ಬಾಲಕಿಯೊಬ್ಬಳು ಈಗ ಆರ್‌ಸಿಬಿ ಗೆಲುವಿನಿಂದಾಗಿ ಶಾಲೆಗೆ ಹೋಗಲೇಬೇಕಾಗಿದೆ. ಏನಿದು ಯಾಕೆ ಅಂತೀರಾ ಈ ಸ್ಟೋರಿ ನೋಡಿ.
ಆರ್‌ಸಿಬಿ ಅಂದ್ರೆ ಇಮೋಷನ್ ಆರ್‌ಸಿಬಿ ಅಂದ್ರೆ ಪ್ರೀತಿ, ಆರ್‌ಸಿಬಿ ಅಂದ್ರೆ ಹುಚ್ಚು ಅಭಿಮಾನ, ಆರ್‌ಸಿಬಿಯನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ, ಸತತ 18 ವರ್ಷಗಳ ಕಾಯುವಿಕೆಯ ನಂತರ ಆರ್‌ಸಿಬಿಗೆ ಸಿಕ್ಕ ಗೆಲುವಿನಿಂದ ಅಭಿಮಾನಿಗಳು ಫುಲ್ ಹುಚ್ಚೆದು ಹೋಗಿದ್ದಾರೆ. ಆದರೆ ಈ ಕಾಯುವಿಕೆಯ ಹಿಂದಿನ ಇಷ್ಟು ವರ್ಷಗಳ ನೋವು ಕೊನೆಗೂ ಅಂತ್ಯಕಂಡಿದೆ. ಆದರೆ ಸೋಲಿನ ಸಮಯದಲ್ಲಿ ಆರ್‌ಸಿಬಿ ಟ್ರೋಲ್‌ಗೊಳಗಾಗಿದ್ದು, ಅಷ್ಟಿಷ್ಟಲ್ಲ, ಕೇವಲ ತಂಡ ಮಾತ್ರವಲ್ಲ, ಆರ್‌ಸಿಬಿ ಅಭಿಮಾನಿಗಳು ಕೂಡ ಸಾಕಷ್ಟು ಟ್ರೋಲ್‌ಗೊಳಗಾಗಿದ್ದರು. ಆರ್‌ಸಿಬಿ ಸೋಲಿನಿಂದಲೇ ಅನೇಕ ಮೀಮ್ಸ್ ಕ್ರಿಯೇಟ್ ಆಗಿದ್ದವು, ಹೀಗೆ ಸೃಷ್ಟಿ ಆದ ಮೀಮ್ಸ್‌ಗಳಲ್ಲಿ ಒಂದು ಆರ್‌ಸಿಬಿ ಗೆಲ್ಲದ ಹೊರತು ತಾನು ಶಾಲೆಗೆ ಹೋಗಲ್ಲ ಅಂತ ಪುಟ್ಟ ಬಾಲಕಿಯೊಬ್ಬಳು ಬ್ಯಾನರ್ ಹಿಡಿದು ನಿಂತಿರುವ ಫೋಟೋ.
ಆರ್‌ಸಿಬಿಯ ಪುಟ್ಟ ಅಭಿಮಾನಿಯೊಬ್ಬಳು ಈ ರೀತಿ ಬ್ಯಾನರ್ ಹಿಡಿದು ನಿಂತ ಫೋಟೋಗಳು ಆರ್‌ಸಿಬಿಯ ಮ್ಯಾಚ್ ಸಮಯದಲ್ಲೆಲ್ಲಾ ಈ ಹಿಂದೆ ಸಾಕಷ್ಟು ವೈರಲ್ ಆಗಿತ್ತು. ಆದರೆ ಈಗ ಆರ್‌ಸಿಬಿ ಗೆದ್ದಾಗಿದೆ. ಹೀಗಾಗಿ ಈಗ ಈ ಪುಟ್ಟ ಮಗುವಿನ ಪೋಟೋವೇ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್ ಆಗುತ್ತಿದೆ. ಜೊತೆಗೆ ಇನ್ನಾದರೂ ಮಗು ಶಾಲೆಗೆ ಹೋಗಬೇಕು ಎಂಬ ಕಾಮೆಂಟ್‌ಗಳು ಕೇಳಿ ಬರ್ತಿವೆ.
ಅಂದು ಈ ಫೋಟೋ ವೈರಲ್ ಆದಾಗ ಅನೇಕರು ಹಾಗಿದ್ರೆ ಈ ಮಗುವಿನ ಉದ್ದೇಶ ಯಾವತ್ತೂ ಶಾಲೆಗೆ ಹೋಗದೇ ಇರುವುದೇ ಆಗಿರಬೇಕು ಎಂದು ಕೆಲವರು ಟ್ರೋಲ್ ಮಾಡಿದ್ದರು. ಅಂದರೆ ಅವರ ಪ್ರಕಾರ ಆರ್‌ಸಿಬಿ ಯಾವತ್ತೂ ಕಪ್ ಗೆಲ್ಲದು ಎಂಬ ನಂಬಿಕೆ. ಅಲ್ಲದೇ ಕೆಲವರು ಆರ್‌ಸಿಬಿ ಈ ಮಗುವಿನ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿದೆ ಎಂದುಹೇಳಿದ್ದರು.
