ಭಾಷಾ ಪ್ರೀತಿಗೆ ಎಲ್ಲೆ ಎಲ್ಲಿ.. ಅಮೆರಿಕಾದ ಕನ್ನಡ 'ಕಲಿ'ಗಳು
ಅಮೆರಿಕಾದಲ್ಲಿ ಹುಟ್ಟಿ ಬೆಳೆದ ತಮ್ಮ ಮಕ್ಕಳಿಗೆ ಕನ್ನಡ ಕಲಿಸುವ ಸದುದ್ದೇಶವನ್ನು ಹೊತ್ತಿಕೊಂಡು 2006 ರಲ್ಲಿ ‘ಆಟದೊಡನೆ ಪಾಠ’ ಎಂಬ ಧ್ಯೇಯವನ್ನಿಟ್ಟುಕೊಂಡು ಪ್ರಾರಂಭವಾದ ಕನ್ನಡ ಕಲಿ ಶಾಲೆಗೆ ಈಗ 13 ರ ಹರೆಯ. ಇಲ್ಲಿ ಮಕ್ಕಳಿಗೆ ಕನ್ನಡ ಭಾಷೆಯನ್ನು ಓದಲು ಹಾಗು ಬರೆಯಲು ಪಠ್ಯಕ್ರಮಗಳ ಮೂಲಕ ಸರಳವಾದ ರೀತಿಯಲ್ಲಿ ಕಲಿಸುತ್ತಾರೆ.
ಅಮೆರಿಕದಲ್ಲಿ ಹುಟ್ಟಿ ಬೆಳೆದ ಮೊಮ್ಮಗ ಊರಿಗೆ ಬಂದರೆ ಇಂಗ್ಲೀಷಿನಲ್ಲಿ ಮಾತನಾಡುವುದು ಹೇಗೆಂಬ ಚಿಂತೆಯಲ್ಲಿದ್ದ ಅಜ್ಜ. ಮೊಮ್ಮಗ ಬಂದು ಶುದ್ಧ ಕನ್ನಡದಲ್ಲಿ ‘ಅಜ್ಜಾ ಆರಾಮಾ, ಹೇಗಿದಿಯಾ..’ ಎಂದಾಗ ಅಚ್ಚರಿಯೋ ಅಚ್ಚರಿ.
ಇಂಥದ್ದೊಂದು ಅಚ್ಚರಿಯ ಹಿಂದೆ ಅಮೆರಿಕದಲ್ಲೇ ಉದ್ಯೋಗಿಗಳಾಗಿರುವ ನಮ್ಮ ನಾಡಿನ ಮಹಿಳೆಯರ ಅಪಾರ ಶ್ರಮ ಅಡಗಿದೆ. ‘ಕನ್ನಡ ಕಲಿ’ ಎಂಬ ಸಂಘಟನೆಯನ್ನು ಹುಟ್ಟುಹಾಕುವ ಮೂಲಕ ಅಮೆರಿಕದಲ್ಲಿ ಕನ್ನಡದ ಕಂಪನ್ನು ಮೂಡಿಸುತ್ತಿರುವ ವಿದ್ಯಮಾನ ಇದು. ಉತ್ತರ ಕ್ಯಾಲಿಫೋರ್ನಿಯಾದ ಕನ್ನಡಕೂಟ ಸಂಸ್ಥೆ ಅಡಿಯಲ್ಲಿ 2006ರಲ್ಲಿ ‘ಕನ್ನಡಕಲಿ’ ಅಸ್ತಿತ್ವಕ್ಕೆ ಬಂತು. ಯಾವುದೆ ಫಲಾಪೇಕ್ಷೆ ಇಲ್ಲದೆ 37 ಸ್ವಯಂಸೇವಕ ಶಿಕ್ಷಕರು ಇಲ್ಲಿ ಪಾಠ ಮಾಡುತ್ತಾರೆ. ಕನ್ನಡಕಲಿಯಲ್ಲಿ 6 ವರ್ಷ ಕಲಿತು ಪದವೀಧರರಾಗಿ ಈಗ ಶಿಕ್ಷಕರಿಗೆ ಸಹಾಯ ಮಾಡುವ 16 ಯುವಕ, ಯುವತಿಯರಿದ್ದಾರೆ.
