ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯೋತ್ಸವದ ಪರೇಡ್ ಬೆಂಗಳೂರು ಪೊಲೀಸರಿಗೆ ಬೃಹತ್ ಸವಾಲಾಗಿ ಪರಿಣಮಿಸಿದೆ. ಎರಡು ಲಕ್ಷಕ್ಕೂ ಅಧಿಕ ಅಭಿಮಾನಿಗಳು ಭಾಗವಹಿಸುವ ನಿರೀಕ್ಷೆಯಿದ್ದು, ಭಾರೀ ಜನಸಂದಣಿಯನ್ನು ನಿಯಂತ್ರಿಸುವುದು ಪೊಲೀಸರಿಗೆ ಸಮಸ್ಯೆಯಾಗಿದೆ.

ಬೆಂಗಳೂರು (ಜೂ.4): ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ವಿಜಯೋತ್ಸವದ ಪರೇಡ್‌ಗೆ ಸಂಬಂಧಿಸಿದಂತೆ ವಿಧಾನ ಸೌಧದಿಂದ ಚಿನ್ನಸ್ವಾಮಿ ಕ್ರೀಡಾಂಗಣದವರೆಗಿನ ರ್ಯಾಲಿಯು ಬೆಂಗಳೂರು ಪೊಲೀಸ್ ಇಲಾಖೆಗೆ ಬೃಹತ್ ಸವಾಲಾಗಿ ಪರಿಣಮಿಸಿದೆ. ಇತಿಹಾಸದಲ್ಲಿ ಇಂತಹ ಭವ್ಯ ಮೆರವಣಿಗೆ ನಗರದ ಹೃದಯ ಭಾಗದಲ್ಲಿ ಎಂದಿಗೂ ನಡೆದಿರಲಿಲ್ಲ. ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಸಂಭ್ರಮಾಚರಣೆ ನಡೆಯುತ್ತಿರುವುದು ಹ್ಯಾಂಡಲ್ ಮಾಡುವುದು ಪೊಲೀಸರಿಗೆ ನಿಜಕ್ಕೂ ಸವಾಲಿನದ್ದಾಗಿದೆ..

ಈ ರ್ಯಾಲಿಯಲ್ಲಿ ಎರಡು ಲಕ್ಷಕ್ಕೂ ಅಧಿಕ ಅಭಿಮಾನಿಗಳು ಭಾಗವಹಿಸುವ ನಿರೀಕ್ಷೆಯಿದೆ, ಆದರೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೇವಲ ಮೂವತ್ತು ಸಾವಿರ ಜನರಿಗೆ ಕುಳಿತುಕೊಳ್ಳುವ ಸ್ಥಳಾವಕಾಶವಿದೆ. ರಸ್ತೆಯಲ್ಲಿ ಮತ್ತು ಕ್ರೀಡಾಂಗಣದಲ್ಲಿ ಒಟ್ಟಾರೆ ಎರಡು ಲಕ್ಷಕ್ಕೂ ಹೆಚ್ಚು ಜನ ಸೇರುವ ಸಾಧ್ಯತೆಯಿದ್ದು, ಇಷ್ಟೊಡ್ಡ ಜನಸಂದಣಿಯನ್ನು ನಿಯಂತ್ರಿಸುವುದು ಪೊಲೀಸರಿಗೆ ದೊಡ್ಡ ಸವಾಲಾಗಿದೆ.

ಸಂಜೆ ಐದು ಗಂಟೆಯಿಂದ ರಾತ್ರಿ ಒಂಬತ್ತು ಗಂಟೆಯವರೆಗೆ ನಗರದ ಕೇಂದ್ರ ಭಾಗದಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗುವ ಸಾಧ್ಯತೆಯಿದ್ದು, ಇದರಿಂದ ಸಂಪೂರ್ಣ ನಗರದ ವಾಹನ ಸಂಚಾರ ಸ್ಥಗಿತಗೊಳ್ಳಬಹುದು. ಇದು ನಗರದಲ್ಲಿ ದೊಡ್ಡ ಸಮಸ್ಯೆಗೆ ಕಾರಣವಾಗಲಿದೆ.

ವಿಧಾನ ಸೌಧದಿಂದ ಜಿಪಿಒ ಬಳಿ ಬಲ ತಿರುವು ಪಡೆದು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ತಲುಪುವ ಮಾರ್ಗದಲ್ಲಿ ರಸ್ತೆ ಅಗಲವಾಗಿಲ್ಲ, ಜೊತೆಗೆ ಫುಟ್‌ಪಾತ್‌ಗಳು ಸಣ್ಣದಾಗಿವೆ. ಇದರಿಂದ ಜನರನ್ನು ರಸ್ತೆಯಲ್ಲಿ ನಿಯಂತ್ರಿಸುವುದು ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯು ರ್ಯಾಲಿಯ ಬದಲಿಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸುವಂತೆ ಸಲಹೆ ನೀಡಿದೆ.

ತೆರೆದ ಬಸ್‌ನಲ್ಲಿ ಪರೇಡ್‌ಗೆ ಅನುಮತಿ ನೀಡುವ ಸಾಧ್ಯತೆ ಕಡಿಮೆ

ಭದ್ರತೆ ಕಾರಣಗಳಿಂದ ಆರ್‌ಸಿಬಿ ಆಟಗಾರರಿಗೆ ತೆರೆದ ಬಸ್‌ನಲ್ಲಿ ಪರೇಡ್ ಗೆ ಅನುಮತಿ ನೀಡುವ ಸಾಧ್ಯತೆ ಕಡಿಮೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಆರ್‌ಸಿಬಿ ತಂಡವು ವಿಧಾನ ಸೌಧದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾಗಲಿದ್ದು, ಗ್ರಾಂಡ್ ಸ್ಟೆಪ್ಸ್‌ನಿಂದ ಸಾಮಾನ್ಯ ಬಸ್‌ನಲ್ಲಿ (ತೆರೆದ ಬಸ್ ಅಲ್ಲ) ನೇರವಾಗಿ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ತೆರಳಿ, ಅಲ್ಲಿ ಅಭಿಮಾನಿಗಳೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾಧ್ಯತೆಯಿದೆ. ಸದ್ಯ ಮುಖ್ಯಮಂತ್ರಿಗಳೊಂದಿಗೆ ಪೊಲೀಸ್ ಅಧಿಕಾರಿಗಳ ಸಭೆ ನಡೆಯುತ್ತಿದ್ದು, ಈ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಬೆಂಗಳೂರು ಪೊಲೀಸರು ಶೀಘ್ರದಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿಯನ್ನು ಬಿಡುಗಡೆ ಮಾಡಲಿದ್ದಾರೆ.