ಉತ್ತರ ಪ್ರದೇಶದ ಲಕ್ನೋದಲ್ಲಿ, ಯುವತಿಯೊಬ್ಬಳು ತನಗೆ ಕಿರುಕುಳ ನೀಡಲು ಯತ್ನಿಸಿದ ವ್ಯಕ್ತಿಗೆ ನಡುರಸ್ತೆಯಲ್ಲೇ ಕೋಲಿನಿಂದ ಹಿಗ್ಗಾಮುಗ್ಗಾ ಥಳಿಸಿದ್ದಾಳೆ. ಭಯಪಡದೆ ಆತ್ಮರಕ್ಷಣೆ ಮಾಡಿಕೊಂಡ ಆಕೆಯ ಧೈರ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಉತ್ತರ ಪ್ರದೇಶದ ರಾಜಧಾನಿ ಲಕ್ನೋದ ಜನನಿಬಿಡ ರಸ್ತೆಯಲ್ಲೇ ಕಿರುಕುಳ ನೀಡಲು ಯತ್ನಿಸಿದ ಕಾಮುನಿಗೆ ಯುವತಿಯೊಬ್ಬಳು ಹಿಗ್ಗಾಮುಗ್ಗಾ ಜಾಡಸಿದ ಘಟನೆ ನಡೆದಿದ. ರಸ್ತೆಯಲ್ಲಿ ಸಂಚರಿಸುತ್ತಿದ್ದ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಮುಂದಾದ ಹುಡುಗನಿಗೆ, ಆಕೆ ಮೌನವಾಗಿ ಕಣ್ಣೀರುಹಾಕಿ ಅಳುಮುಂಜಿಯಂತೆ ಮನೆಗೆ ಹೋಗುವ ಬದಲು ಕಿರುಕುಳ ಕೊಟ್ಟ ಜಾಗದಲ್ಲೇ ಕಾಳಿಯಂತೆ ತಿರುಗಿಬಿದ್ದು ಕಾಮುಕನ ಬೆವರಿಳಿಸಿದ್ದಾಳೆ. ಈ ರೋಮಾಂಚಕಾರಿ ದೃಶ್ಯ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಕೋಲು ಹಿಡಿದು ಕಾಮುಕನಿಗೆ ಹಿಗ್ಗಾಮುಗ್ಗಾ ಥಳಿತ
ಕಿರುಕುಳ ನೀಡಿದ ವ್ಯಕ್ತಿಯನ್ನು ಕಂಡು ಭಯಪಟ್ಟು ಓಡುವ ಬದಲು, ಯುವತಿ ಸ್ಥಳದಲ್ಲಿದ್ದ ಕೋಲು ಹಿಡಿದು ಬೆಂಡೆತ್ತಿದ್ದಾಳೆ. ತಪ್ಪಿಸಿಕೊಳ್ಳಲು ಯತ್ನಿಸಿದ ಕಾಮುಕನನ್ನು ಹಿಡಿದು ಎಳೆದಾಡಿದ ಯುವತಿ, ನಡುರಸ್ತೆಯಲ್ಲೇ ಹಿಗ್ಗಮುಗ್ಗಾ ಜಾಡಿಸಿದ್ದಾಳೆ. ಆಕೆಯ ಧೈರ್ಯದ ಏಟಿಗೆ ಕಂಗೆಟ್ಟ ಕಿರುಕುಳಕೋರ ತಪ್ಪಿಸಿಕೊಳ್ಳಲು ಹರಸಾಹಸ ಪಟ್ಟರೂ, ಆಕೆ ಮಾತ್ರ ಬಿಡದೆ ತನ್ನ ಆತ್ಮರಕ್ಷಣೆ ಮಾಡಿಕೊಂಡು ಅನ್ಯಾಯದ ವಿರುದ್ಧ ಸಿಡಿದೆದ್ದಿದ್ದಾಳೆ.
ಭಯವಲ್ಲ, ಆತ್ಮರಕ್ಷಣೆಯೇ ಅಸ್ತ್ರ
ಈ ಘಟನೆಯು ಕೇವಲ ಹಿಂಸೆಯಲ್ಲ, ಬದಲಾಗಿ ಹೆಣ್ಣುಮಕ್ಕಳ ಆತ್ಮರಕ್ಷಣೆ ಮತ್ತು ಅಪ್ರತಿಮ ಧೈರ್ಯಕ್ಕೆ ಸಾಕ್ಷಿಯಾಗಿದೆ. 'ಪ್ರತಿ ಹುಡುಗಿಯೂ ಹೀಗೆ ಧೈರ್ಯ ತೋರಿದರೆ ಮಾತ್ರ ಇಂತಹ ವಿಕೃತ ಮನಸ್ಸುಗಳಿಗೆ ಪಾಠ ಕಲಿಸಲು ಸಾಧ್ಯ' ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಹಗುರವಾಗಿ ವರ್ತಿಸುವ ಕಿಡಿಗೇಡಿಗಳಿಗೆ ಈ ಧೀರ ಯುವತಿಯ ಪ್ರತಿರೋಧ ಒಂದು ಎಚ್ಚರಿಕೆಯ ಗಂಟೆಯಾಗಿದೆ.
ಈಕೆಯ ಧೈರ್ಯಕ್ಕೆ ನಮ್ಮದೊಂದು ಸಲ್ಯೂಟ್
ವೈರಲ್ ವಿಡಿಯೋ ನೋಡಿದ ನೆಟ್ಟಿಗರು ಯುವತಿಯ ಸಾಹಸವನ್ನು ಕೊಂಡಾಡುತ್ತಿದ್ದಾರೆ. 'ನಮ್ಮ ಹೆಣ್ಣುಮಕ್ಕಳು ಅಬಲೆಯರಲ್ಲ, ಸಬಲೆಯರು ಎಂಬುದನ್ನು ಈಕೆ ತೋರಿಸಿಕೊಟ್ಟಿದ್ದಾಳೆ' ಎಂದು ಬಳಕೆದಾರರು ಕಾಮೆಂಟ್ ಮಾಡುತ್ತಿದ್ದಾರೆ. ಈ ವಿಡಿಯೋ ಇತರ ಹೆಣ್ಣುಮಕ್ಕಳಿಗೂ ಸ್ಫೂರ್ತಿಯಾಗಿದ್ದು, ಸಂಕಷ್ಟದ ಸಮಯದಲ್ಲಿ ಧೈರ್ಯದಿಂದ ಹೇಗೆ ಎದುರಿಸಬೇಕು ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದೆ.


