ಸೋಶಿಯಲ್ ಮೀಡಿಯಾದಲ್ಲಿ ಹೈವೇ ರೋಮ್ಯಾನ್ಸ್ ವಿಡಿಯೋ ವೈರಲ್ ಆಗಿದೆ. ಜನನಿಬಿಡ ರಸ್ತೆಯಲ್ಲಿ ಪ್ರೀತಿ ಆಟವಾಡ್ತಿದ್ದ ಯುವ ಜೋಡಿ ಈಗ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮನೆಗೆ ದಂಡದ ಲೆಟರ್ ರವಾನೆಯಾಗಿದೆ. 

ಪಾರ್ಕ್, ಹೆವಿ ಟ್ರಾಫಿಕ್ ಇರೋ ರಸ್ತೆಗಳೇ ಪ್ರೇಮಿಗಳ ಫೆವರೆಟ್ ಸ್ಪಾಟ್ ಆದಂಗಿದೆ. ಕಂಡ ಕಂಡಲ್ಲಿ ಮೈಮರೆಯೋ ಯುವ ಜೋಡಿಗಳು ನಾಚಿಕೆ ಬಿಟ್ಟಿದ್ದಾರೆ. ಸಂಪ್ರದಾಯಸ್ಥ ಭಾರತ ಫಾರೆನ್ ಆಗ್ತಿದೆ. ಸಾರ್ವಜನಿಕ ಪ್ರದೇಶದಲ್ಲಿ ತಬ್ಬಿಕೊಂಡು ಮುತ್ತಿಡೋ ಜೋಡಿಗಳು, ಯಾರಿಗೂ ಕ್ಯಾರೆ ಎನ್ನುತ್ತಿಲ್ಲ. ನಮಗೂ ಸ್ವಾತಂತ್ರ್ಯವಿದೆ ಅಂತ ಕಾನೂನಿನ ಕಥೆ ಹೇಳಿ ಬಾಳು ಹಾಳ್ಮಾಡಿಕೊಳ್ತಿದ್ದಾರೆ. ಪ್ರೇಮಿಗಳು ಮಾಡೋ ಹುಚ್ಚಾಟಕ್ಕೆ ಸಭ್ಯರು ತಲೆ ತಗ್ಗಿಸುವಂತಾಗಿದೆ. ಬರೀ ಇಷ್ಟೆ ಆಗಿದ್ರೆ ಹೋಗ್ಲಿ ಬಿಡು ಅನ್ಬಹುದಿತ್ತೇನೋ. ಆದ್ರೆ ತಮ್ಮ ಪ್ರಾಣವನ್ನು ಮಾತ್ರವಲ್ಲ ಬೇರೆಯವರ ಪ್ರಾಣವನ್ನೂ ಅಪಾಯಕ್ಕೆ ತಳ್ಳುವಂತ ಕೆಲ್ಸವನ್ನು ಯುವಕರು ಮಾಡ್ತಿದ್ದಾರೆ. ಹೈವೆಯಲ್ಲಿ ಗಾಡಿ ಓಡಿಸ್ತಾ ಮುತ್ತಿಡೋದು, ತಬ್ಬಿಕೊಳ್ಳೋದು ಈಗಿನ ದಿನಗಳಲ್ಲಿ ಕಾಮನ್ ಆಗ್ತಿದೆ. ಬೈಕ್ ಸ್ಟಂಟ್ ಜೊತೆ ಹೈವೆಗಳಲ್ಲಿ ಈ ಪ್ರೇಮಿಗಳ ಕಾಟ ದಿನ ದಿನಕ್ಕೂ ಹೆಚ್ಚಾಗ್ತಾನೇ ಇದೆ. ಅತಿ ಹೆಚ್ಚು ಗಾಡಿ ಓಡಾಡೋ ಹೈವೆಯಲ್ಲಿ ಹುಡುಗಿಯನ್ನು ಮುಂದೆ ಕುಳಿಸಿಕೊಂಡು ಬೈಕ್ ಓಡಿಸ್ತಿದ್ದ ಪ್ರೇಮಿಯೊಬ್ಬನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ನೋಯ್ಡಾ-ಗ್ರೇಟರ್ ನೋಯ್ಡಾ (Noida-Greater Noida) ಎಕ್ಸ್ಪ್ರೆಸ್ವೇಯಲ್ಲಿ ಯುವಕನೊಬ್ಬ ಬೈಕ್ ಓಡಿಸ್ತಿರೋದನ್ನು ನೀವು ನೋಡ್ಬಹುದು. ಹುಡುಗಿ ಬೈಕ್ ಮುಂದೆ ಉಲ್ಟಾ ಕುಳಿತಿದ್ದು, ಅವನನ್ನು ಗಟ್ಟಿಯಾಗಿ ತಬ್ಬಿಕೊಂಡಿದ್ದಾಳೆ. ಇಬ್ಬರೂ ಹೆಲ್ಮೆಟ್ ಕೂಡ ಹಾಕಿಲ್ಲ. ಇವ್ರ ಈ ಹೈವೇ ರೋಮ್ಯಾನ್ಸ್ (Highway Romance) ಬರೀ ಇವರಿಗೆ ಮಾತ್ರವಲ್ಲ ಉಳಿದ ಸವಾರರಿಗೂ ಅಪಾಯಕಾರಿ. ರೋಮ್ಯಾನ್ಸ್ ಹಾಗೂ ಸ್ಟಂಟ್ ಹೆಸರಿನಲ್ಲಿ ಮಾಡಲಾಗಿರೋ ಈ ಕೃತ್ಯ ಎಕ್ಸ್ಪ್ರೆಸ್ವೇಯ ಭದ್ರತಾ ವ್ಯವಸ್ಥೆಯ ಬಗ್ಗೆಯೂ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಹೈವೆಯಲ್ಲಿ ಬೈಕ್ ಹಿಂದೆ ಹೋಗ್ತಿದ್ದ ಕಾರಿನಲ್ಲಿದ್ದವರು ಈ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ವಿಡಿಯೋ ಪೋಸ್ಟ್ ಆದ ಕೆಲವೇ ಕ್ಷಣಗಳಲ್ಲಿ ವಿಡಿಯೋ ವೈರಲ್ ಆಗಿದೆ. ಇದನ್ನು ಟ್ರಾಫಿಕ್ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ.

