ವಿದೇಶಿ ಯುವತಿಯರು ಭಾರತದಲ್ಲಿ ಒಂಟಿಯಾಗಿ ಪ್ರಯಾಣಿಸದಂತೆ ಎಚ್ಚರಿಕೆ ನೀಡಿದ್ದಾರೆ. ಫೈವ್ ಸ್ಟಾರ್ ಹೋಟೆಲ್‌ನಲ್ಲಿ ಅವರ ವಿಡಿಯೋ ರಹಸ್ಯವಾಗಿ ಚಿತ್ರೀಕರಿಸಲಾಗಿದೆ ಎಂದು ಆರೋಪಿಸಿದ್ದಾರೆ. ಈ ಘಟನೆ ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ.
ನವದೆಹಲಿ: ಬೆಳಗಾದ್ರೆ ಸಾಕು ಜನರು ಮೊದಲು ಮೊಬೈಲ್ ನೋಡುತ್ತಾರೆ. ಪ್ರತಿದಿನ ಸಾವಿರಾರು ವಿಡಿಯೋಗಳು ವೈರಲ್ ಆಗುತ್ತವೆ. ಈ ವೈರಲ್ ವಿಡಿಯೋಗಳಿಂದ ಕೆಲವರು ರಾತ್ರೋರಾತ್ರಿ ಸ್ಟಾರ್ ಆಗುತ್ತಾರೆ. ಇಂದು ಯಾವುದೇ ಘಟನೆ ನಡೆದರೂ ಜನರು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡ್ಕೊಂಡು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಾರೆ. ಹಾಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ತುಂಬಾ ಎಚ್ಚರಿಕೆಯಿಂದಿರಬೇಕಾಗುತ್ತದೆ. ಒಂದೇ ಒಂದು ಅನುಚಿತ ವರ್ತನೆ ನಿಮ್ಮನ್ನು ಅವಮಾನಕ್ಕೊಳಗಾಗುವಂತೆ ಮಾಡುತ್ತದೆ. ಇದೀಗ ಇಂತಹವುದೇ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಭಾರತದ ಪ್ರವಾಸಕ್ಕೆ ಬಂದಿರುವ ಅಮೆರಿಕ ಮೂಲದ ಯುವತಿಯರ ವಿಡಿಯೋ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಫೈವ್ ಸ್ಟಾರ್ ಹೋಟೆಲ್‌ನ ಈಜುಕೊಳದಲ್ಲಿ ವಿದೇಶಿ ಯುವತಿಯರು ಎಂಜಾಯ್ ಮಾಡುತ್ತಿರುತ್ತಾರೆ. ವ್ಯಕ್ತಿಯೋರ್ವನ ಮೇಲೆ ವಿದೇಶಿ ಯುವತಿಯರ ವಿಡಿಯೋ ಮಾಡಿರುವ ಆರೋಪ ಕೇಳಿ ಬಂದಿದೆ. ವ್ಯಕ್ತಿ ತಮ್ಮ ವಿಡಿಯೋ ಮಾಡುತ್ತಿರೋದನ್ನು ಅಮೆರಿಕ ಯುವತಿಯರು ಗಮನಿಸಿದ್ದಾರೆ. ನಂತರ ಆತನ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ವೈರಲ್ ವಿಡಿಯೋದಲ್ಲಿ ವಿದೇಶಿ ಯುವತಿಯರು ಹೇಳಿದ್ದೇನು?
ಫೈವ್ ಸ್ಟಾರ್ ಹೋಟೆಲ್‌ನ ಈಜುಕೊಳದ ಬಳಿ ಯುವತಿಯರು ಸೂರ್ಯನ ಶಾಖ ತೆಗೆದುಕೊಳ್ಳುತ್ತಾ ಕ್ವಾಲಿಟಿ ಸಮಯ ಕಳೆಯುತ್ತಿರುತ್ತಾರೆ. ಈಜುಕೊಳದ ಪಕ್ಕದಲ್ಲಿಯೇ ಬಹುಅಂತಸ್ತಿನ ಹೋಟೆಲ್ ಕಟ್ಟಡವಿರೋದನ್ನು ಗಮನಿಸಬಹುದು. ಈ ಕಟ್ಟಡದಲ್ಲಿ ರೂಮ್‌ಗಳಿದ್ದು, ಎತ್ತರದ ಕೋಣೆಯಲ್ಲಿರುವ ವ್ಯಕ್ತಿಯೋರ್ವ ಇವರ ವಿಡಿಯೋ ಮಾಡುತ್ತಿರುವಂತೆ ಕಾಣಿಸುತ್ತದೆ. ವಿದೇಶಿ ಯುವತಿಯರು ಆ ವ್ಯಕ್ತಿಯನ್ನು ಝೂಮ್ ಮಾಡಿ ತಮ್ಮ ವಿಡಿಯೋದಲ್ಲಿ ತೋರಿಸಿದ್ದಾರೆ. ಈ ವಿಡಿಯೋದಲ್ಲಿ ಯುವತಿ, ನೀವು ಭಾರತಕ್ಕೆ ಬರುತ್ತಿದ್ರೆ, ಅದರಲ್ಲಿಯೂ ಹುಡುಗಿಯಾಗಿದ್ರೆ ಒಂಟಿಯಾಗಿ ಬರಬೇಡಿ. ಪುರುಷ ಅಥವಾ ಬಾಡಿಗಾರ್ಡ್ ಜೊತೆ ಬರುವಂತೆ ಸಲಹೆ ನೀಡಿದ್ದಾಳೆ.
