ಉಬರ್ ಮತ್ತು ಓಲಾ ಈಗಾಗಲೇ ಮಾರುಕಟ್ಟೆಯಲ್ಲಿ ಬಲಿಷ್ಠ ಸ್ಥಾನ ಪಡೆದಿದ್ದರೂ, ಹೊಸ ಐಡಿಯಾದೊಂದಿಗೆ ಪ್ರವೇಶಿಸಿದ ರಾಪಿಡೊ (Rapido) ಇಂದು ಭಾರತದ ಅತಿದೊಡ್ಡ ಮೊಬಿಲಿಟಿ ಸ್ಟಾರ್ಟ್‌ಅಪ್‌ಗಳಲ್ಲಿ ಒಂದಾಗಿದೆ.
ಉಬರ್ ಮತ್ತು ಓಲಾ ಈಗಾಗಲೇ ಮಾರುಕಟ್ಟೆಯಲ್ಲಿ ಬಲಿಷ್ಠ ಸ್ಥಾನ ಪಡೆದಿದ್ದರೂ, ಹೊಸ ಐಡಿಯಾದೊಂದಿಗೆ ಪ್ರವೇಶಿಸಿದ ರಾಪಿಡೊ (Rapido) ಇಂದು ಭಾರತದ ಅತಿದೊಡ್ಡ ಮೊಬಿಲಿಟಿ ಸ್ಟಾರ್ಟ್‌ಅಪ್‌ಗಳಲ್ಲಿ ಒಂದಾಗಿದೆ. 2015ರಲ್ಲಿ ಬೈಕ್ ಟ್ಯಾಕ್ಸಿ ಸೇವೆಯಾಗಿ ಆರಂಭವಾದ ಕಂಪನಿ, ಹೊಸ ಹೂಡಿಕೆ ಸುತ್ತಿನ ಬಳಿಕ ಸುಮಾರು 3 ಬಿಲಿಯನ್ ಡಾಲರ್ (ಸುಮಾರು ₹25,000 ಕೋಟಿ) ಮೌಲ್ಯದ ಕಂಪನಿಯಾಗಿ ಬೆಳೆದಿದೆ. ಈ ಯಶಸ್ಸಿನ ಹಿಂದಿರುವ ವ್ಯಕ್ತಿ ಅರವಿಂದ್ ಸಂಕಾ, ಅವರು ತಮ್ಮ ಸಹ-ಸಂಸ್ಥಾಪಕರಾದ ಪವನ್ ಗುಂಟುಪಲ್ಲಿ ಮತ್ತು ಎಸ್.ಆರ್. ರಿಷಿಕೇಶ್ ಜೊತೆಗೂಡಿ ರಾಪಿಡೊಗೆ ಅಡಿಪಾಯ ಹಾಕಿದರು.
ಐಐಟಿ ವಿದ್ಯಾರ್ಥಿಯಿಂದ ಸ್ಟಾರ್ಟ್‌ಅಪ್ ಸಂಸ್ಥಾಪಕ
ಅರವಿಂದ್ ಸಂಕಾ 2008ರಿಂದ 2012ರವರೆಗೆ ಐಐಟಿ ಭುವನೇಶ್ವರದಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದರು. ಕಾಲೇಜು ದಿನಗಳಲ್ಲಿ ಟಾಟಾ ಮೋಟಾರ್ಸ್‌ನಲ್ಲಿ ಇಂಟರ್ನ್‌ಶಿಪ್ ಮಾಡಿ ಆಟೋಮೊಬೈಲ್ ಕ್ಷೇತ್ರದ ಅನುಭವ ಪಡೆದರು.ಪದವಿ ಬಳಿಕ ಫ್ಲಿಪ್‌ಕಾರ್ಟ್ನಲ್ಲಿ ಸಪ್ಲೈ ಚೈನ್ ಮತ್ತು ಲಾಜಿಸ್ಟಿಕ್ಸ್ ವಿಭಾಗದಲ್ಲಿ ಕೆಲಸ ಮಾಡಿದರು. ಅಲ್ಲಿನ ಅನುಭವವೇ ಮುಂದೆ ರಾಪಿಡೊ ವ್ಯವಹಾರ ಮಾದರಿ ರೂಪಿಸಲು ನೆರವಾಯಿತು.
ಮೊದಲ ಸ್ಟಾರ್ಟ್‌ಅಪ್ ವಿಫಲವಾದರೂ ಕೈಬಿಡಲಿಲ್ಲ
ರಾಪಿಡೊಗೂ ಮುನ್ನ ಸಂಸ್ಥಾಪಕರ ತಂಡ Carrier ಎಂಬ ಲಾಜಿಸ್ಟಿಕ್ಸ್ ಸ್ಟಾರ್ಟ್‌ಅಪ್ ಆರಂಭಿಸಿತ್ತು. ನಗರಗಳೊಳಗೆ ಸಣ್ಣ ಸರಕು ವಾಹನಗಳ ಮೂಲಕ ಡೆಲಿವರಿ ಸೇವೆ ನೀಡುವ ಉದ್ದೇಶ ಹೊಂದಿದ್ದ ಈ ಕಂಪನಿ ನಿರೀಕ್ಷಿಸಿದಷ್ಟು ಯಶಸ್ಸು ಕಾಣಲಿಲ್ಲ. ಆದರೆ ಸೋಲನ್ನು ಒಪ್ಪಿಕೊಳ್ಳದೆ, ಮಾರುಕಟ್ಟೆಯನ್ನು ವಿಶ್ಲೇಷಿಸಿದ ಸಂಸ್ಥಾಪಕರು ನಗರ ಪ್ರಯಾಣ (Urban Mobility) ಕ್ಷೇತ್ರದಲ್ಲಿ ದೊಡ್ಡ ಅವಕಾಶವಿದೆ ಎಂದು ಗುರುತಿಸಿದರು. ಅಲ್ಲಿಂದಲೇ ರಾಪಿಡೊ ಹುಟ್ಟಿಕೊಂಡಿತು.