ಸೂಕ್ತ ಕ್ರಮಕೈಗೊಂಡ ಸಂಚಾರಿ ಪೊಲೀಸರಿಂದ ಬಾರೀ ದಂಡ : ವೀಡಿಯೊ ವೈರಲ್ ಆಗ್ತಿದ್ದಂತೆ ನೋಯ್ಡಾ ಸಂಚಾರಿ ಪೊಲೀಸರು ಕ್ರಮಕೈಗೊಂಡಿದ್ದಾರೆ. ನೊಯ್ಡಾ ಎಕ್ಸ್ಪ್ರೆಸ್ವೇಯ ಸಿಸಿಟಿವಿ ವೀಕ್ಷಣೆ ಮಾಡಿದ ಪೊಲೀಸರು, ಬೈಕ್ ನಂಬರ್ ಪ್ಲೇಟ್ ಆಧಾರದ ಮೇಲೆ ಬೈಕ್ ಮಾಲೀಕನಿಗೆ 53,500 ರೂಪಾಯಿ ದಂಡ ವಿಧಿಸಿದ್ದಾರೆ. ಈ ಚಲನ್ನಲ್ಲಿ ಹೆಲ್ಮೆಟ್ ಧರಿಸದೆ ಇರೋದು, ಅಪಾಯಕಾರಿ ಡ್ರೈವಿಂಗ್, ಸಂಚಾರಿ ನಿಯಮಗಳ ಉಲ್ಲಂಘನೆ ಸೇರಿದಂತೆ ಕೆಲ ನಿಯಮಗಳ ಉಲ್ಲಂಘನೆ ಸೇರಿದೆ. ವಿಡಿಯೋದಲ್ಲಿದ್ದ ಯುವಕ ಯಾರು ಅನ್ನೋದನ್ನು ಕೂಡ ಪೊಲೀಸರು ಪತ್ತೆ ಮಾಡಿದ್ದು, ಸೂಕ್ತ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಪ್ರಸಿದ್ಧಿ ಪಡೆಯೋಕೂ ಕೆಲವರು ಇಂಥ ಸಾಹಸ ಮಾಡ್ತಿದ್ದಾರೆ. ಸ್ಟಂಟ್, ರೋಮ್ಯಾನ್ಸ್ ವಿಡಿಯೋವನ್ನು ಪೋಸ್ಟ್ ಮಾಡಿ ವೈರಲ್ ಮಾಡ್ತಿದ್ದಾರೆ. ಆದ್ರೆ ಇಂಥ ಕೃತ್ಯ ಅಪಾಯಕಾರಿ. ಇದು ಜೀವನದ ಜೊತೆ ಆಟ ಆಡಿದಂತೆ. ಕಾನೂನು ಉಲ್ಲಂಘಟನೆ ಕೂಡ ಹೌದು. ಇಂಥ ಕೃತ್ಯಗಳನ್ನು ಯಾವುದೇ ಕಾರಣಕ್ಕೂ ಕ್ಷಮಿಸೋದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಇಂಥ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಇದೇ ಮೊದಲಲ್ಲ. ಈ ಹಿಂದೆ ಸರ್ಜಾಪುರ ರಸ್ತೆಯಲ್ಲಿ ಇಂಥಹದ್ದೇ ವಿಡಿಯೋ ಒಂದು ವೈರಲ್ ಆಗಿತ್ತು. ಯುವಕ ಬೈಕ್ ಓಡಿಸ್ತಿದ್ರೆ ಹುಡುಗಿ ಮುಂದೆ ಕುಳಿತಿದ್ದಳು. ತಮಿಳುನಾಡು ನೋಂದಣಿ ಸಂಖ್ಯೆ ಹೊಂದಿದ್ದ ಈ ಬೈಕ್ ಸವಾರನ ಕೃತ್ಯಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು.