ತಾರಸಿಯಲ್ಲಿ ಪ್ಲಾಸ್ಟಿಕ್ ಟ್ರೇನಲ್ಲೇ ಗಂಧಸಾಲೆ ಭತ್ತ ಬೆಳೆದ ಕೃಷಿ ಪ್ರೇಮಿ ಕೃಷ್ಣಪ್ಪ ಗೌಡ್ರು!
ಮನೆಯ ವಿಶಾಲವಾದ ತಾರಸಿ ತುಂಬ ಹಸಿರೋ ಹಸಿರು. ಮಧ್ಯೆ ಇಣುಕುತ್ತಿದೆ ಬಾಗಿರುವ ಹೊಂಬಣ್ಣದ ಉದ್ದನೆಯ ಕದಿರು. ಮಣಿ ಪೋಣಿಸಿದಂತೆ ಕಾಣುವ ಸಣ್ಣ ಸಣ್ಣ ಭತ್ತದ ಹರಳು. ಇಡೀ ಪರಿಸರದ ಮೂಗರಳಿಸುವಂತೆ ಹರಡಿದೆ ಘಮಗಮ ಸುಗಂಧ. ಮಂಗಳೂರಿನ ಕೃಷ್ಣಪ್ಪ ಗೌಡರು ತಾರಸಿಯಲ್ಲಿ ಗಂಧಸಾಲೆ ಭತ್ತ ಬೆಳೆದು ಬೆರಗು ಮೂಡಿಸಿದ್ದಾರೆ.
ಪ. ರಾಮಕೃಷ್ಣ ಶಾಸ್ತ್ರಿ
ಒಂದು ಕಾಲದಲ್ಲಿ ಕರಾವಳಿಯ ತುಂಬ ಇದೇ ಘಮ ಹರಡುತ್ತಿದ್ದ ಗಂಧಸಾಲೆ ಭತ್ತದ ವ್ಯವಸಾಯ ಈ ವಿಶಾಲವಾದ ತಾರಸಿಯಲ್ಲಿ ನಡೆದಿದೆ. ಇನ್ನೂರಕ್ಕಿಂತ ಹೆಚ್ಚು ಬಗೆಯ ದೇಶೀ ತಳಿಗಳು ಅಳಿವಿನಂಚು ತಲುಪುವಾಗ ಈ ಪಾರಂಪರಿಕ ವಿಶಿಷ್ಟ ತಳಿಯೂ ಬರಿದಾಗಿಬಿಟ್ಟಿದೆ. ಮತ್ತೊಮ್ಮೆ ಗಂಧಸಾಲೆ ತಳಿಯ ಭತ್ತವನ್ನು ತಾರಸಿಯಲ್ಲಿ ಬೆಳೆದು ಬಂಗಾರದಂತಹ ಕಾಳುಗಳನ್ನು ಮನೆ ತುಂಬಿಕೊಳ್ಳಲು ಸಿದ್ಧರಾಗಿದ್ದಾರೆ ಕೃಷ್ಣಪ್ಪಗೌಡರು. ಮಂಗಳೂರಿನಲ್ಲಿ ಶಿಕ್ಷಣ ಇಲಾಖೆಯ ಉದ್ಯೋಗಿ.
10 ಲಕ್ಷ ಸಂಬಳದ ಕೆಲಸ ಬಿಟ್ಟು ಗುಲಾಬಿ ಕೃಷಿಗಿಳಿದ ಇಂಜಿನಿಯರ್!
ತಾರಸಿ ತುಂಬ ವೈವಿಧ್ಯಮಯ ಗಿಡಗಳನ್ನು ಬೆಳೆಯುವುದು ಅವರ ಪ್ರಾಣಪ್ರಿಯ ಹವ್ಯಾಸ. ಮಂಗಳೂರಿನ ಮರೊಳಿಯ ಲಾಲ್ ಬಹದ್ದೂರ್ ಶಾಸ್ತ್ರಿ ಬಡಾವಣೆಯಲ್ಲಿ ಅವರ ಮನೆಯಿದೆ.
ಈ ಅಕ್ಕಿಗೆ ಕೆಜಿಗೆ ಸಾವಿರ ರು.ವರೆಗೆ ದರ ಇರುತ್ತೆ!