ಕನ್ನಡ ಕಟ್ಟಿದವರು: ಸರ್ಕಾರಿ ಶಾಲೆಗಳಿಗೆ ಮರುಜೀವ ನೀಡಿದ ಉತ್ಸಾಹಿ ಅನಿಲ್ ಶೆಟ್ಟಿ
ಅನಿವಾಸಿ ಕನ್ನಡಿಗರ ಭಾಷಾ ಪ್ರೀತಿ
ಅಮೆರಿಕದಲ್ಲಿ ಹುಟ್ಟಿಬೆಳೆದ ಕನ್ನಡಿಗರಿಗೆ ಕನ್ನಡವೇ ಬಾರದ ಸಂಗತಿಯನ್ನು ಮನಗಂಡು ಅವರಿಗೆ ತಾಯ್ನಾಡಿನ ಭಾಷೆಯನ್ನು ಕಲಿಸುವ ಉದ್ದೇಶದಿಂದ ಈ ಕನ್ನಡ ಕಲಿ ಹುಟ್ಟಿಕೊಂಡಿತು.
ಕನ್ನಡ ಕಲಿಯ ಒಟ್ಟೂ ಆರು ತರಗತಿಗಳು ನಡೆಯುತ್ತಿವೆ. 13 ವಿಭಾಗಗಳಿವೆ. ಮಿಲ್ಟಿಟಾಸ್ ಮುಖ್ಯ ಕೇಂದ್ರವೊಂದರಲ್ಲೆ 350ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಮೂರೂ ಶಾಖೆಗಳು ಸೇರಿ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕನ್ನಡ ಕಲಿಯುತ್ತಿದ್ದಾರೆ. 2018ರಲ್ಲಿ ಹೊಸದಾಗಿ ಎರಡು ಶಾಖೆಗಳನ್ನುಎವರ್ ಗ್ರೀನ್ ಮತ್ತು ಸ್ಯಾನ್ ರೋಮನ್‌ಗಳಲ್ಲಿ ಆರಂಭಿಸಲಾಗಿದೆ.
ಸ್ವತಂತ್ರ ಪಠ್ಯಕ್ರಮ
ಈ ಅನಿವಾಸಿ ಕನ್ನಡಿಗರ ಶಾಲೆಯಲ್ಲಿ ಸ್ವತಂತ್ರ ಪಠ್ಯ ಕ್ರಮ ಇದೆ. 1 ನೇ ತರಗತಿಯಿಂದ 3 ನೇ ತರಗತಿವರೆಗೆ ಇವರೆ ಪಠ್ಯ ಪುಸ್ತಕಗಳನ್ನು ತಯಾರಿಸಿದ್ದಾರೆ. 4, 5 ಮತ್ತು 6ನೇ ತರಗತಿಗೆ ಮುಂಬರುವ ವರ್ಷಗಳಲ್ಲಿ ಪಠ್ಯ ಪುಸ್ತಕಗಳನ್ನು ತಯಾರಿಸುವ ಆಶಯವಿದೆ. ಈಗ 4,5 ಮತ್ತು 6ನೇ ತರಗತಿಗೆ ಕರ್ನಾಟಕ ಸರ್ಕಾರದ ಪ್ರಥಮ ಭಾಷೆ ಪುಸ್ತಕಗಳನ್ನು ಬಳಸುತ್ತಿದ್ದಾರೆ.
