ಲೈವ್ ಕಾಮಿಡಿ ಶೋನಲ್ಲಿ ಹಾಸ್ಯನಟಿ ಕೇಟ್ ಹು ಅವರನ್ನು ಅಪ್ಪಿಕೊಳ್ಳಲು ಯತ್ನಿಸಿದ ವ್ಯಕ್ತಿಯೊಬ್ಬ ತಾನು ಭಾರತೀಯನೆಂದು ಸುಳ್ಳು ಹೇಳಿ ಸಿಕ್ಕಿಬಿದ್ದಿದ್ದಾನೆ. ಆತನ ನಡವಳಿಕೆಯಿಂದ ಅನುಮಾನಗೊಂಡ ನಟಿ, "ಭಾರತದ ಯಾವ ರಾಜ್ಯ ನಿಂದು?" ಎಂದು ಕೇಳಿದಾಗ ಆ ವ್ಯಕ್ತಿ ತಾನು ಪಾಕಿಸ್ತಾನದವನೆಂದು ಒಪ್ಪಿಕೊಂಡಿದ್ದಾನೆ. ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಭಾರಿ ಟ್ರೋಲ್ ಮಾಡುತ್ತಿದ್ದಾರೆ.
ಲಂಡನ್: ಲೈವ್ ಸ್ಟ್ಯಾಂಡ್-ಅಪ್ ಕಾಮಿಡಿ ಶೋ ಒಂದರಲ್ಲಿ ಪ್ರೇಕ್ಷಕರ ಸಾಲಿನಲ್ಲಿದ್ದ ವ್ಯಕ್ತಿಯೊಬ್ಬನ ಅತಿಬುದ್ಧಿವಂತಿಕೆ ಹಾಗೂ ಸುಳ್ಳು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ಮತ್ತು ನಗೆಪಾಟಿಲಿಗೆ ಈಡಾಗಿದೆ. ವೇದಿಕೆಯ ಮೇಲಿದ್ದ ಮಹಿಳಾ ಹಾಸ್ಯನಟಿಯ ಸಮ್ಮತಿಯಿಲ್ಲದೆ ಆಕೆಯನ್ನು ಅಪ್ಪಿಕೊಳ್ಳಲು ಪ್ರಯತ್ನಿಸಿದ ವ್ಯಕ್ತಿಯೊಬ್ಬ, ಮೊದಲು ತಾನು ಭಾರತೀಯನೆಂದು ಸುಳ್ಳು ಹೇಳಿ, ನಂತರ ನಟಿಯ ಚಾಣಾಕ್ಷ ಪ್ರಶ್ನೆಗೆ ಉತ್ತರಿಸಲಾಗದೆ ತಾನು ಪಾಕಿಸ್ತಾನಿ ಪ್ರಜೆ ಎಂಬುದನ್ನು ಒಪ್ಪಿಕೊಂಡಿದ್ದಾನೆ.
ಅನಿರೀಕ್ಷಿತ ತಿರುವು ಪಡೆದ ಸಂಭಾಷಣೆ:
ಖ್ಯಾತ ಮಹಿಳಾ ಹಾಸ್ಯನಟಿ ಕೇಟ್ ಹು (Kate Hu) ಅವರ ಪ್ರದರ್ಶನದ ವೇಳೆ ಈ ವಿಚಿತ್ರ ಘಟನೆ ನಡೆದಿದೆ. ಜುಲೈ 6 ರಂದು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ, ಕೇಟ್ ಅವರು ಪ್ರೇಕ್ಷಕರ ಸಾಲಿನಲ್ಲಿ ಕುಳಿತಿದ್ದ ದಂಪತಿಗಳೊಂದಿಗೆ ಲಘು ಸಂಭಾಷಣೆಯಲ್ಲಿ ತೊಡಗಿದ್ದರು. ಅಲ್ಲಿನ ಮಹಿಳೆ ತಾನು ಚೀನಾ ಮೂಲದವಳು ಎಂದು ಹೇಳಿದಾಗ, ಕೇಟ್ ಅವರು ಜೊತೆಗಿದ್ದ ವ್ಯಕ್ತಿಯನ್ನು ನೋಡಿ "ಇವನು ಭಾರತೀಯನೇ?" ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ಆ ಮಹಿಳೆ ವಿಚಿತ್ರವಾಗಿ "ದುರದೃಷ್ಟವಶಾತ್ ಹೌದು, ಆದರೆ ಇವನು ಬೇರೆ ಜಾತಿ" ಎಂದು ಉತ್ತರಿಸುತ್ತಾಳೆ.