ಹಲವು ವರ್ಷಗಳಿಂದ ವರ್ಷಕ್ಕೊಂದು ತಳಿಯ ಭತ್ತ ಬೆಳೆದು ಮನೆ ತುಂಬಿಸಿಕೊಳ್ಳುವವರಿಗೆ ಉಚಿತವಾಗಿ ಕೈತುಂಬ ತೆನೆ ಹಂಚುವ ಕಾಯಕ ಗೌಡರದು. ಈ ವರ್ಷ ಗಂಧಸಾಲೆ ಬೆಳೆಯುವ ಯೋಚನೆ ಮಾಡಿದಾಗ ಎಲ್ಲಿಯೂ ಬೀಜ ಸಿಗಲಿಲ್ಲ. ನಿರಾಶರಾಗಲಿಲ್ಲ ಅವರು. ಕೊಡಗಿನ ಭಾಗಮಂಡಲದಲ್ಲಿರುವ ಬಂಧುಗಳ ಮೂಲಕ ಕಾಲು ಕಿಲೋ ಬೀಜ ಸಂಪಾದಿಸಿದರು. ಕೇರಳದ ವಯನಾಡಿನಲ್ಲಿ ಈಗಲೂ ಈ ಸಂಪ್ರದಾಯಬದ್ಧ ತಳಿಯ ವ್ಯವಸಾಯ ಮಾಡುತ್ತಿದ್ದಾರಂತೆ. ಮಲ್ಲಿಗೆಯಂತೆ ಅರಳುವ ಸಣ್ಣಕ್ಕಿ, ಪೌಷ್ಟಿಕಾಂಶದ ಕಣಜ. ಔಷಧಿ ಮತ್ತು ವಿಧವಿಧದ ಆಹಾರ ತಯಾರಿಕೆಗೂ ಅನುಪಮ. ಕೇರಳೀಯರ ಮದುವೆ ಮತ್ತಿತರ ಹಬ್ಬಗಳಿಗೆ ಘಮಘಮದ ಅಕ್ಕಿ ಬೇಕೇ ಬೇಕು. ಹೀಗಾಗಿ ಇದರ ವ್ಯವಸಾಯ ಮಾಡಿಯೇ ಮಾಡುತ್ತಾರೆ. ಒಂದು ಕಿಲೋ ಅಕ್ಕಿಗೆ ಒಂದು ಸಾವಿರ ರೂಪಾಯಿ ಬೆಲೆಯೂ ಇದೆ ಎಂದು ಮಾಹಿತಿ ನೀಡುತ್ತಾರೆ ಗೌಡರು.
ಜೇನುಕೃಷಿ ಮಾಡಿ ಲಕ್ಷ ಎಣಿಸುವ ಅರವಿಂದ್!
ಪ್ಲಾಸ್ಟಿಕ್ ಟ್ರೇಯಲ್ಲಿ ಭತ್ತದ ಪೈರು
ಗಂಧಸಾಲೆ ದೀರ್ಘಕಾಲದ ಬೆಳೆ. ಎಪ್ರಿಲ್-ಮೇ ತಿಂಗಳಲ್ಲಿ ಬಿತ್ತನೆ ಮಾಡಿದರೆ ಕೊಯ್ಲಿಗೆ ಬರುವುದು ಅಕ್ಟೋಬರ ಕೊನೆಗೆ. ಅಲ್ಲದೆ ಅದರ ಸುಗಂಧಿತ ತೆನೆಗಳಿಂದ ಆಕರ್ಷಿತವಾಗಿ ದೂರದೂರದಿಂದ ಗಿಳಿ ಮತ್ತಿತರ ಹಕ್ಕಿಗಳ ದಂಡು ದೌಡಾಯಿಸುತ್ತದೆ. ನೆಟ್ ಹಾಕಿದರೆ ಮಾತ್ರ ತೆನೆ ಕೈಸೇರಬಹುದು. ಕೃಷ್ಣಪ್ಪಗೌಡರು ಪ್ರತೀ ವರ್ಷ ವಿಷು ಕಣಿಯ ದಿನ ಹೊಸ ವ್ಯವಸಾಯದ ಬಿತ್ತನೆ ಮಾಡುವುದು ವಾಡಿಕೆ. ಈ ಸಲವೂ ಗಂಧಸಾಲೆಯ ಬೀಜಗಳನ್ನು ಪ್ಲಾಸ್ಟಿಕ್ ಟ್ರೇಗೆ ಮಣ್ಣು ಹರಡಿ ಬಿತ್ತಿ ನೇಜಿ ತಯಾರಿಸಿದ್ದಾರೆ. ದೊಡ್ಡ ಗೋಣಿಗಳಿಗೆ ಅರ್ಧದಷ್ಟು ಬೀದಿ ಬದಿಯ ಪೋಷಕ ಮಣ್ಣು, ಹುಡಿ ಸೆಗಣಿ, ಬೂದಿ, ಸುಡುಮಣ್ಣು ಬೆರೆಸಿ ತುಂಬಿದ್ದಾರೆ. ಮೇ ತಿಂಗಳಲ್ಲಿ ನೂರಾರು ಗೋಣಿಚೀಲಗಳಿಗೆ ಎರಡೆರಡರಂತೆ ನೇಜಿ ನಾಟಿ ಮಾಡಿದ್ದಾರೆ. ಆರಂಭದಲ್ಲಿ ಮಳೆ ಕೈ ಕೊಟ್ಟಾಗ ತುಂತುರು ನೀರು ಹನಿಸಿದ್ದಾರೆ. ರೋಗ ಬರದಿರಲಿ ಎಂದು ಬೇವಿನೆಣ್ಣೆ, ಹುಳಿ ಮಜ್ಜಿಗೆ, ಗಾಂಧಾರಿ ಮೆಣಸಿನ ಮಿಶ್ರಣದ ಕೀಟನಾಶಕ ಸಿಂಪಡಿಸಿದ್ದಾರೆ. ಹಸಿರು
ಭತ್ತದ ಗಿಡ ಹುಲುಸಾಗಿ ಸೊಕ್ಕಿ ಬೆಳೆದಿದೆ. ತೆನೆಯನ್ನು ಕಾಡುವ ಕೀಟಗಳೂ ಬಳಿಗೆ ಸುಳಿದಿಲ್ಲ.