ಪರದೇಶದಲ್ಲಿ ಕನ್ನಡ ಕಲಿಕೆಯ ಸವಾಲು
ಅಮೆರಿಕ್ಕನ್ನಡದ ಮಕ್ಕಳಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಕನ್ನಡ ಕಲಿಸಲು ಬೇಕಾದ ಪಠ್ಯಕ್ರಮ ಹಾಗು ಸಾಮಗ್ರಿಗಳನ್ನು ಹುಡುಕುವುದು ಕನ್ನಡ ಕಲಿ ಪ್ರಾರಂಭಿಕ ದಿನಗಳಲ್ಲಿ ಎದುರಿಸಿದ ಸವಾಲುಗಳಲ್ಲಿ ಒಂದು. ಅದರ ಕೊರತೆ ನೀಗಿಸಲು, ಕಳೆದ ಎರಡು ವರ್ಷಗಳಲ್ಲಿ ಕನ್ನಡ ಕಲಿಯ ಶಿಕ್ಷಕರ ತಂಡದಿಂದಲೇ ಒಂದು ಪುಸ್ತಕ ಸಮಿತಿಯನ್ನು ರಚಿಸಿಕೊಂಡು ‘ಕನ್ನಡ ಕಲಿ’ ಸಂಸ್ಥೆಯ ಆಶ್ರಯದಡಿಯಲ್ಲಿಯೇ ಮೊದಲನೇ ಹಾಗೂ ಎರಡನೇ ತರಗತಿಗಳಿಗೆ ವರ್ಣರಂಜಿತ ಪಠ್ಯಕ್ರಮವನ್ನು ರಚಿಸಿ, ಪುಸ್ತಕಗಳನ್ನು ಮುದ್ರಿಸಿ, ತಮ್ಮ ತರಗತಿಗಳಲ್ಲಿ ಬಳಸುತ್ತಿರುವುದು ಹೆಮ್ಮೆಯ ವಿಷಯ. ಈ ಪುಸ್ತಕಗಳನ್ನು ನಮ್ಮ ಕನ್ನಡ ಕಲಿಯ ಮಕ್ಕಳಲ್ಲದೇ ಸ್ಯಾಕ್ರಮೆಂಟೊ, ಕೆಂಟಕಿ ಹಾಗು ನಾರ್ವೆ ದೇಶದಲ್ಲಿನಲ್ಲಿನ ಕನ್ನಡ ಕಲಿಸುವ ಸಂಸ್ಥೆಯ ಮಕ್ಕಳು ಕೂಡ ಬಳಸುತ್ತಿದ್ದಾರೆ.
ಕನ್ನಡ ಕಟ್ಟಿದವರು:ಮಕ್ಕಳಲ್ಲಿ ಕನ್ನಡಪ್ರೇಮ ಅರಳಿಸುತ್ತಿರುವ ಗುಂಗರಮಳೆ ಮುರಳಿ!
ಹುರುಪಿನ ಕನ್ನಡ ಟೀಂ
ಕನ್ನಡ ಕಲಿ ಪುಸ್ತಕ ಸಮಿತಿಯ ಪ್ರಧಾನ ಸಂಪಾದಕರಾಗಿ ವಸುಧಾ ಹೆಗಡೆ ಕಾರ್ಯನಿರ್ವಹಿಸುತ್ತಿದ್ದಾರೆ. ಜ್ಯೋತಿ ಶೇಖರ್, ಜ್ಯೋತಿ ಸರಗೂರ್, ನಿರುಪಮ ಬಾಯರ್, ಮಂಜರಿ
