Asianet Suvarna News Asianet Suvarna News

ಕನ್ನಡ ಕಟ್ಟಿದವರು:ಮಕ್ಕಳಲ್ಲಿ ಕನ್ನಡಪ್ರೇಮ ಅರಳಿಸುತ್ತಿರುವ ಗುಂಗರಮಳೆ ಮುರಳಿ!

ಸದ್ದಿಲ್ಲದೆ ಹಳ್ಳಿಗಾಡಿನ ಮಕ್ಕಳಲ್ಲಿ ಕನ್ನಡ ಪ್ರೇಮವನ್ನು ಬಿತ್ತುತ್ತಿರುವ ಗುಂಗರಮಳೆ ಮುರಳಿ ಒಂದರ್ಥದಲ್ಲಿ ಕನ್ನಡದ ಪರಿಚಾರಕರು. ತುಮಕೂರು ಜಿಲ್ಲೆ ತಿಪಟೂರು ತಾಲೂಕು ನೊಣವಿನಕೆರೆ ಹೋಬಳಿ ಗುಂಗರಮಳೆಯನ್ನೇ ತನ್ನ ಕನ್ನಡ ಕಾಯಕ ಸ್ಥಾನವನ್ನಾಗಿಸಿಕೊಂಡಿರುವ ಮುರಳಿ ತನ್ನ ದುಡಿಮೆಯ ದುಡ್ಡಿನಲ್ಲಿ ಕಳೆದ 25 ವರ್ಷಗಳಿಂದ ಕನ್ನಡ ಸೇವೆ ಮಾಡುತ್ತಿದ್ದಾರೆ.

about Gungurumale murali free library in Tumakuru
Author
Bangalore, First Published Nov 19, 2019, 10:19 AM IST

ಉಗಮ ಶ್ರೀನಿವಾಸ್‌

1986ರಲ್ಲಿ ಮುರಳಿ ಅವರು ಹೈಸ್ಕೂಲ್‌ಗೆ ಹೋಗುವಾಗ ಕನ್ನಡ ಪುಸ್ತಕಗಳನ್ನು ಓದುವ ಉತ್ಸುಕತೆ ಬೆಳೆಯಿತು. ಆದರೆ ಶಾಲೆಯಲ್ಲಿ ಕೊಡುತ್ತಿದ್ದದ್ದು 6 ತಿಂಗಳಿಗೋ ಅಥವಾ ವರ್ಷಕ್ಕೊಮ್ಮೆ. ಒಮ್ಮೆ ಶಾಲೆಯಿಂದ ವಾಪಾಸ್‌ ತನ್ನ ಗ್ರಾಮಕ್ಕೆ ನಡೆದುಕೊಂಡು ಬರುವಾಗ ಮನೆಯಲ್ಲೇ ಗ್ರಂಥಾಲಯ ಮಾಡಬೇಕೆಂಬ ನಿರ್ಧಾರಕ್ಕೆ ಬಂದರು ಕೇವಲ 5 ಪುಸ್ತಕದಿಂದ ಆರಂಭವಾದ ಗ್ರಂಥಾಲಯಕ್ಕೆ 8 ಸಾವಿರ ಪುಸ್ತಕಗಳು ಹರಿದು ಬಂದವು. ಇವರ ಕನ್ನಡ ಕಾಯಕವನ್ನು ಮೆಚ್ಚಿ ನೇಮಿಚಂದ್ರ, ಕಿ.ರಂ. ನಾಗರಾಜ್‌, ಲಕ್ಷ್ಮೇನಾರಾಯಣ ಭಟ್‌ ಸೇರಿದಂತೆ ಹಲವಾರು ಗಣ್ಯ ಸಾಹಿತಿಗಳು ಪುಸ್ತಕವನ್ನು ಉದಾರವಾಗಿ ನೀಡಿದರು.

