ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ಪುತ್ರ ಶರತ್ ಅಶೋಕ್, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಸಾಗರದಾಳದಲ್ಲಿ ಬೃಹತ್ ತ್ರಿವರ್ಣ ಧ್ವಜವನ್ನು ಅನಾವರಣಗೊಳಿಸಿ 'ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್' ನಿರ್ಮಿಸಿದ್ದಾರೆ. ಈ ಐತಿಹಾಸಿಕ ಸಾಧನೆಗಾಗಿ ಅವರಿಗೆ ಲೆಫ್ಟಿನೆಂಟ್ ಗವರ್ನರ್ ಅವರಿಂದ ಅಧಿಕೃತ ಪ್ರಮಾಣಪತ್ರ ಲಭಿಸಿದೆ.
ಬೆಂಗಳೂರು (ಆ.14): ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ಅವರ ಪುತ್ರ ಶರತ್ ಅಶೋಕ್ ಅವರು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಸಾಗರದಾಳದಲ್ಲಿ ಬೃಹತ್ ಭಾರತದ ತ್ರಿವರ್ಣ ಧ್ವಜವನ್ನು ಅನಾವರಣಗೊಳಿಸುವ ಮೂಲಕ 'ಅಧಿಕೃತ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್' (Guinness World Records) ನಿರ್ಮಿಸಿದ್ದಾರೆ. ದೇಶಕ್ಕೆ ಹಾಗೂ ರಾಜ್ಯಕ್ಕೆ ಹೆಮ್ಮೆ ತಂದಿರುವ ಈ ಸಾಧನೆಗಾಗಿ ಅವರಿಗೆ ಗೌರವಾನ್ವಿತ ಲೆಫ್ಟಿನೆಂಟ್ ಗವರ್ನರ್ ಅವರಿಂದ ಅಧಿಕೃತ ಪ್ರಮಾಣಪತ್ರ ದೊರೆತಿದೆ.
ಸಾಗರದಾಳದಲ್ಲಿ ಸಾಹಸಮಯ ಐತಿಹಾಸಿಕ ಸಾಧನೆ
ಅಂಡಮಾನ್ & ನಿಕೋಬಾರ್ ದ್ವೀಪಗಳ ಸ್ವರಾಜ್‌ದ್ವೀಪದಲ್ಲಿ ಈ ಐತಿಹಾಸಿಕ ಕಾರ್ಯಕ್ರಮ ನಡೆದಿತ್ತು. ಸಾಗರದ ಅತ್ಯಂತ ಆಳದಲ್ಲಿ 'ಅತಿ ದೊಡ್ಡ ಭಾರತೀಯ ತ್ರಿವರ್ಣ ಧ್ವಜ'ವನ್ನು ಅನಾವರಣಗೊಳಿಸುವ (Largest Underwater Flag Unfurl) ಸಾಹಸಮಯ ಪ್ರಯತ್ನದಲ್ಲಿ ಶರತ್ ಅಶೋಕ್ ಪ್ರಮುಖ ಭಾಗವಾಗಿದ್ದರು. ಅಂಡಮಾನ್ ಆಡಳಿತ ಮಂಡಳಿಯಿಂದ ಲೋಕ್ ನಿವಾಸ್‌ನಲ್ಲಿ ಆಯೋಜಿಸಲಾಗಿದ್ದ ವಿಶೇಷ ಸನ್ಮಾನ ಸಮಾರಂಭದಲ್ಲಿ, ನಿವೃತ್ತ ಅಡ್ಮಿರಲ್ ಹಾಗೂ ಗೌರವಾನ್ವಿತ ಲೆಫ್ಟಿನೆಂಟ್ ಗವರ್ನರ್ ಡಿ. ಕೆ. ಜೋಶಿ ಅವರಿಂದ ಶರತ್ ಅಶೋಕ್ ಅವರು ಗಿನ್ನೆಸ್ ಪ್ರಮಾಣಪತ್ರ ಮತ್ತು ಪದಕವನ್ನು ಸ್ವೀಕರಿಸಿದರು.

ಒಬ್ಬ ತಂದೆಯಾಗಿ ಪದಗಳಲ್ಲಿ ವ್ಯಕ್ತಪಡಿಸಲಾಗದ ಭಾವನೆ: ಆರ್. ಅಶೋಕ್ ಭಾವುಕ!
ತಮ್ಮ ಮಗನ ಈ ಅಪರೂಪದ ಹಾಗೂ ದೇಶಪ್ರೇಮದ ಸಾಧನೆಯನ್ನು ಕಂಡು ತಂದೆ ಆರ್. ಅಶೋಕ್ ಅವರು ತೀವ್ರ ಭಾವುಕರಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.
'ಒಬ್ಬ ತಂದೆಯಾಗಿ ನನಗೆ ಇದು ಅಪಾರ ಹೆಮ್ಮೆ ಮತ್ತು ಭಾವುಕತೆಯ ಕ್ಷಣ. ನಮ್ಮ ತ್ರಿವರ್ಣ ಧ್ವಜವನ್ನು ಸಾಗರದಾಳದಲ್ಲಿ ಹಾರಿಸಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್‌ನ ಭಾಗವಾಗಲು ಅಸಾಧಾರಣ ಧೈರ್ಯ, ಸಮರ್ಪಣೆ, ಶಿಸ್ತು ಮತ್ತು ಶ್ರೇಷ್ಠ ತಂಡಕಾರ್ಯ ಅಗತ್ಯವಿತ್ತು. ದೇಶಕ್ಕೆ ಹೆಮ್ಮೆ ತರುವ ಇಂತಹ ಸಾಧನೆಯಲ್ಲಿ ನನ್ನ ಮಗ ಭಾಗಿಯಾಗಿರುವುದನ್ನು ನೋಡುವುದು ಪದಗಳಲ್ಲಿ ವ್ಯಕ್ತಪಡಿಸಲಾಗದ ಅನುಭವ. ಶರತ್, ನೀನು ಇನ್ನಷ್ಟು ಆಳಕ್ಕೆ ಇಳಿಯುತ್ತಾ, ಇನ್ನಷ್ಟು ಎತ್ತರಕ್ಕೆ ಏರುತ್ತಿರು!' ಎಂದು ಆರ್. ಅಶೋಕ್ ಹಾರೈಸಿದ್ದಾರೆ.
ಶರತ್ ಅಶೋಕ್ ಅವರ ಈ ಐತಿಹಾಸಿಕ ಸಾಧನೆಗೆ ರಾಜ್ಯದ ಹಲವು ರಾಜಕೀಯ ಗಣ್ಯರು, ಸಾಮಾಜಿಕ ಮುಖಂಡರು ಹಾಗೂ ನೆಟ್ಟಿಗರು ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.