ಫಡ್ನಿಸ್, ಸುಗುಣ ಶೇಷ ಪ್ರಸಾದ್ ಹಾಗೂ ಸಂಧ್ಯಾಗಾಯತ್ರಿ ಈ ಟೀಂನಲ್ಲಿ ಕನ್ನಡ ಕಲಿಸುತ್ತಾರೆ. ಶಿಕ್ಷಕರೆಲ್ಲ ಸ್ವಯಂಸೇವಕರಾಗಿದ್ದರಿಂದ ಕೇವಲ ಶಾಲಾ ಕಟ್ಟಡ, ವಾರ್ಷಿಕೋತ್ಸವ ಕಾರ್ಯಕ್ರಮ, ಪದವಿ ಪ್ರಧಾನ ಸಮಾರಂಭ ಮತ್ತು ಪಠ್ಯಪುಸ್ತಕಗಳಿಗೆ ಮಾತ್ರ ಖರ್ಚು ಮಾಡಬೇಕಾಗಿದ್ದರಿಂದ ಒಬ್ಬ ವಿದ್ಯಾರ್ಥಿಗಳಿಂದ ವರ್ಷವೊಂದಕ್ಕೆ ತೆಗೆದುಕೊಳ್ಳುವ ನೋಂದಣಿ ಶುಲ್ಕದಲ್ಲಿ ಖರ್ಚು ವೆಚ್ಚಗಳನ್ನು ನಿಭಾಯಿಸಲು ಸಾಧ್ಯವಾಗುತ್ತದೆ. ಕನ್ನಡ ಕಲಿ ಆಡಳಿತ ವರ್ಗದಲ್ಲಿ ಜ್ಯೋತಿ ಸರಗೂರು (ಪ್ರಾಂಶುಪಾಲರು), ಸಂಧ್ಯಾ ಗಾಯತ್ರಿ(ಉಪ ಪ್ರಾಂಶುಪಾಲರು), ನಿರುಪಮಾ ಬಾಯರ್ (ಖಜಾಂಚಿ), ವಸುಧಾ ಹೆಗಡೆ ( ಕಾರ್ಯದರ್ಶಿ) ಹಾಗೂ ವಾಣಿ ಬೆಟ್ಟದಪುರ ( ಜಂಟಿ ಕಾರ್ಯದರ್ಶಿ) ಇದ್ದಾರೆ.
ಸಂಸ್ಥೆಗೀಗ ಹದಿ ಹರೆಯ
ಅಮೆರಿಕಾದಲ್ಲಿ ಹುಟ್ಟಿಬೆಳೆದ ತಮ್ಮ ಮಕ್ಕಳಿಗೆ ಕನ್ನಡ ಕಲಿಸುವ ಸದುದ್ದೇಶವನ್ನು ಹೊತ್ತಿಕೊಂಡು 2006 ರಲ್ಲಿ ‘ಆಟದೊಡನೆ ಪಾಠ’ ಎಂಬ ಧ್ಯೇಯವನ್ನಿಟ್ಟುಕೊಂಡು ಪ್ರಾರಂಭವಾದ ಕನ್ನಡ ಕಲಿ ಶಾಲೆಗೆ ಈಗ 13 ರ ಹರೆಯ. ಇಲ್ಲಿ ಮಕ್ಕಳಿಗೆ ಕನ್ನಡ ಭಾಷೆಯನ್ನು ಓದಲು ಹಾಗು ಬರೆಯಲು ಪಠ್ಯಕ್ರಮಗಳ ಮೂಲಕ ಸರಳವಾದ ರೀತಿಯಲ್ಲಿ ಕಲಿಸುತ್ತಾರೆ.
ಕನ್ನಡ ಹಾಡು, ನಾಟಕ, ಕಾರ್ಯಕ್ರಮ ನಿರೂಪಣೆ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಕ್ಕಳನ್ನು ತೊಡಗಿಸಿ ನಮ್ಮ ತಾಯ್ನಾಡು, ನುಡಿ, ಸಂಸ್ಕೃತಿ, ಆಚಾರ ವಿಚಾರಗಳನ್ನು ಪರಿಚಯಿಸುತ್ತಾರೆ. ಅದರ ಬಗ್ಗೆ ಅಭಿಮಾನ ಮತ್ತು ಆಸಕ್ತಿ ಮೂಡಿಸಿ ಸಂಪೂರ್ಣ ಕನ್ನಡ ಸಂಸ್ಕೃತಿಯನ್ನು ನಮ್ಮ ಮುಂದಿನ ಪೀಳಿಗೆಯು ಅರಿಯುವಂತೆ ಮಾಡಲಾಗುತ್ತಿದೆ.
