ಬ್ರಿಟನ್‌ನ ಇಯಾನ್ ಪ್ಯಾಟನ್ 1,295.8 ಕೆಜಿ ತೂಕದ ಬೃಹತ್ ಕುಂಬಳಕಾಯಿಯನ್ನು ಬೆಳೆಯುವ ಮೂಲಕ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ. 'ಬಘೀರ' ಎಂದು ಹೆಸರಿಸಲಾದ ಈ ದೈತ್ಯ ಕುಂಬಳಕಾಯಿಯು ಪ್ರತಿದಿನ 32 ಕೆಜಿಯಷ್ಟು ತೂಕ ಹೆಚ್ಚಿಸಿಕೊಳ್ಳುತ್ತಿತ್ತು.
ಜಗತ್ತಿನಲ್ಲಿ ಆಶ್ಚರ್ಯಕರ ಸಂಗತಿಗಳಿಗೆ ಕೊರತೆಯಿಲ್ಲ. ಬ್ರಿಟನ್‌ನ ವ್ಯಕ್ತಿಯೊಬ್ಬರು ಬಿಳಿ ಘೇಂಡಾಮೃಗಕ್ಕಿಂತಲೂ (White Rhinoceros) ಅಧಿಕ ತೂಕವಿರುವ ಬೃಹತ್ ಗಾತ್ರದ ಕುಂಬಳಕಾಯಿಯನ್ನು ಬೆಳೆಯುವ ಮೂಲಕ ಗಿನ್ನೆಸ್ ವಿಶ್ವ ದಾಖಲೆ (Guinness World Records) ಬರೆದಿದ್ದಾರೆ. ಹ್ಯಾಂಪ್‌ಷೈರ್‌ನ ಸಸ್ಯ ನರ್ಸರಿ ಮಾಲೀಕರಾದ ಇಯಾನ್ ಪ್ಯಾಟನ್ (Ian Paton) ಈ ಸಾಧನೆ ಮಾಡಿರುವ ವ್ಯಕ್ತಿ.
'ಬಘೀರ' ಹೆಸರಿನ ಬೃಹತ್ ಕುಂಬಳಕಾಯಿ:
ಇಯಾನ್ ಪ್ಯಾಟನ್ ಬೆಳೆದಿರುವ ಈ ದೈತ್ಯ ಕುಂಬಳಕಾಯಿಗೆ 'ಬಘೀರ' (Bagheera) ಎಂದು ಹೆಸರಿಡಲಾಗಿದೆ. ಅಕ್ಟೋಬರ್ 3, 2026 ರಂದು ಅಧಿಕೃತವಾಗಿ ನಡೆದ ತೂಕ ಪರೀಕ್ಷೆಯಲ್ಲಿ ಈ ಕುಂಬಳಕಾಯಿಯು ಬರೋಬ್ಬರಿ 1,295.8 ಕೆಜಿ (2,856 ಪೌಂಡ್) ತೂಕವಿರುವುದು ದೃಢಪಟ್ಟಿದೆ. ಇದು ಇದುವರೆಗಿನ ವಿಶ್ವದಲ್ಲೇ ಅತ್ಯಂತ ಭಾರವಾದ ಕುಂಬಳಕಾಯಿ ಎಂಬ ಖ್ಯಾತಿಗೆ ಪಾತ್ರವಾಗಿದೆ.
ರುಡ್ಯಾರ್ಡ್ ಕಿಪ್ಲಿಂಗ್ ಅವರ 'ದಿ ಜಂಗಲ್ ಬುಕ್' ಕಥೆಯ ಕಪ್ಪು ಚಿರತೆಯ ಹೆಸರನ್ನು ಇದಕ್ಕೆ ಇಡಲಾಗಿದೆ. ವಿಶೇಷವೆಂದರೆ, ಕಳೆದ ವರ್ಷ ಇಯಾನ್ ಮತ್ತು ಅವರ ಅವಳಿ ಸಹೋದರ ಸ್ಟುವರ್ಟ್ ಒಟ್ಟಾಗಿ 1,278.8 ಕೆಜಿ ತೂಕದ ಕುಂಬಳಕಾಯಿ ಬೆಳೆದು ದಾಖಲೆ ಬರೆದಿದ್ದರು. ಈ ಬಾರಿ ಸ್ಟುವರ್ಟ್ ಸ್ಪರ್ಧೆಯಿಂದ ನಿವೃತ್ತಿ ಪಡೆದಿದ್ದರಿಂದ, ಇಯಾನ್ ಏಕಾಂಗಿಯಾಗಿ ಈ ಸವಾಲನ್ನು ಸ್ವೀಕರಿಸಿ ಹಳೆಯ ದಾಖಲೆಯನ್ನು ಮುರಿದರು.
