ಗಾಯಕ ಸೋನು ನಿಗಮ್ ಅವರಿಗೆ ವಿಮಾನ ಪ್ರಯಾಣದ ವೇಳೆ ಸಹ ಪ್ರಯಾಣಿಕರು ಅವರ ಹಾಡುಗಳನ್ನು ಹಾಡುವ ಮೂಲಕ ವಿಶೇಷ ಸರ್ಪ್ರೈಸ್ ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ಸೋನು ನಿಗಮ್ ಕೂಡ ವಿಮಾನ ಲ್ಯಾಂಡ್ ಆದ ಬಳಿಕ ಹಾಡುಗಳನ್ನು ಹಾಡಿ ರಂಜಿಸಿದ್ದಾರೆ.

ಬೆಂಗಳೂರು(ನ.21): ಕಲಾವಿದನ ಯಶಸ್ಸು ಕೇವಲ ಜನಪ್ರಿಯತೆ ಅಥವಾ ಸ್ಟಾರ್‌ಡಮ್‌ನಿಂದ ಅಳೆಯಲಾಗುವುದಿಲ್ಲ. ಪ್ರೇಕ್ಷಕರು ಮತ್ತು ಅಭಿಮಾನಿಗಳಿಂದ ಸಿಗುವ ಪ್ರೀತಿಯೇ ನಿಜವಾದ ಸಾಧನೆಗೆ ಸಾಕ್ಷಿ. ಇದೀಗ ಖ್ಯಾತ ಗಾಯಕ ಸೋನು ನಿಗಮ್ ಅವರಿಗೆ ವಿಮಾನ ಪ್ರಯಾಣದ ವೇಳೆ ಇಂತಹದ್ದೇ ವಿಶೇಷ ಅನುಭವವಾಗಿದೆ. ಎಕಾನಮಿ ಕ್ಲಾಸ್‌ನಲ್ಲಿ ಪ್ರಯಾಣಿಸುತ್ತಿದ್ದ ಸೋನು ನಿಗಮ್‌ಗೆ ಸಹ ಪ್ರಯಾಣಿಕರು ಅವರ ಜನಪ್ರಿಯ ಹಾಡುಗಳನ್ನು ಹಾಡುವ ಮೂಲಕ ಸ್ವೀಟ್ ಸಪ್ರೈಸ್ ನೀಡಿದ್ದಾರೆ.

ಈ ಕ್ಷಣದ ವಿಡಿಯೋವನ್ನು ಸೋನು ನಿಗಮ್ ಅವರೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಮಾನದಲ್ಲಿದ್ದ ಪ್ರಯಾಣಿಕರೆಲ್ಲರೂ ಒಟ್ಟಾಗಿ ‘ಕಲ್ ಹೋ ನಾ ಹೋ’ ಮತ್ತು ‘ಓಂ ಶಾಂತಿ ಓಂ’ ಚಿತ್ರದ ‘ಆಂಖೋನ್ ಮೇ ತೇರಿ’ ಹಾಡುಗಳನ್ನು ಹಾಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಪ್ರಯಾಣಿಕರ ಈ ಪ್ರೀತಿಯ ಅಭಿವ್ಯಕ್ತಿಗೆ ಮನಸೋತ ಸೋನು ನಿಗಮ್, ವಿಮಾನ ಲ್ಯಾಂಡ್ ಆದ ಬಳಿಕ ಅವರಿಗೆ ಅನಿರೀಕ್ಷಿತ ಸಂಗೀತ ಕಾರ್ಯಕ್ರಮದ ಉಡುಗೊರೆ ನೀಡಿದ್ದಾರೆ.

ವಿಮಾನದಲ್ಲೇ ಹಾಡು ಹಾಡಿ ಸೋನು ನಿಗಮ್‌ಗೆ ಸ್ವಾಗತ!

ಸಹ ಪ್ರಯಾಣಿಕರು ತಮ್ಮ ಹಾಡುಗಳನ್ನು ಹಾಡುತ್ತಿರುವ ವಿಡಿಯೋ ಹಂಚಿಕೊಂಡ ಸೋನು ನಿಗಮ್, “ಪ್ರಚೋದನೆ ಎಂಬ ಪದಕ್ಕೆ ಪ್ರೀತಿಯಿಂದ ಕೂಡಿದ ಸಂಗೀತದ ಅರ್ಥವಿದ್ದರೆ, ಅದಕ್ಕೆ ಇದೊಂದು ಪರಿಪೂರ್ಣ ಉದಾಹರಣೆ,” ಎಂದು ಬರೆದುಕೊಂಡಿದ್ದಾರೆ. ವಿಮಾನ ಲ್ಯಾಂಡ್ ಆದ ಬಳಿಕ ಸೋನು ನಿಗಮ್ ಪ್ರಯಾಣಿಕರ ಮನವಿಯ ಮೇರೆಗೆ ಹಾಡುಗಳನ್ನು ಹಾಡಿದ್ದಾರೆ. ‘ಬಿಜುರಿಯಾ’ ಮತ್ತು ‘ಮೈ ಹೂಂ ನಾ’ ಚಿತ್ರದ ಟೈಟಲ್ ಸಾಂಗ್ ಹಾಡಿ ಎಲ್ಲರನ್ನೂ ರಂಜಿಸಿದ್ದಾರೆ.