ಕನ್ನಡ ಕಟ್ಟಿದವರು: ಕನ್ನಡಕ್ಕಾಗಿ ಕೈ ಎತ್ತಿದ ಮೈಸೂರಿನ ತ್ಯಾಗರಾಜ!
ಕನ್ನಡ ಹಬ್ಬ
ಮಕ್ಕಳಿಗೆ ಕನ್ನಡ ಹಾಡುಗಳು, ಕಿರುನಾಟಕಗಳು, ರಸಪ್ರಶ್ನೆ, ಒಗಟುಗಳ ಆಟ ಮುಂತಾದ ಪ್ರಕಾರಗಳಲ್ಲಿ ತರಬೇತಿ ನೀಡಿ, ಮಕ್ಕಳು ಪ್ರತಿ ಶೈಕ್ಷಣಿಕ ವರ್ಷದ ಕೊನೆಯಲ್ಲಿ ಬರುವ ನಮ್ಮ ಕನ್ನಡ ಕಲಿ ಹಬ್ಬದಂದು ವೇದಿಕೆಯ ಮೇಲೆ ಪ್ರದರ್ಶಿಸುವಂತೆ ಮಾಡಲಾಗುತ್ತದೆ. ಕನ್ನಡ ಕಲಿ ಹಬ್ಬವೆಂದರೆ, ಮಕ್ಕಳ ವರ್ಷವಿಡೀ ಕಲಿಕೆಯನ್ನು ಅಭಿನಂದಿಸಲು ಹಾಗೂ ಅವರ ಪ್ರತಿಭೆಯನ್ನು ಅನಾವರಣಗೊಳಿಸುವ ದಿನ. ಆ ದಿನ ಎಲ್ಲ ತರಗತಿಯ ಮಕ್ಕಳು ತಮ್ಮ ಸಹಪಾಠಿಗಳ ಜೊತೆ ಕನ್ನಡ ಕಾರ್ಯಕ್ರಮಗಳನ್ನು ವೇದಿಕೆಯ ಮೇಲೆ ಪ್ರಸ್ತುತ ಪಡಿಸುತ್ತಾರೆ.
ಇದನ್ನು ನೋಡುವುದೇ ಕಣ್ಣಿಗೆ ಹಬ್ಬ. ತಂದೆತಾಯಂದಿರಿಗೆ ಹಾಗೂ ಶಿಕ್ಷಕ ವರ್ಗಕ್ಕೆ ಮಕ್ಕಳ ಬಾಯಲ್ಲಿ ಕನ್ನಡ ನುಡಿಗಳನ್ನು ಕೇಳುವುದೇ ಪರಮಾನಂದ. ಕನ್ನಡ ಕಲಿ ಕುಟುಂಬ ವರ್ಗಕ್ಕೆ, ಕನ್ನಡ ಕಲಿ ಹಬ್ಬ ಮನೆ ಹಬ್ಬದಷ್ಟೇ ಸಂಭ್ರಮ, ಸಡಗರ ಮತ್ತು ಆನಂದವನ್ನು ನೀಡುತ್ತದೆ.
