ವ್ಯಾಟ್ಸಾಪ್ ವೆಬ್ ಲಾಗಿನ್ ಮಾಡಿ ಕೆಲಸ ಮುಗಿದು ಅಥವಾ ಬಳಕೆ ಮುಗಿದ ಬಳಿಕ ಲಾಗ್ಔಟ್ ಮಾಡೋದಿಲ್ವಾ? ಬಹುತೇಕರು ಲಾಗಿನ್ ಔಟ್ ಆಗೋದೇ ಇಲ್ಲ. ಇದೀಗ ಕೇಂದ್ರ ಗೃಹ ಸಚಿವಾಲಯ ಮಹತ್ವದ ಎಚ್ಚರಿಕೆ ನೀಡಿದೆ.

ನವದೆಹಲಿ (ನ.23) ಭಾರತದಲ್ಲಿ ವ್ಯಾಟ್ಸಾಪ್ ಬಹುತೇಕರು ಬಳಸುವ ಆ್ಯಪ್. ಅತೀ ಹೆಚ್ಚು ವ್ಯಾಟ್ಸಾಪ್ ಬಳಸುವ ದೇಶಗಳ ಪೈಕಿ ಭಾರತ ಮುಂಚೂಣಿಯಲ್ಲಿದೆ. ಕೆಲಸ ಕಾರ್ಯಗಳ ಸಂಬಂಧ, ವೈಯುಕ್ತಿಕವಾಗಿಯೂ ಹಲವರು ವ್ಯಾಟ್ಸಾಪ್ ವೆಬ್ ಬಳಕೆ ಮಾಡುತ್ತಾರೆ. ಆದರೆ ಒಮ್ಮೆ ಲಾಗಿನ್ ಆದ ಬಳಿಕ ಲಾಗ್ ಔಟ್ ಆಗುವುದು ತೀರಾ ವಿರಳ. ವ್ಯಾಟ್ಸಾಪ್ ವೆಬ್ ಲಾಗ್ ಔಟ್ ಕುರಿತು ಯೋಚನೆಯೇ ಮಾಡಿರುವುದಿಲ್ಲ. ಆದರೆ ಕೇಂದ್ರ ಗೃಹ ಸಚಿವಾಲಯ ಹೈ ಅಲರ್ಟ್ ನೀಡಿದೆ. ವ್ಯಾಟ್ಸಾಪ್ ವೆಬ್ ಲಾಗ್ ಔಟ್ ಆಗದೆ ಹಾಗೇ ಇಡುವುದರಿಂದ ಸೈಬರ್ ದಾಳಿ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ.

ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ಗಳಲ್ಲಿ ವ್ಯಾಟ್ಸಾಪ್ ವೆಬ್ ಬಳಕೆ ಮಾಡುತ್ತಾರೆ. ಸ್ಕ್ಯಾನ್ ಮೂಲಕ ಅಥವಾ ವ್ಯಾಟ್ಸಾಪ್ ವೆಬ್ ಆ್ಯಪ್ ಮೂಲಕ ಲಾಗಿನ್ ಆದ ಬಳಿಕ ಲಾಗ್ ಔಟ್ ಆಗುವುದಿಲ್ಲ. ಶಾಶ್ವತವಾಗಿ ಲಾಗ್ ಇನ್ ಇಟ್ಟಿರುತ್ತಾರೆ. ಇದರಿಂದ ಸೈಬರ್ ದಾಳಿ, ಆರ್ಥಿಕ ವಂಚನೆಗೆ ತುತ್ತಾಗುವ ಸಾಧ್ಯತೆ ಇದೆ ಎಂದು ಗೃಹ ಸಚಿವಾಲಯ ಎಚ್ಚರಿಸಿದೆ.

ಹ್ಯಾಕರ್ ದುರುಪಯೋಗ ಪಡಿಸುವ ಸಾಧ್ಯತೆ ಹೆಚ್ಚು

ಕೇಂದ್ರ ಗೃಹ ಸಚಿವಾಲಯದ ಸೈಬರ್ ಅಪರಾಧ ಬೆದರಿಕಾ ವಿಶ್ಲೇಷಣಾ ಘಟಕ (NCTAU) ಈ ಕುರಿತು ಕೇಂದ್ರ ಗೃಹ ಇಲಾಖೆಗೆ ವರದಿ ನೀಡಿದೆ. ವ್ಯಾಟ್ಸಾಪ್ ವೆಬ್ ಸೆಷನ್ ಲಾಗ್ ಔಟ್ ಆಗದೆ ಹಾಗೇ ಉಳಿಸಿಕೊಂಡರೆ ಹ್ಯಾಕರ್ ಅನಧಿಕೃತವಾಗಿ ಖಾತೆಗೆ ಪ್ರವೇಶ ಮಾಡುತ್ತಾರೆ. ಇದರಿಂದ ಆರ್ಥಿಕ ವಂಚನೆಗಳು, ಸೈಬರ್ ದಾಳಿಗಳು ನಡೆಯಲಿದೆ. ಬಳಿಕ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ಹ್ಯಾಕರ್ ನಿಮ್ಮ ವ್ಯಾಟ್ಸಾಪ್ ಖಾತೆಗೆ ಪ್ರವೇಶಿಸಿ ಖಾಸಗಿ ಸಂದೇಶ ಓದಬಹುದು, ಬೇರೆಯವರಿಗೆ ಕಳುಹಿಸಬಹುದು. ಗ್ರೂಪ್ ಚಾಟ್ ಸೇರಿದಂತೆ ಮಹತ್ವದ ಮಾಹಿತಿಯನ್ನು ಕದಿಯುತ್ತಾರೆ. ಇತ್ತ ಆರ್ಥಿಕ ವಂಚನೆ ಮಾಡುವ ಸಾಧ್ಯತೆ ಇದೆ. ಬಹುತೇಕರು ಪಾಸ್‌ವರ್ಡ್ ಸೇರಿದಂತೆ ಕೆಲ ಗೌಪ್ಯ ದಾಖಲೆಗಳನ್ನು ವ್ಯಾಟ್ಸಾಪ್ ಮೂಲಕ ಹಂಚಿಕೊಳ್ಳುತ್ತಾರೆ ಅಥವಾ ತಮ್ಮ (ಯು)ಗೆ ಫಾರ್ವಡ್ ಮಾಡುತ್ತಾರೆ. ಈ ಎಲ್ಲಾ ಮಾಹಿತಿ ಸೋರಿಯಾಗುವ ಸಾಧ್ಯತೆ ಇದೆ.