ಕನ್ನಡ ಕಟ್ಟಿದವರು:17,500 ಮಂದಿ ಅನ್ಯಭಾಷಿಕರಿಗೆ ಕನ್ನಡ ಕಲಿಸಿದ ಕನ್ನಡ ಗೊತ್ತಿಲ್ಲ ತಂಡ!

ಇವರ ಮನೆಯೇ ಮುಕ್ತ ಗ್ರಂಥಾಲಯ

ಮೂಲತಃ ಕೃಷಿಕರಾದ ಮುರಳಿ ಅವರು ತಮ್ಮ ದುಡಿಮೆಯ ಒಂದು ಭಾಗವನ್ನು ಕನ್ನಡ ಪುಸ್ತಕ ಖರೀದಿಸುವಲ್ಲಿ ಮಗ್ನರಾದರು. ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ತೆರಳಿ ಅಲ್ಲಿ ಪುಸ್ತಕಗಳನ್ನು ಖರೀದಿಸಿ ಮಕ್ಕಳಿಗೆ ನೀಡುತ್ತಿದ್ದರು. ಒಂದರ್ಥದಲ್ಲಿ ಇವರ ಮನೆ ಮುಕ್ತ ಲೈಬ್ರರಿಯಾಗಿತ್ತು. ಯಾವ ಸಮಯದಲ್ಲಾದರೂ ಮಕ್ಕಳು ಇವರ ಮನೆಗೆ ಬಂದು ಬೇಕಾದ ಪುಸ್ತಕವನ್ನು ಓದಬಹುದು. ಅಷ್ಟೆಏಕೆ, ಮನೆಗೆ ಪುಸ್ತಕವನ್ನೂ ತೆಗೆದುಕೊಂಡು ಹೋಗಬಹುದು. ಇದರ ನಿರ್ವಹಣೆಯ ಜವಾಬ್ದಾರಿಯನ್ನು ಮಕ್ಕಳಿಗೆ ವಹಿಸಿದ್ದರು. ಮುರಳಿಯ ಈ ಕಾರ್ಯಕ್ಕೆ ತಂದೆ ಲಕ್ಷ್ಮೇನರಸಿಂಹಾಚಾರ್ಯ, ರುಕ್ಮಿಣಮ್ಮ ಹಾಗೂ ತಂಗಿ ಸುನೀತಾ ಸಾಥ್‌ ನೀಡಿದರು. ಬೃಹದಾಕಾರವಾಗಿ ಗ್ರಂಥಾಲಯ ಬೆಳೆಯಿತು. ಕೇವಲ ಗುಂಗರಮಳೆ ಗ್ರಾಮದವರಷ್ಟೆಅಲ್ಲ ಅಕ್ಕಪಕ್ಕದ ಹಬಕನಹಳ್ಳಿ, ಮಲ್ಲೇನಹಳ್ಳಿ, ಮೇಗಲಕೊಪ್ಪದ ಗ್ರಾಮದ ಮಕ್ಕಳು, ಹಿರಿಯರು ಬಂದು ಕನ್ನಡ ಪುಸ್ತಕವನ್ನು ಓದಿ ಜ್ಞಾನವನ್ನು ವೃದ್ಧಿಸಿಕೊಂಡಿದ್ದಾರೆ. ಇವರ ಗ್ರಂಥಾಲಯ ಬಳಸಿಕೊಂಡು ಓದಿದ ಮಕ್ಕಳು ಸರ್ಕಾರಿ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ.

ಸುಮಾರು 2 ದಶಕಗಳಿಗೂ ಹೆಚ್ಚು ಕಾಲ ಲೈಬ್ರರಿ ನಡೆಸಿದ ಮುರಳಿ ತನ್ನೂರಿಗೆ ಬಂದ ಸರ್ಕಾರಿ ಗ್ರಂಥಾಲಯಕ್ಕೆ ಪುಸ್ತಕಗಳನ್ನು ನೀಡಿ ಹಳ್ಳಿ ಹಳ್ಳಿಗಳಿಗೆ ವಿನೂತನ ಕಾರ್ಯಕ್ರಮದ ಮೂಲಕ ಕನ್ನಡ ಕಟ್ಟುವ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ.