ಕನ್ನಡಕ್ಕೆ ಹೆಚ್ಚುತ್ತಿರುವ ಬೇಡಿಕೆ
ಸ್ಥಳೀಯ ಸ್ವಯಂಸೇವಕರ ಸಹಾಯ, ಸೇವೆಯ ಫಲವಾಗಿ ‘ಕನ್ನಡ ಕಲಿ’, ಸ್ಯಾನ್ ಹೋಸೆಯ ಎವರ್‌ಗ್ರೀನ್ ಮತ್ತು ಸ್ಯಾನ್ ರೋಮನ್ ನಗರಗಳಲ್ಲಿ ತನ್ನ ಎರಡು ಹೊಸ ಶಾಖೆಗಳನ್ನು ಆರಂಭಿಸಿದೆ. ಇದರಿಂದ ಮನೆ ಹತ್ತಿರ ಕನ್ನಡ ಕಲಿಸುವ ಅವಕಾಶ ಕಲ್ಪಿಸಿ ಹೆಚ್ಚು ಮಕ್ಕಳು ಕನ್ನಡ ಕಲಿಯುವಂತೆ ಮಾಡುವುದು ಸಾಧ್ಯವಾಗುತ್ತಿದೆ. ಪ್ರಸ್ತುತ ಕನ್ನಡ ಕಲಿ ಎವರ್ ಗ್ರೀನ್ ಶಾಖೆಯಲ್ಲಿ ನೋಂದಾಯಿಸಿಕೊಂಡಿರುವ ವಿದ್ಯಾರ್ಥಿಗಳ ಸಂಖ್ಯೆ 60 ಹಾಗೂ ಟಿವಿಕೆಎಸ್ ಶಾಖೆಯಲ್ಲಿ ನೊಂದಾಯಿಸಿಕೊಂಡಿರುವ ವಿದ್ಯಾರ್ಥಿಗಳ ಸಂಖ್ಯೆ 62.
ಒಟ್ಟಾರೆ ಈ ವರ್ಷ ಕನ್ನಡ ಕಲಿಯ ಮೂರೂ ಶಾಖೆಗಳ ಮೂಲಕ ಕನ್ನಡ ಕಲಿಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ 428. ಕನ್ನಡ ಕಲಿಯ ಎವಗ್ರೀರ್‍ನ್ ಶಾಖೆಯ ಮುಖ್ಯಸ್ಥೆಯಾಗಿ ಪ್ರತಿಭಾ ಪ್ರಿಯದರ್ಶಿನಿ ಹಾಗೂ ಕನ್ನಡ ಕಲಿ ಟಿವಿಕೆಎಸ್ ಶಾಖೆಯ ಮುಖ್ಯಸ್ಥೆಯಾಗಿ ಸುಗುಣ ಶೇಷಪ್ರಸಾದ್ ಕಾರ್ಯನಿರ್ವಹಿಸುತ್ತಿದ್ದಾರೆ.
ಈ ಎರಡೂ ಶಾಖೆಗಳ ನಾಯಕತ್ವವನ್ನು ಅಂದರೆ ಶಿಕ್ಷಕರ ತರಬೇತಿ, ಪುಸ್ತಕ ವಿತರಣೆ ಹಾಗೂ ಮೇಲ್ವಿಚಾರಣೆ ನೋಡಿಕೊಳ್ಳುವ ಜವಾಬ್ದಾರಿಯನ್ನು ‘ಕನ್ನಡ ಕಲಿ’ ಪ್ರಾಂಶುಪಾಲೆ ಜ್ಯೋತಿ ಸೆರಗೂರ್ ಮತ್ತು ಆಡಳಿತ ತಂಡ ವಹಿಸಿಕೊಂಡಿದೆ. ಇದರ ಬೆನ್ನೆಲುಬಾಗಿ ಕನ್ನಡ ಕಲಿ ಆಡಳಿತ ತಂಡದ ಸಂಧ್ಯಾಗಾಯತ್ರಿ, ವಸುಧಾ ಹೆಗಡೆ ಹಾಗೂ ನಿರುಪಮಾ ಬಾಯರ್ ಇದ್ದಾರೆ. ಕನ್ನಡ ಕಲಿಯ ಶಿಕ್ಷಕ ಶಿಕ್ಷಕಿಯರು ಮತ್ತು ಸ್ವಯಂ ಸೇವಕರು ಸಹಕರಿಸುತ್ತಾರೆ.
- ವಸಂತ್‌ಕುಮಾರ್ ಕತೆಗಾಲ