ಗೃಹ ಸಚಿವಾಲಯ ನೀಡಿದ ಸೂಚನೆ ಏನು?

ಗೌಪ್ಯ ಮಾಹಿತಿಗಳನ್ನು ವ್ಯಾಟ್ಸಾಪ್ ವೆಬ್ ಮೂಲಕ ಕಳುಹಿಸಬೇಡಿ, ಪಾಸ್‌ವರ್ಡ್, ಬ್ಯಾಂಕ್ ಖಾತೆ ಮಾಹಿತಿ, ಪಿನ್ ನಂಬರ್, ಒಟಿಪಿಗಳನ್ನು ವ್ಯಾಟ್ಸಾಪ್ ವೆಬ್ ಮೂಲಕ ಕಳುಹಿಸಬೇಡಿ. ಶಾಶ್ವತವಾಗಿ ಲಾಗಿನ್ ಆಗಿ ಇಡಬೇಡಿ. ಕೆಲಸ ಮುಗಿದ ಬಳಿಕ ಅಥವಾ ಅಗತ್ಯವಿಲ್ಲದಾಗ ಲಾಗ್ ಔಟ್ ಕಡ್ಡಾಯವಾಗಿ ಮಾಡಿ. ಬ್ರೌಸರ್ ವಿಂಡೋ ಅಥವಾ ಟ್ಯಾಬ್ ಕ್ಲೋಸ್ ಮಾಡಿದರೆ ವ್ಯಾಟ್ಸಾಪ್ ವೆಬ್ ಲಾಗ್ಔಟ್ ಆಗುವುದಿಲ್ಲ. ವ್ಯಾಟ್ಸಾಪ್ ವೆಬ್‌ನಿಂದ ಲಾಗ್ಔಟ್ ಕಡ್ಡಾಯವಾಗಿ ಮಾಡಬೇಕು. ವ್ಯಾಟ್ಸಾಪ್ ವೆಬ್ ಬಳಕೆ ಮಾಡುವಾಗಿ ಇನ್‌ಕಾಗ್ನಿಟೋ (Incognito) ಅಥವಾ ಪ್ರೈವೇಟ್ ಬ್ರೌಸಿಂಗ್ ('Private Browsing) ಮೋಡ್ ಬಳಕೆ ಮಾಡಿ. ಸಾರ್ವಜನಿಕ ಕಂಪ್ಯೂಟರ್, ಇತರರ ಕಂಪ್ಯೂಟರ್, ಸೈಬರ್ ಕೆಫೆಗಳಲ್ಲಿ ವ್ಯಾಟ್ಸಾಪ್ ವೆಬ್‌ನಲ್ಲಿ ಲಾಗಿನ್ ಆಗಬೇಡಿ. ನಿಮ್ಮ ವ್ಯಾಟ್ಸಾಪ್ ಖಾತೆ ಮೇಲೆ ಕಣ್ಣಿಡಬೇಕು. ನಿಮ್ಮ ಅರಿವಿಲ್ಲದೆ ಒಂದೇ ಒಂದು ಸಂದೇಶವೂ ಹೋಗಬಾರದು. ನಿಮ್ಮ ಕಾಂಟಾಕ್ಟ್‌ನಿಂದ ವಿಚಿತ್ರ ಪ್ರತಿಕ್ರಿಯೆ, ಸಂದೇಶ ಬಂದರೆ ಎಚ್ಚೆತ್ತುಕೊಳ್ಳಬೇಕು. ನಿಮ್ಮ ಕಂಪ್ಯೂಟರ್ ಆಪರೇಟಿಂಗ್ ಸಿಸ್ಟಮ್, ಬ್ರೌಸರ್ ಹಾಗೂ ಸೆಕ್ಯೂರಿಟಿ ಸಾಫ್ಟ್‌ವೇರ್ ಅಪ್‌ಡೇಟ್ ಮಾಡಿಕೊಳ್ಳಿ.