ಕನ್ನಡ ಕಟ್ಟಿದವರು: ಗಡಿಭಾಗದಲ್ಲಿ ಕನ್ನಡದ ಕಂಪು ಹರಡಿದ ಸಿದ್ಧಸಂಸ್ಥಾನ ಮಠ!

ತನ್ನ ಪುಟ್ಟಮನೆಯಲ್ಲಿ ನಿರ್ಮಾಣ ಮಾಡಿದ ಗ್ರಂಥಾಲಯ ಯಶಸ್ವಿಯಾದ ಬಳಿಕ ಸರ್ಕಾರವೇ ಈ ಗ್ರಾಮಕ್ಕೆ ಲೈಬ್ರರಿ ಮಾಡಲು ಮುಂದಾದಾಗ ಖುಷಿಯಿಂದಲೇ ಪುಸ್ತಕವನ್ನು ಧಾರೆ ಎರೆದು ಗ್ರಾಮಗಳಿಗೆ ತೆರಳಿ ಸೊಪ್ಪು ಸದೆ ಕಾರ್ಯಕ್ರಮವನ್ನು ರೂಪಿಸುತ್ತಾ ಬಂದರು. ತಿಂಗಳಿಗೆ ಎರಡು ದಿನ 60 ಮಕ್ಕಳನ್ನು ಅಕ್ಕಪಕ್ಕದ ಕಾಡಿಗೆ ಕರೆದುಕೊಂಡು ಹೋಗಿ ಥರೇವಾಗಿ ಸೊಪ್ಪುಗಳ ಬಗ್ಗೆ ಪರಿಚಯ ಮಾಡಿಕೊಡುತ್ತಾ ಬಂದಿದ್ದಾರೆ.

about Gungurumale murali free library in Tumakuru

ಕನ್ನಡ ಶಾಲೆಯಲ್ಲಿ ಸಂಸ್ಕೃತಿ ಪಾಠ

ಅಲ್ಲದೇ ಪ್ರತಿ ಶಾಲೆಗೆ ಸುಮಾರು 30 ರಿಂದ 40 ಮಂದಿ ಅಜ್ಜಿಯರನ್ನು ಕರೆಸಿ ಆ ಸೊಪ್ಪುಗಳ ಉಪಯೋಗದ ಬಗ್ಗೆ ತಿಳಿಸುವುದು ಈ ಕಾರ್ಯದ ಉದ್ದೇಶ. ಸೊಪ್ಪು ಸದೆಯ ಬಗ್ಗೆ ಅಜ್ಜಿಯರು ಹೇಳುತ್ತಿದ್ದಾರೆ ಸ್ವತಃ ಮುರಳಿ ಅವರು ಕನ್ನಡ ಭಾಷೆ, ಗಾದೆಗಳು, ಕನ್ನಡ ಚರಿತ್ರೆ, ಕವಿಗಳು, ಜನಪ್ರಿಯ ಪುಸ್ತಕಗಳ ಬಗ್ಗೆ ಮಕ್ಕಳಿಗೆ ತಿಳಿ ಹೇಳುವುದಲ್ಲದೆ ಆಯಾ ದಿನದಲ್ಲಿ ಚರ್ಚೆಗೆ ಒಳಪಟ್ಟಪುಸ್ತಕಗಳನ್ನು ತಂದು ಕೊಡುವ ಹೊಣೆಯನ್ನು ಮುರಳಿ ಅವರು ಹೊತ್ತಿಕೊಳ್ಳುತ್ತಿದ್ದಾರೆ.