2022ರಲ್ಲಿ ಈ ಫೋಟೋ ವೈರಲ್ ಆಗಿತ್ತು. ಅನೇಕರು ಈ ಮಗುವಿನ ಫೋಟೋ ನೋಡಿ ಆರ್‌ಸಿಬಿಯನ್ನು ನಂಬಿದ್ರೆ ಈ ಮಗು ಶಾಶ್ವತವಾಗಿ ಅನಕ್ಷರಸ್ಥನಾಗಿರುತ್ತದೆ ಎಂದಿದ್ದರು. ಅಲ್ಲದೇ ಆ ಮಗು ಮುಂದೆ ಬೆಂಗಳೂರಿನಲ್ಲಿ ಬಾಂಬೆ ಮಿಠಾಯಿ ಮಾರಬಹುದು ಅಥವಾ ತರಕಾರಿ ಮಾರಬಹುದು ಎಂಬಂತೆ ಟ್ರೋಲ್ ಮಾಡಲಾಗಿತ್ತು. ಆದರೆ ಈ ಎಲ್ಲರ ಕೊಂಕುಗಳನ್ನು ಆರ್‌ಸಿಬಿ ಈಗ ಒಂದು ಅಬ್ಬರದ ಗೆಲುವಿನೊಂದಿಗೆ ಮುಚ್ಚಿ ಹಾಕಿದೆ. ಹೀಗಾಗಿ ಈ ಫೋಟೋ ಮತ್ತೆ ಸಾಮಾಜಿಕ ಜಾಲತಾಣದಲ್ಲಿವ ವೈರಲ್ ಆಗುತ್ತಿದೆ.
ಅನೇಕರು ಆರ್‌ಸಿಬಿ ಗೆದ್ದಿರುವುದರಿಂದ ಈ ಮಗು ಇನ್ನು ಶಾಲೆಗೆ ಹೋಗದೇ ಇರಲು ಕಾರಣ ಕೊಡಲಾಗದು, ಶಾಲೆಗೆ ಹೋಗಲೇಬೇಕು ಎಂದು ಹೇಳಿದ್ದರೆ, ಆರ್‌ಸಿಬಿ ಗೆಲುವಿನಿಂದ ಮಗು ಶಾಲೆಗೆ ಸೇರುವಂತಾಯ್ತು ಎಂದು ತಮಾಷೆಯಾಗಿ ಹೇಳಿದ್ದಾರೆ. ಹೀಗಾಗಿ ಆರ್‌ಸಿಬಿ ಗೆಲುವು ಕೇವಲ ತಂಡದ ಗೆಲುವಲ್ಲ, 18 ವರ್ಷಗಳಿಂದ ಗೆಲುವಿಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಕೋಟ್ಯಾಂತರ ರೂ ಅಭಿಮಾನಿಗಳ ಗೆಲುವಾಗಿದೆ. 17 ವರ್ಷಗಳ ಕಾಲ ಸೋಲಿನಿಂದ ಆರ್‌ಸಿಬಿ ಅಭಿಮಾನಿಗಳು ಟ್ರೋಲ್‌ಗೊಳಗಾಗಿದ್ದು ಅಷ್ಟಿಷ್ಟಲ್ಲ, ಇವೆಲ್ಲ ನೋವಿಗೂ ಈ ಗೆಲುವು ಔಷಧಿ ನೀಡಿದೆ. ನಾಡಹಬ್ಬಕ್ಕೂ ಮಿಗಿಲಾಗಿ ಆರ್‌ಸಿಬಿ ಗೆಲುವನ್ನು ಅಭಿಮಾನಿಗಳು ಆಚರಿಸುತ್ತಿದ್ದಾರೆ. ಜಾತಿ, ಭಾಷೆ, ಧರ್ಮವನ್ನು ಮೀರಿ ಆರ್‌ಸಿಬಿ ಗೆಲುವನ್ನು ಎಲ್ಲರೂ ಸಂಭ್ರಮಿಸುತ್ತಿದ್ದು, ಕ್ರಿಕೆಟ್ ಎಂಬ ಧರ್ಮ ಎಲ್ಲರನ್ನೂ ಒಂದು ಮಾಡಿದೆ. ಕೇವಲ ಬೆಂಗಳೂರು ಮಾತ್ರವಲ್ಲದೇ ರಾಜ್ಯದ ಹಳ್ಳಿಗಳು ಗಲ್ಲಿಗಳಲ್ಲೂ ಅಭಿಮಾನಿಗಳು ಸಂಭ್ರಮಿಸುತ್ತಿರುವ ವೀಡಿಯೋಗಳು ಸಾಕಷ್ಟು ವೈರಲ್ ಆಗಿವೆ.