ನಂತರ ಕೈಮುಗಿದು ಪ್ರಯಾಣಿಕರಲ್ಲಿ ವಿಮಾನದಿಂದ ಕೆಳಗಿಳಿಯುವಂತೆ ವಿನಯದಿಂದ ಮನವಿ ಮಾಡಿದ್ದಾರೆ. ಈ ವೇಳೆ ವಿಮಾನದ ಸಿಬ್ಬಂದಿಯೊಂದಿಗೂ ಫೋಟೋಗಳಿಗೆ ಪೋಸ್ ನೀಡಿದ್ದಾರೆ. “ಕೇವಲ ಕನಸಿನಲ್ಲಿ ಮಾತ್ರ ಸಿಗುವಂತಹ ಪ್ರೀತಿ ಇದು. ಎಲ್ಲರಿಗೂ ಧನ್ಯವಾದಗಳು,” ಎಂದು ಸೋನು ನಿಗಮ್ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋ

ಸೋನು ನಿಗಮ್ ಹಂಚಿಕೊಂಡಿರುವ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಗಮನ ಸೆಳೆಯುತ್ತಿದೆ. ಅಭಿಮಾನಿಗಳು ಗಾಯಕನಿಗೆ ಸಿಕ್ಕ ಪ್ರೀತಿಯನ್ನು ಮೆಚ್ಚಿಕೊಂಡು ಕಾಮೆಂಟ್ ಮಾಡುತ್ತಿದ್ದಾರೆ. “ಇಡೀ ವಿಮಾನವೇ ನಿಮ್ಮ ಹಾಡನ್ನು ಹಾಡುವಾಗ, ನೀವು ಕೇವಲ ಕಲಾವಿದರಾಗಿ ಉಳಿದಿಲ್ಲ, ಒಂದು ಭಾವನೆಯಾಗಿದ್ದೀರಿ ಎಂಬುದು ಅರ್ಥವಾಗುತ್ತದೆ,” ಎಂದು ಅಭಿಮಾನಿಯೊಬ್ಬರು ಬರೆದಿದ್ದಾರೆ.

ಮತ್ತೊಬ್ಬರು, “ಕಲಾವಿದನಿಗೆ ಸಿಗಬಹುದಾದ ಅತ್ಯುತ್ತಮ ಪ್ರತಿಫಲವೆಂದರೆ ಇಂತಹ ಅಪಾರ ಪ್ರೀತಿ,” ಎಂದು ಪ್ರತಿಕ್ರಿಯಿಸಿದ್ದಾರೆ. ಇನ್ನೊಬ್ಬ ಅಭಿಮಾನಿ, “ನಿಮ್ಮ ಪರಿಶ್ರಮ ಮತ್ತು ಸಮರ್ಪಣೆಯೇ ಈ ಸಾಧನೆಗೆ ಕಾರಣ. ನಿಮ್ಮ ಪ್ರೀತಿ ಮತ್ತು ಉದಾರತೆಗೆ ಧನ್ಯವಾದಗಳು. ನಿಮ್ಮಲ್ಲಿರುವ ಅದ್ಭುತ ಉತ್ಸಾಹಕ್ಕೆ ಸಲಾಂ. ಆ ಪ್ರಯಾಣಿಕರೆಲ್ಲರೂ ಅದೃಷ್ಟವಂತರು,” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

View post on Instagram
 

‘ದಿ ರೆವಲ್ಯೂಷನ್ ಇಂಡಿಯಾ ಟೂರ್’ನಲ್ಲಿ ಬ್ಯುಸಿ

ಭಾರತದ ಅತ್ಯಂತ ಪ್ರೀತಿಯ ಹಿನ್ನೆಲೆ ಗಾಯಕರಲ್ಲಿ ಒಬ್ಬರಾದ ಸೋನು ನಿಗಮ್, ತಮ್ಮ ಸುಮಧುರ ಧ್ವನಿ, ವೈವಿಧ್ಯಮಯ ಗಾಯನ ಮತ್ತು ಹಾಡುಗಳ ಮೂಲಕ ಭಾವನೆಗಳನ್ನು ಕಟ್ಟಿಕೊಡುವ ವಿಶಿಷ್ಟ ಶೈಲಿಯಿಂದ ಹಲವು ತಲೆಮಾರುಗಳ ಅಭಿಮಾನಿಗಳನ್ನು ಹೊಂದಿದ್ದಾರೆ. ಪ್ರೇಮಗೀತೆಗಳಿಂದ ಹಿಡಿದು ಉತ್ಸಾಹಭರಿತ ಹಾಡುಗಳವರೆಗೆ ಅವರ ಅನೇಕ ಗೀತೆಗಳು ಸಂಗೀತಪ್ರಿಯರ ನೆನಪಿನಲ್ಲಿ ಶಾಶ್ವತ ಸ್ಥಾನ ಪಡೆದಿವೆ.

ಸದ್ಯ ಸೋನು ನಿಗಮ್ ‘ದಿ ರೆವಲ್ಯೂಷನ್ ಇಂಡಿಯಾ ಟೂರ್’ನಲ್ಲಿ ಬ್ಯುಸಿಯಾಗಿದ್ದಾರೆ. ಈ ಪ್ರವಾಸದ ಭಾಗವಾಗಿ 2026ರ ಡಿಸೆಂಬರ್ 6ರಂದು ಬೆಂಗಳೂರಿನಲ್ಲಿ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಇದಲ್ಲದೆ, ತಮ್ಮ ತವರು ನಗರಿ ಮುಂಬೈನಲ್ಲಿ ಮುಂದಿನ ತಿಂಗಳು ಮತ್ತೊಂದು ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಡಿಸೆಂಬರ್ 12, 2026ರಂದು ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನ (BKC) ಎಂಎಂಆರ್‌ಡಿಎ ಮೈದಾನದಲ್ಲಿ ಸೋನು ನಿಗಮ್ ಸಂಗೀತ ಸಂಜೆ ನಡೆಯಲಿದೆ.