2015ರಲ್ಲಿ ರಾಪಿಡೊ ಆರಂಭ
2015ರಲ್ಲಿ ಅಧಿಕೃತವಾಗಿ ಆರಂಭವಾದ ರಾಪಿಡೊ, ಕಡಿಮೆ ದರದಲ್ಲಿ ಕೊನೆಯ ಮೈಲಿ (Last Mile Connectivity) ಸಾರಿಗೆ ಸೇವೆ ನೀಡುವ ಗುರಿ ಹೊಂದಿತ್ತು. ಆರಂಭದಲ್ಲಿ ಹಲವು ರಾಜ್ಯಗಳಲ್ಲಿ ಬೈಕ್ ಟ್ಯಾಕ್ಸಿ ಸೇವೆಗೆ ಸಂಬಂಧಿಸಿದ ನಿಯಮಗಳು ಸ್ಪಷ್ಟವಾಗಿರಲಿಲ್ಲ. ಹಲವು ಸವಾಲುಗಳ ನಡುವೆಯೂ ಕಂಪನಿ ತನ್ನ ಸೇವೆಯನ್ನು ವಿಸ್ತರಿಸುತ್ತಲೇ ಹೋಯಿತು. ಉಬರ್-ಓಲಾಗೆ ವಿಭಿನ್ನ ತಂತ್ರದಿಂದ ಟಕ್ಕರ್ ಉಬರ್ ಮತ್ತು ಓಲಾ ಕ್ಯಾಬ್ ಸೇವೆಯಲ್ಲಿ ಪ್ರಾಬಲ್ಯ ಸಾಧಿಸಿದ್ದ ಸಮಯದಲ್ಲಿ, ರಾಪಿಡೊ ನೇರ ಸ್ಪರ್ಧೆಗೆ ಇಳಿಯಲಿಲ್ಲ. ಬದಲಿಗೆ ಬೈಕ್ ಟ್ಯಾಕ್ಸಿ ಸೇವೆ ಮೇಲೆ ಗಮನಹರಿಸಿತು. ಕಡಿಮೆ ದರ, ಟ್ರಾಫಿಕ್‌ನಲ್ಲಿ ವೇಗವಾಗಿ ಪ್ರಯಾಣಿಸುವ ಅನುಕೂಲ ಹಾಗೂ ಕಡಿಮೆ ದೂರದ ಪ್ರಯಾಣಕ್ಕೆ ಸೂಕ್ತ ಸೇವೆಯಿಂದ ಲಕ್ಷಾಂತರ ಗ್ರಾಹಕರನ್ನು ಸೆಳೆಯಿತು. ನಂತರ ಆಟೋ ರಿಕ್ಷಾ ಮತ್ತು ಕ್ಯಾಬ್ ಸೇವೆಗಳಿಗೂ ವಿಸ್ತರಿಸಿ ಮೊಬಿಲಿಟಿ ಕ್ಷೇತ್ರದಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿತು.
240 ಮಿಲಿಯನ್ ಡಾಲರ್ ಹೊಸ ಹೂಡಿಕೆ
ಇತ್ತೀಚೆಗೆ ರಾಪಿಡೊ 240 ಮಿಲಿಯನ್ ಡಾಲರ್ (ಸುಮಾರು ₹2,000 ಕೋಟಿ) ಹೊಸ ಹೂಡಿಕೆ ಪಡೆದುಕೊಂಡಿದೆ. ಇದರೊಂದಿಗೆ ಕಂಪನಿಯ ಮೌಲ್ಯ 3 ಬಿಲಿಯನ್ ಡಾಲರ್ (ಸುಮಾರು ₹25,000 ಕೋಟಿ) ತಲುಪಿದೆ. ಈ ಹೂಡಿಕೆಯಿಂದ ಸಂಸ್ಥಾಪಕರ ಷೇರುಗಳ ಮೌಲ್ಯವೂ ಗಣನೀಯವಾಗಿ ಏರಿಕೆಯಾಗಿದ್ದು, ಅರವಿಂದ್ ಸಂಕಾ ಭಾರತದ ಯಶಸ್ವಿ ಯುವ ಉದ್ಯಮಿಗಳ ಪಟ್ಟಿಯಲ್ಲಿ ಪ್ರಮುಖ ಸ್ಥಾನ ಪಡೆದಿದ್ದಾರೆ.
ಭಾರತದ ಮೊಬಿಲಿಟಿ ಕ್ಷೇತ್ರದ ದೊಡ್ಡ ಹೆಸರು
ಇಂದು ರಾಪಿಡೊ ಬೈಕ್ ಟ್ಯಾಕ್ಸಿಗೆ ಮಾತ್ರ ಸೀಮಿತವಾಗಿಲ್ಲ. ಆಟೋ, ಕ್ಯಾಬ್ ಸೇರಿದಂತೆ ಹಲವು ಸಾರಿಗೆ ಸೇವೆಗಳನ್ನು ಒದಗಿಸುತ್ತಿದ್ದು, ಭಾರತದ ವೇಗವಾಗಿ ಬೆಳೆಯುತ್ತಿರುವ ಮೊಬಿಲಿಟಿ ಕಂಪನಿಗಳಲ್ಲಿ ಒಂದಾಗಿದೆ.