ಸಿಕ್ಕಿಬಿದ್ದ ನಕಲಿ ಭಾರತೀಯ:
ಸಂಭಾಷಣೆಯ ಮಧ್ಯದಲ್ಲೇ ಆ ವ್ಯಕ್ತಿ ಇದ್ದಕ್ಕಿದ್ದಂತೆ ಎದ್ದು ಬಂದು ವೇದಿಕೆಯ ಮೇಲಿದ್ದ ಕೇಟ್ ಹು ಅವರನ್ನು ಬಲವಂತವಾಗಿ ತಬ್ಬಿಕೊಳ್ಳಲು ಯತ್ನಿಸುತ್ತಾನೆ. ತಕ್ಷಣವೇ ಹಿಂದೆ ಸರಿದು ಆತನನ್ನು ತಡೆದ ಕೇಟ್, "ಹಾಸ್ಯನಟರನ್ನು ಮುಟ್ಟಬಾರದು" ಎಂದು ಎಚ್ಚರಿಸುತ್ತಾರೆ. ನಂತರ ಆತನ ವರ್ತನೆಯಿಂದ ಅನುಮಾನಗೊಂಡು ಚಾಣಾಕ್ಷತನದಿಂದ, "ನೀನು ಭಾರತದ ಯಾವ ರಾಜ್ಯದವನು?" ಎಂದು ನೇರ ಪ್ರಶ್ನೆ ಹಾಕುತ್ತಾರೆ. ಈ ಪ್ರಶ್ನೆಗೆ ಉತ್ತರಿಸಲಾಗದೆ ತಬ್ಬಿಬ್ಬಾದ ಆ ವ್ಯಕ್ತಿ, ಕೆಲವು ಕ್ಷಣಗಳ ಮೌನದ ನಂತರ "ಉಹ್.. ನಾನು ಪಾಕಿಸ್ತಾನದವನು" ಎಂದು ಅಸಲಿಯತ್ತನ್ನು ಒಪ್ಪಿಕೊಳ್ಳುತ್ತಾನೆ.
ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟ್ರೋಲ್:
ಈ ವಿಡಿಯೋ ಎಕ್ಸ್ (ಟ್ವಿಟರ್) ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನೆಟ್ಟಿಗರು ಆತನನ್ನು ತೀವ್ರವಾಗಿ ತರಾಟೆಗೆ ತಗೆದುಕೊಂಡಿದ್ದಾರೆ. "ವಿದೇಶಗಳಲ್ಲಿ ಪಾಕಿಸ್ತಾನಿಗಳು ತೀವ್ರ ಗುರುತಿನ ಬಿಕ್ಕಟ್ಟಿನಿಂದ (Identity Crisis) ಬಳಲುತ್ತಿದ್ದಾರೆ, ಅದಕ್ಕೇ ಭಾರತೀಯರ ಸೋಗಿನಲ್ಲಿ ತಿರುಗುತ್ತಾರೆ" ಎಂದು ಹಲವರು ಕಮೆಂಟ್ ಮಾಡಿದ್ದಾರೆ. "ಯಾವತ್ತೂ ಒಬ್ಬ ಭಾರತೀಯ ವಿದೇಶದಲ್ಲಿ ತಾನು ಪಾಕಿಸ್ತಾನಿ ಎಂದು ಹೇಳಿಕೊಳ್ಳುವುದಿಲ್ಲ, ಆದರೆ ಶೇಕಡಾ 90 ರಷ್ಟು ಪಾಕಿಸ್ತಾನಿಗಳು ಭಾರತದ ಹೆಸರನ್ನು ಬಳಸಿಕೊಳ್ಳುತ್ತಾರೆ" ಎಂದು ನೆಟಿಜನ್‌ಗಳು ಆಕ್ರೋಶ ಹೊರಹಾಕಿದ್ದಾರೆ.


