ಹಳದಿ ಶಾಸ್ತ್ರದ ವೇಳೆ ವಧು-ವರರಿಗೆ ಪುಷ್-ಅಪ್ ಮಾಡುವ ಸವಾಲು ನೀಡಲಾಯಿತು. ವರ 30 ಪುಷ್-ಅಪ್ ಮಾಡಿ ಸೋಲೊಪ್ಪಿಕೊಂಡರೆ, ವಧು 31 ಪುಷ್-ಅಪ್ ಮಾಡಿ ಗೆದ್ದು ಬೀಗಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ತಮಾಷೆಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಈಗಿನ ಕಾಲದ ಮದುವೆಗಳೆಂದರೆ ಬರೀ ಅಕ್ಷತೆ ಹಾಕುವುದಕ್ಕೆ ಅಷ್ಟೇ ಸೀಮಿತವಾಗಿಲ್ಲ. ಮದುವೆ ಅಂದಮೇಲೆ ಅಲ್ಲಿ ಡ್ಯಾನ್ಸ್, ಮ್ಯೂಸಿಕ್ ಜೊತೆಗೆ ಏನಾದರೊಂದು ಕ್ರೇಜಿ ಆಟಗಳಿರಲೇಬೇಕು. ಹಲ್ದಿ, ಮೆಹೆಂದಿ ಶಾಸ್ತ್ರಗಳಲ್ಲಿ ವಧು-ವರರಿಗೆ ಟಾಸ್ಕ್ ಕೊಡುವುದು ಈಗಿನ ಟ್ರೆಂಡ್. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋವೊಂದು ಇಡೀ ಮದುವೆ ಮನೆಯ ಗಮನ ಸೆಳೆದಿದ್ದಲ್ಲದೆ, ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸಿದೆ.
ಹಲ್ದಿ ಸಮಾರಂಭದಲ್ಲಿ ಶುರುವಾದ ಜಿಮ್ ಸವಾರಿ
ಸಾಮಾನ್ಯವಾಗಿ ಹಳದಿ ಶಾಸ್ತ್ರದಲ್ಲಿ ಹಾಡು-ಕುಣಿತ ಇರುತ್ತದೆ. ಆದರೆ ಇಲ್ಲಿನ ಕುಟುಂಬಸ್ಥರು ವಧು-ವರರ ಫಿಟ್‌ನೆಸ್ ಪರೀಕ್ಷಿಸಲು ಮುಂದಾಗಿದ್ದಾರೆ. ಎಲ್ಲರ ಮುಂದೆ ನೆಲದ ಮೇಲೆ ಚಾಪೆ ಹಾಸಿ, ವಧು ಮತ್ತು ವರನಿಗೆ 'ಪುಷ್-ಅಪ್' ಮಾಡುವ ಚಾಲೆಂಜ್ ನೀಡಿದ್ದಾರೆ. ಶುರುವಿನಲ್ಲಿ ಇಬ್ಬರೂ 'ನಾನೇನು ಕಡಿಮೆಯಿಲ್ಲ' ಎನ್ನುವಂತೆ ಉತ್ಸಾಹದಿಂದ ಕಸರತ್ತು ಆರಂಭಿಸಿದ್ದಾರೆ. ನೆರೆದಿದ್ದ ಸಂಬಂಧಿಕರು ಚಪ್ಪಾಳೆ ತಟ್ಟಿ ಹುರಿದುಂಬಿಸಿದ್ದಾರೆ.
30ಕ್ಕೆ ಸುಸ್ತಾದ ಮದನ; 31ಕ್ಕೆ ಗೆದ್ದ ಪದ್ಮಿನಿ!
ಸವಾಲು ಜೋರಾಗುತ್ತಿದ್ದಂತೆ ವರನ ಶಕ್ತಿ ಉಡುಗತೊಡಗಿದೆ. ಹೇಗೋ ಕಷ್ಟಪಟ್ಟು 30 ಪುಷ್-ಅಪ್‌ಗಳನ್ನು ಮಾಡಿದ ವರರಾಯ, ಆಮೇಲೆ ಉಸ್ಸಪ್ಪಾ ಅಂತಾ ಸೋಲೊಪ್ಪಿಕೊಂಡಿದ್ದಾನೆ. ಆದರೆ ಅಲ್ಲಿಗೆ ನಿಲ್ಲಿಸದ ವಧು, ಅತಿ ಲೀಲಾಜಾಲವಾಗಿ 31ನೇ ಪುಷ್-ಅಪ್ ಮಾಡುವ ಮೂಲಕ ವರನಿಗೆ ಮುಖಭಂಗ ಮಾಡಿ ಸ್ಪರ್ಧೆಯಲ್ಲಿ ಗೆದ್ದು ಬೀಗಿದ್ದಾಳೆ. ಈ ದೃಶ್ಯ ಕಂಡು ಮದುವೆ ಮನೆಯವರು ನಕ್ಕು ನಕ್ಕು ಸುಸ್ತಾಗಿದ್ದಾರೆ.
ಪುರುಷ ಸಮುದಾಯದಲ್ಲಿ ನಡುಕ: ನೆಟ್ಟಿಗರ ಕಾಮೆಂಟ್ ಹಾವಳಿ
ಈ ವಿಡಿಯೋ ಎಕ್ಸ್ (X) ತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಕಾಮೆಂಟ್‌ಗಳ ಸುರಿಮಳೆಯೇ ಶುರುವಾಗಿದೆ. 'ಹೆಣ್ಮಕ್ಕಳೇ ಸ್ಟ್ರಾಂಗ್ ಗುರು' ಎಂದು ಕೆಲವರು ಮೆಚ್ಚುಗೆ ಸೂಚಿಸಿದರೆ, ಇನ್ನು ಕೆಲವರು ಪುರುಷರ ಪರ ಬ್ಯಾಟ್ ಬೀಸಿದ್ದಾರೆ. ಒಬ್ಬ ಬಳಕೆದಾರನಂತೂ 'ಈ ಪಾಪಿ ವರನಿಂದಾಗಿ ಇಡೀ ಪುರುಷ ಸಮುದಾಯವೇ ತಲೆ ತಗ್ಗಿಸುವಂತಾಗಿದೆ, ನಮಗೆ ಭಯ ಶುರುವಾಗಿದೆ' ಎಂದು ತಮಾಷೆಯಾಗಿ ಬರೆದುಕೊಂಡಿದ್ದಾನೆ. ಒಟ್ಟಿನಲ್ಲಿ ಈ 'ಫಿಟ್‌ನೆಸ್ ಮದುವೆ' ಈಗ ಇಂಟರ್ನೆಟ್‌ನಲ್ಲಿ ಸಖತ್ ಸದ್ದು ಮಾಡುತ್ತಿದೆ.