ಬೆಳೆದಿದ್ದು ಹೇಗೆ? ಅಚ್ಚರಿಯ ಮಾಹಿತಿ:
ಇಷ್ಟು ದೊಡ್ಡ ಕುಂಬಳಕಾಯಿಯನ್ನು ಬೆಳೆಯುವುದು ಸುಲಭದ ಮಾತಾಗಿರಲಿಲ್ಲ. ಪ್ರತಿದಿನ 6 ಗಂಟೆಗಳ ಕಾಲ ಕುಂಬಳಕಾಯಿ ತೋಟದ ಆರೈಕೆಯಲ್ಲಿ ಇಯಾನ್ ತೊಡಗಿಸಿಕೊಳ್ಳುತ್ತಿದ್ದರು. ಬ್ರಿಟನ್‌ನಲ್ಲಿ ಉಂಟಾದ ತೀವ್ರ ಉಷ್ಣತೆಯ ಅಲೆಗಳ (Heatwaves) ನಡುವೆಯೂ ಹಸಿರುಮನೆಯಲ್ಲಿ (Greenhouse) 40°C ತಾಪಮಾನದಿಂದ ಸಸ್ಯಗಳನ್ನು ರಕ್ಷಿಸಲು ಅವರು ಹರಸಾಹಸ ಪಟ್ಟಿದ್ದಾರೆ. ಅತ್ಯಂತ ಬಿಸಿಯಾದ ದಿನಗಳಲ್ಲಿ ಈ ಗಿಡಕ್ಕೆ ಪ್ರತಿದಿನ ಬರೋಬ್ಬರಿ 590 ಲೀಟರ್ ನೀರನ್ನು ಹಾಯಿಸಲಾಗಿದೆ.
ಕೇವಲ 120 ದಿನಗಳಲ್ಲಿ ಚಿನ್ನದ ಉಂಡೆಯ (ಗೋಲ್ಡ್ ಬಾಲಿನ) ಗಾತ್ರದಲ್ಲಿದ್ದ ಕುಂಬಳಕಾಯಿಯು ದೈತ್ಯ ರೂಪ ತಾಳಿದ್ದು, ಒಂದು ದಿನಕ್ಕೆ ಸುಮಾರು 32 ಕೆಜಿಯಷ್ಟು ತೂಕ ಹೆಚ್ಚಿಸಿಕೊಂಡಿದೆ ಎಂದು ಇಯಾನ್ ಆಶ್ಚರ್ಯಕರ ಸಂಗತಿಯನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಕರ್ನಾಟಕ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮಗ ಶರತ್ ಅಶೋಕ್ ಗಿನ್ನೆಸ್ ರೆಕಾರ್ಡ್; ಸಾಧನೆಯ ಹಾದಿ ಇಲ್ಲಿದೆ ನೋಡಿ!
ಮುಂದಿನ ಗುರಿ 3,000 ಪೌಂಡ್!
'ಬಘೀರ' ಮಾತ್ರವಲ್ಲದೆ, ಇಯಾನ್ ಈ ವರ್ಷ 'ಬಲೂ' (Baloo) ಎಂಬ ಹೆಸರಿನ ಮತ್ತೊಂದು ಕುಂಬಳಕಾಯಿಯನ್ನು ಬೆಳೆದಿದ್ದು, ಅದು 1,258 ಕೆಜಿ ತೂಕವಿತ್ತು. ಸದ್ಯ ತಮ್ಮ ಪ್ರಯಾಣವನ್ನು ಇಲ್ಲಿಗೆ ನಿಲ್ಲಿಸಲು ಇಚ್ಛಿಸದ ಇಯಾನ್, ಮುಂದಿನ ದಿನಗಳಲ್ಲಿ 3,000 ಪೌಂಡ್ ತೂಕದ ಕುಂಬಳಕಾಯಿ ಬೆಳೆಯುವುದೇ ನನ್ನ ಮುಂದಿನ ಗುರಿ ಎಂದು ತಿಳಿಸಿದ್ದಾರೆ. ಬಘೀರದಿಂದ ಸುಮಾರು 2,600ಕ್ಕೂ ಅಧಿಕ ಬೀಜಗಳನ್ನು ಸಂಗ್ರಹಿಸಲಾಗಿದೆ. ಈ ದಾಖಲೆಯ ಕುಂಬಳಕಾಯಿಯನ್ನು ಸೌತಾಂಪ್ಟನ್ ಬಳಿಯ ಸನ್ನಿಫೀಲ್ಡ್ಸ್ ಫಾರ್ಮ್‌ನಲ್ಲಿ ಅಕ್ಟೋಬರ್ ಕೊನೆಯವರೆಗೆ ಸಾರ್ವಜನಿಕ ಪ್ರದರ್ಶನಕ್ಕಿಡಲಾಗುತ್ತದೆ.


