ಕನ್ನಡ ಕಟ್ಟಿದವರು: ಸರ್ಕಾರಿ ಶಾಲೆಗಳಿಗೆ ಮರುಜೀವ ನೀಡಿದ ಉತ್ಸಾಹಿ ಅನಿಲ್ ಶೆಟ್ಟಿ
ತಮ್ಮ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಿದವರು ತಾವು ಕನ್ನಡ ಮಾಧ್ಯಮದಲ್ಲಿ ಕಲಿತವರು ಅಂತ ಹೆಮ್ಮೆಯಿಂದ ಹೇಳುವುದುಂಟು. ಆದರೆ ಮುಂದಿನ ದಿನಗಳಲ್ಲಿ ಹಾಗೆ ಹೇಳುವವರೇ ಇರಲಿಕ್ಕಿಲ್ಲ ಎಂಬ ಭಯ ಉಂಟಾಗುವ ಸಂದರ್ಭ ಇದು. ಯಾಕೆಂದರೆ ಕನ್ನಡ ಶಾಲೆಗಳು ಮುಚ್ಚುತ್ತಿರುವ ಕಾಲಘಟ್ಟದಲ್ಲಿ ನಾವಿದ್ದೇವೆ. ಪರಿಸ್ಥಿತಿ ಹೀಗಿರುವಾಗ ಸರ್ಕಾರಿ ಕನ್ನಡ ಶಾಲೆಗಳನ್ನು ಉಳಿಸಲು ಪಣತೊಟ್ಟಿರುವ ಉತ್ಸಾಹಿ ತರುಣ ಅನಿಲ್ ಶೆಟ್ಟಿ ಮಾದರಿ ಕೆಲಸ ಮಾಡಿದ್ದಾರೆ.
ರಾಜ್ಯದ ಬಹುತೇಕ ಕಡೆಗಳಲ್ಲಿ ಸರ್ಕಾರಿ ಕನ್ನಡ ಶಾಲೆಗಳಿಗೆ ಮಕ್ಕಳು ಬರುವುದು ಕಡಿಮೆಯಾಗಿ ಆ ಶಾಲೆಗಳನ್ನು ಮುಚ್ಚುವಂತಹ ಪರಿಸ್ಥಿತಿ ಎದುರಾಗಿರುವ ಸಂದರ್ಭ ಇದು. ಈ ಸಮಯದಲ್ಲಿ ಸರ್ಕಾರ ಎಲ್ಲವನ್ನೂ ಸರಿಪಡಿಸಬೇಕು ಎಂದು ಸುಮ್ಮನೆ ಕೂರದೆ ಮಕ್ಕಳು ಕಡಿಮೆಯಾಗಿರುವ ಕೆಲವು ಶಾಲೆಗಳಿಗೆ ಬೇಕಾದಂತಹ ಒಳ್ಳೆಯ ಸೌಲಭ್ಯಗಳನ್ನು ನೀಡಿ, ಉತ್ತಮ ವಿದ್ಯಾಭ್ಯಾಸ ಸಿಗುವಂತೆ ಮಾಡಿ ಆ ಶಾಲೆಗಳನ್ನು ಉಳಿಸಲು ಅವಿರತವಾಗಿ ಶ್ರಮಿಸುತ್ತಿರುವ ಒಬ್ಬ ವ್ಯಕ್ತಿ ಅನಿಲ್ ಶೆಟ್ಟಿ.
ಸರ್ಕಾರಿ ಕನ್ನಡ ಶಾಲೆಯಲ್ಲಿ ಓದಿದ ಋಣ ತೀರಿಸಲು ಸರ್ಕಾರಿ ಕನ್ನಡ ಶಾಲೆಗಳನ್ನು ಉಳಿಸಲು ಅವರು ಆರಂಭಿಸಿರುವ ಅಭಿಯಾನದ ಹೆಸರು ಸರ್ಕಾರಿ ಶಾಲೆ ಉಳಿಸಿ ಅಭಿಯಾನ. ಇದುವರೆಗೆ ಏಳೆಂಟು ಸರ್ಕಾರಿ ಶಾಲೆಗಳಿಗೆ ಮಕ್ಕಳು ಜಾಸ್ತಿಯಾಗುವಂತೆ ಮಾಡಿದ್ದು ಈ ಅಭಿಯಾನದ ಯಶಸ್ಸಿಗೆ ಸಾಕ್ಷಿ.
