಿಚಕ್ರ ವಾಹನಗಳಿಗೆ ಸಂಚಾರ ನಿಷೇಧಿಸಿದೆ. ಬೈಕ್ ಹಾಗೂ ತ್ರಿಚಕ್ರ ವಾಹನಗಳು ಪ್ರವೇಶ ನಿಯಂತ್ರಿತ ಹೆದ್ದಾರಿಯ ಎರಡೂ ಬದಿಯಲ್ಲಿ ಒದಗಿಸಲಾದ 7 ಮೀಟರ್ ಅಗಲದ, ದ್ವಿಪಥದ ಸೇವಾ ರಸ್ತೆಯನ್ನು ಯಾವುದೇ ಶುಲ್ಕವನ್ನು ಪಾವತಿ ಮಾಡದೇ ಬಳಸಲು ಅನುಕೂಲ ಮಾಡಿಕೊಡಲಾಗಿದೆ.
3 ವರ್ಷದಲ್ಲಿ 85.80 ಕೋಟಿ ದಂಡ ಸಂಗ್ರಹ
ಬೆಂಗಳೂರು - ಮೈಸೂರು ಎಕ್ಸ್ ಪ್ರೆಸ್ ವೇ ಆರಂಭವಾದ ಮೂರು ವರ್ಷಗಳಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಚಾಲಕರಿಗೆ ಐಟಿಎಂಎಸ್ ಮೂಲಕ 85,80,67,000 ರು. ದಂಡ ವಿಧಿಸಲಾಗಿದ್ದು, ಅದರಲ್ಲಿ 4,90,78,500 ರು. ಸಂಗ್ರಹ ಮಾಡಲಾಗಿದೆ.
ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇ: ಮೊದಲ ವರ್ಷದಲ್ಲೇ 438 ಕೋಟಿ ಟೋಲ್ ಸಂಗ್ರಹ
2022 - 23ನೇ ಸಾಲಿನಲ್ಲಿ 4,74,550 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ. ಸೀಟ್ ಬೆಲ್ಟ್ ಹಾಕದ 2,95,413 , ಓವರ್ ಸ್ಪೀಡ್ ಗೆ 49,584 , ಲೈನ್ ಶಿಸ್ತು ಉಲ್ಲಂಘನೆಗೆ 49,652, ಚಾಲಕ ಮೊಬೈಲ್ ಫೋನ್ ಬಳಸಿದ್ದಕ್ಕೆ 8,598 ಪ್ರಕರಣ ದಾಖಲಿಸಲಾಗಿದೆ. ಇದರಲ್ಲಿ 31,57,96,500 ರು. ದಂಡ ಸಂಗ್ರಹಿಸಿದ್ದು, ಇದರಲ್ಲಿ 1,98,78,500 ರು. ದಂಡ ಸಂಗ್ರಹಿಸಲಾಗಿದೆ. ಇನ್ನೂ 29,59,17,000 ರು. ಬಾಕಿ ದಂಡ ವಸೂಲಿ ಆಗಬೇಕಿದೆ.
2023-24ನೇ ಸಾಲಿನಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ 4,55,458 ಪ್ರಕರಣಗಳು ದಾಖಲಾಗಿವೆ. ಸೀಟ್ ಬೆಲ್ಟ್ ಧರಿಸದ 2,12,461, ಓವರ್ ಸ್ಪೀಡ್ ಗೆ 1,96,237, ಲೈನ್ ಶಿಸ್ತು ಉಲ್ಲಂಘನೆಗೆ 36,016 ಹಾಗೂ ಚಾಲಕ ಮೊಬೈಲ್ ಹಿಡಿದು ಚಾಲನೆ ಮಾಡಿದ್ದಕ್ಕೆ 8777 ಪ್ರಕರಣಗಳು ದಾಖಲಾಗಿವೆ. ಈ ನಿಯಮ ಉಲ್ಲಂಘನೆಗೆ 34,28,65,000 ದಂಡ ವಿಧಿಸಿದ್ದು, 1,98,36,500 ರು. ಮಾತ್ರ ಸಂಗ್ರಹಿಸಲಾಗಿದೆ. ಇನ್ನೂ 32,31,28,500 ರು.ದಂಡ ಬಾಕಿ ವಸೂಲಾಗಬೇಕಿದೆ.
2024-25ನೇ ಸಾಲಿನ ನವೆಂಬರ್ ಅಂತ್ಯದವರೆಗೆ ಸಂಚಾರ ನಿಯಮ ಉಲ್ಲಂಘಿಸಿದ ವಾಹನಗಳ ವಿರುದ್ಧ 4,11,932 ಪ್ರಕರಣ ದಾಖಲಿಸಲಾಗಿದೆ. ಸೀಟ್ ಬೆಲ್ಟ್ ಧರಿಸದಿರುವುದಕ್ಕೆ 1,91,437 , ಓವರ್ ಸ್ಪೀಡ್ ಗೆ 29,006 , ಲೈನ್ ಶಿಸ್ತು ಕಾಪಾಡದಿರುವುದಕ್ಕೆ 42,670 , ವಾಹನ ಚಾಲನೆ ಮಾಡುವಾಗ ಚಾಲಕ ಮೊಬೈಲ್ ನಲ್ಲಿ ಮಾತನಾಡಿದ್ದಕ್ಕೆ ಸಂಬಂಧಿಸಿದಂತೆ 4,11,932 ಪ್ರಕರಣಗಳು ದಾಖಲಾಗಿವೆ. ಈ ನಿಯಮ ಉಲ್ಲಂಘನೆಗೆ 24,83,84,000 ರು. ದಂಡ ವಿಧಿಸಿದ್ದು, ಅದರಿಂದ 93,62,500 ರು. ಇನ್ನೂ 23,90,21,500 ಬಾಕಿ ದಂಡ ವಸೂಲಿ ಆಗಬೇಕಿದೆ.