ಈ ಘಟನೆ ಗುರುಗ್ರಾಮದ ಫೈವ್ ಸ್ಟಾರ್ ಹೋಟೆಲ್‌ನಲ್ಲಿಯೇ ನಡೆದಿದೆ. ಯುವತಿ ಹೇಳಿಕೆಗೆ ಪರ-ವಿರೋಧ ಚರ್ಚೆಗಳು ನಡೆದಿವೆ. ಯುವತಿ ಪೋಸ್ಟ್ ಮಾಡಿಕೊಂಡಿರುವ ವಿಡಿಯೋ 8 ಮಿಲಿಯನ್‌ಗೂ ಅಧಿಕ ವ್ಯೂವ್ ಪಡೆದುಕೊಂಡಿದೆ.
ಯುವತಿ ಹೇಳಿಕೆಗೆ ಭಾರತೀಯರು ಹೇಳಿದ್ದೇನು?
ಅನುಮತಿ ಇಲ್ಲದೇ ಯುವತಿಯರ ವಿಡಿಯೋ ಮಾಡೋದು ತಪ್ಪು. ಆದ್ರೆ ಒಬ್ಬನ ವರ್ತನೆಯಿಂದ ಇಡೀ ದೇಶವನ್ನು ಅವಮಾನಿಸೋದು ಸಹ ತಪ್ಪಾಗುತ್ತದೆ. ಅದು ಫೈವ್ ಸ್ಟಾರ್ ಹೋಟೆಲ್ ಆಗಿರೋದರಿಂದ ಆ ಆರೋಪಿಯನ್ನು ಸುಲಭವಾಗಿ ಪತ್ತೆ ಮಾಡಬಹುದು. ಈ ಬಗ್ಗೆ ಹೋಟೆಲ್ ಆಡಳಿತ ಮಂಡಳಿಗೆ ಮಾಹಿತಿ ನೀಡಬೇಕು ಎಂದು ನೆಟ್ಟಿಗರು ಘಟನೆ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ವಿಡಿಯೋ ಮಾಡಿ ಹೆಚ್ಚು ವ್ಯೂವ್ ತೆಗೆದುಕೊಳ್ಳುವ ಬದಲು ಹೋಟೆಲ್‌ನಲ್ಲಿ ದೂರು ನೀಡಬೇಕಿತ್ತು ಅಲ್ಲವೇ ಎಂದು ಕೆಲವರು ಅಮೆರಿಕನ್ ಯುವತಿಯರನ್ನು ಪ್ರಶ್ನೆ ಮಾಡಿದ್ದಾರೆ.
ಹೀಗೂ ಆಗಿರಬಹುದು ಅಲ್ಲವಾ?
ಆ ವ್ಯಕ್ತಿ ಕಿಟಕಿ ಬಳಿ ನಿಂತ್ಕೊಂಡು ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಿರಬಹುದು ಅಲ್ಲವೇ ಅಥವಾ ಸುತ್ತಲಿನ ವಾತಾವರಣವನ್ನು ರೆಕಾರ್ಡ್ ಮಾಡುತ್ತಿರಬಹುದು ಎಂದು ಕೆಲ ನೆಟ್ಟಿಗರು ಅನುಮಾನ ವ್ಯಕ್ತಪಡಿಸಿದ್ದಾರೆ. ಪ್ರತಿ ಪುರುಷರನ್ನು ಅನುಮಾನದಿಂದ ನೋಡುವುದನ್ನು ಬಿಡಿ. ಯಾವುದೇ ಒಂದು ವಿಚಾರ ಅಥವಾ ಅಭಿಪ್ರಾಯಗಳನ್ನು ಅದರಲ್ಲಿಯೂ ಒಂದು ದೇಶದ ಬಗ್ಗೆ ಮಾತನಾಡುವಾಗ ಸಾಧ್ಯಸಾಧ್ಯತೆಗಳನ್ನು ತಿಳಿದುಕೊಳ್ಳಿ. ಎಲ್ಲಾ ಪುರುಷರು ಕೆಟ್ಟವರು ಅನ್ನೋ ತಪ್ಪು ಕಲ್ಪನೆಯಿಂದ ಹೊರಬನ್ನಿ ಎಂದು ಅಮೆರಿಕ ಯುವತಿಯರಿಗೆ ಸೋಶಿಯಲ್ ಮೀಡಿಯಾದಲ್ಲಿ ಕ್ಲಾಸ್ ತೆಗೆದುಕೊಳ್ಳಲಾಗಿದೆ.