ಸರ್ಕಾರಿ ಶಾಲೆಯ ಋಣ
ಮೂಲತಃ ಕುಂದಾಪುರದ ಶಂಕರನಾರಾಯಣದವರು. ಅಲ್ಲಿನ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದ ಅವರು ಈಗ ಇನ್‌ವೆಸ್ಟ್‌ಮೆಂಟ್ ಬ್ಯಾಂಕರ್. ಸದ್ಯ ಬೆಂಗಳೂರಿನಲ್ಲಿಯೇ ವಾಸ. ಒಮ್ಮೆ ಶಂಕರನಾರಾಯಣ ಶಾಲೆಗೆ ಆರ್ಥಿಕ ಸಮಸ್ಯೆ ಉಂಟಾಯಿತು. ಅದು ಅನಿಲ್ ಕಿವಿಗೆ ಬಿತ್ತು.
ಕನ್ನಡ ಕಟ್ಟಿದವರು:ಮಕ್ಕಳಲ್ಲಿ ಕನ್ನಡಪ್ರೇಮ ಅರಳಿಸುತ್ತಿರುವ ಗುಂಗರಮಳೆ ಮುರಳಿ!
ಆ ಸಮಸ್ಯೆ ಪರಿಹರಿಸಲು ನೆರವಾದ ಅವರಿಗೆ ಸರ್ಕಾರಿ ಶಾಲೆಗಳು ಎದುರಿಸುತ್ತಿರುವ ನಾನಾ ಸಮಸ್ಯೆಗಳು ಅರಿವಾಗತೊಡಗಿದವು. ಅಂಥದ್ದೇ ಒಂದು ಸಮಯದಲ್ಲಿ ಜ್ಞಾನ ಆಯೋಗಕ್ಕಾಗಿ ಮೋಹನದಾಸ ಪೈ ಮತ್ತು ಕಸ್ತೂರಿ ರಂಗನ್ ಸಿದ್ಧಪಡಿಸಿದ ರಾಜ್ಯ ಶಿಕ್ಷಣ ನೀತಿಯ ಕರಡು ಪ್ರತಿ ಓದುವ ಅವಕಾಶ ಲಭ್ಯವಾಯಿತು.
ಅಲ್ಲಿಂದ ಅನಿಲ್ ಶೆಟ್ಟಿಯವರ ಶಿಕ್ಷಣಕ್ಕಾಗಿ ಹೋರಾಟ ಆರಂಭವಾಯಿತು. ಆ ಶಿಕ್ಷಣ ನೀತಿಯ ಪ್ರಕಾರ ಒಂದರಿಂದ 12 ನೇ ತರಗತಿವರೆಗೆ ಎಲ್ಲರಿಗೂ ಉಚಿತ ಶಿಕ್ಷಣ ಲಭ್ಯವಾಗಬೇಕು. ಆದರೆ ಆ ಶಿಕ್ಷಣ ನೀತಿ ಇನ್ನೂ ಅಂಗೀಕಾರವಾಗಿಲ್ಲ. ಆ ಶಿಕ್ಷಣ ನೀತಿ ಜಾರಿಯಾದರೆ ರಾಜ್ಯದ ಶಿಕ್ಷಣ ಪದ್ಧತಿ ಬದಲಾಗುತ್ತದೆ ಎಂದು ಮನಗಂಡ ಅವರು ಜನರಿಗೆ ಅರಿವು ಮೂಡಬೇಕು ಎಂಬ ಕಾರಣಕ್ಕೆ ರಾಜ್ಯ ಶಿಕ್ಷಣ ನೀತಿ
ಅಂಗೀಕಾರಕ್ಕಾಗಿ ಒಂದು ಮಿಸ್ಡ್ ಕಾಲ್ ಅಭಿಯಾನ ಪ್ರಾರಂಭಿಸಿದ್ದರು. ಆ ಅಭಿಯಾನದ ಮುಂದಿನ ಭಾಗವಾಗಿ ಶುರುವಾಗಿದ್ದು ಸರ್ಕಾರಿ ಶಾಲೆ ಉಳಿಸಿ ಅಭಿಯಾನ.