ಅಜ್ಜಿಯರು ತಮ್ಮ ಮನೆಗಳಿಂದ ಶಾಲೆಗೆ ಬರುವಾಗ ದಾರಿಯಲ್ಲಿ ಸಿಗುವ ಥರೇವಾರಿ ಸೊಪ್ಪುಗಳನ್ನು ಕಿತ್ತುಕೊಂಡು ಬಂದು ಮಕ್ಕಳಿಗೆ ಅದರ ಮಹತ್ವವನ್ನು ತಿಳಿಸುವ ಕಾರ್ಯಕ್ರಮದ ಉಸ್ತುವಾರಿಯನ್ನು ಮುರಳಿ ವಹಿಸಿಕೊಂಡಿದ್ದಾರೆ. ಅಜ್ಜಿಯರು ತರುವ ಸೊಪ್ಪನ್ನು ಮಕ್ಕಳಿಗೆ ಧಾರೆ ಎರೆಸುವ ವಿನೂತನ ಕಾರ್ಯಕ್ರಮ ಮಾಡಿಕೊಂಡು ಬರುತ್ತಿದ್ದಾರೆ. ಒಂದು ಜಾತಿಯ ಸೊಪ್ಪಿನ ಬಗ್ಗೆ ಅಜ್ಜಿಯರು ತಮಗೆ ಗೊತ್ತಿರುವ ಜ್ಞಾನವನ್ನು ತಿಳಿಸಿದರೆ ಮುರಳಿ ಅದರ ಹೆಸರು, ವೈಜ್ಞಾನಿಕ ಮಹತ್ವ, ಅದರಿಂದ ಆಗುವ ಉಪಯೋಗವನ್ನು ತಿಳಿಸುತ್ತಾರೆ.

ಕನ್ನಡ ಕಟ್ಟಿದವರು: ಕ್ಷೌರಿಕ ವೃತ್ತಿ ಮಾಡುತ್ತಲೇ ಕನ್ನಡ ಪರಿಚಾರಕರಾಗಿರುವ ಪವನ್!

ಮಕ್ಕಳಿಗೆ ಸೊಪ್ಪಿನ ಬಗ್ಗೆ ಪರಿಚಯಿಸುತ್ತಲೇ ಅಜ್ಜಿಯರು ತಂದ ಸೊಪ್ಪಿನಲ್ಲಿ ಶಾಲೆಯಲ್ಲೇ ಅಡಿಗೆ ಮಾಡಿಸಿ ಕಥೆ ಹೇಳುತ್ತಾ, ಹಾಡು ಹಾಡಿಕೊಳ್ಳುತ್ತಾ ಒಟ್ಟಿಗೆ ಊಟ ಮಾಡುವ ಕಾರ್ಯಕ್ರಮ. ಶಾಲಾ ಮಕ್ಕಳನ್ನು ಗುರಿಯಾಸಿಕೊಂಡು ಈವರೆಗೆ 40 ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಕಾನ್ವೆಂಟ್‌ ಸ್ಕೂಲ್‌ಗೆ ಹೋಗುತ್ತಿದ್ದ ಎಷ್ಟೋ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಮುರಳಿ ನೇತೃತ್ವದಲ್ಲಿ ನಡೆಯುವ ಸೊಪ್ಪು ಸದೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಲುವಾಗಿ ಪೋಷಕರು ಮಕ್ಕಳನ್ನು ಸರ್ಕಾರಿ ಕನ್ನಡ ಶಾಲೆಗೆ ಸೇರಿಸಿದ್ದೂ ಉಂಟು. ಕನ್ನಡದ ಪರಿಚಾರಕರಾಗಿರುವ ಮುರಳಿ ಊರೂರು, ಗ್ರಾಮಗಳಿಗೆ ತೆರಳಿ ಕನ್ನಡ ಕಟ್ಟುವ ಕೆಲಸವನ್ನು ಸದ್ದಿಲ್ಲದೆ ಮಾಡುತ್ತಾ ಬಂದಿದ್ದಾರೆ.

Follow Us:
Download App:
  • android
  • ios