ಬೆಳೆದ ಭತ್ತವನ್ನು ಹತ್ತು ಜನಕ್ಕೆ ಹಂಚುತ್ತಾರೆ!
ಗೌಡರ ಶ್ರಮ ಫಲ ಕೊಟ್ಟಿದೆ. ಬಾಗಿದ ಹೊಂಗದಿರು ಮನೆ ತುಂಬ ಪರಿಮಳ ಹರಡುತ್ತಿದೆ. ಬಂಗಾರದಂತಹ ಗಂಧಸಾಲೆಯನ್ನು ಬೊಗಸೆಗಳಲ್ಲಿ ತುಂಬಿಕೊಳ್ಳಲು ಸಿದ್ಧರಾಗಿದ್ದಾರೆ ಮನೆ ಮಂದಿ. ಶ್ರಮದ ಫಲವನ್ನು ಹತ್ತು ಮಂದಿಗೆ ಹೀಗೆಯೇ ಹಂಚುವಲ್ಲಿ ಗೌಡರಿಗೊಂದು ಆತ್ಮತೃಪ್ತಿಯಿದೆ. ಗಂಧಸಾಲೆಯ ಬಗೆಗೆ ಒಂದಷ್ಟು ಮಾಹಿತಿಗಳನ್ನೂ ಕಲೆ ಹಾಕಿದ್ದಾರೆ ಗೌಡರು. ರೋಗ ನಿರೋಧಕ ಶಕ್ತಿಯನ್ನು ಅತ್ಯಧಿಕಗೊಳಿಸುವ ಆಹಾರದ ಸಾಲಿನಲ್ಲಿ ಈ ಭತ್ತಕ್ಕೂ ಆಹಾರ ಸಂಶೋಧನಾಲಯ ಸ್ಥಾನ ನೀಡಿದೆಯಂತೆ. ರೈತರ ಹಕ್ಕುಗಳ ಕೃಷಿ ಪ್ರಾಧಿಕಾರ ಸಚಿವಾಲಯ ಸಂರಕ್ಷಣೆಗೆ ಮುಂದಾಗಿರುವ 250ದೇಶೀ ಭತ್ತದ ತಳಿಗಳಲ್ಲಿ ಇದೂ ಸೇರಿದೆ. ಇದನ್ನು ಭಾರತೀಯ ರೈತರ ಬೆಳೆಯುವ ಹಕ್ಕು ಎಂಬ ಪ್ರಮಾಣೀಕರಣವನ್ನೂ ನೀಡಿದೆ. 1997ರಿಂದಲೂ ಕೇರಳದ ಕೃಷಿ ಜೀವ ವೈವಿಧ್ಯ ಕೇಂದ್ರವು ಈ ತಳಿಯ ಸಂರಕ್ಷಣೆಗೆ ಶ್ರಮಿಸುತ್ತಿದೆಯಂತೆ. ಕೃಷ್ಣಪ್ಪ ಗೌಡ ಅವರ ಮೊಬೈಲ್ 93429909975 ಸಂಪರ್ಕಿಸಿ.
ಕರ್ನಾಟಕದಲ್ಲೊಂದು ಬಾಳೆ ಗ್ರಾಮ; ಗದಗ ಜಿಲ್ಲೆಯ ಹಮ್ಮಗಿಗೆ ಭೇಟಿ ನೀಡಿ!