ಮಕ್ಕಳು ಜಾಸ್ತಿಯಾಗಿದ್ದರೆ, ಶಾಲೆ ಉಳಿದಿದೆ!
ಈ ಅಭಿಯಾನದಲ್ಲಿ ಎರಡು ಮುಖ್ಯ ವಿಚಾರಗಳಿವೆ. ಒಂದು ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಳ್ಳುವ ಕಾರ್ಯಕ್ರಮ. ಎರಡನೆಯದು ಜನರಲ್ಲಿ ಸರ್ಕಾರಿ ಶಾಲೆ ಉಳಿಸುವ ಪ್ರಾಮುಖ್ಯತೆ ತಿಳಿಸುದು. ದತ್ತು ತೆಗೆದುಕೊಳ್ಳುವ ಕಾರ್ಯಕ್ರಮ ಈಗ ಯಶಸ್ವಿಯಾಗಿ ನಡೆಯುತ್ತಿದೆ. ನಿರ್ದೇಶಕ ರಿಷಬ್ ಶೆಟ್ಟಿ ಒಂದು ಶಾಲೆಯನ್ನು ದತ್ತು ತೆಗೆದುಕೊಂಡಿದ್ದಾರೆ.
ಕನ್ನಡ ಕಟ್ಟಿದವರು: ಕನ್ನಡಕ್ಕಾಗಿ ಕೈ ಎತ್ತಿದ ಮೈಸೂರಿನ ತ್ಯಾಗರಾಜ!
ಅದರಿಂದಾಗಿ 24 ಜನ ಮಕ್ಕಳು ಇದ್ದ ಶಾಲೆಯಲ್ಲಿ ಈಗ ಸುಮಾರು 64 ಮಂದಿ ಮಕ್ಕಳು ಇದ್ದಾರೆ. ಶಾಲೆ ಉಳಿಸಿ ಅಭಿಯಾನದ ರಾಯಭಾರಿ ಪ್ರಣೀತಾ ಸುಭಾಷ್ ಹಾಸನ ಸರ್ಕಾರಿ ಶಾಲೆಯೊಂದನ್ನು ದತ್ತು ಪಡೆದುಕೊಂಡಿದ್ದಾರೆ. ಅಲ್ಲಿ ಮೊದಲು 17 ಮಕ್ಕಳಿದ್ದರು. ಈಗ ಸುಮಾರು 80 ಮಂದಿ ಮಕ್ಕಳಿದ್ದಾರೆ ಎಂದು ಅನಿಲ್ ಶೆಟ್ಟಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ಇವರಿಬ್ಬರಲ್ಲದೇ ಪ್ರಜ್ವಲ್ ದೇವರಾಜ್, ಅಕುಲ್ ಬಾಲಾಜಿ ಕೂಡ ಶಾಲೆ ದತ್ತು ತೆಗೆದುಕೊಂಡಿದ್ದು, ಆ ಶಾಲೆಗಳ ಕೆಲಸ ಕಾರ್ಯಗಳು ಭರದಿಂದ ನಡೆಯುತ್ತಿದೆ. ಇದುವರೆಗೆ ಏಳೆಂಟು ಶಾಲೆಗಳನ್ನು ನಾವು ಅಭಿವೃದ್ಧಿ ಪಡಿಸಿದ್ದೇವೆ ಎನ್ನುತ್ತಾರೆ ಅನಿಲ್. ಈ ಮೂಲಕ ಜನರಲ್ಲೂ ಅರಿವು ಮೂಡಿದ್ದು, ಹಲವಾರು ಕಡೆ ಸ್ವತಃ ಆ ಊರಿನವರೇ ಸರ್ಕಾರಿ ಕನ್ನಡ ಶಾಲೆ ಉಳಿಸುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನುತ್ತಾರೆ ಅನಿಲ್.
- ರಾಜ್